PLEASE LOGIN TO KANNADANET.COM FOR REGULAR NEWS-UPDATES

ಮೈಸೂರು ಹುಲಿ ಇನ್ನೂ ಸಿಂಹಸ್ವಪ್ನ ಎನ್ನುವುದನ್ನು ಕೇಸರಿಪಡೆ ಮತ್ತೆ ಸಾಬೀತುಪಡಿಸಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಯುದ್ಧಭೂಮಿಯಲ್ಲೇ ವೀರಮರಣವನ್ನಪ್ಪಿದ ಹುತಾತ್ಮ, ಟಿಪ್ಪು ಸಾರ್ವಭೌಮತ್ವದ ಬಗ್ಗೆ ಮತ್ತೆ ಕೇಸರಿಯವರಿಂದ ಅಪಸ್ವರ ಕೇಳಿಬರುತ್ತಿದೆ. ಐತಿಹಾಸಿಕ ಶ್ರೀರಂಗಪಟ್ಟಣ ಕದನದಲ್ಲಿ ಬ್ರಿಟಿಷ್ ಆಡಳಿತ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟ ನಡೆಸಿ ಹುತಾತ್ಮನಾದ ಟಿಪ್ಪುಸುಲ್ತಾನ್ ಅವರ ಈ ಕೆಚ್ಚು 50 ವರ್ಷಗಳ ಬಳಿಕ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿಯಾಯಿತು. ಬ್ರಿಟಿಷ್ ವಿರುದ್ಧದ ಹೋರಾಟದಲ್ಲಿ ಟಿಪ್ಪುಸುಲ್ತಾನ್ ತನ್ನ ಮಕ್ಕಳನ್ನೂ ತ್ಯಾಗ ಮಾಡಬೇಕಾಯಿತು ಎಂಬ ಸತ್ಯ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಟಿಪ್ಪುಜನ್ಮದಿನ ಆಚರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಟಿಪ್ಪುಹಿಂದುತ್ವವಾದಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಇದರಿಂದ ಪರಿವಾರ ಮುಖಂಡರಿಂದ ಟಿಪ್ಪುಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಪ್ರೊ. ಶೇಖ್ ಅಲಿ ಅವರ, ‘ಟಿಪ್ಪುಸುಲ್ತಾನ್ ಬದಲಾವಣೆಯ ಪ್ರತಿಪಾದಕ’ ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದರು.
ಆ ಕಾಲದ ಇತರ ಆಡಳಿತಗಾರರಿಗಿಂತ ಬಹಳ ದೂರದರ್ಶಿ ವ್ಯಕ್ತಿತ್ವ ಹೊಂದಿದ್ದ ಟಿಪ್ಪು, ಸ್ವತಃ ಜ್ಞಾನಿ; ಸೇನಾನಿ ಮತ್ತು ಕವಿಹೃದಯದ ವ್ಯಕ್ತಿ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ- ಮುಸ್ಲಿಂ ಭಾವೈಕ್ಯ ಬಾಂಧವ್ಯದ ಹರಿಕಾರ. ಸ್ವತಃ ಸಂಶೋಧಕ ಪ್ರವೃತ್ತಿ ಹೊಂದಿದ್ದ ಟಿಪ್ಪುಸುಲ್ತಾನ್ ವಿಶ್ವದ ಮೊದಲ ಯುದ್ಧ ರಾಕೆಟ್ ತಯಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಫ್ರಾನ್ಸ್ ಕ್ರಾಂತಿಯಿಂದ ಸ್ಫೂರ್ತಿ ಪಡೆದು, ಆಡಳಿತಗಾರರಾಗಿದ್ದೂ, ನಿಷ್ಠಾವಂತ ಪ್ರಜೆ ಎಂಬ ಮನೋಭಾವ ಬೆಳೆಸಿಕೊಂಡಿದ್ದರು. ತಮ್ಮ ಅರಮನೆಯಲ್ಲಿ ಸ್ವಾತಂತ್ರ್ಯದ ಹೆಮ್ಮರ ಬೆಳೆಸಿದ್ದರು ಎನ್ನುವುದು ಉಲ್ಲೇಖನೀಯ. ಬ್ರಿಟಿಷ್ ಪಿತೂರಿಯ ಕಾರ್ಯತಂತ್ರದ ಬಗ್ಗೆ ಸಮಗ್ರ ಅರಿವು ಹೊಂದಿದ್ದ ಟಿಪ್ಪು, ಆಂತರಿಕವಾಗಿ ಇತರ ಆಡಳಿತಗಾರರ ಜತೆಗೆ ವಿಶಾಲ ಅರ್ಥದಲ್ಲಿ ಏಕತೆ ತರಲು ಬಹುವಾಗಿ ಶ್ರಮಿಸಿದ್ದರು. ಬ್ರಿಟಿಷ್ ಸಂಚಿನ ವಿರುದ್ಧದ ಹೋರಾಟಕ್ಕೆ ಫ್ರಾನ್ಸ್, ಟರ್ಕಿ, ಅಫ್ಘಾನಿಸ್ತಾನ ಜತೆಗೂ ಸಂಪರ್ಕ ಸಾಧಿಸಿದ್ದರು. ಬ್ರಿಟಿಷರ ತಂತ್ರಗಾರಿಕೆಯನ್ನು ಸಮರ್ಥವಾಗಿ ಅರ್ಥೈಸಿಕೊಂಡು ಎರಡು ಬಾರಿ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ್ದು ಇತಿಹಾಸದಲ್ಲಿ ಕಂಡುಬರುವ ಸತ್ಯ.
