ಕೊಪ್ಪಳ ಜ್ಞಾನ ದಾಸೋಹದ ಜೊತೆಗೆ ಸಮಾಜ ಮುಖಿ ಕಾಯಕ ಮಾಡುವುದರ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮರು ಎಂದು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಮಲ್ಲಿಕಾಜುನ ನಾಗಪ್ಪ ಅವರು ಬಣ್ಣಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ವಿಚಾರಧಾರೆಯನ್ನು ಹೊಂದಿದ್ದ ಶಿವಯೋಗಿ ಸಿದ್ಧರಾಮರು, ಕರ್ಮ, ಕಾಯಕ, ಭಕ್ತಿ ಸಂಗಮಗಳ ವಿಚಾರಧಾರೆಯನ್ನು ಸಕಲ ಜೀವಾತ್ಮರಿಗೆ ಉಣಬಡಿಸಿದ್ದಾರೆ. ಸಮುದಾಯಕ್ಕೆ ಅಗತ್ಯವಿರುವ ಕೆರೆ, ಕಟ್ಟೆಗಳನ್ನು ನಿರ್ಮಿಸಲು ಶ್ರಮಿಸುವ ಮೂಲಕ ಸಮಾಜಮುಖಿ ಕಾಯಕ ಮಾಡಿದಂತಹ ಯೋಗಿಗಳು. ಬೋವಿ ಜನಾಂಗದವರು ಶ್ರಮ ಜೀವಿಗಳಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಸಿದ್ಧರಾಮರ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬಂದು, ಶಿಕ್ಷಣ, ರಾಜಕೀಯ ಇನ್ನಿತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು, ಆರ್ಥಿಕವಾಗಿ ಸದೃಢರಾಗಬೇಕು ಎಂದು ಮಲ್ಲಿಕಾರ್ಜುನ ನಾಗಪ್ಪ ಅವರು ಕರೆ ನೀಡಿದರು.
ಸಿದ್ದರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು, ಈಗಿನ ಸೊಲ್ಲಾಪುರ, ಹಿಂದಿನ ಕಾಲದಲ್ಲಿ ಸೊನ್ನಲಿಗೆ ಗ್ರಾಮವಾಗಿತ್ತು. ಈ ಗ್ರಾಮದಲ್ಲಿ ಜನಿಸಿದ ಸಿದ್ದರಾಮೇಶ್ವರರ ಮೂಲ ಹೆಸರು ಧೂಳಿ ಮಹಾಕಾಳ ಆಗಿತ್ತು. ದನಕಾಯುವ ಬಾಲಕ, ಮಲ್ಲಿಕಾರ್ಜುನನ್ನರಸಿ ಸಾಧನೆ ಮೂಲಕ ತಪಗೈದಿದ್ದು, ಭಕ್ತಿಗಾಥೆಯಾಗಿ ಉಳಿದಿದೆ. ಸಿದ್ದರಾಮೇಶ್ವರರ ವಚನಗಳು, ಮಾತಿಗಿಂತ ಕೃತಿ ಲೇಸು, ವಿದ್ಯೆ ಎಂಬುದು ಹಾಗೆಯೇ ಬರುವ ಸ್ವತ್ತು ಅಲ್ಲ, ಸತತ ಅಭ್ಯಾಸಿಗಳಿಗೆ ಮಾತ್ರ ಒಲಿಯುವಂಥಾದ್ದು, ಯಾರು ಜ್ಞಾನಿಗಳೋ,
ಅವರೇ ಹಿರಿಯರು ಎಂಬ ತತ್ವಗಳನ್ನು ಬಿಂಬಿಸುತ್ತವೆ. ಕೆರೆ ಕಟ್ಟೆ, ಕಾಲುವೆ ಕಟ್ಟುವ ಮುನ್ನ ಮನಸ್ಸುಗಳನ್ನು ಕಟ್ಟಬೇಕು ಎಂಬುದು ಸಿದ್ದರಾಮರ ಅಭಿಮತವಾಗಿತ್ತು. ಆದರೆ ಇಂದು ಕೆರೆ, ಕಾಲುವೆ, ಕಟ್ಟಡಗಳನ್ನು ಕಟ್ಟುತ್ತಿದ್ದೇವೆಯೇ ಹೊರತು, ಮನಸ್ಸುಗಳನ್ನು ಕಟ್ಟುವ ಕಾಯಕ ಮಾಡುತ್ತಿಲ್ಲ. ಒಂದೆಡೆ ಚಂದ್ರ, ಮಂಗಳನತ್ತ ಯಾನ ಮಾಡುವ ಮೂಲಕ ಅಭಿವೃದ್ಧಿ ಪಥದತ್ತ ದೇಶ ಸಾಗುತ್ತಿದ್ದರೆ, ಇನ್ನೊಂದೆಡೆ, ಅಜ್ಞಾನ, ಮೂಢನಂಬಿಕೆಗಳೂ ಸಹ ಬೆಳೆಯುತ್ತಿದೆ. ಇದರ ನಿವಾರಣೆಗೆ ಶರಣರ ತತ್ವ ಹಾಗೂ ಮಾರ್ಗಗಳನ್ನು ಪಾಲಿಸುವತ್ತ ನಾವು ಗಮನಹರಿಸಬೇಕಿದೆ ಎಂದರು. ಬೋವಿ ಜನಾಂಗದ ಮುಖಂಡರಾದ ಬಸವರಾಜ ಬೋವಿ ಅವರು ಸಮಾರಂಭ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಧಿಕಾರಿ ಪಿ.ಎಸ್. ಮಂಜುನಾಥ್, ಸಮಾಜದ ಮುಖಂಡರಾದ ಬಸವರಾಜ ಬೋವಿ, ಸತ್ಯಪ್ಪ ಬೋವಿ, ಬಸವರಾಜ ವಕೀಲರು, ನಿಂಗಪ್ಪ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಜಿಲ್ಲೆಯ ಬೋವಿ ಸಮಾಜದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭಕ್ಕೂ ಪೂರ್ವದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದೊಂದಿಗಿನ ಅದ್ಧೂರಿ ಮೆರವಣಿಗೆಗೆ ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
0 comments:
Post a Comment