ಕನಕಗಿರಿ ಇದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಒಂದು ಗ್ರಾಮ 'ಕಣ್ಣಿದ್ದವರಿಗೆ ಕನಕಗಿರಿ-ಕಾಲಿದ್ದವರಿಗೆ ಹಂಪಿ' ಇದು ಈ ಭಾಗದ ಅತ್ಯಂತ ಜನಜನಿತ ನಾಣ್ನುಡಿ. ಕನಕಗಿರಿಯ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನ, ನರಸಿಂಹಸ್ವಾಮಿ ದೇವಸ್ಥಾನ, ವೆಂಕಟಪ್ಪನ ಬಾವಿ, ಈ ಎಲ್ಲ ದೇವಾಲಯಗಳಲ್ಲಿನ ಶಿಲ್ಪಕಲೆ, ಚಿತ್ರಕಲೆಯನ್ನು ಆಧರಿಸಿಯೇ ಈ ನಾಣ್ನುಡಿ ಜನಪದರಲ್ಲಿ ಹರಿದು ಬಂದಿರುವುದಾಗಿ ಹೇಳಬಹುದಾಗಿದೆ.
ಕನಕಮುನಿ ಎಂಬ ಮಹಾ ತಪಸ್ವಿಯ ಪ್ರಭಾವದಿಂದ ಸುವರ್ಣದ (ಬಂಗಾರ/ಕನಕ) ಮಳೆ ಸುರಿಯಿತೆಂದೂ, ಇದಕ್ಕಾಗಿಯೇ, ಈ ಭಾಗಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವಿದೆ. ಕ್ರಿ.ಶ. ೧೪೩೬ ರಿಂದ ೧೯೪೮ ರವರೆಗೂ ಕನಕಗಿರಿ ಸಂಸ್ಥಾನದ ಸುಮಾರು ಹನ್ನೆರಡು ದೊರೆಗಳು ಆಳ್ವಿಕೆ ನಡೆಸಿದ್ದು, ಈ ಪೈಕಿ ಮೊದಲ ಒಂಭತ್ತು ದೊರೆಗಳು ಕನಕಗಿರಿಯನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡು, ಉಳಿದ ಮೂವರು ದೊರೆಗಳು ಹುಲಿಹೈದರ್ ನಿಂದ ಆಳ್ವಿಕೆ ನಡೆಸಿದ್ದಾರೆ. ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬಣ್ಣಿಸಲ್ಪಿಟ್ಟಿರುವ ವಿಜಯನಗರ ಸಾಮ್ರಾಜ್ಯಕ್ಕೂ ಕನಕಗಿರಿಗೂ ಅವಿನಾಭಾವ ಸಂಬಂಧವಿದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆಗಳಲ್ಲೊಬ್ಬರಾದ ಪ್ರೌಢದೇವರಾಯನ ಕಾಲದಲ್ಲಿ, ಕನಕಗಿರಿ ನಾಯಕರಿಗೆ ಉತ್ತಮ ಪ್ರಾತಿನಿಧ್ಯವಿತ್ತು. ತನ್ನ ಬಲಭಾಗದಲ್ಲಿ ಕನಕಗಿರಿ ನಾಯಕರು ಆಸೀನರಾಗಲು ಅವಕಾಶ ಕೊಟ್ಟಿದ್ದರೆಂದರೆ, ಕನಕಗಿರಿ ನಾಯಕರ ಪ್ರಭಾವವನ್ನು ಇಲ್ಲಿ ಊಹಿಸಿಕೊಳ್ಳಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಪರವಾಗಿ ಬೇಹುಗಾರಿಕೆ ದಳದ ಮುಖ್ಯಸ್ಥರಾಗಿಯೂ ಕನಕಗಿರಿ ನಾಯಕರು ಕಾರ್ಯ ನಿರ್ವಹಿಸಿದ್ದರೆಂಬುದಾಗಿ ಇತಿಹಾಸ ತಿಳಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆಗಳು ಕನಕಗಿರಿಯ ಶ್ರೀ ಕನಕಾಚಲಪತಿಯ ಪರಮ ಭಕ್ತರಾಗಿದ್ದು, ಖುದ್ದು ಶ್ರೀಕೃಷ್ಣದೇವರಾಯನೇ ಸ್ವರಚಿತ 'ಅಮುಕ್ತಾಮೌಲ್ಯ' ಗ್ರಂಥದಲ್ಲಿ ಕನಕಾಚಲಪತಿ ದೇವರ ಮಹಿಮೆಯನ್ನು ಬಣ್ಣಿಸಿದ್ದಾನೆ.
