- ಸನತ್‌ಕುಮಾರ ಬೆಳಗಲಿ
ಇಂಥ ಒಂದು ವಿವಾದಕ್ಕಾಗಿ ಸಂಘ ಪರಿವಾರ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು.ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರಿಗಾಗಿ ಟಿಪ್ಪು ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಕೇಂದ್ರದ ಸಚಿವ ರಹ್ಮಾನ್ ಖಾನ್ ಪ್ರಕಟಿಸಿದ ನಂತರ ಅಪಸ್ವರದ ಅಲೆ ಅದೇ ಫ್ಯಾಸಿಸ್ಟ್ ಪರಿವಾರದ ಕಡೆಯಿಂದ ಬರತೊಡಗಿದೆ. ಈ ಬಾರಿ ಚುನಾವಣೆಯಲ್ಲಿ ಜನರ ಬಳಿ ಹೋಗಲು ಬಿಜೆಪಿಗೆ ಅಂದರೆ ಸಂಘಪರಿವಾರಕ್ಕೆ ಮುಖವೇ ಇರಲಿಲ್ಲ. ಮುಖದ ತುಂಬೆಲ್ಲ ಗಣಿಹಗರಣದ ಧೂಳು, ಭೂಪಟಾವಣೆಯ ಹೊಲಸು ಮೆತ್ತಿಕೊಂಡಿತ್ತು. ಆರೆಸ್ಸೆಸ್ ಶಾಖೆಯಲ್ಲಿ ಬೆಳೆದು ಬಂದ ಮಂತ್ರಿಗಳೇ ಕಂತ್ರಿಗಳಾಗಿ ಅಪಹಾಸ್ಯಕ್ಕೀಡಾಗಿದ್ದರು. ರಾಜ್ಯ ಸಂಪುಟದ ಶೇ.50ರಷ್ಟು ಸಚಿವರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಅಂತಲೇ ನಕಲಿ ರಾಷ್ಟ್ರಭಕ್ತರು ಬಾಲ ಮುದುಡಿಕೊಂಡು ಕುಳಿತಿದ್ದರು. ಇಂಥ ಸನ್ನಿವೇಶದಲ್ಲಿ ಟಿಪ್ಪು ವಿವಿ ಇವರಿಗೆ ಹೊಸ ಅಸ್ತ್ರವಾಗಿ ಬಂದಿದೆ. ಈಗ ಒಬ್ಬೊಬ್ಬರಾಗಿ ಬಾಯಿ ಬಿಡತೊಡಗಿದ್ದಾರೆ.
ಮೊದಲು ಒಂದು ಕಾಲದ ಸಂಶೋಧಕ ಚಿದಾನಂದ ಮೂರ್ತಿ ಬಾಯಿಬಿಟ್ಟರು. ಈಗ ಬಿಜೆಪಿ ವಕ್ತಾರ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಎಂಬ ಭೂಗಳ್ಳ ಬಾಯಿ ತೆರೆದಿದ್ದಾನೆ. ‘‘ಈ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಎರಡು ಸಾವಿರ ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರಕಾರ ಅವಕಾಶ ನೀಡುವುದಿಲ್ಲ’’ ಎಂದು ಆತ ಹೇಳಿದ್ದಾನೆ. ಈ ಮಾತಿಗೆ ದನಿಗೂಡಿಸಿದ ಸಭ್ಯ ಮುಖವಾಡದ ಸಚಿವ ಸುರೇಶ್ ಕುಮಾರ್ ‘‘ ಈ ವಿವಿ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪರಿಶೀಲಿಸುತ್ತೇವೆ’’ ಎಂದಿದ್ದಾರೆ. ಬಿಜೆಪಿಯ ಅಲ್ಪಸಂಖ್ಯಾತರ ಮುಖವಾಡ ಅನ್ವರ್ ಮಾಣಿಪ್ಪಾಡಿ ಇನ್ನೂ ಬಾಯಿ ಬಿಟ್ಟಿಲ್ಲ. ಆದರೆ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅಪಸ್ವರಕ್ಕೆ ಸಾತ್ ನೀಡಿದ್ದಾರೆ.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದಂತೆ ‘‘ಟಿಪ್ಪು ಸುಲ್ತಾನ್ ಮಹಾನ್ ದೇಶಭಕ್ತ. ರಾಷ್ಟ್ರೀಯ ಹೀರೋ’’. ಈ ಮಾತಿನ ಬಗ್ಗೆ ಈ ನಾಡಿನ ಪ್ರಜ್ಞಾವಂತರೆಲ್ಲರ ಸಹಮತವಿದೆ. ಜನಸಾಮಾನ್ಯರಲ್ಲೂ ಇದೇ ಭಾವನೆ ಇದೆ. ಆರೆಸ್ಸೆಸ್ ಕಾಯಿಲೆ ಅಂಟಿಸಿಕೊಂಡಿರುವ ಕೆಲವೇ ಕೆಲವರನ್ನು ಹೊರತುಪಡಿಸಿದರೆ ಬೇರೆ ಯಾರ ವಿರೋಧವೂ ಇಲ್ಲ.
ದೇಶಭಕ್ತರನ್ನು ಕಂಡರೆ ಆರೆಸ್ಸೆಸ್‌ಗೆ ಹೆದರಿಕೆ. ಯಾಕೆಂದರೆ ದೇಶಕ್ಕಾಗಿ ನಡೆದ ಸ್ವಾತಂತ್ರ ಹೋರಾಟದಲ್ಲಿ ಅದು ಭಾಗವಹಿಸಿರಲಿಲ್ಲ. ಅಷ್ಟೇ ಅಲ್ಲ. ಬ್ರಿಟಿಷರ ಏಜೆಂಟರಾಗಿ ಚಡ್ಡಿಗಳು ಕಾರ್ಯನಿರ್ವಹಿಸಿ ದರು. ಟಿಪ್ಪು ಸುಲ್ತಾನ್, ಮಹಾತ್ಮ ಗಾಂಧೀಜಿ, ಭಗತ್‌ಸಿಂಗ್ ಇವರೆಲ್ಲ ಬ್ರಿಟಿಷರ ವಿರುದ್ಧ ಹೋರಾಡಿದವರು. ಅಂತಲೇ ಇವರನ್ನು ಕಂಡರೆ ಪರಿವಾರಕ್ಕೆ ಆಗುವುದಿಲ್ಲ.
ಬ್ರಿಟಿಷರೊಂದಿಗೆ ರಾಜಿಮಾಡಿಕೊಂಡಿದ್ದರೆ ಟಿಪ್ಪು ಸುಲ್ತಾನ್ ತನ್ನ ಮಕ್ಕಳನ್ನು ಒತ್ತೆ ಇಟ್ಟು ರಣರಂಗದಲ್ಲಿ ವೀರಮರಣವನ್ನಪ್ಪುವ ಪ್ರಸಂಗ ಬರುತ್ತಿರಲಿಲ್ಲ.ಟಿಪ್ಪು ವಂಶಜರು ಇಂದಿಗೂ ಕೋಲ್ಕತಾದಲ್ಲಿ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುವ ಸ್ಥಿತಿಯೂ ಬರುತ್ತಿರಲಿಲ್ಲ. ಆದರೆ ಟಿಪ್ಪು ರಾಜಿ ಮಾಡಿಕೊಳ್ಳಲಿಲ್ಲ.ಈ ನಾಡಿಗೆ ಟಿಪ್ಪು ಸುಲ್ತಾನ್ ನೀಡಿದ ಕೊಡುಗೆ ಅಪಾರವಾದುದು. ಊಳಿಗಮಾನ್ಯ ಶಕ್ತಿಗಳ ಸೊಂಟ ಮುರಿದು, ಭೂಸುಧಾರಣಾ ಶಾಸನವನ್ನು ಎರಡು ಶತಮಾನಗಳ ಹಿಂದೆಯೇ ಜಾರಿಗೆ ತಂದುದು ಸಣ್ಣ ಸಾಧನೆಯಲ್ಲ.