ಟಿಪ್ಪುಜೀವನ ಚರಿತ್ರೆಯಲ್ಲಿ ಆತನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವ ಅತ್ಯಂತ ಮಹತ್ವದ ಹಾಗೂ ಕುತೂಹಲಕಾರಿ ಘಟನೆಯನ್ನಿಲ್ಲಿ ಉಲ್ಲೇಖಿಸಲೇಬೇಕು. ಏಕೆಂದರೆ ಕೇಸರಿ ಪಡೆ ಸದಾ ಇದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. 1791ರಲ್ಲಿ ಮರಾಠಿ ಸೈನ್ಯ ಶೃಂಗೇರಿಯ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿ, ಅಮೂಲ್ಯ ವಸ್ತುಗಳನ್ನು ದೋಚಿತು. ಜತೆಗೆ ಅಸಂಖ್ಯಾತ ಮಂದಿಯನ್ನು ಹತ್ಯೆ ಮಾಡಿತು. ಶ್ರೀಮಠದ ಪೀಠಾಧಿಪತಿ ಟಿಪ್ಪುಸುಲ್ತಾನ್‌ಗೆ ವಿಷಯ ಮುಟ್ಟಿಸಿ ನೆರವು ಯಾಚಿಸಿದರು. ತಕ್ಷಣ ಟಿಪ್ಪುಸುಲ್ತಾನ್ ಬೆದನೂರಿನ ಅಸಾಫ್‌ಗೆ ಸೂಚನೆ ನೀಡಿ, ಶ್ರೀಮಠಕ್ಕೆ ಸಹಾಯಹಸ್ತ ಚಾಚುವಂತೆ ಆದೇಶಿಸಿದರು. ಈ ಸಂದರ್ಭದಲ್ಲಿ ಶಂಕರಾಚಾರ್ಯರು ಮತ್ತು ಟಿಪ್ಪುಸುಲ್ತಾನ್ ನಡುವೆ ನಡೆದ ಪತ್ರವ್ಯವಹಾರದ 30ಕ್ಕೂ ಹೆಚ್ಚು ಕನ್ನಡ ಪತ್ರಗಳು 1916ರಲ್ಲಿ ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕರಿಗೆ ಮೈಸೂರಿನಲ್ಲಿ ಸಿಕ್ಕಿದ್ದವು.

ದಾಳಿ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ ಟಿಪ್ಪುಹೀಗೆ ಬರೆದಿದ್ದರು. ‘‘ಇಂಥ ಪವಿತ್ರ ಸ್ಥಾನದ ಮೇಲೆ ದಾಳಿ ಮಾಡಿದ ಪಾಪಿಗಳು ಖಂಡಿತವಾಗಿಯೂ ಪರಿಣಾಮ ಎದುರಿಸುತ್ತಾರೆ. ಅವರ ತಪ್ಪುಕೆಲಸಕ್ಕೆ ಅವರು ಪ್ರತಿಫಲ ಪಡೆಯುವ ದಿನ ದೂರವಿಲ್ಲ. ಕಲಿಯುಗದಲ್ಲಿ ತಮ್ಮ ತಪ್ಪುಗಳಿಗೆ ಶೀಘ್ರದಲ್ಲೇ ಪ್ರತಿಫಲ ಪಡೆಯುತ್ತಾರೆ.’’ ***

ಟಿಪ್ಪು ಜಯಂತಿಯನ್ನು ಸರಕಾರದಿಂದ ಆಚರಿಸುವ ಪ್ರಸ್ತಾವ ಸಹಜವಾಗಿಯೇ ರಾಜ್ಯದಲ್ಲಿ ವಿವಾದ ಹುಟ್ಟುಹಾಕಿದೆ. ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಇದನ್ನು ಮತಬೇಟೆ ತಂತ್ರ ಎಂದು ಬಣ್ಣಿಸಿದೆ. ಆ ಪಕ್ಷದ ಹಿರಿಯ ಮುಖಂಡರೊಬ್ಬರು ಟಿಪ್ಪುವನ್ನು ನಿರಂಕುಶವಾದಿ ಸರ್ವಾಧಿಕಾರಿ ಎಂದು ಕರೆದು ಸ್ಟಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಮುಖಂಡ ಡಿ.ಎಚ್.ಶಂಕರಮೂರ್ತಿ, ‘‘ಟಿಪ್ಪುಕನ್ನಡ ವಿರೋಧಿ. ಆತ ಕನ್ನಡಿಗನಲ್ಲ. ಮೈಸೂರು ಪ್ರಾಂತ್ಯದ ಆಡುಭಾಷೆಯಾಗಿದ್ದ ಕನ್ನಡದ ಬದಲು ಆತ ಪರ್ಶಿಯನ್ ಭಾಷೆಯನ್ನು ಪರಿಚಯಿಸಿದ’’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವ್ಯಕ್ತಿ ಬಿಜೆಪಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ, ಉನ್ನತ ಶಿಕ್ಷಣ ಸಚಿವರಾಗಿದ್ದು, ‘‘ಟಿಪ್ಪುಸುಲ್ತಾನ್ ಹೆಸರನ್ನು ಇತಿಹಾಸದ ಪುಟಗಳಿಂದ ಕಿತ್ತುಹಾಕಬೇಕು’’ ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಸಮ್ಮಿಶ್ರ ಸರಕಾರದಲ್ಲಿ ಭಾಗಿಯಾಗಿದ್ದ ಜೆಡಿಎಸ್‌ನ ತೀವ್ರ ವಿರೋಧದಿಂದಾಗಿ ಈ ಪ್ರಯತ್ನ ವಿಫಲವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಕಳೆದ ವರ್ಷ ರಿಪಬ್ಲಿಕ್ ಡೇ ಪರೇಡ್‌ಗೆ ಟಿಪ್ಪುಕುರಿತ ಸ್ತಬ್ಧಚಿತ್ರವನ್ನು ನಿರ್ಮಿಸಲು ರಾಜ್ಯ ಸರಕಾರ ಮುಂದಾದಾಗ ಹಿಂದುತ್ವ ಪಡೆ ವಿರೋಧಿಸಿತ್ತು. ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡಲು ಕೇಂದ್ರ ಸರಕಾರ ಮುಂದಾದಾಗಲೂ ಕೇಸರಿಪಡೆ ಪ್ರತಿಭಟನೆ ನಡೆಸಿತ್ತು. ಮನಮೋಹನ್ ಸಿಂಗ್ ಸರಕಾರ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಹೆಸರಿನ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದ್ದಾಗ ಕೇಸರಿಪಡೆಯಿಂದ ಈ ರೀತಿಯ ವಿರೋಧ ವ್ಯಕ್ತವಾಗಿತ್ತು. ಎರಡು ವರ್ಷ ಮೊದಲು ಆಗಿದ್ದ ಶಿಕ್ಷಣ ಸಚಿವರಾಗಿದ್ದ ಕೇಸರಿ ಪರಿವಾರದ ಮುಖಂಡ ಟಿಪ್ಪುವನ್ನು ವಿದೇಶಿ ವ್ಯಕ್ತಿ; ಟಿಪ್ಪುಸುಲ್ತಾನ್ ಮತ್ತು ಬ್ರಿಟಿಷರಿಗೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಬಣ್ಣಿಸಿದ್ದರು!