ಕನಕಗಿರಿಯ ದೊರೆಗಳಲ್ಲಿ ನವಾಬ ಇಮ್ಮಡಿ ಉಡುಚಪ್ಪ ನಾಯಕ ಅತ್ಯಂತ ಪ್ರಭಾವಿ ಹಾಗೂ ಶಕ್ತಿಶಾಲಿ ಯೋಧನಾಗಿದ್ದನು. ಈತನ ಕಾಲದಲ್ಲಿ ಬಿಜಾಪುರದ ಆದಿಲ್‌ಶಾಹಿ ದಂಡನಾಯಕ ಅಫ್ಜಲ್‌ಖಾನ್ ನನ್ನು ಕ್ರಿ.ಶ. ೧೬೫೩ ರಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದ್ದನು. ಈತನ ಇಬ್ಬರು ರಾಣಿಯರಾದ ಚಿನ್ನಮ್ಮ ಹಾಗೂ ಕನಕಮ್ಮ ಅವರು ಜನಾನುರಾಗಿಯಾಗಿದ್ದರು. ನವಾಬ ಉಡುಚಪ್ಪ ನಾಯಕನೊಬ್ಬನೇ ಕನಕಗಿರಿ ಭಾಗ ಒಂದರಲ್ಲಿಯೇ ೩೫೦ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದಿದ್ದು ಎಂಬುದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ರೈತರೊಂದಿಗಿನ ಇವರ ಸೌಜನ್ಯಯುತ ಬಾಂಧವ್ಯದಿಂದಾಗಿ ಕನಕಗಿರಿ ನಾಯಕರಿಗೆ ವಿಜಯನಗರ ಸಾಮ್ರಾಟರ ಬಲಪಾರ್ಶ್ವದಲ್ಲಿ ಕುಳಿತುಕೊಳ್ಳುವ ವಿಶೇಷ ಮನ್ನಣೆ ದೊರೆತಿತ್ತು.
ಪ್ರಸಿದ್ಧ ಕನಕಾಚಲನಪತಿ ದೇವಾಲಯ : ಕನಕಗಿರಿಯ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಕನಕಾಚಲಪತಿ ದೇವಾಲಯ. ಕನಕಾಚಲಪತಿ ದೇವಾಲಯದ ಗರ್ಭಗುಡಿಯನ್ನು ಸಂಸ್ಥಾನದ ಮೂಲಪುರುಷ ಪರಸಪ್ಪ ಉಡುಚನಾಯಕ ನಿರ್ಮಿಸಿದ್ದು, ನವಾಬ ಉಡುಚನಾಯಕರು ಈ ದೇವಾಲಯದ ಮಧ್ಯರಂಗಮಂಟಪ ಕಟ್ಟಿಸಿದರೆ, ಕೆಲವಡಿ ಉಡುಚನಾಯಕ ದೇವಾಲಯದ ಗಾರೆ ಶಿಲ್ಪ ಸೇರಿದಂತೆ ಪ್ರಮುಖ ಮೂರು ಬೃಹತ್ ಮುಖ್ಯ ಗೋಪುರ ಹಾಗೂ ಪ್ರಾಂಗಣ ನಿರ್ಮಾಣ ಮಾಡಿದನು. ಕನಕಾಚಲಪತಿ ದೇವಾಲಯದಲ್ಲಿ ಸುಮಾರು ಒಂದೂಕಾಲು ಅಡಿ ಎತ್ತರದ ಶ್ರೀ ಲಕ್ಷ್ಮೀನರಸಿಂಹ ದೇವರು ಉದ್ಭವಿಸಿದ್ದು, ಸಾಲಿಗ್ರಾಮ ರೂಪದ ದೇವರಿಗೆ ಲೋಹದ ಕಿರೀಟವಿದೆ. ಸನಿಹದಲ್ಲಿಯೇ ಸಂಜೀವಮೂರ್ತಿಯ (ಆಂಜನೇಯ) ಸುಂದರ ವಿಗ್ರಹವಿದೆ. ಕನಕಾಚಲಪತಿ ದೇವಾಲಯವು ದ್ವಾರಮಂಟಪ, ರಂಗಮಂಟಪ, ಸಭಾಮಂಟಪ, ಆಕರ್ಷಕ ಕಂಬಗಳು, ಗರ್ಭಗುಡಿ, ಪಂಚಶಿಖರ ಮತ್ತು ದೀಪಸ್ತಂಭಗಳನ್ನು ಒಳಗೊಂಡಿದೆ. ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ದೇವಾಲಯದ ಪ್ರಾಂಗಣ ಸುಮಾರು ೨೦೦ ಅಡಿ ಉದ್ದ ೧೦೦ ಅಡಿ ಅಗಲವಿದೆ. ದೇವಾಲಯದ ಪ್ರಾಕಾರದಲ್ಲಿ ಸರಸ್ವತಿ ಮತ್ತು ಲಕ್ಷ್ಮೀನಾರಾಯಣರ ಮಂಟಪ ಸೇರಿದಂತೆ ಕನಕಗಿರಿ ಸಂಸ್ಥಾನದ ಕೆಲವು ಪ್ರಮುಖ ನಾಯಕರ ಕಲ್ಲಿನ ಪ್ರತಿಮೆಗಳೂ ಇವೆ.
ವೆಂಕಟಪ್ಪನ ಬಾವಿ : ಕನಕಗಿರಿ ಸಂಸ್ಥಾನದ ನಾಲ್ಕನೆ ದೊರೆ ಒಂದನೆಯ ಕನಕನಾಯಕನ ತಮ್ಮ ವೆಂಕಟಪ್ಪನಾಯಕ ಕನಕಗಿರಿಯ ಊರ ಹೊರಗೆ ಲಕ್ಷ ವರಹ ವೆಚ್ಚದಿಂದ ಬಾವಿ ತೋಡಿಸಿದ್ದು, ಇದು ವೆಂಕಟಪ್ಪನ ಬಾವಿ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಈ ಬಾವಿಗೆ ಮೂರು ಕಡೆಗಳಿಂದಲೂ ಪ್ರವೇಶಕ್ಕೆ ಮೆಟ್ಟಿಲುಗಳಿದ್ದು, ಮೆಟ್ಟಿಲುಗಳ ಗೋಡೆಗಳ ಮೇಲೆ ಶಿವ ಮತ್ತು ನಾಗರಾಜನ ಉಬ್ಬು ಶಿಲ್ಪ, ಗಜಸಂಹಾರಮೂರ್ತಿ ಇದೆ. ಬಾವಿಯ ಎರಡೂ ಮಗ್ಗಲುಗಳಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ನುವಿನ ಗೃಹಗಳಿದ್ದು, ಒಟ್ಟು ೬೩ ಕಂಬಗಳು, ೩೭ ಅರ್ಧಕಂಬಗಳು ಹಾಗೂ ೧೬ ಮೂಲೆ ಕಂಬಗಳನ್ನು ಒಳಗೊಂಡಿದೆ. ಸಿಂಹದ ಮೇಲೆ ಕುಳಿತ ಸವಾರ, ಕುದುರೆ ಸವಾರ, ಆಂಜನೇಯ ಮೊದಲಾದ ಉಬ್ಬು ಶಿಲ್ಪಗಳನ್ನು ಇಲ್ಲಿ ನೋಡಬಹುದಾಗಿದೆ. ಕೊಳದ ಮೇಲ್ಭಾಗದಲ್ಲಿ ಆಕರ್ಷಕ ಕಂಬಗಳು, ದೇವತಾ ಗೃಹಗಳು, ಅಲಂಕಾರಿಕ ಕೆತ್ತನೆಗಳಿಂದ ವೆಂಕಟಪ್ಪನಬಾವಿ ಇನ್ನಷ್ಟು ಆಕರ್ಷಣೆಯನ್ನು ಹೊಂದಿದೆ.
