ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದು ರಾಷ್ಟ್ರ ಕಲ್ಪನೆಯ ಮೂಲ ಉದ್ದೇಶ ಏನು? ಹಿಂದೂಗಳೆಂದರೆ ಯಾರು? ಎಂಬುದನ್ನೆಲ್ಲ ಅವಲೋಕಿಸುತ್ತಾ ಹೋದಾಗ ಸತ್ಯ ಬಯಲಿಗೆ ಬರುತ್ತದೆ. ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ ಸಿಂಘಾಲ್ ಇತ್ತೀಚೆಗೆ ನೀಡಿದ ಹೇಳಿಕೆಗಳು, ಪೇಜಾವರ ಸ್ವಾಮಿಗಳು ಆಡಿದ ಮಾತುಗಳು, ವಿಜ್ಞಾನ ಕಾಂಗ್ರೆಸ್ ಹೆಸರಿನಲ್ಲಿ ಇತ್ತೀಚೆಗೆ ಮುಂಬೈಯಲ್ಲಿ ನಡೆದ ಅಜ್ಞಾನ ಪ್ರದರ್ಶನ ಇವುಗಳನ್ನೆಲ್ಲ ವಿಮರ್ಶೆಗೆ ಒಳಪಡಿಸಿದಾಗ ಹೊರ ಬರುವ ಸತ್ಯವೆಂದರೆ ಇವರು ಹಿಂದು ರಾಷ್ಟ್ರದ ಹೆಸರಿನಲ್ಲಿ ಸ್ಥಾಪಿಸಹೊರಟಿರುವುದು ಶ್ರೇಣೀಕೃತ ಜಾತಿಪದ್ಧತಿ ಆಧರಿತ ಬ್ರಾಹ್ಮಣ್ಯ ಪ್ರಧಾನ ರಾಷ್ಟ್ರವನ್ನು.
ಆರೆಸ್ಸೆಸ್ ಸರ ಸಂಘ ಚಾಲಕ ಮೋಹನ್ ಭಾಗವತ್ ಅಹ್ಮದಾಬಾದ್‌ನಲ್ಲಿ ಮಾತನಾಡುತ್ತ ಹಿಂದುಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಸಂಘದ ಸಿದ್ಧಾಂತವನ್ನು ಭಾರತದ ಸಾವಿರಾರು ಹಳ್ಳಿಗಳಿಗೆ ಸ್ವಯಂ ಸೇವಕರು ಹೋಗುವುದಾಗಿ ಹೇಳಿದರು. ‘‘ಭಾರತೀಯ ಸಂಸ್ಕೃತಿಯ ಅಡಿಪಾಯವೆಂದರೆ ಆರ್ಯನ್ ಸಂಸ್ಕೃತಿ. ಆರ್ಯ ಪರಂಪರೆಯೇ ಭಾರತದ ಅಸ್ಮಿತೆ’’ ಎಂದು ಹೇಳುವ ಮೂಲಕ ಈ ದೇಶದ ಮೂಲನಿವಾಸಿ ದ್ರಾವಿಡ ಸಮುದಾಯಗಳು ಹೊರಗಿನಿಂದ ಬಂದ ಆರ್ಯ ಸಂಸ್ಕಾರ ಅಳವಡಿಸಿಕೊಳ್ಳಲು ಭಾಗವತ್ ಕರೆ ನೀಡಿದ್ದರು.
ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಜಾಗತಿಕ ಹಿಂದೂ ಸಮಾವೇಶದಲ್ಲಿ ಮಾತಾಡಿದ ಅಶೋಕ ಸಿಂಘಾಲ್ ‘‘ಎಂಟುನೂರು ವರ್ಷಗಳ ನಂತರ ದಿಲ್ಲಿಯ ಸಿಂಹಾಸನ ಮೊದಲ ಬಾರಿಗೆ ಹಿಂದುವೊಬ್ಬನಿಗೆ ಸಿಕ್ಕಿದೆ. ನಿಜವಾದ ಹಿಂದು ಮೋದಿ ಪ್ರಧಾನಿಯಾಗಿದ್ದಾರೆ’’ ಎಂದು ಬಹಿರಂಗವಾಗಿ ಹೇಳಿದರು.