ಟಿಪ್ಪುವಿರುದ್ಧ ಕೇಸರಿ ಪಡೆ ದ್ವೇಷ ಸಾಧಿಸುವುದಕ್ಕೆ ಕಾರಣವಾದರೂ ಏನು ಕಂಡುಹಿಡಿಯಬೇಕಿದೆ. ಇದಕ್ಕೂ ಮೊದಲು ಬ್ರಿಟಿಷರ ಒಡೆದು ಆಳುವ ನೀತಿಗೆ ಅನುಗುಣವಾಗಿ ಚರಿತ್ರೆಯನ್ನು ಹೇಗೆ ತಿರುಚಲಾಗಿದೆ ಎನ್ನುವುದನ್ನೂ ಕಂಡುಹಿಡಿಯಬೇಕಿದೆ. ಟಿಪ್ಪು ವಿರುದ್ಧ ಅಭಿಪ್ರಾಯ ಮೂಡುವ ರೀತಿಯಲ್ಲೇ ಚರಿತ್ರೆಯಲ್ಲಿ ಆತನ ಕುರಿತಾದ ಘಟನೆಗಳನ್ನು ಉಲ್ಲೇಖಿಸಲಾಗಿದೆ. ಈ ಸಂಬಂಧ ಪ್ರೊ. ಬಿ.ಎನ್.ಪಾಂಡೆ 1977ರಲ್ಲಿ ‘ವಸಾಹತುಶಾಹಿಗಳ ಸೇವೆಯಲ್ಲಿ ಇತಿಹಾಸ’ ಎಂಬ ವಿಷಯದ ಬಗ್ಗೆ ರಾಜ್ಯಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣ ಇಲ್ಲಿ ಉಲ್ಲೇಖಾರ್ಹ. ಪ್ರೊ. ಪಾಂಡೆ ಅಲಹಾಬಾದ್ ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿದ್ದು, ನಂತರ ಒರಿಸ್ಸಾದ ರಾಜ್ಯಪಾಲರಾದರು. 1928ರಲ್ಲಿ ಇದ್ದ ಸ್ಥಿತಿಯ ಬಗ್ಗೆ ಅವರು ತಮ್ಮ ಭಾಷಣದಲ್ಲಿ ವಿವರಿಸಿದ್ದರು.ವರು ಅಲಹಾಬಾದ್ ವಿವಿಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದಾಗ ಕೆಲ ವಿದ್ಯಾರ್ಥಿಗಳು ಒಂದು ಪುಸ್ತಕದೊಂದಿಗೆ ಅವರನ್ನು ಭೇಟಿ ಮಾಡಿದರು. ಅದು ಕೊಲ್ಕತ್ತ ವಿವಿಯ ಸಂಸ್ಕೃತ ಪ್ರಾಧ್ಯಾಪಕ ಹರಪ್ರಸಾದ್ ಶಾಸ್ತ್ರಿ ಎಂಬವರು ಬರೆದ ಕೃತಿ. ಟಿಪ್ಪುಸುಲ್ತಾನ್ ಮೂರು ಸಾವಿರ ಬ್ರಾಹ್ಮಣರನ್ನು ಮತಾಂತರಕ್ಕೆ ಬಲಾತ್ಕಾರ ಮಾಡಿದ್ದ. ಇಲ್ಲದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅವರು ಮತಾಂತರ ಬದಲು ಆತ್ಮಹತ್ಯೆಯೇ ಮೇಲು ಎಂದು ಆತ್ಮಹತ್ಯೆಗೆ ಶರಣಾದರು ಎಂದು ಈ ಕೃತಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಓದಿದ ತಕ್ಷಣ ಪಾಂಡೆ, ಶಾಸ್ತ್ರಿಯವರಿಗೆ ಪತ್ರ ಬರೆದು, ಯಾವ ಆಧಾರದಲ್ಲಿ ಇದನ್ನು ಬರೆದಿರುವುದಾಗಿ ಪ್ರಶ್ನಿಸಿದ್ದರು. ಮೈಸೂರು ಗಜೇಟಿಯರ್‌ನ ಉಲ್ಲೇಖವನ್ನು ನೀಡಿ ಶಾಸ್ತ್ರಿ ಉತ್ತರಿಸಿದ್ದರು. ಮೈಸೂರು ವಿವಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯ ಅವರಿಗೆ ಪಾಂಡೆ ಮತ್ತೆ ಪತ್ರ ಬರೆದು ಗಜೇಟಿಯರ್‌ನಲ್ಲಿ ಇರುವ ಉಲ್ಲೇಖ ನಿಜವೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಶ್ರೀಕಂಠಯ್ಯ, ಮೈಸೂರು ಗಜೇಟಿಯರ್‌ನಲ್ಲಿ ಇಂಥ ಯಾವುದೇ ಉಲ್ಲೇಖ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ತದ್ವಿರುದ್ಧವಾಗಿ, ಟಿಪ್ಪುಸುಲ್ತಾನ್ 156 ದೇವಾಲಯಗಳಿಗೆ ಪ್ರತಿ ವರ್ಷ ಅನುದಾನ ನೀಡುತ್ತಿದ್ದರು. ಶೃಂಗೇರಿ ಶಂಕರಾಚಾರ್ಯ ಮಠಕ್ಕೂ ಅನುದಾನ ನೀಡುತ್ತಿದ್ದರು ಎಂಬ ಉಲ್ಲೇಖ ಗಜೇಟಿಯರ್‌ನಲ್ಲಿದೆ ಎಂದು ಶ್ರೀಕಂಠಯ್ಯ ಸ್ಪಷ್ಟಪಡಿಸಿದ್ದರು.
