PLEASE LOGIN TO KANNADANET.COM FOR REGULAR NEWS-UPDATES


ಈಗ ಉತ್ತರ ಭಾರತದ ಚುನಾವಣಾ ಪ್ರಚಾರದಲ್ಲಿರುವ ಕರ್ನಾಟಕ ಮೂಲದ ಸ್ನೇಹಿತರೊಬ್ಬರಿಗೆ ಮೊನ್ನೆಯೊಂದು ಮೆಸೇಜು ಕಳಿಸಿದೆ. ನೀವು ಅಲ್ಲಿ ಪ್ರಚಾರ ಮಾಡುವ ಮುನ್ನ ನಮ್ಮ ರಾಜ್ಯಕ್ಕೆ ನಮ್ಮ ಅಥಣಿಗೆ ಬನ್ನಿ. ನಮ್ಮ ಪಕ್ಷದ ಸಚಿವರ ಕಾಮಕಾಂಡ ನೋಡಿ ಎಂದು ಕಳುಹಿಸಿದ ಮೆಸೇಜ್‌ಗೆ ಎರಡು ದಿನವಾದರೂ ಅವರಿಂದ ಉತ್ತರ ಬರಲಿಲ್ಲ. ಸಾಮಾನ್ಯವಾಗಿ ನನ್ನ ಯಾವುದೇ ಸಂದೇಶಕ್ಕೆ ತಕ್ಷಣ ಫೋನ್ ಮಾಡಿ ಸ್ಪಂದಿಸುವ ಅವರು ದಿವ್ಯ ಮೌನ ತಾಳಿದ್ದಾರೆ. ಬಿಜೆಪಿಯ ರಾಷ್ಟ್ರಮಟ್ಟದ ನಾಯಕರ ನಕಟವರ್ತಿಯಾದ ಅವರಿಗೆ ಮೌನ ಅನಿವಾರ್ಯವಾಗಿರಬಹುದು.
ಆ ನನ್ನ ಮಿತ್ರರು ಫೋನ್ ಮಾಡಿದ್ದರೆ, ಕೇಳಲು ಹಲವಾರು ಪ್ರಶ್ನೆಗಳಿದ್ದವು. ಉತ್ತರಪ್ರದೇಶದಲ್ಲಿ ಮಾಯಾವತಿ, ಮುಲಾಯಂ ಅವರ ವಿರುದ್ಧ ಟೀಕಿಸಲು ನಮಗೆ ಯಾವ ನೈತಿಕ ಹಕ್ಕಿದೆ? ಕರ್ನಾಟಕದಲ್ಲಿ ನಮ್ಮ ಪಕ್ಷದ ಮಂತ್ರಿಗಳೇ ವಿಧಾನಸಭಾ ಕಲಾಪದಲ್ಲೇ ಕುಳಿತು ಮೊಬೈಲ್ ಫೋನ್‌ನಲ್ಲಿ ಬ್ಲ್ಯೂಫಿಲಂ ನೋಡುತ್ತಿರುವಾಗ, ಅಲ್ಲಿ ಇತರ ಪಕ್ಷಗಳನ್ನು ಹೇಗೆ ಟೀಕಿಸುತ್ತೀರಿ ಎಂದು ಕೇಳಬೇಕೆಂದಿದ್ದೆ. ಉತ್ತರಭಾರತದ ರಾಜ್ಯಗಳಲ್ಲಿ ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ಮುಲಾಯಂ, ಮಾಯಾವತಿ, ಲಾಲೂ, ನತೀಶ್‌ಕುಮಾರ್ ಅವರ ಪಕ್ಷದ ಶಾಸಕರು ಸದನದ ಕಲಾಪ ನಡೆಯುವಾಗ ಈ ರೀತಿ ಹುಡುಗಿಯರ ನಗ್ನಚಿತ್ರ ನೋಡುವಷ್ಟು ಹೀನಾಯಮಟ್ಟ ತಲುಪಿಲ್ಲ.