12ನೆ ಶತಮಾನದಲ್ಲಿ ರಜಪೂತ ಅರಸು ಪೃಥ್ವಿರಾಜ್ ಚೌಹಾಣ ಸೋತ ನಂತರ ದಿಲ್ಲಿಯ ಅಧಿಕಾರ ಹಿಂದೂಗಳ ಕೈತಪ್ಪಿ ಹೋಗಿತ್ತು. ಈಗ ಮತ್ತೆ ನಮ್ಮ ಕೈಗೆ ಅಧಿಕಾರ ಬಂದಿದೆ ಎಂದು ಸಿಂಘಾಲ್ ಸಂಭ್ರಮಿಸಿದ್ದಾರೆ. ಮೊಘಲರ ಬ್ರಿಟೀಷರ ಆಳ್ವಿಕೆಯನ್ನು ಸಿಂಘಾಲ್ ಒಪ್ಪಿಕೊಳ್ಳುವುದಿಲ್ಲ. ಆದರೆ 1947ರ ನಂತರ ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದವರು ನಮ್ಮವರು ಎಂದು ಸಿಂಘಾಲ ಒಪ್ಪಿಕೊಳ್ಳುವುದಿಲ್ಲ. ಸೆಕ್ಯುಲರಿಸಂ ಒಪ್ಪಿಕೊಂಡ ಆಡಳಿತವನ್ನು ಹಾಗೂ ನೆಹರೂರಿಂದ ಮನಮೋಹನ್ ಸಿಂಗ್ ವರೆಗಿನ ಪ್ರಧಾನಿಗಳನ್ನು ಅವರು ತಿರಸ್ಕರಿಸುತ್ತಾರೆ. (ವಾಜಪೇಯಿ ಕೂಡ ಇದರಲ್ಲಿ ಸೇರಿದ್ದಾರೆ) ಆದರೆ ನರೇಂದ್ರ ಮೋದಿ ಇವರ ದೃಷ್ಟಿಯಲ್ಲಿ ನಿಜವಾದ ಹಿಂದೂ ಸಾಮ್ರಾಟ.
ಸಂಘ ಪರಿವಾರದ ಮಂಗಗಳಿಗೆ ನಾಲಿಗೆ ಮೇಲೆ ಹಿಡಿತವೇ ಇಲ್ಲ. ಗಾಂಧಿ ಹಂತಕ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದು ಶ್ಲಾಘಿಸಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೆ ಅವಿವೇಕಿಯಂತೆ ಮಾತಾಡಿದ್ದಾರೆ. ‘‘ಹಿಂದು ಧರ್ಮ ಬೆಳೆಸಲು ಹಿಂದು ಮಹಿಳೆಯರು ತಲಾ ನಾಲ್ಕು ಮಕ್ಕಳನ್ನು ಹಡೆಯಬೇಕು’’ ಎಂದು ಈ ಸನ್ಯಾಸಿ ಹೇಳಿದ್ದಾನೆ. ಹೀಗೆ ಹೇಳುವವರನ್ನೆಲ್ಲ ಹಿಡಿದು ಲಿಂಗ ಪರಿವರ್ತನೆ ಮಾಡಿಸಿ ಹಡೆಯಲು ಹೇಳಬೇಕಾಗಿದೆ. ಈ ಸಾಕ್ಷಿ ಮಹಾರಾಜ, ಯೋಗಿ ಆದಿತ್ಯನಾಥ, ಸಾಧ್ವಿ ನಿರಂಜನ ಜ್ಯೋತಿ ಇಂಥವರಿಗೆಲ್ಲ ಪಕ್ಷದ ಟಿಕೆಟ್ ನೀಡಿದ ಲೋಕಸಭೆಗೆ ತಂದ ಬಿಜೆಪಿ ಸಂಸದ ಆಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಈಗ ವೌನ ತಾಳಿದ್ದಾರೆ.
