ಬೆಂಗಳೂರು: ಉದ್ಯಾನಗರಿ ಬೆಂಗಳೂರಿಗರ ಬಹು ನಿರೀಕ್ಷೆಯ‘ನಮ್ಮ ಮೆಟ್ರೋ’ರೈಲಿಗೆ ಚಾಲನೆ ದೊರೆತಿದೆ.ಮೆಟ್ರೋ ರೈಲಿಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಅವರು ಗುರುವಾರ ಚಾಲನೆ ನೀಡುವ ಮೂಲಕ ನಗರದ ಜನರ ಬಹುದಿನಗಳ ಕನಸು ಇಂದು ಸಾಕಾರಗೊಂಡಿತು.
‘ಮೆಟ್ರೋ ರೈಲಿ’ನ ಉದ್ಘಾಟನೆಗೆ ಮುಂಚೆ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲನಾಥ್ ಫಲಕವನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮುನಿಯಪ್ಪನವರೂ ಸ್ಥಳದಲ್ಲಿದ್ದರು. ಬಳಿಕ ಬಟನ್ ಒತ್ತುವ ಮೂಲಕ ‘ಮೆಟ್ರೋ’ ರೈಲಿಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ‘ಮೆಟ್ರೋ’ದಲ್ಲಿ ಪ್ರಯಾಣಿಸಲು ಗಣ್ಯರೆಲ್ಲಾ ರೈಲಿನ ಒಳಗಿದ್ದರು.ಆದರೆ,ಸಚಿವ ಮುನಿಯಪ್ಪ ಆಗಮಿಸುವಾಗ ಸ್ವಲ್ಪ ತಡವಾಗಿತ್ತು.
ಆದುದರಿಂದ ಅವರು ಬರುತ್ತಿದ್ದಂತೆಯೇ ‘ನಮ್ಮ ಮೆಟ್ರೋ’ದ ಬಾಗಿಲುಗಳು ಲಾಕ್ ಆಗಿ ಅದು ಮುಂದೆ ಚಲಿಸಲು ಪ್ರಾರಂಭಿಸಿತು. ಇದರಿಂದ ಮುನಿಯಪ್ಪ ಎಂ.ಜಿ. ರಸ್ತೆಯ ಮೆಟ್ರೋ ರೈಲು ನಿಲ್ದಾಣದಲ್ಲೇ ಉಳಿಯುವಂತಾಯಿತು.
ಎಂ.ಜಿ. ರಸ್ತೆಯ ಮೆಟ್ರೋ ನಿಲ್ದಾಣದಲ್ಲಿದ್ದ ಹಸಿರು ಬಟನನ್ನು ಅದುಮುವ ಮೂಲಕ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ‘ನಮ್ಮ ಮೆಟ್ರೋ’ ರೈಲಿಗೆ ಚಾಲನೆ ನೀಡಿದರು.
ಈ ಸಂದರ್ಭ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಕೇಂದ್ರ ರೈಲ್ವೆ ಸಚಿವ ದಿನೇಶ್ ತ್ರಿವೇದಿ, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಂ.ಮುನಿಯಪ್ಪ, ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಸಂಸದ ಅನಂತ ಕುಮಾರ್, ಅರುಣ್ ಜೇಟ್ಲಿ ಸೇರಿದಂತೆ ರಾಜಕೀಯ,ಉದ್ಯಮ ಕ್ಷೇತ್ರದ ಹಲವು ಮಂದಿ ಗಣ್ಯರು ಉಪಸ್ಥಿರಿದ್ದರು.
ಬಳಿಕ ಗಣ್ಯರ ದಂಡು ಮೆಟ್ರೋ ರೈಲಿನಲ್ಲಿ ಎಂ.ಜಿ.ರಸ್ತೆಯ ಮೆಟ್ರೋ ರೈಲು ನಿಲ್ದಾಣದಿಂದ ಬಯ್ಯಪ್ಪನ ಹಳ್ಳಿಗೆ ಪ್ರಯಾಣ ಬೆಳೆಸಿದರು.