ಪಾಳೆಗಾರರಿಂದ ಕಪ್ಪ ಕಾಣಿಕೆ ಸ್ವೀಕರಿಸದೇ ಅವರ ವಶದಲ್ಲಿದ್ದ ಸಾವಿರಾರು ಎಕರೆ ಜಮೀನನ್ನು ಭೂರಹಿತ ರೈತರಿಗೆ ಹಂಚಿದ ಹೆಗ್ಗಳಿಕೆ ಟಿಪ್ಪು ಸುಲ್ತಾನರದು.ರೈತನ ಜಾತಿ-ಧರ್ಮ ಯಾವುದೇ ಆಗಿದ್ದರೂ ಉಳುವವನಿಗೆ ಭೂಮಿ ಸಿಗಬೇಕೆಂಬುದು ಟಿಪ್ಪುವಿನ ಕೃಷಿ ಧೋರಣೆಯಾಗಿತ್ತು. ಟಿಪ್ಪುವಿನ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ 39,000 ಕೆರೆ ಕಟ್ಟೆಗಳು ನಿರ್ಮಾಣಗೊಂಡವು. ಆತನ ಅಲ್ಪ ಅಧಿಕಾರಾವಧಿಯಲ್ಲಿ ಶೆ.35ರಷ್ಟು ಭೂಮಿ ನೀರಾವರಿಗೆ ಒಳಪಟ್ಟಿತ್ತು. ಕನ್ನಂಬಾಡಿ ಅಣೆಕಟ್ಟು ಕಟ್ಟಲು ಮೊದಲು ಅಸ್ತಿಭಾರ ಹಾಕಿದ್ದು ಟಿಪ್ಪು ಸುಲ್ತಾನ್.
ಸದಾ ಪ್ರಯೋಗಶೀಲನಾಗಿದ್ದ ಟಿಪ್ಪು ಸುಲ್ತಾನ್ ಜಗತ್ತಿನ ಮೂಲೆ ಮೂಲೆಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿ ಕೃಷಿರಂಗದ ಹೊಸ ಅನ್ವೇಷಣೆಗಳ ಮಾಹಿತಿ ತರಿಸಿಕೊಳ್ಳುತ್ತಿದ್ದ. ವಿದೇಶಿ ರೇಷ್ಮೆ ಬೆಳೆಯನ್ನು ಕರ್ನಾಟಕಕ್ಕೆ ತಂದ ಹಿರಿಮೆ ಟಿಪ್ಪು ಸುಲ್ತಾನನದು. ಈಗ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.ಟಿಪ್ಪು ಕಾಲದಲ್ಲಿ ಸುಮಾರು ಮೂರು ಲಕ್ಷ ಸೈನಿಕರಿಗೆ ಭೂಮಿ ನೀಡಲಾಯಿತು. ಇದರಿಂದಾಗಿ ಸಣ್ಣ ರೈತರ ಉಗಮವಾಗಿ ಊಳಿಗಮಾನ್ಯ ಶಕ್ತಿಗಳ ಹಿಡಿತ ಸಡಿಲಾಯಿತು.
ಹಿಂದುಳಿದ ಜಾತಿಗಳಾದ ಕುರುಬ, ಈಡಿಗ, ಒಕ್ಕಲಿಗ, ಬೇಡ, ಲಿಂಗಾಯತ ಸಮುದಾಯದ ರೈತ ಮಕ್ಕಳು ಭೂಮಿ ಪಡೆದು ಒಂದಿಷ್ಟಾದರೂ ಶೋಷಣೆಯಿಂದ ಮುಕ್ತರಾದರು.ಬೆಂಗಳೂರಿನ ಲಾಲ್‌ಬಾಗ್‌ನ ಸಸ್ಯತೋಟ ವನ್ನು ಅಪರೂಪದ ಸಸ್ಯ ತಳಿಗಳನ್ನು ಸಂರಕ್ಷಿಸಲೇಂದೇ ಟಿಪ್ಪು ಪ್ರಾರಂಭಿಸಿದ. ಜಗತ್ತಿನ ಮೂಲೆ ಮೂಲೆಗಳಿಂದ ತರಿಸಿದ ಅಪರೂಪದ ಸಸ್ಯತಳಿಗಳು ಇಲ್ಲಿವೆ. ಇಂಗ್ಲೆಂಡಿನ ಓಕ್‌ಮರ, ದಕ್ಷಿಣ ಆಫ್ರಿಕದ ಪೈನ್ ಮರ, ಮೆಕ್ಸಿಕೊದ ಆಪ್ಲೆಕಾಚೊ ಹೀಗೆ ನೂರಾರು ಮರಗಳು ಲಾಲ್‌ಬಾಗ್‌ನಲ್ಲಿವೆ.