ನಾನು ಹೀಗೆ ಕೇಳುತ್ತೇನೆಂದು ಗೊತ್ತಾಗಿಯೇ ಅವರು ಫೋನ್ ಮಾಡಲಿಲ್ಲ. ಬಿಜೆಪಿ ಮಾತ್ರವಲ್ಲ ಇಡೀ ಸಂಘಪರಿವಾರದಲ್ಲಿ ಈಗ ಘೋರ ಮೌನ ಕವಿದಿದೆ. ಹಿಂದೂತ್ವದ ಹೆಸರಿನಲ್ಲಿ ಕೋಮುಗಲಭೆಗಳನ್ನು ಸಮರ್ಥಿಸಿಕೊಳ್ಳಬಹುದು. ಪಬ್ ಮೇಲಿನ ದಾಳಿಯನ್ನು ಸರಿಯೆಂದು ವಾದಿಸಬಹುದು. ಚರ್ಚ್ ಮೇಲಿನ ಹಲ್ಲೆ ಮತಾಂತರದ ವಿರುದ್ಧ ಆಕ್ರೋಶ ಎನ್ನಬಹುದು. ಬಾಬ್ರಿ ಮಸೀದಿ ಧ್ವಂಸ ಚರಿತ್ರೆಯ ತಪ್ಪನ್ನು ಸರಿಪಡಿಸುವ ಯತ್ನವೆಂದು ಹೇಳಬಹುದು. ಆದರೆ ಬಿಜೆಪಿ ಸರಕಾರದ ಮೂವರು ಹಿರಿಯ ಸಚಿವರು ಸೆಕ್ಸ್ ಫಿಲಂ ನೋಡಿದ ಪ್ರಕರಣವನ್ನು ಹೇಗೆ ಸಮರ್ಥಿಸಿ ಕೊಳ್ಳಲು ಸಾಧ್ಯ ವಾಗುತ್ತದೆ. ಅಂತಲೇ ಈ ಮೌನ ಅನಿವಾರ್ಯವಾಗಿದೆ.
ಆದರೂ ಈಶ್ವರಪ್ಪ, ಯಡಿಯೂರಪ್ಪ ಈ ಹೆಣ್ಣುಬಾಕ ಮಂತ್ರಿಗಳ ಕೃತ್ಯವನ್ನು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿದ್ದೇ ಮಹತ್ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹೇಳಿದರೆ, ಜನ ತಮ್ಮನ್ನು ಸಂಶಯಿಸುತ್ತಾರೆ ಎಂಬ ಸಂಕೋಚವು ಈ ಹಿರಿಯ ನಾಯಕರಿಗಿಲ್ಲ.

ವ್ಯಕ್ತಿಯ ಚಾರಿತ್ರ್ಯ ನಿರ್ಮಾಣದಿಂದ ರಾಷ್ಟ್ರನಿರ್ಮಾಣವೆಂದು ಪ್ರತಿಪಾದಿಸುವ ಆರೆಸ್ಸೆಸ್ ಶಾಖೆಯಲ್ಲಿ ಬೆಳೆದವರು ಅಂತಹ ಸಂಸ್ಕಾರ ದೀಕ್ಷೆ ಪಡೆದ ಪವಿತ್ರಾತ್ಮರಿಂದ ತುಂಬಿರುವ ಬಿಜೆಪಿ ಅಧಿಕಾರಕ್ಕೆ ಬಂದಲೆಲ್ಲ ಇಂತಹ ಹಗರಣಗಳು ಸಾಮಾನ್ಯವಾಗಿವೆ. ಕರ್ನಾಟಕ ಮಾತ್ರವಲ್ಲ ಗುಜರಾತ್‌ನಲ್ಲೂ ಇಂತಹ ಪ್ರಕರಣಗಳು ನಡೆದಿವೆ. ಆ ರಾಜ್ಯದ ಬಿಜೆಪಿ ಸಂಸದ ಬಾಬುಭಾಯಿ ಕಟಾರಿಯಾ ತನ್ನ ಪತ್ನಿಯ ಪಾಸ್‌ಪೋರ್ಟ್ ಬಳಸಿ ಬೇರೊಬ್ಬ ಮಹಿಳೆಯನ್ನು ವಿದೇಶಕ್ಕೆ ಕರೆದೊಯ್ಯುವಾಗ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದರು. ಆಗ ಲೋಕಸಭಾ ಅಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ತಕ್ಷಣ ಕಟಾರಿಯಾ ಸದಸ್ಯತ್ವ ರದ್ದುಗೊಳಿಸಿದರು.