‘ಮೆಟ್ರೋ’ರೈಲಿನ ಮೊದಲ ಯಾನವನ್ನು‘ಮಿಸ್’ಮಾಡಿಕೊಳ್ಳುವ ಮೂಲಕ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತೀವ್ರ ನಿರಾಶೆಗೊಳಬೇಕಾದ ಪ್ರಸಂಗ ಇಂದು ಎದುರಾಯಿತು.
ಮೊದಲ ಸಂಚಾರ ನಮ್ಮ ರೈಲ್ವೇ ಸಚಿವರಿಗೆ ಮಿಸ್!
ಸಮಯ ಅಮೂಲ್ಯ. ಒಂದು ಬಾರಿ ಹೋದ ಸಮಯ ಮರಳಿ ಬರುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದು ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ. ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದ ಮೊದಲ ಸಂಚಾರದಲ್ಲಿ ನಮ್ಮ ರೈಲ್ವೇ ಸಚಿವರು ತಡವಾಗಿ ಬಂದ ಕಾರಣ ರೈಲು ಮಿಸ್ ಮಾಡಿಕೊಂಡರು!ಮತ್ತು ನಿರಾಸೆಯನ್ನೂ ಮುಜುಗರವನ್ನೂ ಅನುಭವಿಸಿದರು.
ಅ.20ರ ಗುರುವಾರ ದಶಕಗಳ ಕಾಲದ ನಮ್ಮ ಬೆಂಗಳೂರಿನ ಕನಸು ನನಸಾದ ಸುಸಂದರ್ಭ, ಕೇಂದ್ರ ಸಚಿವ ಕಮಲ್‌ನಾಥ್ ಅವರು ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ತಕ್ಷಣವೇ ಎಂ.ಜಿ.ರಸ್ತೆಯಿಂದ ಮೆಟ್ರೋ ರೈಲು ಬೈಯಪ್ಪನಹಳ್ಳಿಗೆ ಹೊರಟೇ ಬಿಟ್ಟಿತು.ಕೇಂದ್ರ ರೈಲ್ವೇ ಸಚಿವ ದಿನೇಶ್ ತ್ರಿವೇದಿ,ಸಚಿವ ವೀರಪ್ಪ ಮೊಯ್ಲಿ,ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರೆಲ್ಲರೂ ಸಕಾಲದಲ್ಲಿ ಹಾಜರಿದ್ದರೆ,ಮುನಿಯಪ್ಪ ಮಾತ್ರ ತಡವಾಗಿ ಬಂದರು. ಅವರು ಬರುವಷ್ಟರಲ್ಲಿ ರೈಲು ಹೊರಟೇಬಿಟ್ಟಿತ್ತು.
ಅಂತೂ ಇಂತೂ ಮೊದಲ ಮೆಟ್ರೋ ರೈಲಿನ ಮೊದಲ ಸಂಚಾರ ನಮ್ಮ ರೈಲ್ವೇ ಸಚಿವರಿಗೇ ಮಿಸ್ ಆಗಿಬಿಟ್ಟಿತು.
ನಮ್ಮ ಮೆಟ್ರೋ ಯಶಸ್ಸು ಯಡಿಯೂರಪ್ಪಗೆ ಅರ್ಪಿತ: ಸದಾನಂದ ಗೌಡ
ಸನ್ಮಾನ್ಯ ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡಾಗ ಮೆಟ್ರೋ ಕಾಮಗಾರಿ ಶೇ.1ರಷ್ಟು ಮಾತ್ರ ಆಗಿತ್ತು.
ಮೂರು ವರ್ಷಗಳ ಕಾಲ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿ,ಶ್ರೇಷ್ಠ ಗುಣಮಟ್ಟದ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಅವರ ಕೊಡುಗೆ ಅಪಾರ. ನಮ್ಮ ಮೆಟ್ರೋ ಯಶಸ್ಸು ಅವರಿಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಹೇಳಿದ್ದಾರೆ.
