PLEASE LOGIN TO KANNADANET.COM FOR REGULAR NEWS-UPDATES




 ರಾಜ್ಯದಲ್ಲಿನ ಗ್ರಾಮ ಪಂಚಾಯತಿ ವ್ಯವಸ್ಥೆ ಬಲಪಡಿಸಲು ೨೦೧೧ ರ ಜನಗಣತಿ ಆಧಾರದ ಮೇಲೆ ಗ್ರಾಮ ಪಂಚಾಯತಿಗಳ ಪುನರ್‌ವಿಂಗಡಣೆಗೆ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ಅವರು ಹೇಳಿದರು.
  ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣೆ, ಪರಿಷ್ಕರಣೆ ಹಾಗೂ ಕೇಂದ್ರ ಸ್ಥಾನ ಬದಲಾವಣೆ ಮಾಡುವ ಕುರಿತು ಸಲಹೆ, ಪ್ರಸ್ತಾವನೆಗಳನ್ನು ಆಹ್ವಾನಿಸಲು ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ರಾಜ್ಯದಲ್ಲಿ ಸದ್ಯ ೧೯೯೧ ರ ಜನಗಣತಿ ಆಧಾರದಂತೆ ರೂಪಿಸಲಾಗಿರುವ ಗ್ರಾಮ ಪಂಚಾಯತಿಗಳು ಕಾರ್ಯ ನಿರ್ವಹಿಸುತ್ತಿವೆ.  ೫೬೨೯ ಗ್ರಾಮ ಪಂಚಾಯತಿಗಳಿದ್ದು, ಸುಮಾರು ೯೦ ಸಾವಿರ ಗ್ರಾಮ ಪಂಚಾಯತಿ ಸದಸ್ಯರುಗಳು ಇದ್ದಾರೆ. ನಿಯಮಾನುಸಾರ ೫ ರಿಂದ ೭ ಸಾವಿರ ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯತಿ ಇರಬೇಕಾಗಿದೆ.  ೧೯೯೧ ರ ನಂತರ ಈಗಾಗಲೆ ೨೦೦೧ ಹಾಗೂ ೨೦೧೧ ರಲ್ಲಿ ಒಟ್ಟು ಎರಡು  ಜನಗಣತಿಗಳು ನಡೆದಿವೆ.  ಆದರೂ ಇದುವರೆಗೂ ಗ್ರಾಮ ಪಂಚಾಯತಿಗಳ ವಿಂಗಡಣೆ ಆಗಿಲ್ಲ.  ಇದೀಗ ೨೦೧೧ ರ ಜನಗಣತಿ ಆಧಾರದಲ್ಲಿ ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣೆ ಹಾಗೂ ಕೇಂದ್ರಸ್ಥಾನ ಬದಲಾವಣೆ ಮಾಡುವ ಕುರಿತು ಸರ್ಕಾರ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಿ, ಪ್ರತಿ ಜಿಲ್ಲೆಗಳಿಂದಲೂ ಸಾರ್ವಜನಿಕರಿಂದ ಸಲಹೆ, ಸೂಚನೆ ಹಾಗೂ ಪ್ರಸ್ತಾವನೆಗಳನ್ನು ಆಹ್ವಾನಿಸಿದ್ದು, ಪ್ರಸ್ತಾವನೆ ಸಲ್ಲಿಸಲು ಜುಲೈ ೩೧ ಕೊನೆಯ ದಿನವಾಗಿರುತ್ತದೆ.  ಸಲಹೆ, ಸೂಚನೆಗಳನ್ನು ಆಯಾ ಜಿ.ಪಂ. ಕಚೇರಿಗೂ ಸಹ ಸಲ್ಲಿಸಬಹುದಾಗಿದೆ.  ೧೯೯೧ ರ ಜನಗಣತಿಗೂ ೨೦೧೧ ರ ಜನಗಣತಿಗೂ ಬಹಳಷ್ಟು ವ್ಯತ್ಯಾಸಗಳಾಗಿದ್ದು, ಗ್ರಾಮಗಳಲ್ಲಿನ ಜನಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ.  ನಿಯಮದಂತೆ ೫ ರಿಂದ ೭ ಸಾವಿರ ಜನಸಂಖ್ಯೆಗೆ ಗ್ರಾ.ಪಂ. ಇರಬೇಕಿದೆ.  ಗ್ರಾಮಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಗ್ರಾಮ ಪಂಚಾಯತಿಗಳಿಗೆ ನೇರವಾಗಿ ಬರುತ್ತಿದ್ದು, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಪ್ರಜಾಪ್ರಭುತ್ವದ ತಳಹದಿ ಎನಿಸಿರುವ ಗ್ರಾಮ ಪಂಚಾಯತಿ ವ್ಯವಸ್ಥೆಯನ್ನು ಬಲಪಡಿಸಬೇಕಿದೆ.  ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಗಳ ಪುನರ್‌ವಿಂಗಡಣೆ ಅಗತ್ಯವಾಗಿದ್ದು, ಇದಕ್ಕಾಗಿ ಸರ್ಕಾರ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಿದ್ದು, ಸಮಿತಿಯು ಪ್ರತಿ ಜಿಲ್ಲೆಗೂ ಭೇಟಿ ನೀಡಿ, ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಪಡೆಯಲಿದೆ.  ಈ ಸಲಹೆ, ಸೂಚನೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ನಿಯಮಾನುಸಾರವಾಗಿ ವರದಿಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ರಾಜ್ಯ ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ಅವರು ಹೇಳಿದರು.
  ಸಭೆಯಲ್ಲಿ ರಾಜ್ಯ ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣಾ ಸಮಿತಿ ಸದಸ್ಯರುಗಳಾದ ಮಂಡ್ಯದ ಬಿ.ಸಿ. ಶಿವಾನಂದ, ಹುಬ್ಬಳ್ಳಿಯ ಎಸ್.ಬಿ. ದ್ಯಾಬೇರಿ, ಶಿರಸಿ ತಾಲೂಕಿನ ಎಸ್.ಕೆ. ಭಾಗವತ್, ಹುಣಸೂರಿನ ಎ.ಆರ್. ಸುಧಾಮಣಿ.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಉಪಸ್ಥಿತರಿದ್ದರು.  ಗ್ರಾಮ ಪಂಚಾಯತಿಗಳ ಪುನರ್‌ವಿಂಗಡಣೆ ಕುರಿತಂತೆ ಜಿಲ್ಲೆಯ  ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು, ಗ್ರಾ.ಪಂ. ಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸದಸ್ಯರುಗಳು ಸಮಿತಿಯ ಅಧ್ಯಕ್ಷರಿಗೆ ಪ್ರಸ್ತಾವನೆಗಳನ್ನು ಇದೇ ಸಂದರ್ಭದಲ್ಲಿ ಸಲ್ಲಿಸಿದರು.

Advertisement

0 comments:

Post a Comment

 
Top