PLEASE LOGIN TO KANNADANET.COM FOR REGULAR NEWS-UPDATES


ಸಿರ್ತೆ(ಲಿಬಿಯ), ಅ.20: ಲಿಬಿಯದ ಮಾಜಿ ನಾಯಕ ಮುವಮ್ಮರ್ ಗದಾಫಿ ಗುರುವಾರ ನ್ಯಾಟೋ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಗದಾಫಿಯನ್ನು ಸಿರ್ತೆಯ ಬಳಿ ಸೆರೆ ಹಿಡಿದ ಬೆನ್ನಿಗೇ ಅವರ ಮರಣದ ವಾರ್ತೆ ಹೊರ ಬಿದ್ದಿದೆ. ಈ ಮೂಲಕ ಲಿಬಿಯದ ನಾಲ್ಕು ದಶಕಗಳ ಗದಾಫಿ ಯುಗ ಅಂತ್ಯಗೊಂಡಂತಾಗಿದೆ. ಗದಾಫಿ ವಿರೋಧಿ ಹೋರಾಟಗಾರರು ಅವರ ತವರು ಪಟ್ಟಣ ಸಿರ್ತೆಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮ 8 ತಿಂಗಳ ಸುದೀರ್ಘ ಹೋರಾಟವನ್ನು ಅಂತ್ಯಗೊಳಿಸುವತ್ತ ಸಾಗಿದ್ದಾರೆ.
ಗದಾಫಿ ಗಾಯಗಳಿಂದಾಗಿ ಅಸು ನೀಗಿದ್ದಾರೆಂದು ಅಲ್ಲಿನ ತಾತ್ಕಾಲಿಕ ಆಡಳಿತಗಾರರು ತಿಳಿಸಿದ್ದಾರೆ. ಗದಾಫಿಯನ್ನು ಸಿರ್ತೆಯ ಬಳಿ ಸೆರೆ ಹಿಡಿದೊಡನೆಯೇ ಅವರ ಮರಣ ವಾರ್ತೆ ಬಂದುದು, ಈಜಿಪ್ಟ್ ಹಾಗೂ ಟ್ಯುನೀಶಿಯಗಳ ಆಡಳಿತಗಾರರನ್ನು ಪದಚ್ಯುತಗೊಳಿಸಿದ ಮತ್ತು ಸಿರಿಯ ಹಾಗೂ ಯೆಮೆನ್‌ಗಳ ನಾಯಕರ ಮೇಲೆ ಹಿಡಿತ ಸಾಧಿಸುವ ಬೆದರಿಕೆಯೊಡ್ಡಿರುವ ‘ಅರಬ್ ಸ್ಪ್ರಿಂಗ್’ ಬಂಡಾಯದ ಏಕೈಕ ಅತ್ಯಂತ ನಾಟಕೀಯ ಬೆಳವಣಿಗೆಯಾಗಿದೆ. ಗದಾಫಿಗೆ ತಲೆಗೆ ಗಾಯವಾಗಿತ್ತು. ಅವರ ಗುಂಪಿನ ವಿರುದ್ಧ ಭಾರೀ ಗುಂಡಿನ ಕಾಳಗ ನಡೆದಿತ್ತು ಹಾಗೂ ಗದಾಫಿ ಸಾವಿಗೀಡಾದರೆಂದು ರಾಷ್ಟ್ರೀಯ ಪರ್ಯಾಯ ಸಮಿತಿಯ ಅಧಿಕಾರಿ ಅಬ್ದೆಲ್ ಅಝೀಝ್ ಮ್ಲೆಗ್ತಾ ಪತ್ರಕರ್ತರಿಗೆ ತಿಳಿಸಿದ್ದಾರೆ.
ಗದಾಫಿ ಗುರುವಾರ ಬೆಂಗಾವಲು ಪಡೆಯೊಂದಿಗೆ ಪಲಾಯನಕ್ಕೆ ಯತ್ನಿಸಿದಾಗ ನ್ಯಾಟೊ ಯುದ್ಧ ವಿಮಾನಗಳು ದಾಳಿ ನಡೆಸಿದವು. 60ರ ಹರೆಯದ ಗದಾಫಿಯನ್ನು ಬಳಿಕ ಬಂಧಿಸಲಾಯಿತು. ಅವರ ಎರಡೂ ಕಾಲುಗಳಿಗೆ ಗಾಯಗಳಾಗಿದ್ದವೆಂದು ವಿವರಿಸಿದ ಅವರು, ಬಳಿಕ ಗದಾಫಿಯನ್ನು ಆ್ಯಂಬುಲೆನ್ಸ್ ಮೂಲಕ ಸಾಗಿಸಲಾಯಿತೆಂದು ಹೇಳಿದ್ದಾರೆ. ಆದರೆ, ಅಬ್ದೆಲ್‌ರ ಹೇಳಿಕೆಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ. ಗದಾಫಿ ನೆಲದಾಳದ ಸುರಂಗವೊಂದರಲ್ಲಿ ಅವಿತಿದ್ದರು. ತನ್ನನ್ನು ಸುತ್ತುವರಿದವರಿಗೆ ‘ಗುಂಡು ಹಾರಿಸಬೇಡಿ’ ಎಂದು ಮನವಿ ಮಾಡಿದ್ದರೆಂದು ಗದಾಫಿ ವಿರೋಧಿ ಹೋರಾಟಗಾರನೊಬ್ಬ ತಿಳಿಸಿದ್ದಾನೆ. ಸಿರ್ತೆ ಕೈವಶವಾದೊಡನೆಯೇ ಗಡಾಫಿಯ ಬಂಧನವಾಗಿದೆ. ಇದರೊಂದಿಗೆ ಅವರಿಗೆ ನಿಷ್ಠರಾದವರ ಹೋರಾಟ ಕೊನೆಗೊಂಡಂತಾಗಿದೆ.
ಸಿರ್ತೆಯ ಸ್ವಾಧೀನ ಹಾಗೂ ಗದಾಫಿ ಸಾವಿನಿಂದಾಗಿ ಈಗ ಲಿಬಿಯದ ಮಧ್ಯಾಂತರ ಆಡಳಿತಗಾರರಿಗೆ ದೇಶದಲ್ಲಿ ಹೊಸ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದನ್ನು ರಚಿಸುವ ಹೊಣೆ ಬಿದ್ದಿದೆ. ಗದಾಫಿ ಆಡಳಿತದ ದ್ಯೋತಕವೆಂಬಂತೆ ನಿರ್ಮಿಸಲಾಗಿರುವ ಸಿರ್ತೆ ಕೈವಶವಾದೊಡನೆಯೇ ತಾನಿದನ್ನು ಮಾಡುವೆನೆಂದು ಸಮಿತಿ ಹೇಳಿತ್ತು. ನಾಗರಿಕರ ಹತ್ಯೆಗೆ ಆದೇಶ ನೀಡಿದ ಆರೋಪದಲ್ಲಿ ಗದಾಫಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಬೇಕಾಗಿದ್ದರು. ತೈಲ ಸಮೃದ್ಧ ಉತ್ತರ ಆಫ್ರಿಕದ ದೇಶವನ್ನು 42 ವರ್ಷಗಳ ಕಾಲ ಸರ್ವಾಧಿಕಾರದಿಂದ ಆಳಿದ್ದ ಅವರನ್ನು ಆ.23ರಂದು ವಿರೋಧಿ ಪಡೆಗಳು ಪದಚ್ಯುತಗೊಳಿಸಿದ್ದವು.
ಹೊಸದಾಗಿ ವಶಪಡಿಸಿಕೊಳ್ಳಲಾದ ಸಿರ್ತೆಯ ಸಮೀ ಪದ ಎತ್ತರವಾದ ಕಟ್ಟಡವೊಂದರ ಮೇಲೆ ಮಧ್ಯಾಂತರ ಸರಕಾರದ ಹೋರಾಟಗಾರರು ಕೆಂಪು, ಕಪ್ಪು ಹಾಗೂ ಹಸುರು ಬಣ್ಣಗಳಿರುವ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಗದಾಫಿಯ ಕಪಿ ಮುಷ್ಟಿಯಿಂದ ಬಿಡುಗಡೆ ಪಡೆದ ಸಂತಸ ದಲ್ಲಿ ಜನರು ಕುಶಾಲು ತೋಪುಗಳನ್ನು ಹಾರಿಸಿದರು. ನೂರಾರು ಮಂದಿ ಗದಾಫಿ ವಿರೋಧಿ ಹೋರಾಟ ಗಾರರು ಸಿರ್ತೆಯನ್ನು ವಾರಗಳಿಂದ ಸುತ್ತು ವರಿದಿದ್ದರು. ಎರಡೂ ಕಡೆಗಳಲ್ಲಿ ಅಪಾರ ಸಾವು-ನೋವು ಸಂಭವಿಸಿತ್ತು. ಗದಾಫಿ ಪಡೆ ಕೊನೆಯದಾಗಿ ಆಶ್ರಯ ಪಡೆದಿದ್ದ ಸ್ಥಳದಲ್ಲಿ ಅಪಾರ ಸಂಖ್ಯೆಯ ಶವಗಳಿವೆಯೆಂದು ವಿರೋಧಿಗಳು ಹೇಳಿದ್ದಾರಾದರೂ, ಅದು ಈವರೆಗೆ ಖಚಿತಗೊಂಡಿಲ್ಲ.

Advertisement

0 comments:

Post a Comment

 
Top