PLEASE LOGIN TO KANNADANET.COM FOR REGULAR NEWS-UPDATES


ಆಳ್ವಾಸ್ ನುಡಿಸಿರಿ - ೨೦೧೧

ನವೆಂಬರ್ ೧೧, ೧೨ ಮತ್ತು ೧೩ರಂದು ಆಳ್ವಾಸ್ ನುಡಿಸಿರಿ 
ಬೆಂಗಳೂರು: ಡಾ.ಕೆ.ಎಸ್. ನಿಸಾರ್ ಅಹಮ್ಮದ್, ಡಾ.ಚಂದ್ರಶೇಖರ ಪಾಟೀಲ , ಡಾ.ಸಿ.ಎನ್ ರಾಮಚಂದ್ರನ್ ಸೇರಿದಂತೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹತ್ತು ಮಂದಿಗೆ ಈ ಬಾರಿಯ ಆಳ್ವಾಸ್ ನುಡಿಸಿರಿ - ೨೦೧೧ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ, ಹತ್ತು ಸಾವಿರ ನಗದು ಸೇರಿದಂತೆ ಸಾಂಪ್ರದಾಯಿಕ ಸನ್ಮಾನಗಳನ್ನೊಳಗೊಂಡಿರುತ್ತವೆ.ನವೆಂಬರ್ ೧೩ರಂದು ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹಿರಿಯರಾದ ಡಾ.ಕೆ.ಎಸ್ ನಿಸಾರ್ ಅಹಮದ್, ಡಾ.ಚಂದ್ರಶೇಖರ ಪಾಟೀಲ, ಡಾ.ಸಿ.ಎನ್ ರಾಮಚಂದ್ರನ್, ಡಾ.ಎಂ.ವಿ.ಕಾಮತ್, ಡಾ.ಬಿ.ಟಿ. ಲಲಿತಾ ನಾಯಕ್, ಶ್ರೀನಾಥ್, ಬಿ.ಕೆ.ಸುಮಿತ್ರಾ, ಚಿದಂಬರ ರಾವ್ ಜಂಬೆ, ಪಾಂಡವಪುರ ಅಂಕೇಗೌಡ ಹಾಗೂ ಮಾಚಾರ್ ಗೋಪಾಲ ನಾಯ್ಕ ಈ ಬಾರಿಯ ಪ್ರಶಸ್ತಿಗೆ ಭಾಜನರಾಗುವವರು. 
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ನುಡಿಸಿರಿ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಗುಣಕೇಂದ್ರಿತ ಶಿಕ್ಷಣದೊಂದಿಗೆ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ"ಯನ್ನು ಆಯೋಜಿಸುತ್ತಾ ಬಂದಿದೆ. ಈಗಾಗಲೇ ಏಳು ಸಮ್ಮೇಳನಗಳು ನಾಡಿನ ಸಾಹಿತ್ಯಾಸಕ್ತರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ನಡೆದಿದ್ದು ಇದೀಗ ಎಂಟನೇ ಸಮ್ಮೇಳನ ನವೆಂಬರ್ ೧೧,೧೨ ಮತ್ತು ೧೩ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.

"ಕನ್ನಡ ಮನಸ್ಸು; ಸಂಘರ್ಷ ಮತ್ತು ಸಾಮರಸ್ಯ" ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನಾಡೋಜ ಡಾ.ಎಂ.ಎಂ.ಕಲಬುರ್ಗಿ ವಹಿಸಲಿದ್ದಾರೆ. ಖ್ಯಾತ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. 

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ.ಚಂದ್ರಶೇಖರ ಕಂಬಾರರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಗುವುದು. ಡಾ.ಸಿ.ಎನ್.ಆರ್ ಅವರು ಕಂಬಾರರ ಸಮಗ್ರ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ.

೨೦೧೨ರಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಹತ್ತನೇ ವರುಷದ ಸಮ್ಮೇಳನ ಜಾಗತಿಕ ಮಟ್ಟದ ಸಮ್ಮೇಳನವಾಗಿ ಮೂಡಿಬರಲಿದ್ದು ಇದಕ್ಕೆ ಈ ಸಮ್ಮೇಳನವು ಒಂದು ವೇದಿಕೆಯಾಗಲಿದೆ. ಕನಿಷ್ಟ ೨೫ವಿವಿಧ ರಾಷ್ಟ್ರಗಳಿಂದ ಕನ್ನಡಾಸಕ್ತ ಮನಸ್ಸುಗಳು ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸುವ ಗುರಿಯನ್ನು ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಜಿಲ್ಲಾವಾರು ಆಳ್ವಾಸ್ ನುಡಿಸಿರಿ ಘಟಕಗಳನ್ನು ಸ್ಥಾಪಿಸಲಾಗುವುದು.

ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿ-ಭಾಷೆ :ಸಂಘರ್ಷ ಮತ್ತು ಸಾಮರಸ್ಯ, ಪ್ರಾಚೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ,ಮಧ್ಯಕಾಲೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ , ಆಧುನಿಕ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ ಎಂಬ ನಾಲ್ಕು ಪ್ರಮುಖ ಗೋಷ್ಠಿಗಳು  ನಡೆಯಲಿವೆ. 
ಪಂಡಿತ್ ಭೀಮ್‌ಸೇನ್ ಜೋಷಿ  ನೆನಪು ಮತ್ತು ಕೆ.ಕೆ.ಹೆಬ್ಬಾರ್ ನೆನಪು ಎಂಬ ಸಂಸ್ಮರಣಾ ಕಾರ್ಯಕ್ರಮ ನಡೆಯಲಿವೆ.
ಮಾಧ್ಯಮ : ಸಂಘರ್ಷ ಮತ್ತು ಸಾಮರಸ್ಯ -ರವಿ ಬೆಳಗೆರೆ ಅವರಿಂದ, ಕನ್ನಡ ಜನಪರ  ಚಳುವಳಿಗಳು: ಎಸ್.ಜಿ.ಸಿದ್ಧರಾಮಯ್ಯ,ಕನ್ನಡ ಜನಪದ  :    ಪ್ರೊ. ವೀರಣ್ಣ ದಂಡೆ ಇವರಿಂದ ವಿಶೇಷೋಪನ್ಯಾಸ ನಡೆಯಲಿವೆ. ಕವಿಸಮಯ - ಕವಿನಮನ, ಕಥಾ ಸಮಯ ಕಾರ್ಯಕ್ರಮಗಳು ನಡೆಯಲಿವೆ.

ಸಂವಾದ: ಸಮ್ಮೇಳನದ ದ್ವಿತೀಯ ದಿನ ಆಳ್ವಾಸ್ ನುಡಿಸಿರಿ ರೂವಾರಿ ಡಾ.ಎಂ.ಮೋಹನ ಆಳ್ವ ಅವರೊಂದಿಗೆ ಸಂವಾದ, ಹಾಗೂ ಸಮ್ಮೇಳನದ ಮೂರನೇ ದಿನ ಬೆಳಗ್ಗೆ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ನಾಡೋಜ ಡಾ.ಎಂ.ಎಂ.ಕಲಬುರ್ಗಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿವೆ.

ಈ ಬಾರಿ ನುಡಿಸಿರಿ ನಡೆಯಲಿರುವ ಸಭಾಂಗಣಕ್ಕೆ ಪಂಡಿತ್ ಭೀಮ್ ಸೇನ್ ಜೋಷಿ ಸಭಾಂಗಣವೆಂದು ನಾಮಕರಣ ಮಾಡಲಾಗಿದೆ. ಎಂದಿನಂತೆ ನಾಲ್ಕು ವೇದಿಕೆಗಳಲ್ಲಿ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ. 

ನುಡಿಸಿರಿಯಲ್ಲಿ ವೈಶಿಷ್ಠ್ಯಗಳು
* ನಾಡಿನ ಹೆಸರಾಂತ ಪುಸ್ತಕ ಪ್ರಕಾಶಕರು ಮಾರಾಟಗಾರರಿಂದ ಪುಸ್ತಕ ಪ್ರದರ್ಶನ ಮಾರಾಟ
* ಕನ್ನಡ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ
* ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆ
* ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭ
* ಶಿಸ್ತು ಬದ್ಧ ಕಾರ್ಯಕ್ರಮ, ಸಮಯಪ್ರಜ್ಞೆಗೆ ಒತ್ತು.
* ಕರಾವಳಿಯ ಸೊಗಡಿನ ಅನ್ನದಾಸೋಹ
* ಸಮ್ಮೇಳನದ ಮೂರೂ ದಿನಗಳ ಕಾಲ ಏಕಕಾಲಕ್ಕೆ ನಾಲ್ಕುವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
* ಜಿಲ್ಲೆ ಜಿಲ್ಲೆಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕ ಸ್ಥಾಪನೆ.
ಧನಂಜಯ ಕುಂಬ್ಳೆ ಸ್ವಾಗತಿಸಿದರು.

Advertisement

0 comments:

Post a Comment

 
Top