PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜ. ೨೧ : ಕಳೆದ ಅಕ್ಟೋಬರ್ ೦೬ ರಂದು ಶಿವಪುರದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ತಾಲೂಕಿನ ಭಾಗ್ಯನಗರದ ಚನ್ನಬಸಯ್ಯ ತಂದೆ ಸಂಗಯ್ಯ ಸಾರಂಗಮಠ ಎಂಬುವವರ ಕೊಲೆ ರಹಸ್ಯವನ್ನು ಬೇಧಿಸಿರುವ ಕೊಪ್ಪಳ ಗ್ರಾಮೀಣ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಕೊಪ್ಪಳದ ಸುಮ ಹಿರೇಮಠ ಗಂಡ ರವೀಂದ್ರ, ಪ್ರಕಾಶ ತಂದೆ ನಿಂಗಪ್ಪ ಮೈದೂರ ಮತ್ತು ಗವಿಸಿದ್ದಯ್ಯ ಇವರೆ ಬಂಧಿತ ಆರೋಪಿಗಳು.  
ಪ್ರಕರಣ ವಿವರ: ಭಾಗ್ಯನಗರದ ಚನ್ನಬಸಯ್ಯ ಕಳೆದ ಅಕ್ಟೋಬರ್ ೦೩ ರಂದು ರಾತ್ರಿ ಸುಮಾ ಹಿರೇಮಠ ಇವರ ಮನೆಗೆ ಬಂದಾಗ, ಹಣದ ವಿಷಯವಾಗಿ ಇವರಿಬ್ಬರ ನಡುವೆ ಜಗಳವಾಗಿದೆ,  ಈ ಸಂದರ್ಭದಲ್ಲಿ ಸುಮಾ ಹಿರೇಮಠ ಹರಿತವಾದ ಆಂಗ್ಲರ್ ಪಟ್ಟಿಯಿಂದ ಚನ್ನಬಸಯ್ಯನಿಗೆ ಹೊಡೆದ ಕಾರಣ, ಆತ ಸ್ಥಳದಲ್ಲೇ ಮೃತಪಟ್ಟಿದ್ದ.  ಮೃತದೇಹವನ್ನು ಅಂದು ರಾತ್ರಿ ಮನೆಯಲ್ಲಿಯೇ ಇಟ್ಟುಕೊಂಡು, ಮರುದಿನ ಪ್ರಕಾಶ ಎಂಬುವವನ ಆಟೋ ತರಿಸಿ, ಗವಿಸಿದ್ದಯ್ಯ ಎಂಬಾತನನ್ನೂ ಕರೆಯಿಸಿಕೊಂಡು, ಮೂವರು ಸೇರಿ ಮೃತ ದೇಹವನ್ನು ಆಟೋದಲ್ಲಿ ಹಾಕಿಕೊಂಡರು.  ಗವಿಸಿದ್ದಯ್ಯ ಎಂಬಾತ ಚನ್ನಬಸಯ್ಯನಿಗೆ ಸೇರಿದ ಮೋಟಾರ್ ಬೈಕ್ ಅನ್ನು ಚಲಾಯಿಸಿಕೊಂಡು ಬಂದು, ನಂತರ ಮೂವರು ಸೇರಿ ಮೃತ ದೇಹ ಹಾಗೂ ಮೋಟಾರ್ ಬೈಕ್ ಅನ್ನು ಮುನಿರಾಬಾದ್ ಬೈಪಾಸ್ ನಿಂಗಾಪುರ ಕಡೆ ಹೋಗುವ ಕಾಲುವೆಯಲ್ಲಿ ಹಾಕಿ ಹೋಗಿದ್ದರು. 
  ಚನ್ನಬಸಯ್ಯನ ಮೃತದೇಹ ಶಿವಪುರದ ಕೆರೆಯಲ್ಲಿ ಅ. ೬ ರಂದು ಪತ್ತೆಯಾಗಿತ್ತು.  ಚನ್ನಬಸಯ್ಯನ ಸಹೋದಯ ಗಿಣಿಗೇರಾದ ಮಹಾಂತಯ್ಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ದೂರು ದಾಖಲಿಸಿದ್ದರು.   ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಇನಾಯತ್, ಶಾಂತಯ್ಯ, ಖಾಜಾಸಾಬ್ ದಫೇದಾರ, ಸುಭಾಸ್, ಮಲ್ಲಿಕಾರ್ಜುನ್ ಸಿಬ್ಬಂದಿಯನ್ನೊಳಗೊಂಡ ತಂಡ, ಇದೀಗ ಕೊಲೆ ರಹಸ್ಯವನ್ನು ಬೇಧಿಸಿದ್ದು, ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಪ್ರಭಾರಿ ಎಸ್‌ಪಿ ಬಿ. ಮಹಾಂತೇಶ್, ಡಿ.ಎಸ್.ಪಿ ಸುರೇಶ್ ಬಿ ಮಸೂತಿ ಇವರ ಮಾರ್ಗದರ್ಶನದಲ್ಲಿ ಈ ಪ್ರಕರಣದ ಪತ್ತೆ ಸಾಧ್ಯವಾಗಿದೆ ಎಂದು ಸಿಪಿಐ ವೆಂಕಟಪ್ಪ ನಾಯಕ ತಿಳಿಸಿದ್ದಾರೆ.

Advertisement

0 comments:

Post a Comment

 
Top