ವಾಸ್ತವಾಂಶ ಹೀಗಿದ್ದರೂ ಆರೆಸ್ಸೆಸ್ ವಟುಗಳು ಟಿಪ್ಪು ಅಂದ ತಕ್ಷಣ ಯಾಕೆ ಕುಡಿದವರಂತೆ ಕಿರುಚಾಡುತ್ತಿವೆ? ಇದಕ್ಕೆ ಕಾರಣವಿದೆ. ಟಿಪ್ಪು ಮುಸಲ್ಮಾನನಾಗಿದ್ದ ಎಂಬುದು ಒಂದು ಕಾರಣವಾಗಿದ್ದರೆ, ಟಿಪ್ಪು ದಲಿತರ ಪರವಾಗಿದ್ದ ಎಂಬುದು ಇನ್ನೊಂದು ಕಾರಣ. ಟಿಪ್ಪು ಅಧಿಕಾರಕ್ಕೆ ಬರುವ ಮೊದಲೇ ಕರ್ನಾಟಕದಲ್ಲಿ ಬ್ರಾಹ್ಮಣ ಮಠಮಾನ್ಯಗಳೇ ಅತಿದೊಡ್ಡ ಜಾಗೀರದಾರಿ ಊಳಿಗಮಾನ್ಯ ಶಕ್ತಿಗಳಾಗಿದ್ದವು. ಅತಿದೊಡ್ಡ ಸಂಖ್ಯೆಯಲ್ಲಿದ್ದ ದಲಿತ ಹಿಂದುಳಿದ ಶೂದ್ರ ಸಮುದಾಯವನ್ನು ಈ ಬ್ರಾಹ್ಮಣ ಮಠಗಳು ದೈವದ ಹೆಸರಿನಲ್ಲಿ ಶೋಷಣೆ ಮಾಡುತ್ತಿದ್ದವು. ಟಿಪ್ಪು ಸುಲ್ತಾನ್ ಈ ಮಠಮಾನ್ಯಗಳ ದಂಡಪಿಂಡಗಳ ಹಕ್ಕನ್ನು ಕತ್ತರಿಸಿ ಹಾಕಿ ದೇವಸ್ಥಾನದ ಭೂಮಿಯನ್ನು ದಲಿತ ಶೂದ್ರ ರೈತರಿಗೆ ಹಂಚಿದ.
ಉದಾಹರಣೆಗೆ ಬ್ರಿಟಿಷ್ ಇತಿಹಾಸಕಾರ ಬುಕಾನನ್ ದಾಖಲಿಸಿರುವಂತೆ ‘‘ನಂಜನಗೂಡಿ ನಲ್ಲಿ 500 ಬ್ರಾಹ್ಮಣ ಮನೆಗಳಿದ್ದವು. ವಾರ್ಷಿಕ 14,000 ಪಗೋಡಾಗಳಷ್ಟು ಆದಾಯ ತರುತ್ತಿದ್ದ ಭೂಮಿಯನ್ನು ಈ 500 ಬ್ರಾಹ್ಮಣ ಕುಟುಂಬಗಳು ಹೊಂದಿದ್ದವು. ಅದೇ ಊರಿನಲ್ಲಿ 700 ದಲಿತ, ಶೂದ್ರ ಕುಟುಂಬಗಳಿದ್ದವು. ಅವರು ಈ ಜಮೀನಿನಲ್ಲಿ ಚಾಕರಿ ಮಾಡಿದರೂ ಊರ ಹೊರಗೆ ಬದುಕಬೇಕಾಗಿತ್ತು. ಟಿಪ್ಪು ಬ್ರಾಹ್ಮಣಶಾಹಿಯ ಈ ಅಧಿಕಾರ ಮೊಟಕುಗೊಳಿಸಿ ಅವರಿಗೆ ಮಾಸಿಕ ಕೇವಲ 100 ಪಗೋಡಾಗಳಷ್ಟು ನಿವೃತ್ತಿ ವೇತನ ನೀಡಿದರು.