ಇನ್ನು ಉಡುಪಿಯ ಪೇಜಾವರ ಸ್ವಾಮಿಗಳು ಇತ್ತೀಚೆಗೆ ಬ್ರಾಹ್ಮಣ್ಯವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸತ್ಯವೊಂದನ್ನು ಹೇಳಿದ್ದಾರೆ. ಈವರೆಗೆ ಆರ್ಯರು ಅಂದರೆ ಬ್ರಾಹ್ಮಣರು ಹೊರಗಿನಿಂದ ಬಂದವರು ಎಂದು ಹೇಳಿದ್ದಾಗ, ಪೇಜಾವರರು ಸೇರಿದಂತೆ ಸಂಘಪರಿವಾರದವರಿಗೆಲ್ಲ ಕೆಂಡದಂಥ ಕೋಪ ಬರುತ್ತಿತ್ತು. ‘‘ಆರ್ಯರು ಈ ದೇಶದ ಮೂಲ ನಿವಾಸಿಗಳು ಹೊರಗಿನಿಂದ ಬಂದವರಲ್ಲ’’ ಎಂದು ಆರೆಸ್ಸೆಸ್ ಇತಿಹಾಸಕಾರರು ವಾದ ಮಾಡುತ್ತಿದ್ದರು. ಆದರೆ ಪೇಜಾವರರು ‘‘ಅಸ್ಪಶ್ಯತೆ ಬ್ರಾಹ್ಮಣರ ಕೊಡುಗೆ ಎನ್ನುವುದು ತಪ್ಪು. ಆರ್ಯರು ಬರುವ ಮುಂಚೆ ದ್ರಾವಿಡ ಸಮುದಾಯದಲ್ಲೆ ಅಸ್ಪಶ್ಯತೆ ಇತ್ತು’’ ಎಂದು ಹೇಳಿದ್ದಾರೆ. ಅಂದರೆ ಆರ್ಯರು ಹೊರಗಿನಿಂದ ಬಂದವರು ಎಂಬುದು ಯುರೋಪಿಯನ್ನರು ಕಟ್ಟಿಕೊಟ್ಟ ಚರಿತ್ರೆ ಎನ್ನುತ್ತಿದ್ದ ಸಂಘಪರಿವಾರದವರು ಅಂದರೆ ಪೇಜಾವರರು ಆರ್ಯರು ಬರುವ ಮುಂಚೆಯೇ ಅಸ್ಪಶ್ಯತೆ ಇತ್ತು ಎಂದು ಹೇಳುವ ಮೂಲಕ ಬ್ರಾಹ್ಮಣರು ಈ ದೇಶದ ಮೂಲ ನಿವಾಸಿಗಳಲ್ಲ. ಅವರೂ ಹೊರಗಿನಿಂದ ಬಂದವರು ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಜಾತಿಪದ್ಧತಿಗೆ ಯಾರು ಕಾರಣ ಎಂಬುದನ್ನು ಬುದ್ಧ, ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್ ವರೆಗೆ ಎಲ್ಲರೂ ಸಾರಿ ಹೇಳಿದ್ದಾರೆ. ಪೇಜಾವರರು ಹೇಳಿದಂತೆ ದ್ರಾವಿಡರಲ್ಲಿ ಅಸ್ಪಶ್ಯತೆ ಜಾತಿಗಳೇ ಇರಲಿಲ್ಲ. ಇವೆಲ್ಲ ಆರ್ಯರ ಸೃಷ್ಟಿ. ಇನ್ನು ಮೋಹನ ಭಾಗವತ್ ಮಾತು. ಈ ವರೆಗೆ ಹಿಂದು ಧರ್ಮ ಹಿಂದೂ ರಾಷ್ಟ್ರ ಎಂದು ಹೇಳುತ್ತಾ ಬಂದಿದ್ದ ಸರಸಂಘ ಚಾಲಕರು ಕೇಂದ್ರದಲ್ಲಿ ಪರಿವಾರ ಹಿಡಿತ ಸಾಧಿಸಿದ ನಂತರ ನಮ್ಮದು ಆರ್ಯ ಸಂಸ್ಕೃತಿ, ಆರ್ಯ ಪರಂಪರೆ, ಆರ್ಯ ಅಸ್ಮಿತೆ ಎಂದೆಲ್ಲ ಹೇಳುತ್ತಿದ್ದಾರೆ. ಆರೆಸ್ಸೆಸ್ ಸೇರಿ ಕೊರಕಲಿಗೆ ಬಿದ್ದಿರುವ ಶೂದ್ರ ಯುವಕರು ಭಾಗವತ್ ಮಾತನ್ನು ಈಗಲಾದರೂ ಅರ್ಥ ಮಾಡಿಕೊಳ್ಳಲಿ. ಆರ್ಯ ಪರಂಪರೆ, ಆರ್ಯ ಅಸ್ಮಿತೆ ಅಂದರೆ ಬ್ರಾಹ್ಮಣ ಪರಂಪರೆ ಬ್ರಾಹ್ಮಣ ಅಸ್ಮಿತೆ ಎಂದೇ ಅರ್ಥ. ಅಂದರೆ ಉಳಿದವರು ಬ್ರಾಹ್ಮಣರ ಗುಲಾಮಗಿರಿ ನೊಗಕ್ಕೆ ಹೆಗಲು ಕೊಡಬೇಕು. ಆರೆಸ್ಸೆಸ್‌ನ ಈ ಆರ್ಯನ್ ಗುಲಾಮಗಿರಿಗೆ ನಮ್ಮ ಕೆಲ ವಿಜ್ಞಾನಿಗಳು ಈಗಾಗಲೇ ಹೆಗಲು ಕೊಟ್ಟಿದ್ದಾರೆ. ಮುಂಬೈನಲ್ಲಿ ನಡೆದ 102ನೆ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಪುರಾಣದ ಕಲ್ಪಿತ ಸಂಗತಿಗಳು ಕಟ್ಟುಕತೆಗಳು ವೈಜ್ಞಾನಿಕ ಆವಿಷ್ಕಾರಗಳಿಗೆ ಮೂಲ ಎಂಬಂತೆ ಬಿಂಬಿಸಲಾಯಿತು. ‘‘ವೇದ ಕಾಲದಲ್ಲೇ ವಿಮಾನಯಾನವಿತ್ತು. ನಮ್ಮ ಋಷಿಮುನಿಗಳು ವಿಮಾನದಲ್ಲಿ ಬೇರೆ ದೇಶಗಳಿಗೆ ಮಾತ್ರವಲ್ಲ ಅನ್ಯಗ್ರಹಗಳಿಗೂ ಹೋಗಿ ಬರುತ್ತಿದ್ದರು ಎಂದು ಕೆಲ ವಿಜ್ಞಾನಿಗಳು ಹೇಳಿದರು. ಬೀಜಗಣಿತ ಪೈಥಾಗೊರಸ್ ಮೂಲ ಭಾರತ’’ ಎಂದು ವಿಜ್ಞಾನ ತಂತ್ರಜ್ಞಾನ ಸಚಿವ ಡಾ.ಹರ್ಷವರ್ದನ್ ಹೇಳಿದರು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿ ಪ್ಲಾಸ್ಟಿಕ್ ಸರ್ಜರಿ ಇತ್ತು. ಆನೆ ತಲೆಯನ್ನು ಗಣೇಶನಿಗೆ ಜೋಡಿಸಿದ್ದು ಇದಕ್ಕೆ ಉದಾಹರಣೆ ಎಂದು ಹೇಳುವ ಪ್ರಧಾನಿ ನಮಗಿರುವಾಗ ಇಂಥ ಅವಿವೇಕ ಸಹಿಸಲೇಬೇಕಾಗಿದೆ.