ಕನಕಗಿರಿ ಎಂದರೆ ದೇವಾಲಯಗಳ ಊರು ಎಂದೇ ಪ್ರಸಿದ್ಧವಾಗಿದ್ದು, ರಾಮೇಶ್ವರ, ಜಕ್ಕಮ್ಮ, ರಂಗನಾಥ, ತೇರಿನ ಹನುಮಪ್ಪ, ದುರ್ಗಾದೇವಿ, ಕಾಳಿಕಾದೇವಿ, ಅಂಬಾ, ತೇರಿನ ಹನುಮಪ್ಪ, ವೀರಭದ್ರೇಶ್ವರ, ಹಿರೇಹಳ್ಳದ ಬಸವೇಶ್ವರ, ಈಶ್ವರ ವೀರಭದ್ರೇಶ್ವರ, ಲಕ್ಷ್ಮೀದೇವಾಲಯ, ಮಲ್ಲಿಕಾರ್ಜುನ, ನಗರೇಶ್ವರ ಸೇರಿದಂತೆ ಹಲವಾರು ದೇವಾಲಯಗಳು ಈ ಭಾಗದಲ್ಲಿವೆ.
ಉತ್ಸವಕ್ಕೆ ಭರದ ಸಿದ್ಧತೆ : ಕನಕಗಿರಿ ಭವ್ಯ ಗತ ವೈಭವವನ್ನು ಮರುಕಳಿಸುವಂತೆ ಮಾಡುವ ಹಾಗೂ ಕನಕಗಿರಿಯ ಐತಿಹಾಸಿಕ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಕನಕಗಿರಿ ಉತ್ಸವವನ್ನು ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಕನಕಗಿರಿಯ ಶಾಸಕ ಶಿವರಾಜ ತಂಗಡಗಿ ಅವರು ಹೆಚ್ಚಿನ ಆಸಕ್ತಿ ವಹಿಸಿ, ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರಕ್ಕೆ ಸಕಲ ನೆರವು ನೀಡಲು ಮುಂದಾಗಿದ್ದಾರೆ. ೨೦೧೦ ರಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದ್ದ ಕನಕಗಿರಿ ಉತ್ಸವದ ಸಾಂಸ್ಕೃತಿಕ, ಕ್ರೀಡಾ ವೈವಿಧ್ಯಗಳು ಹೃನ್ಮನಗಳಿಗೆ ಉಣಬಡಿಸಿದ್ದ ರಸದೌತಣ ಇನ್ನೂ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿದೆ. ಕನಕಗಿರಿ ಉತ್ಸವದ ಅಂಗವಾಗಿ ಈ ಬಾರಿಯೂ ಹಲವಾರು ಕ್ರೀಡೆಗಳು, ಜಾನಪದ ಸೊಗಡಿನ ಸ್ಪರ್ಧೆಗಳು, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ೨೦೧೧ ರಲ್ಲಿ ರಾಜ್ಯದಲ್ಲಿ ಉಂಟಾದ ಭೀಕರ ಬರ, ಕನಕಗಿರಿ ಉತ್ಸವ ಆಚರಣೆಗೆ ತಣ್ಣೀರೆರಚಿತು. ಆದರೆ ಇದೀಗ ಮತ್ತೊಮ್ಮೆ ಕನಕಗಿರಿ ಉತ್ಸವ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಕನಕಗಿರಿಯ ನಾಗರೀಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅದ್ಧೂರಿಯಾಗಿ ಕನಕಗಿರಿ ಉತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿ ಮಂಜುನಾಥ್ ಸೇರಿದಂತೆ ಎಲ್ಲ ಅಧಿಕಾರಿಗಳು, ಉಪಸಮಿತಿಗಳ ಅಧ್ಯಕ್ಷರು, ಉತ್ಸವಕ್ಕೆ ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲು ಶ್ರಮಿಸುತ್ತಿದ್ದು, ಈ ಬಾರಿಯ ಕನಕಗಿರಿ ಉತ್ಸವದಲ್ಲಿ ಸಾಂಸ್ಕೃತಿಕ ರಸದೌತಣ ಸವಿಯಲು ಸಾರ್ವಜನಿಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
- ತುಕಾರಾಂರಾವ್ ಬಿ.ವಿ., ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ
0 comments:
Post a Comment