: ಜಿ.ಪಂ. ಸಿಇಓ ಡಿ.ಕೆ. ರವಿ ಎಚ್ಚರಿಕೆ
ಕೊಪ್ಪಳ ಫೆ. ೨೩ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿ ಸಿಬ್ಬಂದಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಅಕ್ರಮ, ಅವ್ಯವಹಾರದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಸುತ್ತೋಲೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಜಿ.ಪಂ. ಅಧೀನದ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಜಿಲ್ಲಾ ಪಂಚಾಯತಿ ಅಧೀನದ ಇಲಾಖೆಗಳ ಪೈಕಿ ಬಿಸಿಎಂ ಇಲಾಖೆಯ ನೌಕರರು, ಗಂಗಾವತಿ ತಾಲೂಕಿನಲ್ಲಿ ಓರ್ವ ಪಿಡಿಓ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಇದು ಅತ್ಯಂತ ಬೇಸರ ಹಾಗೂ ಕಳವಳಕಾರಿ ಸಂಗತಿಯಾಗಿದೆ. ಜಿಲ್ಲಾ, ತಾಲೂಕು ಅಥವಾ ಗ್ರಾಮ ಮಟ್ಟದ ಯಾವುದೇ ಅನುಷ್ಠಾನ ಅಧಿಕಾರಿಗಳು ಅವ್ಯವಹಾರ ಹಾಗೂ ಅಕ್ರಮಗಳಲ್ಲಿ ತೊಡಗಬಾರದು. ಸಾರ್ವಜನಿಕ ಸೇವೆಯಲ್ಲಿ ತಮ್ಮ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಸಮಾಜದಲ್ಲಿ ಆದರ್ಶಪ್ರಾಯರಾಗಿ ಕರ್ತವ್ಯ ಸಲ್ಲಿಸಬೇಕು. ಗ್ರಾಮೀಣ ಜನ ಸಮುದಾಯಕ್ಕೆ ಸೇವಾ ಮನೋಭಾವದಿಂದ ದುಡಿಯುವುದರಲ್ಲಿ ಸಾರ್ಥಕತೆ ಇದೆ. ಉತ್ತಮ ಕೆಲಸ, ಕಾರ್ಯ ಮಾಡಿದಾಗ ಸರ್ಕಾರ ಮತ್ತು ಸಮಾಜ ಗೌರವಿಸುತ್ತದೆ. ಆದರೆ ಕೆಟ್ಟ ಕೆಲಸ ಮಾಡಿದಲ್ಲಿ ಅವಹೇಳನಕ್ಕೆ ಮತ್ತು ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಸೇವಾ ದಕ್ಷತೆಯಿಂದ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ಅವ್ಯವಹಾರ, ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಸುತ್ತೋಲೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
0 comments:
Post a Comment