***
1990ರ ದಶಕದಲ್ಲಿ ಹಿಂದುತ್ವದ ಉಗ್ರವಾದಿಗಳು ಟಿಪ್ಪುಸುಲ್ತಾನ್ ಚಾರಿತ್ರ್ಯಕ್ಕೆ ಧಕ್ಕೆ ಉಂಟುಮಾಡುವಂಥ ವಿಚಾರಗಳನ್ನು ಭಾರತ ಉಪಖಂಡದ ಕೆಲ ಬ್ರಿಟಿಷ್‌ಪರ ಚರಿತ್ರಕಾರರ ಕೃತಿಗಳಲ್ಲಿ ಕಂಡುಕೊಂಡಿದ್ದರು. ಟಿಪ್ಪುಚರಿತ್ರೆಯನ್ನು ಹತ್ತಿರದಿಂದ ತಿಳಿದುಕೊಂಡ ಯಾರು ಕೂಡಾ ಹಿಂದೂ ಮತ್ತು ಕ್ರೈಸ್ತರನ್ನು ಟಿಪ್ಪು ಮತಾಂತರಕ್ಕೆ ಒಳಪಡಿಸಿದ್ದ ಎಂದು ಒಪ್ಪುವುದಿಲ್ಲ. ಬ್ರಿಟಿಷ್ ಲೇಖಕರಾದ ಕ್ರಿಕ್‌ಪ್ಯಾಟ್ರಿಕ್, ವಿಲ್ಸ್ ಅವರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಟಿಪ್ಪುವಿರುದ್ಧ ದ್ವೇಷಸಾಧನೆಗೆ ಮುಂದಾಗಿದ್ದಾರೆ. ಟಿಪ್ಪುವನ್ನು ನಿರಂಕುಶವಾದಿ ಎಂದು ಬಿಂಬಿಸುವುದು ಅವರ ಉದ್ದೇಶವಾಗಿತ್ತು. ಜತೆಗೆ ಬ್ರಿಟಿಷರು ವ್ಯಕ್ತಿ ಸ್ವಾತಂತ್ರ್ಯದ ಪರ ಎಂದು ಈ ಕೃತಿಕಾರರು ಬಣ್ಣಿಸಿದ್ದರು. ಉಭಯ ಕೃತಿಕಾರರು ಟಿಪ್ಪು ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿರುವುದನ್ನೂ ಬ್ರಿಟಲ್‌ಬ್ಯಾಂಕ್ ಕೇಟ್ ತಮ್ಮ ಕೃತಿಯಲ್ಲಿ ಬಹಿರಂಗಪಡಿಸಿದ್ದಾರೆ. ಲಾರ್ಡ್ ಕಾರ್ನಿವಾಲಿಸ್ ಮತ್ತು ರಿಚರ್ಡ್ ವೆಲ್ಲೆಸ್ಲಿಯವರ ಆಡಳಿತದಲ್ಲಿ ಇವರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು ಎನ್ನುವುದೂ ಕೇಟ್ ಕೃತಿಯಿಂದ ತಿಳಿದುಬರುತ್ತದೆ.
ಮೊಹಿಬುಲ್ ಹಸನ್ ತಮ್ಮ ‘ದ ಹಿಸ್ಟರಿ ಆಫ್ ಟಿಪ್ಪುಸುಲ್ತಾನ್’ ಕೃತಿಯಲ್ಲಿ ಟಿಪ್ಪು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳ ಬಗ್ಗೆ ಹೀಗೆ ವಿವರಿಸಿದ್ದಾರೆ. ‘‘ಟಿಪ್ಪುವನ್ನು ಹೀಗೆ ಬಿಂಬಿಸಲು ಬಲವಾದ ಕಾರಣವಿದೆ. ಬ್ರಿಟಿಷ್ ಲೇಖಕರು ಟಿಪ್ಪುವಿರುದ್ಧ ದ್ವೇಷ ಭಾವನೆ ಹೊಂದಿದ್ದರು. ಏಕೆಂದರೆ ದೇಶದ ಇತರ ರಾಜರಂತೆ ಬ್ರಿಟಿಷ್ ಸಾಮ್ರಾಜ್ಯದ ಸಾಮಂತರಾಜನಾಗಿ ಉಳಿಯಲು ಟಿಪ್ಪುಸಿದ್ಧರಿರಲಿಲ್ಲ. ಆದ್ದರಿಂದ ಬ್ರಿಟಿಷರ ಪ್ರಬಲ ಮತ್ತು ಕಟ್ಟಾ ವಿರೋಧಿ ಎಂದು ಪರಿಗಣಿಸಿದ್ದರು. ಈ ಕಾರಣದಿಂದ ಟಿಪ್ಪುಸುಲ್ತಾನ್ ಹಲವು ದೌರ್ಜನ್ಯಗಳನ್ನು ನಡೆಸಿದ್ದಾಗಿ ಕಟ್ಟುಕಥೆ ಹೆಣೆದರು. ಟಿಪ್ಪುಎದುರು ಎರಡು ಬಾರಿ ಸೋಲು ಅನುಭವಿಸಿದ್ದು ಕೂಡಾ ಇವರ ದ್ವೇಷಭಾವನೆ ಹೆಚ್ಚಲು ಕಾರಣವಾಯಿತು. ಯುದ್ಧಕೈದಿಗಳಿಗೆ ಟಿಪ್ಪುಸುಲ್ತಾನ್ ನೀಡುತ್ತಿದ್ದ ಶಿಕ್ಷೆ ಘೋರವಾಗಿತ್ತು. ಇದು ಕೂಡಾ ಟಿಪ್ಪುವಿರುದ್ಧದ ಸಮರಕ್ಕೆ ಅಸ್ತ್ರವಾಗಿತ್ತು. ಟಿಪ್ಪುವಿರುದ್ಧ ಈಸ್ಟ್ ಇಂಡಿಯಾ ಕಂಪೆನಿ ಹೂಡಿದ ಯುದ್ಧವನ್ನು ಸ್ವಾಗತಿಸುವ ಕೆಲವರು ಕೂಡಾ ಈ ಪಿತೂರಿಯಲ್ಲಿ ಕೈಜೋಡಿಸಿದರು. ಟಿಪ್ಪು ಸಾಧನೆಗಳಿಗೆ ಮಸಿ ಬಳಿಯುವ ಮೂಲಕ ಜನತೆ ಆತನನ್ನು ಬೇಗ ಮರೆಯುವಂತಾಗಬೇಕು. ಮೈಸೂರಿನ ರಾಜರ ಆಳ್ವಿಕೆಗೆ ವೇದಿಕೆ ಸಿದ್ಧವಾಗಬೇಕು ಎನ್ನುವುದೂ ಇದರ ಉದ್ದೇಶವಾಗಿತ್ತು’’ ಎಂದು ಸಮಗ್ರವಾಗಿ ವಿವರಿಸಿದ್ದಾರೆ.
ಇಂಥ ಏಕಪಕ್ಷೀಯ ಇತಿಹಾಸ ಟಿಪ್ಪುವಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಸಾಹತುಶಾಹಿ ಇತಿಹಾಸಕಾರರು ಭಾರತೀಯ ಇತಿಹಾಸವನ್ನು ಹೇಗೆ ತಿಳಿದುಕೊಂಡಿದ್ದರು ಮತ್ತು ಕೋಮುವಾದಿಗಳು ತಮಗೆ ಬೇಕಾದಂತೆ ಅದನ್ನು ಹೇಗೆ ತಿರುಚಿದರು ಎಂಬ ಅಂಶವೂ ಅಧ್ಯಯನಗಳಿಂದ ಬಹಿರಂಗವಾಗಿದೆ.
‘ಇಂಡಿಯನ್ ಹಿಸ್ಟರಿ ಇನ್ ಬ್ರಿಟಿಷ್ ಇಂಡಿಯಾ’ ಕೃತಿಯಲ್ಲಿ ಜೇಮ್ಸ್ ಮಿಲ್ ಭಾರತೀಯ ಇತಿಹಾಸವನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಹಿಂದೂ, ಮುಸ್ಲಿಂ ಮತ್ತು ಬ್ರಿಟಿಷ್ ಆಡಳಿತ ಅವಧಿಯ ಇತಿಹಾಸವನ್ನು ವಿವರಿಸಿದ್ದಾರೆ. ಆದರೆ ಬೌದ್ಧ, ಜೈನ ಸಮುದಾಯಗಳ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಬ್ರಿಟಿಷ್ ಇತಿಹಾಸ ವಿವರಿಸುವ ವೇಳೆ ಎಲ್ಲೂ ಕ್ರೈಸ್ತ ಸಮುದಾಯದ ಬಗ್ಗೆ ಪ್ರಸ್ತಾಪ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ಪ್ರೊ.ಡಿ.ಎನ್.ಝಾ ಸಂದರ್ಶನವೊಂದರಲ್ಲಿ ಹೇಳಿದ್ದರು.
ಮಜುಂದಾರ್ ಬರೆದ ಬಹುಸಂಪುಟಗಳ ಭಾರತೀಯ ಇತಿಹಾಸ ಕೃತಿಯನ್ನು ಭಾರತೀಯ ವಿದ್ಯಾಭವನ ಪ್ರಕಟಿಸಿದಾಗ ಇದರಲ್ಲಿ ಹಿಂದೂ ಪ್ರಾಬಲ್ಯ ಕಂಡುಬರುತ್ತದೆ. ಪುನರುತ್ಥಾನ ಹಾಗೂ ಕೋಮುವಾದಕ್ಕೆ ಇಲ್ಲಿ ಒತ್ತು ನೀಡಲಾಗಿದೆ. ಈ ಕೃತಿಯ ಹಿಂದೆ ವಸಹಾತುಶಾಹಿ ಇತಿಹಾಸಕಾರರ ದಟ್ಟಪ್ರಭಾವ ಕಾಣಬಹುದಾಗಿದೆ. ಮುಸಲ್ಮಾನರನ್ನು ವಿದೇಶೀಯರು ಮತ್ತು ಹಿಂದೂಗಳನ್ನು ಸ್ವದೇಶೀಯರು ಎಂದು ಬಿಂಬಿಸುವ ಪ್ರಯತ್ನವನ್ನು ವಸಾಹತುಶಾಹಿ ಇತಿಹಾಸಕಾರರು ಮಾಡಿರುವುದು ತಿಳಿದುಬರುತ್ತದೆ.