ಇದನ್ನು ಬ್ರಾಹ್ಮಣ ವಿರೋಧಿ ಕ್ರಮ ಎಂದು ಹೊಟ್ಟೆ ಉರಿಸಿಕೊಂಡ ಪ್ರಹ್ಲಾದ ಜೋಶಿ, ಮುತಾಲಿಕ್, ಮಧೂಸೂದನ್‌ರಂತಹ ಪುರೋಹಿತಶಾಹಿ ಸಂತಾನಗಳು ಮತ್ತು ಸಂಘಪರಿವಾರ ಅವರ ಮೇಲೆ ಇಂದಿಗೂ ವಿಷ ಕಾರುತ್ತಿವೆ. ಈ ನಾಡಿಗೆ ಟಿಪ್ಪು ಸುಲ್ತಾನ ನೀಡಿದ ಕೊಡುಗೆಯ ಬಗ್ಗೆ ದೇಶದ ಹಿರಿಯ ಕಮ್ಯುನಿಸ್ಟ್ ನಾಯಕ ದಿವಂಗತ ಸಿ.ರಾಜೇಶ್ವರ ರಾವ್ ಒಂದು ಅಪರೂಪದ ಪುಸ್ತಕವೊಂದನ್ನು ಬರೆದಿದ್ದಾರೆ. ಕ್ರಾಂತಿಕಾರಿ ನಾಯಕ ಹುತಾತ್ಮ ಸಾಕೇತ್ ರಾಜನ್ ‘‘ಮೇಕಿಂಗ್ ಹಿಸ್ಟರಿ’’ ಎಂಬ ಬೃಹತ್ ಇಂಗ್ಲಿಷ್ ಸಂಶೋಧನ ಗ್ರಂಥದಲ್ಲಿ ಟಿಪ್ಪುವಿನ ಸಾಧನೆಗಳನ್ನು ದಾಖಲಿಸಿದ್ದಾರೆ.
ಚಿದಾನಂದ ಮೂರ್ತಿಗಳಂತಹ ವಿಧ್ವಂಸಕ ಸಂಶೋಧಕರು ಇದನ್ನು ಓದಬೇಕು. ಸಂಘ ಪರಿವಾರದವರಂತೂ ಬೇರೆ ಸಾಹಿತ್ಯ ಓದುವುದಿಲ್ಲ. ಸಂಘದಲ್ಲಿ ಇಂಥ ದೀಕ್ಷೆಯನ್ನು ಅವರಿಗೆ ನೀಡಲಾಗಿರುತ್ತದೆ. ಆದರೆ ಚಿಮೂ ರಂಥವರೂ ಹಾಗಾಗಬಾರದು. ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಘಪರಿವಾರದ ದೊಣ್ಣೆ ನಾಯಕರ ಅಪ್ಪಣೆ ಬೇಕಾಗಿಲ್ಲ. ಹಿಂದೂ ಓಟ್ ಬ್ಯಾಂಕ್ ನಿರ್ಮಿಸಲು ಈ ವಿವಿ ಸ್ಥಾಪನೆಯನ್ನು ವಿರೋಧಿಸುತ್ತಿರುವ ಈ ಅವಿವೇಕಿಗಳಿಗೆ ಕೆಲ ವಿದ್ಯುನ್ಮಾನ ಮಾಧ್ಯಮಗಳು ಇನ್ನಿಲ್ಲದ ಪ್ರಚಾರ ನೀಡುತ್ತಿವೆ.