ಆದರೆ ಚಟರ್ಜಿ ಮಾದರಿಯನ್ನು ತಾವು ಅನುಸರಿಸುವುದಿಲ್ಲ ಎಂದು ಸ್ಪೀಕರ್‌ಗಿಂತ ಮುಂಚೆಯೇ ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಈ ನಿರ್ಲಜ್ಯ ಮಂತ್ರಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ಬೋಪಣ್ಣನವರು ಚಟರ್ಜಿಯಂತೆ ದಿಟ್ಟ ಹೆಜ್ಜೆಯಿಡುತ್ತಾರೆಂದು ನಿರೀಕ್ಷಿಸಲು ಆಗುವು ದಿಲ್ಲ. ಈ ಹಿಂದಿನ ರೇಣುಕಾಚಾರ್ಯ, ರಘುಪತಿ ಭಟ್, ಹಾಲಪ್ಪ ಪ್ರಕರಣದಲ್ಲೂ ಕೂಡ ಬಿಜೆಪಿ ನಾಯಕರು ಲಂಪಟರನ್ನು ರಕ್ಷಿಸುತ್ತಲೇ ಬಂದರು. ಈಗ ಸೆಲ್‌ಫೋನ್‌ನಲ್ಲಿ ಲೈಂಗಿಕಕ್ರಿಯೆ ದೃಶ್ಯಗಳನ್ನು ನೋಡಿದವರು ಮೂಲತಃ ಆರೆಸ್ಸೆಸ್ ಶಾಖೆಯಲ್ಲಿ ಬೆಳೆದವರಾ ಗಿರಲಿಕ್ಕಿಲ್ಲ. ಆದರೆ ಇವರ ಮೇಲೆ ಕೃಪಾ ಶೀರ್ವಾದ ಇದ್ದೇ ಇದೆ. ಹೊರಗಿನಿಂದ ಬಂದವರು ಹೀಗೆ ಮಾಡಿದರೆಂದು ಆರೆಸ್ಸೆಸ್‌ನವರು ಸಮರ್ಥಿಸಿ ಕೊಳ್ಳಬಹುದು. ಆದರೆ ಸಂಘದ ಪ್ರಚಾರಕರು ಕೂಡ ಚಡ್ಡಿಹರುಕತನದಲ್ಲಿ ಪ್ರಖ್ಯಾತಿ ಪಡೆದವರು. ಉತ್ತರಭಾರತದಲ್ಲಿ ಹಿರಿಯ ಪ್ರಚಾರಕರಾಗಿದ್ದ ಸಂಜಯ್ ಜೋಶಿ ಯುವತಿಯೊಂದಿಗೆ ಬೆತ್ತಲಾಗಿದ್ದ ಸಿ.ಡಿ ಬಯಲಾಗಿ ಈ ಹಿಂದೆ ಕೋಲಾಹಲವನ್ನೇ ಎಬ್ಬಿಸಿತ್ತು. ಕಣ್ಣಿಗೆ ಕಾಣಲು ಸಂಪನ್ನರಾಗಿದ್ದ, ಬ್ರಹ್ಮಚಾರಿಯೆಂದು ಪ್ರತೀತಿ ಪಡೆದಿದ್ದ ಸಂಜಯ್ ಜೋಶಿಯನ್ನು ನಾಗಪುರದ ಸಂಘದ ಹಿರಿಯ ನಾಯಕರು ಸಂಜಯ್ ಭಾಯಿ ಎಂದು ಕರೆಯುತ್ತಿದ್ದರು. ಅದ್ಭುತ ಸಂಘಟಕನಾಗಿದ್ದ ಈತ ದೇಶದಲ್ಲಿ ನೂರಾರು ಶಾಖೆಗಳನ್ನು ಸ್ಥಾಪಿಸಿದ ಚಾಣಾಕ್ಷ. ಅಂತಹವನ ಇನ್ನೊಂದು ಮುಖ ಬಯಲಿಗೆ ಬಂದಾಗ ಸಂಘದಿಂದ ಹೊರಹಾಕಲಿಲ್ಲ. ಬಿಜೆಪಿಯಲ್ಲಿ ಆತನಿಗೆ ಉನ್ನತ ಸ್ಥಾನವನ್ನು ನೀಡಲಾಯಿತು.