ಸ್ವಾತಂತ್ರೋತ್ತರದಲ್ಲಿ ಬರೆಯಲ್ಪಟ್ಟ ಭಾರತೀಯ ಇತಿಹಾಸದಲ್ಲಿ ಭಾರತದ ಗತವೈಭವನ್ನು ವಿವರಿಸಲಾಗಿದೆ. ಇದನ್ನು ಆರೆಸ್ಸೆಸ್ ಮತ್ತು ಇತರ ಈ ಬಗೆಯ ಸಿದ್ಧಾಂತಗಳ ಪ್ರತಿಪಾದಕರು ಹೆಚ್ಚು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಆರೆಸ್ಸೆಸ್‌ನ ಮುಸ್ಲಿಂವಿರೋಧಿ ಮನೋಭಾವ ರೂಪುಗೊಂಡಿರುವುದು ಎಚ್.ಎಂ.ಎಲಿಯಟ್ ಮತ್ತು ಜಾನ್ ಡಾವ್ಸನ್ ಅವರ ಕೃತಿಗಳ ಪ್ರಭಾವದಿಂದ. ಭಾರತದ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ್ದಲ್ಲದೇ ಬಲಾತ್ಕಾರದ ಮತಾಂತರ ಮಾಡುತ್ತಿದ್ದರು ಎನ್ನುವುದನ್ನು ಉಭಯ ಕೃತಿಕಾರರು ತಮ್ಮ ಇತಿಹಾಸ ಕೃತಿಗಳಲ್ಲಿ ವಿವರಿಸಿದ್ದಾರೆ. 19ನೆ ಶತಮಾನದಲ್ಲೇ ಪ್ರಬಲ ಕೋಮುವಾದವನ್ನು ಭಾರತೀಯರಲ್ಲಿ ಬೆಳೆಸುವುದು ಇವರ ಉದ್ದೇಶವಾಗಿತ್ತು. ತಮ್ಮ ವಸಾಹತುಶಾಹಿ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಬ್ರಿಟಿಷ್ ಇತಿಹಾಸಕಾರರು ನಮ್ಮ ನಿಜ ಇತಿಹಾಸವನ್ನು ನಾಶಮಾಡಿದರು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ನಮ್ಮ ಸ್ವಾತಂತ್ರ್ಯದ ಹೋರಾಟ ಅವರಿಗೆ ದಂಗೆಯಾಗಿ ಕಾಣುತ್ತದೆ. ನಮ್ಮ ರಾಷ್ಟ್ರಭಕ್ತರು ಅವರ ಖಳನಾಯಕರು. ಸ್ವಾತಂತ್ರ್ಯ ಹೋರಾಟಗಾರರು ಭಯೋತ್ಪಾದಕರು!
ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳದ ಆರೆಸ್ಸೆಸ್ ಮತ್ತು ಅಂಥ ಇತರ ಸಂಘಟನೆಗಳು ತಮ್ಮ ಸಂಘಟನೆ ಬೆಳೆಸುವುದನ್ನೇ ಮುಖ್ಯ ಗುರಿಯಾಗಿ ಹೊಂದಿದ್ದವು. ದೇಶದ ಜನತೆಯ ವಿಶಾಲ ತಳಹದಿಯ ಒಗ್ಗಟ್ಟನ್ನು ಮುರಿದು, ಜಾತಿ ಜಾತಿಗಳ ನಡುವೆ ದ್ವೇಷಭಾವನೆ ಬೆಳೆಸಲು ಕಾರಣವಾದವು. ಈ ಹಿನ್ನೆಲೆಯಲ್ಲಿ ಟಿಪ್ಪುವಿರುದ್ಧ ಅವರ ಪಕ್ಷಪಾತದ ಅಭಿಪ್ರಾಯಗಳು ಆಶ್ಚರ್ಯವೇನಲ್ಲ. ಟಿಪ್ಪುವ್ಯಕ್ತಿತ್ವದ ಮೇಲೆ ದಾಳಿ ಮಾಡುವ ಮೂಲಕ, ಟಿಪ್ಪು ಚಾರಿತ್ರ್ಯಕ್ಕೆ ಮಸಿ ಬಳಿಯುವ ಮೂಲಕ ಕೇಸರಿಪಡೆ ತನ್ನ ಹುಳುಕು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬ್ರಿಟಿಷ್ ವಿರುದ್ಧದ ಹೋರಾಟದಲ್ಲಿ ಆರೆಸ್ಸೆಸ್‌ನ ಪಾತ್ರವೇನು ಎಂಬ ಬಗೆಗಿನ ಚರ್ಚೆಗಳನ್ನು ಮರೆಮಾಚುವ ಪ್ರಯತ್ನವೇ ಟಿಪ್ಪು ವಿರುದ್ಧದ ದಾಳಿ. ಆದರೆ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅಥವಾ ಉಗ್ರ ಪ್ರತಿಪಾದಕ ಗೋಲ್ವಳ್ಕರ್ ಅವರು ಬ್ರಿಟಿಷ್ ವಿರುದ್ಧದ ಪ್ರಚಾರ ಅಥವಾ ಹೋರಾಟದಲ್ಲಿ ಯಾರೂ ಪಾಲ್ಗೊಳ್ಳಬೇಡಿ ಎಂದು ಸದಸ್ಯರಿಗೆ ಸೂಚಿಸಿರುವುದಕ್ಕೆ ಸಾಕಷ್ಟು ದಾಖಲೆಗಳಿವೆ.