ಇತ್ತೀಚೆಗೆ ಜನಶ್ರೀ ಟಿವಿ ಚಾನಲ್‌ನಲ್ಲಿ ಈ ಕುರಿತು ಚರ್ಚೆಯೊಂದು ನಡೆಯಿತು. ಆ ಚರ್ಚೆಯಲ್ಲಿ ಸಂಘ ಪರಿವಾರದ ವಕ್ತಾರರಾದ ಪ್ರಮೋದ ಮುತಾಲಿಕ್, ಚಿದಾನಂದಮೂರ್ತಿ, ವಕೀಲ ದೇವರಾಜು ಭಾಗವಹಿಸಿದ್ದರೆ, ಪ್ರಜ್ಞಾವಂತರ ಪರವಾಗಿ ಸಿ.ಎಸ್.ದ್ವಾರಕಾನಾಥ ಮತ್ತು ಮರುಳಸಿದ್ದಪ್ಪ ಪಾಲ್ಗೊಂಡಿದ್ದರು. ಈ ಚಾನಲ್‌ನ ಆ್ಯಂಕರ್ ಎಷ್ಟು ಪೂರ್ವಗ್ರಹ ಪೀಡಿತನಾಗಿದ್ದನೆಂದರೆ ಮರುಳಸಿದ್ದಪ್ಪ, ದ್ವಾರಕಾನಾಥ್‌ರಿಗೆ ಮಾತಾಡಲು ಅವಕಾಶವನ್ನೇ ನೀಡುತ್ತಿರಲಿಲ್ಲ.
ಈ ಚರ್ಚೆ ಕೊನೆಯ ಹಂತದಲ್ಲಿದ್ದಾಗ ಕೊನೆಯ ಮಾತನ್ನು ಹೇಳಲು ಮುತಾಲಿಕ್ ಮತ್ತು ಚಿದಾನಂದ ಮೂರ್ತಿಗೆ ಅವಕಾಶ ನೀಡಿ ಈ ಚೆಡ್ಡಿ ಆ್ಯಂಕರ್ ಕಾರ್ಯಕ್ರಮ ಮುಗಿಸಲು ಮುಂದಾದ. ಆಗ ಮರುಳಸಿದ್ದಪ್ಪ ಮತ್ತು ದ್ವಾರಕಾನಾಥ್ ಸಿಡಿದೆದ್ದು, ಅವರೇಕೆ ನಾವು ಹೇಳುತ್ತೇವೆ ಎಂದು ಹೇಳಬೇಕಾದುದನ್ನು ಹೇಳಿಯೇ ಬಿಟ್ಟರು. ‘‘ಯಾರೇ ವಿರೋಧಿಸಿದರೂ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತದೆ’’ ಎಂದು ದ್ವಾರಕಾನಾಥ ಮತ್ತು ಮರುಳಸಿದ್ದಪ್ಪ ಗುಡುಗಿದರು.
ಈ ರೀತಿ ಮಾಧ್ಯಮಗಳಲ್ಲಿರುವ ವಟುಗಳನ್ನೇ ಬಳಸಿಕೊಂಡು ಟಿಪ್ಪು ವಿವಿಗೆ ವಿರೋಧವಿದೆ ಎಂದು ಭಾರೀ ಪ್ರಚಾರ ನಡೆಯುತ್ತಿದೆ. ವಾಸ್ತವವಾಗಿ ಕೆಲ ಅವಿವೇಕಿಗಳ ಹೊರತಾಗಿ ಯಾರ ವಿರೋಧವೂ ಇಲ್ಲ. ಯಾರಿಗೂ ಹೆದರಬೇಕಾಗಿಲ್ಲ. ಶ್ರೀರಂಗಪಟ್ಟಣದ ಭೂಮಿ ಮಧುಸೂದನ್ ಇಲ್ಲವೇ ಸಂಘಪರಿವಾರಿಗಳ ಜಹಗೀರಿ ಅಲ್ಲ. ಅವರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. ಕೇಂದ್ರ ಸರಕಾರ ಇಂಥ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕದೆ ವಿ.ವಿ. ಸ್ಥಾಪನೆಗೆ ಮುಂದಾಗಲಿ. -
varthabharati
0 comments:
Post a Comment