ಈಗ ಬ್ಲ್ಯೂಫಿಲಂ ನೋಡಿ ಸಿಕ್ಕಿಬಿದ್ದಿರುವ ಲಕ್ಷ್ಮಣ್ ಸವದಿ ನಮ್ಮ ಪಕ್ಕದ ಅಥಣಿ ತಾಲೂಕಿನವರು. ಹಿಂದೆ ವಾಜಪೇಯಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಧೀಂದ್ರ ಕುಲಕರ್ಣಿ ಕೂಡ ಅದೇ ತಾಲೂಕಿನವರು. ಜಾತಿ ಬಲ ಮತ್ತು ಪಾಳೆಗಾರಿಕೆ ದೌರ್ಜನ್ಯ ಬಿಟ್ಟರೆ, ಈ ಸವದಿಗೆ ಇನ್ನ್ಯಾವ ಹಿನ್ನೆಲೆಯೂ ಇಲ್ಲ. ಇನ್ನೊಬ್ಬ ಮಂತ್ರಿ ಸಿ.ಸಿ.ಪಾಟೀಲ್ ಎಂಬಾತ ಮೂಲತಃ ಸವದತ್ತಿಯವರು. ವ್ಯಾಪಾರ ಮಾಡಲು ನರ ಗುಂದಕ್ಕೆ ಬಂದು, ಅಲ್ಲಿಂದ ಶಾಸಕನಾಗಿ, ಮಂತ್ರಿಯಾಗಿ ಫೊಸ್ಕೋ ಹೋರಾಟದಲ್ಲಿ ರೈತರ ಜಮೀನನ್ನು ಬಂಡವಾಳಶಾಹಿ ಕಂಪೆನಿಯೊಂದಕ್ಕೆ ಧಾರೆಯೆರೆದು ಕೊಡಲು ನಿರಾಣಿಯೊಂದಿಗೆ ಕೈಜೋಡಿಸಿದವರು. ಇನ್ನು ಕಲ್ಲಡ್ಕ ಪ್ರಭಾಕರ ಭಟ್ ಶಿಷ್ಯ ಪಾಲೆಮಾರ್ ಇತಿಹಾಸ ಎಲ್ಲಿಗೂ ಗೊತ್ತಿದೆ.

ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ, ಪಾಲೇಮಾರ್ ಇವರೇನೂ ಯುವಕರಲ್ಲ. ಇವರೆಲ್ಲ ಐವತ್ತು ದಾಟಿದವರು. ಲಕ್ಷ್ಮಣ್ ಸವದಿಯ ಒಬ್ಬ ಮಗಳಿಗೆ ಮದುವೆಯಾಗಿ ಮೊಮ್ಮಗುವೂ ಜನಿಸಿದೆ. ಈ ವಯಸ್ಸಿನಲ್ಲಿ ಇಂತಹ ನೀಲಿ ಚಿತ್ರವನ್ನು ನೋಡುವ ತಮ್ಮ ಹೆಂಡತಿ-ಮಕ್ಕಳ ಬಳಿ, ಅಕ್ಕತಂಗಿಯರ ಬಳಿ ಹೋಗಿ ಹೇಗೆ ಮುಖ ತೋರಿಸುತ್ತಾರೆ? ಇಂತಹ ಬ್ಲ್ಯೂಫಿಲಂ ಗಳನ್ನು ಬೇರೆ ರಾಜಕಾರಣಿಗಳು ನೋಡಿಲ್ಲವೆಂದಲ್ಲ. ಆದರೆ ಸದನದಲ್ಲಿ ಕುಳಿತು ಇದನ್ನು ನೋಡಿ ಎಂಜಾಯ್ ಮಾಡುವವರು ಮಾನ - ಮರ್ಯಾದೆ ಬಿಟ್ಟವರೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ಬಾಬಾಬುಡನ್‌ಗಿರಿ ವಿವಾದ ಕೆರಳಿಸಿ, ಶಾಸಕನಾದ ಸಿ.ಟಿ.ರವಿ ಈ ಸಚಿವರನ್ನು ಸಮರ್ಥಿಸಿ ರಾಜಕಾರಣದಲ್ಲಿ ನಿಷ್ಕಳಂಕಿತ ವ್ಯಕ್ತಿ ಗಳು ಎಲ್ಲಿದ್ದಾರೆಂದು ಸವಾಲು ಹಾಕಿದ್ದಾರೆ. ಆದರೆ ಅವರು ಪಶ್ಚಿಮ ಬಂಗಾಳದತ್ತ ಹೊರಳಿ ನೋಡಲಿ. ಬಂಗಾಳದಲ್ಲಿ ಕಮ್ಯುನಿಸ್ಟರು ಮೂವತ್ತು ವರ್ಷ ಅಧಿಕಾರದಲ್ಲಿದ್ದರೂ ಅವರ ಮೇಲೆ ಅನಾಚಾರ, ಭ್ರಷ್ಟಾಚಾರದ ಒಂದೇ ಒಂದು ಆರೋಪವೂ ಬಂದಿಲ್ಲ. ವ್ಯಕ್ತಿಚಾರಿತ್ರ್ಯದ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಇಂತಹ ಆಡಳಿತ ನೀಡಲು ಯಾಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಲಿ.
ಇಂತಹ ಘಟನೆ ನಡೆದಾಗ, ಈ ಮಂತ್ರಿಗಳ ವಿಧಾನಸಭಾ ಸದಸ್ಯತ್ವ ರದ್ದುಪಡಿಸಬೇಕು ಎಂದು ಆರೆಸ್ಸೆಸ್ ನಾಯಕರು ಮುಖ್ಯ ಮಂತ್ರಿಯ ಕಿವಿ ಹಿಂಡಿದ್ದರೆ, ಈ ಸಂಘದ ಬಗ್ಗೆ ಗೌರವ ಮೂಡುತಿತ್ತು. ವಿಧಾನಸಭಾಧ್ಯಕ್ಷ ರಾದರೂ ಈ ಮಂತ್ರಿಗಳನ್ನು ವಿಧಾನ ಸೌಧದ ಪೊಲೀಸ್ ಠಾಣೆಗೆ ಒಪ್ಪಿಸಿ, ಸದಸ್ಯತ್ವ ಅಮಾನತಿನಲ್ಲಿಡಲು ಕ್ರಮ ಕೈಗೊಳ್ಳಬೇಕಿತ್ತು. ರಸ್ತೆ ಬದಿಯಲ್ಲಿ ಅಶ್ಲೀಲ ಸಾಹಿತ್ಯ, ಸಿ.ಡಿಯನ್ನು ಮಾರಾಟ ಮಾಡುವರನ್ನು ಪೊಲೀಸರು ಬಂಧಿಸು ತ್ತಾರೆ. ಆದರೆ ಪವಿತ್ರವಾದ ವಿಧಾನಸಭೆಯಲ್ಲಿ ಅದನ್ನು ನೋಡಿದವರು ರಾಜಾ ರೋಷ ವಾಗಿ ತಿರುಗಾಡುತ್ತಾರೆ. ಕಾನೂ ನು ಎಂಬುದು ಎಲ್ಲರಿಗೂ ಒಂದೇ ರೀತಿ ಅನ್ವಯಿಸ ಬೇಕಲ್ಲವೇ?