ಕ್ವಿಟ್ ಇಂಡಿಯಾ ಚಳವಳಿಯ ಉತ್ತುಂಗದ ಸಂದರ್ಭದಲ್ಲಿ ವಿನಾಯಕ ದಾಮೋದರ ಸಾವರ್ಕರ್, ಬ್ರಿಟಿಷ್ ಸೇನೆಯ ಜತೆ ಕೈಜೋಡಿಸುವಂತೆ ಹಿಂದೂಗಳಿಗೆ ಕರೆ ನೀಡಿದ್ದರು. ಇನ್ನೊಂದೆಡೆ ಸುಭಾಸ್‌ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ಪೌಜ್ ಮಹಾಯುದ್ಧದಲ್ಲಿ ಬ್ರಿಟಿಷರಿಗೆ ಸಹಕರಿಸಿತ್ತು. ಸಾವರ್ಕರ್ ಈ ಉದ್ದೇಶಕ್ಕಾಗಿ ದೇಶಾದ್ಯಂತ ಪ್ರವಾಸ ಕೈಗೊಂಡು ‘‘ಮಿಲಿಟರಿಯನ್ನು ಹಿಂದೂಕರಣಗೊಳಿಸಿ; ಹಿಂದುತ್ವವನ್ನು ಮಿಲಿಟರೀಕರಣಗೊಳಿಸಿ’’ ಎಂಬ ಸಂದೇಶ ಸಾರಿದ್ದರು. ನಿರ್ಣಾಯಕ ಪರಿಸ್ಥಿತಿಯಲ್ಲಿ ಕೂಡಾ ಹಿಂದುತ್ವ ಶಕ್ತಿಗಳು ಪಂಜಾಬ್, ಬಂಗಾಳ ಮತ್ತಿತರ ಪ್ರದೇಶಗಳಲ್ಲಿ ಮುಸ್ಲಿಂಲೀಗ್ ನೇತೃತ್ವದ ಸರಕಾರ ರಚನೆಯಾಗಲು ಮುಸ್ಲಿಂ ಲೀಗ್ ಜತೆ ಕೈಜೋಡಿಸಲು ನಿರಾಕರಿಸಿದವು. ಆದರೆ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ, ಅಂದಿನ ಬಂಗಾಳದ ಶಹೀದ್ ಸುಹ್ರಬರ್ದಿ ನೇತೃತ್ವದ ಸರಕಾರದ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದರಿಂದ ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟ ವಿಚಾರ ಬಂದಾಗ ಕೇಸರಿಪಡೆ ಹಿಂದೆ ಸರಿದಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಅವರಲ್ಲಿ ಕ್ಲಿಷ್ಟ ಪರಿಸ್ಥಿತಿ ತಲೆದೋರಿದಾಗ ಅವರು ರಾಜಿ ಮಾಡಿಕೊಂಡ ನಿದರ್ಶನಗಳು ಸಾಕಷ್ಟಿವೆ.
ಟಿಪ್ಪುವಿರುದ್ಧದ ಕೇಸರಿ ಪೂರ್ವಾಗ್ರಹ ಮತ್ತು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪುಮಾಡಿದ ತ್ಯಾಗ ನಿದರ್ಶನಗಳು ಹಿಂದುತ್ವ ಪಡೆಯಲ್ಲಿ ಮತ್ತೊಂದು ದ್ವಂದ್ವಕ್ಕೆ ಕಾರಣವಾಗಿದೆ. ಹಿಂದೂ ರಾಜರು ಮತ್ತು ಮಹಾರಾಜರು ಜನತೆಯ ಮೇಲೆ ಮಾಡಿದ ದಾಳಿ ಮತ್ತು ಅವರನ್ನು ಹೇಗೆ ಲೂಟಿ ಮಾಡಿದರು ಎನ್ನುವುದನ್ನು ವಿವರಿಸಲೇಬೇಕಾಗಿದೆ. ಉಗ್ರ ಹಿಂದುತ್ವ ಪ್ರತಿಪಾದಕರ ಪ್ರಬಲ ದೊರೆ ಎನಿಸಿಕೊಂಡ ಮರಾಠರು ಅಂದಿನ ವ್ಯಾಪಾರ ಕೇಂದ್ರವಾಗಿದ್ದ ಸೂರತ್ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದರು. ಟಿಪ್ಪು ಇವರ ಪಾಲಿಗೆ ಅಸಹನೀಯ ವ್ಯಕ್ತಿಯಾಗಿ ಕಂಡರೆ ಮರಾಠರು ಹೇಗೆ ಕಾಣುತ್ತಾರೆ? ಇದೇ ಮರಾಠರು ಹಿಂದೂಗಳ ಶ್ರದ್ಧಾಕೇಂದ್ರವಾದ ಶೃಂಗೇರಿ ಶಂಕರಮಠ ಮತ್ತು ದೇವಾಲಯದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಹಿಂದೂಗಳೇ ಹಿಂದೂ ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡಿದ ಇಂಥ ಹಲವು ನಿದರ್ಶನಗಳು ಇತಿಹಾಸದಲ್ಲಿ ಕಾಣಸಿಗುತ್ತವೆ. ಪೇಶ್ವೆಗಳ ಕಾಲದಲ್ಲಿ ಶೂದ್ರ ಮತ್ತು ಅತಿಶೂದ್ರರಿಗೆ ಎಲ್ಲ ಮಾನವಹಕ್ಕುಗಳನ್ನು ನಿರಾಕರಿಸಲಾಗಿತ್ತು. ದಲಿತರ ಎಂಜಲು ಕೂಡಾ ಭೂಮಿ ಮೇಲೆ ಬೀಳಬಾರದು ಎಂಬ ವ್ಯವಸ್ಥೆ ಇರಲಿಲ್ಲವೇ?