ಮೋಹನ್ ಭಾಗವತ್, ಅಶೋಕ್ ಸಿಂಘಾಲ್, ಪ್ರವೀಣ್ ತೊಗಾಡಿಯ ಆಡುತ್ತಿರುವ ಮಾತುಗಳು ಸಂವಿಧಾನಾತ್ಮಕ ಹುದ್ದೆ ಅಲಂಕರಿಸಿದ ಪ್ರಧಾನಿ, ರಾಜ್ಯಪಾಲರು ಹಾಗೂ ಕೇಂದ್ರ ಸಚಿವರ ಬಾಯಿಯಿಂದ ಬರುತ್ತಿವೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ‘ಕೇಸರೀಕರಣ ಹಿಂದೆಯೂ ಮಾಡಲಾಗಿತ್ತು. ಈಗಲೂ ಮಾಡಲಾಗುತ್ತಿದೆ. ಮುಂದೆಯೂ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಉತ್ತರಪ್ರದೇಶ ರಾಜ್ಯಪಾಲ ರಾಮನಾಯ್ಕ ಇದೇ ರೀತಿ ಮಾತಾಡುತ್ತಿದ್ದಾರೆ. ತಾವಿರುವ ಸ್ಥಾನಮಾನದ ಇತಿಮಿತಿಗಳೂ ಇವರಿಗೆ ಗೊತ್ತಿಲ್ಲ. ಇದು ನಮ್ಮ ದೇಶದ ದುರಂತ ಕಾಲ ಅಂದರೆ ತಪ್ಪಿಲ್ಲ.
ಆರೆಸ್ಸೆಸ್ ಕಟ್ಟಲು ಹೊರಟಿರುವ ರಾಷ್ಟ್ರ ಎಂಥದು ಎಂದು ಪ್ರಗತಿಪರರಿಗೆಲ್ಲ ಅರ್ಥವಾಗಿದೆ. ತನ್ನ ಗುರಿ ಸಾಧನೆಗಾಗಿ ಬೇರೆ ಬೇರೆ ಹೆಸರು, ಬ್ಯಾನರ್‌ಗಳಿರುವ ಸುಮಾರು 1,700 ಸಂಘಟನೆಗಳನ್ನು ಸಂಘಪರಿವಾರ ಸ್ಥಾಪಿಸಿದೆ. ಆದಿವಾಸಿಗಳು, ದಲಿತರು, ಕಾರ್ಮಿಕರು, ರೈತರು, ಹಿಂದುಳಿದವರು, ಮಹಿಳೆ ಇವರಿಗಾಗಿ ಪ್ರತ್ಯೇಕ ಸಂಘಟನೆಗಳನ್ನು ಹುಟ್ಟು ಹಾಕಿದೆ. ಮೊದಲು ಕೇವಲ ನಗರ ಪ್ರದೇಶದ ಬ್ರಾಹ್ಮಣರ ಅಗ್ರಹಾರಗಳಿಗೆ ಸೀಮಿತವಾಗಿದ್ದ ಇವರ ಚಟುವಟಿಕೆ ಈಗ ಹಳ್ಳಿ ಹಳ್ಳಿಗೆ ವ್ಯಾಪಿಸುತ್ತಿದೆ. ಇದೊಂದು ರೀತಿ ಪ್ರಾಣಾಂತಿಕ ವ್ಯಾಧಿಯಾಗಿ ನಮ್ಮ ಸಮಾಜ ಜೀವನವನ್ನು ಆಕ್ರಮಿಸುತ್ತಿದೆ. ಭಾರತದ ಅಲ್ಪಸಂಖ್ಯಾತ ಸಮುದಾಯದ ಜನ ದಿಗಿಲುಗೊಂಡು ಇದನ್ನೆಲ್ಲ ನೋಡುತ್ತಿದ್ದಾರೆ. ಇದನ್ನು ತಡೆಯಬೇಕಾದ ಜಾತ್ಯತೀತ, ಪ್ರಗತಿಪರ ಶಕ್ತಿಗಳು ಒಡೆದು ಚೂರು ಚೂರಾಗಿವೆ. ಕಮ್ಯುನಿಸ್ಟರು ಕೆಂಪು ನಾಡಿನಲ್ಲಿ (ಪ.