ಬಜೆಟ್ ನಲ್ಲಿ ಸುಮಾರು 3 ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಟ್ಟ ಯಡಿಯೂರಪ್ಪ ಅವರು ಮಾಡಿರುವ ಒಳ್ಳೆ ಕೆಲಸವನ್ನು ಯಾರೂ ಕಡೆಗಾಣಿಸುವಂತಿಲ್ಲ.
ಯಾವ ಯೋಗ್ಯವೋ,ಭಾಗ್ಯವೋ ನನಗೆ ಮೆಟ್ರೋ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದೆ ಎಂದು ಸದಾನಂದ ಗೌಡರು ಹೇಳಿದರು.
ಮೆಟ್ರೋಗೆ ಶಂಕರ್ ನಾಗ್ ಹೆಸರಿಡುತ್ತೀರಾ?ಡಿವಿಎಸ್ ಮೌನ?
ನಮ್ಮ ಮೆಟ್ರೋ ರೈಲು ಹಾಗೂ ಬಿಎಂಆರ್ ಸಿಎಲ್ ಸಿಬ್ಬಂದಿಗಳಲ್ಲಿ ಕನ್ನಡತನ ಮೆರೆಯಲಿ ಎಂದು ವಾಟಾಳ್ ನಾಗರಾಜ್ ತಮಟೆ ಬಾರಿಸಿ ಎಚ್ಚರಿಕೆ ಮೂಡಿಸಿದ್ದಾರೆ.
ಈ ಮಧ್ಯೆ ಬಹು ನಿರೀಕ್ಷಿತ ಮೆಟ್ರೋ ರೈಲಿನ ಕನಸನ್ನು ಸುಮಾರು 20 ವರ್ಷಗಳ ಹಿಂದೆ ಕನಸು ಕಂಡಿದ್ದ ಕನ್ನಡದ ಅದ್ಭುತ ಪ್ರತಿಭೆ ದಿವಂಗತ ಶಂಕರ್ ನಾಗ್ ಅವರ ಹೆಸರನ್ನು ಮೆಟ್ರೋ ರೈಲಿಗೆ ಇಡಬೇಕು ಅಥವಾ ಮೆಟ್ರೋ ಸ್ಟೇಷನ್ ಗಳಿಗೆ ಶಂಕರ್ ಹೆಸರಿಡಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಾ ಬಂದಿದ್ದಾರೆ.
ಅದರೆ, ಮೆಟ್ರೋ ಉದ್ಘಾಟನೆಗೆ ಮುನ್ನ ಖಾಸಗಿ ಸುದ್ದಿ ವಾಹಿನಿಯೊಡನೆ ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡರು, ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರಿಡುವ ಬಗ್ಗೆ ನನಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಬಂದಿರುವುದನ್ನು ಎರಡು ಮೂರು ದಿನಗಳಿಂದ ನೋಡಿದ್ದೇನೆ.
ಅಧಿಕೃತವಾಗಿ ಯಾವುದೇ ಮನವಿ ಕೈ ಸೇರಿಲ್ಲ. ಸದ್ಯಕ್ಕಂತೂ ಈ ಬಗ್ಗೆ ಚಿಂತಿಸಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಈ ಮೂಲಕ ಕನಿಷ್ಠ ಪಕ್ಷ ಶಂಕರ್ ನಾಗ್ ಥೇಟರ್ ಸಮೀಪದ ಎಂಜಿ ರಸ್ತೆ ನಿಲ್ದಾಣಕ್ಕಾದರೂ ಶಂಕರ್ ಹೆಸರಿಡುವುದಾಗಿ ಸಿಎಂ ಘೋಷಿಸುತ್ತಾರೆ ಎಂಬ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದಂತಾಗಿದೆ.
0 comments:
Post a Comment