***
ಅಖಂಡ ಭಾರತಮಾತಾ ಮತ್ತು ಗೋಡ್ಸೆ ದೇವಾಲಯ ನಿರ್ಮಾಣಕ್ಕೆ ಜನವರಿ 30ರಂದು ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸೀತಾಪುರದಲ್ಲಿ ನಿರ್ಮಾಣವಾಗುವ ದೇವಾಲಯಕ್ಕೆ ಪುಣೆಯಲ್ಲಿರುವ ಗೋಡ್ಸೆ ಚಿತಾಭಸ್ಮವನ್ನು ತರುವ ವೇಳೆ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ. ‘‘ಹಿಂದೂ ರಾಷ್ಟ್ರ ಕಟ್ಟಲು ಮತ್ತು ಅಖಂಡ ಭಾರತ ಸಂಕಲ್ಪನಮ್ಮ ಕನಸು. ಈ ಕನಸು ಸಾಕಾರಗೊಂಡ ಬಳಿಕವಷ್ಟೇ ಗೋಡ್ಸೆ ಚಿತಾಭಸ್ಮ ವಿಸರ್ಜಿಸಲಾಗುತ್ತದೆ’’ ಎಂದು ಹಿಂದೂ ಮಹಾಸಭಾ ಕಾರ್ಯಾಧ್ಯಕ್ಷ ಕಮಲೇಶ್ ತಿವಾರಿ ಹೇಳಿಕೆ ನೀಡಿದ್ದಾರೆ. ಸಂಘ ಪರಿವಾರದ ಟಿಪ್ಪುವಿರೋಧಿ ಲಕ್ಷಣಗಳನ್ನು ಗೋಡ್ಸೆ ವೈಭವೀಕರಣದ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಾಗುತ್ತದೆ.
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕೆಲ ಸಮಯ ಹಿಂದೆ ನೀಡಿದ ಹೇಳಿಕೆ ವಿವಾದದ ಅಲೆಯನ್ನೇ ಸೃಷ್ಟಿಸಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಲೆಯಾಳಂ ಮುಖವಾಣಿಗೆ ಕಳೆದ ಅಕ್ಟೋಬರ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಅವರು, ‘‘ನಾಥೂರಾಂ ಗೋಡ್ಸೆ ಗಾಂಧೀಜಿ ಬದಲಾಗಿ ಪ್ರಧಾನಿ ಜವಾಹಾರಲಾಲ್ ನೆಹರೂ ಅವರನ್ನು ಹತ್ಯೆ ಮಾಡಬೇಕಿತ್ತು. ಗೋಡ್ಸೆ ದೇಶಭಕ್ತ ಮತ್ತು ರಾಷ್ಟ್ರೀಯವಾದಿ’’ ಎಂದು ಹೇಳಿಕೆ ನೀಡಿದ್ದರು. ಇದನ್ನು ಬರೆದ ಲೇಖಕ ಬಿಜೆಪಿಯಿಂದ ಸಂಸತ್ತಿಗೆ ಸ್ಪರ್ಧಿಸಿದ್ದರು. ಗೋಡ್ಸೆ ವೈಭವೀಕರಣ ಬಗ್ಗೆ ಕ್ರಮ ಕೈಗೊಳ್ಳುವುದು ಹಾಗಿರಲಿ; ಆರೆಸ್ಸೆಸ್ ಈ ವಿವಾದವೆದ್ದಾಗ, ಅದು ಅವರ ವೈಯಕ್ತಿಕ ಹೇಳಿಕೆ ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸಿತ್ತು. ಇಂಥ ದೇಶಭಕ್ತನ ದೇವಾಲಯ ನಿರ್ಮಾಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಗಾಂಧಿಹತ್ಯೆಯ ಸಂಚಿನ ರೂವಾರಿಯಾಗಿದ್ದ ಸಾವರ್ಕರ್ ಮುಖಂಡರಾಗಿದ್ದ ಹಿಂದೂ ಮಹಾಸಭಾ ದೇಶಾದ್ಯಂತ ಗೋಡ್ಸೆ ಪುತ್ಥಳಿಗಳ ಪ್ರತಿಷ್ಠಾಪನೆಗೂ ಆಗ್ರಹಿಸಿದೆ.
ಗೋಡ್ಸೆ ಪ್ರೀತಿಯ ಈ ಸಂಚನ್ನು ಹತ್ತಿರದಿಂದ ನೋಡಿದರೆ, ಆರೆಸ್ಸೆಸ್ ಹಾಗೂ ಬಿಜೆಪಿ ಇದಕ್ಕೆ ಮೌನಸಮ್ಮತಿ ನೀಡಿದೆ ಎನ್ನುವುದು ಎರಡು ಅಂಶಗಳಿಂದ ಸ್ಪಷ್ಟವಾಗುತ್ತದೆ. ಇದು ಪ್ರಮುಖ ಕ್ಷೇತ್ರಗಳಲ್ಲಿ ಅಭಿವೃದ್ಧಿ ಬಗೆಗಿನ ಚರ್ಚೆಯನ್ನು ಮರೆಮಾಚಿ, ಹಿಂದೂರಾಷ್ಟ್ರ ನಿರ್ಮಾಣಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಂಬ ಸಂದೇಶವನ್ನು ರವಾನಿಸುವುದು ಇನ್ನೊಂದು ಗಾಂಧಿ ಹತ್ಯೆಯಲ್ಲಿ ಗೋಡ್ಸೆ ಮತ್ತು ಇತರ ಹಿಂದುತ್ವವಾದಿಗಳ ಪಾತ್ರದ ಬಗೆಗಿನ ಚರ್ಚೆಯನ್ನು ಮೂಲೆಗುಂಪು ಮಾಡುವುದು.
ಗೋಡ್ಸೆ ವೈಭವೀಕರಣ ಹಿಂದಿನ ಉದ್ದೇಶಗಳ ಬಗ್ಗೆ ಜನತೆಯಲ್ಲಿ ನಿಧಾನವಾಗಿ ಜಾಗೃತಿ ಮೂಡುತ್ತಿದೆ ಎನ್ನುವುದು ಪ್ರತ್ಯೇಕ ವಿಚಾರ. ಇಂಥ ತಂತ್ರಗಾರಿಕೆ ವಿರುದ್ಧ ಸಿಡಿದೇಳುವ ಹಂತಕ್ಕೆ ಬಂದಿದ್ದಾರೆ. ಇತ್ತೀಚೆಗೆ ಮೀರಠ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡದ್ದೇ ಇದಕ್ಕೆ ಉದಾಹರಣೆ.

Advertisement

0 comments:

Post a Comment

 
Top