ಬಂಗಾಳ), ಪೆರಿಯಾರರ ದ್ರಾವಿಡ ನಾಡಿನಲ್ಲಿ ಈಗ ಆರೆಸ್ಸೆಸ್ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿದೆ. ಈ ದೇಶದ ದೊಡ್ಡ ಜಾತ್ಯತೀತ ಪಕ್ಷವೆಂದು ಕರೆಯಲ್ಪಡುವ ಕಾಂಗ್ರೆಸ್ ಕೂಡ ಹಿಂದುತ್ವಕ್ಕೆ ಶರಣಾಗತವಾಗುವ ಅಪಾಯದ ದಿನಗಳು ಎದುರಾಗಿವೆ. ಪಕ್ಷ ಒಪ್ಪಿಕೊಂಡ ಸೆಕ್ಯುಲರ್ ಸಿದ್ಧಾಂತ ಬದಲಿಸಬೇಕೆ ಎಂಬ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಭಿಪ್ರಾಯ ಸಂಗ್ರಹ ನಡೆಸಿದೆ. ಇದು ಕೂಡ ಒಂದು ರೀತಿಯ ಧಾರ್ಮಿಕ ಭಯೋತ್ಪಾದನೆ. ಬಾಂಬು ಹಾಕಿ ಕೊಲ್ಲುವುದು ಮಾತ್ರ ಭಯೋತ್ಪಾದನೆ ಅಲ್ಲ. ಈ ರೀತಿ ಮಾತುಗಳ ಮೂಲಕ ಭಾವೋನ್ಮಾದ ಕೆರಳಿಸಿ ಗುಜರಾತಿನಂಥ ಜನ ವಿಭಜನೆಯ ವಾತಾವರಣವನ್ನು ಎಲ್ಲೆಡೆ ನಿರ್ಮಿಸುವುದು ಈ ಸಂಘ ಭಯೋತ್ಪಾದಕರ ಹುನ್ನಾರವಾಗಿದೆ. ಈ ಭಯೋತ್ಪಾದನೆ ವಿರುದ್ಧ ಹೋರಾಟವೇ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕಾಗಿದೆ.
ಹಿಂದುತ್ವದ ಮುಖವಾಡ ಹಾಕಿ ಬ್ರಾಹ್ಮಣ್ಯದ ದಿಗ್ವಿಜಯದ ಗುರಿ ಸಾಧಿಸುವುದು ಸಂಘ ಪುರೋಹಿತ ಶಾಹಿಯ ಗುರಿಯಾಗಿದೆ. ಈ ಅಪಾಯದ ಬಗ್ಗೆ ಡಾ.ಅಂಬೇಡ್ಕರ್ ಐದು ದಶಕಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಈಗ ಭಾರತ ಅದನ್ನು ಎದುರಿಸಿ ಹೋರಾಡಬೇಕಾಗಿದೆ. ಈಗ ಸುಮ್ಮನಿದ್ದು ಬಿಟ್ಟರೆ, ಅಲ್ಪಸಂಖ್ಯಾತರು ಮಾತ್ರವಲ್ಲ ಸಮಸ್ತ ದಲಿತ ಶೂದ್ರ, ಬ್ರಾಹ್ಮಣೇತರ ಸಮುದಾಯ ಆರ್ಯನ್ ಗುಲಾಮಗಿರಿಯ ಹೊಂಡದಲ್ಲಿ ಬೀಳಬೇಕಾಗುತ್ತದೆ.
0 comments:
Post a Comment