 ಸವದಿಯಂತಹ ಅನೇಕರು ಬಿಜೆಪಿಯಲ್ಲಿದ್ದಾರೆ. ಜಮಖಂಡಿ ತಾಲೂಕಿನಲ್ಲಿ ಕಳೆದ ವರ್ಷ ಒಂದು ಘಟನೆ ನಡೆಯಿತು. ಸ್ಥಳೀಯ ಬಿಜೆಪಿ ನಾಯಕನೊಬ್ಬ ಊರಿನ ಮಧ್ಯಮವರ್ಗದ ಹೆಣ್ಣು ಮಕ್ಕಳಿಗೆ ಆಮಿಷವೊಡ್ಡಿ ಅವ ರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ಕ್ಯಾಮರಾ ಮೂಲಕ ಚಿತ್ರೀಕರಿಸಿಕೊಂಡು ಸಿ.ಡಿ ಮೂಲಕ ಮಾರಾಟ ಮಾಡುತ್ತಿದ್ದ. ಮುಂದೆ ಆ ಸಿ.ಡಿ ಬಯಲಾಗಿ ಯೂಟ್ಯೂಬ್ ಮೂಲಕ ಸ್ಥಳೀಯ ಚಾನೆಲ್‌ಗಳಿಗೆ ಹರಿದಾಡಿತು. ಆದರೂ ಸ್ಥಳೀಯ ಬಿಜೆಪಿ ಶಾಸಕ ಈತನಿಗೆ ರಕ್ಷಣೆ ನೀಡುತ್ತಿದ್ದರು. ಕೊನೆಗೆ ಕೈಮೀರಿದಾಗ ಆ ಲಂಪಟನನ್ನು ಪೊಲೀಸರು ಬಂಧಿಸಿದರು.
ಇಂತಹ ನೂರಾರು ಫಟಿಂಗರು ಬಿಜೆಪಿ ಯಲ್ಲಿದ್ದರೂ ಸಂಘಪರಿವಾರ ಕ್ರಮ ಕೈ ಗೊಳ್ಳುವುದಿಲ್ಲ. ಯಾಕೆಂದರೆ, ನೈತಿಕ ಮೌಲ್ಯಗಿಂತ ಪರಿವಾರಕ್ಕೆ ಗುರು ದಕ್ಷಿಣೆ ಮುಖ್ಯ. ಹೇಗೆ ಎಷ್ಟೇ ಅನಾಚಾರ ಮಾಡಲಿ, ಸಂಘಕ್ಕೆ ಗುರು ದಕ್ಷಿಣೆ ಸಲ್ಲಿಸಿ, ಹಿಂದೂ ಸಂಗಮದಲ್ಲಿ ಗಣವೇಷ ಧರಿಸಿ ಕವಾಯತು ಮಾಡಿದರೆ ಸಾಕು, ಆತನ ಪಾಪಗಳೆಲ್ಲ ತೊಳೆದು ಪರಿಶುದ್ಧ ಆತ್ಮನಾಗಿ ಹೊರಬರುತ್ತಾನಂತೆ. ಇಂತಹವರು ಕಟ್ಟಲು ಹೊರಟಿರುವ ಹಿಂದೂರಾಷ್ಟ್ರ ದಲ್ಲಿ ನಮ್ಮ ಸೋದರಿ ಯರು ಹೇಗೆ ಸುರಕ್ಷಿತವಾಗಿ ಇರುತ್ತಾರೆಂದು ಆತಂಕ ಉಂಟಾಗುತ್ತದೆ. ಅಂತಲೇ ಈ ಅಪಾಯಕಾರಿ ಹಿಂದೂರಾಷ್ಟ್ರ ಹುನ್ನಾರವನ್ನು ವಿರೋಧಿಸಲು ಪ್ರತಿಯೊಬ್ಬ ಭಾರತೀಯನು ಸಂಕಲ್ಪ ತೊಡಬೇಕಿದೆ.
-ಸನತ್‌ ಕುಮಾರ ಬೆಳಗಲಿ

Advertisement

0 comments:

Post a Comment

 
Top