PLEASE LOGIN TO KANNADANET.COM FOR REGULAR NEWS-UPDATES



  *‘ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ, ರಾಷ್ಟ್ರಪ್ರೇಮಿ’
ಮೈಸೂರು, ಜ.21: ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ ಮತ್ತು ರಾಷ್ಟ್ರ ಪ್ರೇಮಿ. ಭೂತಕಾಲದಲ್ಲಿ ಘಟಿಸಿದುದನ್ನು  ಸ್ಮರಿಸಿ ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ವಿರೋಧಿಸುವವರು ಭೂತ- ಪಿಶಾಚಿಗಳು ಎಂದು ಖ್ಯಾತ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದೇವನೂರು ಮಹಾದೇವ ಟೀಕಿಸಿದ್ದಾರೆ.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಮಗೊಂದು ಸಂವಿಧಾನವಿದೆ. ಸಂವಿಧಾನದಲ್ಲಿ ಅವಕಾಶ ಇಲ್ಲದಿರುವುದನ್ನು ವಿರೋಧಿಸಬೇಕು, ಇರುವುದನ್ನು ಒಪ್ಪಿಕೊಳ್ಳಬೇಕು. ಕೆಲವರು ನಮ್ಮ ಸಂವಿಧಾನವನ್ನು ಒಪ್ಪದೆ ಇರುವುದರಿಂದಲೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎಂದರು.
ಟಿಪ್ಪುವಿನ ಕಾಲದಲ್ಲಿ ಮಾತ್ರವಲ್ಲ ಶಂಕರಾಚಾರ್ಯರ ಕಾಲದಲ್ಲೂ ಮನುಷ್ಯರ ಮಾರಣ ಹೋಮ ನಡೆದಿತ್ತು. ಬಸವಣ್ಣನ ಕಾಲದಲ್ಲೂ ವೈಷ್ಣವರು ರಶೈವರನ್ನು ಕೊಂದಿದ್ದರು. ಈಗ ಅದನ್ನು ವಿರೋಧಿಸುತ್ತಾ ಕುಳಿತರೆ ಪ್ರಯೋಜನವಿಲ್ಲ. ಇದನ್ನೇ ಮುಂದಿಟ್ಟುಕೊಂಡು ಟಿಪ್ಪುವನ್ನು ವಿರೋಧಿಸುವುದು ಸೂಕ್ತವಲ್ಲ ಎಂದು ದೇವನೂರು ಅಭಿಪ್ರಯಿಸಿದರು.
ಟಿಪ್ಪುವಿನ ತಂದೆ ಹೈದರಲಿ ಕೇವಲ ಹಿಂದೂ ರಾಜರ ಮೇಲೆ ಮಾತ್ರ ಯುದ್ಧ ಮಾಡಿಲ್ಲ. ಹಾಗೆ ನೋಡಿದರೆ ಮುಸ್ಲಿಂ ರಾಜರ ಮೇಲೂ ಯುದ್ಧ ಮಾಡಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಮುಸ್ಲಿಂ ವಿರೋಧಿ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಟಿಪ್ಪುವಿನ ಕಾಲದಲ್ಲಿ ‘ಹಿಂದೂ’ ಎಂಬುದೇ ಇರಲಿಲ್ಲ ಎಂದರು.
ಸಂವಿಧಾನದಲ್ಲಿ ಅವಕಾಶ ಇರುವುದನ್ನು ವಿರೋಧಿಸುವುದು ಸರಿಯಲ್ಲ. ಹಳೆಯದನ್ನು ಬಿಟ್ಟು ಹೊಸ ಆಲೋಚನೆಗಳ ಕಡೆಗೆ ನಮ್ಮ ಚಿಂತನಶೀಲತೆ ಹರಿಯಬೇಕು ಎಂದ ಅವರು, ಟಿಪ್ಪುವಿವಿ ಸ್ಥಾಪನೆಯಾಗಲಿ ಎಂದು ಆಶಿಸಿದರು.
ಇಂದು ಮಕ್ಕಳಿಗಾಗಿ ರಾಷ್ಟ್ರವನ್ನು ಅಡಮಾನ ಇಡುತ್ತಾರೆ:ರಾಷ್ಟ್ರದ ಹಿತಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಅಡವಿಟ್ಟವರಲ್ಲಿ ಟಿಪ್ಪು ಬಿಟ್ಟರೆ ಇಡೀ ರಾಷ್ಟ್ರದಲ್ಲಿ ಬೇರಾವ ರಾಜರೂ ಸಿಗುವುದಿಲ್ಲ. ಅಂದು ರಾಜ್ಯದ ಹಿತಕ್ಕಾಗಿ ಟಿಪ್ಪುಬ್ರಿಟಿಷರಲ್ಲಿ ತನ್ನ ಇಬ್ಬರು ಮಕ್ಕಳನ್ನು ಅಡವಿಟ್ಟಿದ್ದನು. ಆದರೆ, ಇಂದು ತಮ್ಮ ಮಕ್ಕಳಿಗಾಗಿ ರಾಷ್ಟ್ರವನ್ನೇ ಅಡವಿಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ. ಈ ಬಾರಿಯೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸರ್ವೋದಯ ಪಕ್ಷ ಸಿದ್ಧತೆ ನಡೆಸಿದ್ದು, ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ ಪಕ್ಷಗಳ ಜತೆ ಹೊಂದಾಣಿಕೆ ಮಾಡಿ ಕೊಳ್ಳದೆ, ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿದೆ ಎಂದು ದೇವನೂರು ಮಹಾದೇವ ತಿಳಿಸಿದ್ದಾರೆ.
ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ ಪಕ್ಷಗಳ ಸಾಲಿನಲ್ಲಿ ಬಿಜೆಪಿ, ಕೆಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿವೆ. ಇನ್ನುಳಿದಂತೆ ಆರ್‌ಪಿಐ, ಸಿಪಿಐ, ಸಿಪಿಐ (ಎಂ), ಬಿಎಸ್‌ಪಿ ವೊದಲಾದ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಸಂಘಟಿತರಾಗಿ ಹೋರಾಟಕ್ಕೆ ಇಳಿಯಲು ನಿರ್ಧರಿಸಲಾಗಿದೆ ಎಂದವರು ಹೇಳಿದ್ದಾರೆ.
ಈ ಬಾರಿ ಮಂಡ್ಯ ಜಿಲ್ಲೆಯ 4 ಕ್ಷೇತ್ರ, ಕೋಲಾರದಲ್ಲಿ 2, ಮೈಸೂರಿನಲ್ಲಿ 3, ಹಾಸನದಲ್ಲಿ 2, ಉತ್ತರ ಕರ್ನಾಟಕದಲ್ಲಿ 1 ಕ್ಷೇತ್ರಗಳಿಗೆ ಸರ್ವೋದಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ದೇವನೂರು ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ ಹಾಜರಿದ್ದರು.

Advertisement

0 comments:

Post a Comment

 
Top