PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ವ್ಯಾಪಾರ, ಉದ್ದಿಮೆ ನಡೆಸಲು ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆದು ನಡೆಸಬೇಕು.  ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಅವರು ತಿಳಿಸಿದ್ದಾರೆ.
  ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವ್ಯಾಪಾರ, ಉದ್ದಿಮೆ ನಡೆಸಬೇಕಾದಲ್ಲಿ ನಗರಸಭೆಯಿಂದ ಉದ್ದಿಮೆ ಪರವಾನಿಗೆ ಪಡೆದು ನಡೆಸಬೇಕಿದೆ.  ಅಲ್ಲದೆ ಪ್ರತಿ ವರ್ಷ ಪರವಾನಿಗೆಯನ್ನು ನವೀಕರಿಸುವುದು ಕಡ್ಡಾಯವಾಗಿದೆ.  ಆದರೆ ನಗರಸಭೆಯ ಆರೋಗ್ಯ ಶಾಖೆಯ ಸಮೀಕ್ಷಾ ವರದಿ ಅನ್ವಯ ಬಹಳಷ್ಟು ವ್ಯಾಪಾರಿಗಳು, ಉದ್ದಿಮೆದಾರರು ವ್ಯಾಪಾರ ಪರವಾನಿಗೆ/ನವೀಕರಣ ಇಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದ್ದು, ಇದು ಕರ್ನಾಟಕ ಪುರಸಭೆ ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ.  ಈಗಾಗಲೆ ಅಂತಹವರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಆದಾಗ್ಯೂ ಅಂತಹವರು ವ್ಯಾಪಾರ ವಹಿವಾಟನ್ನು ಮುಂದುವರೆಸಿದಲ್ಲಿ, ನಗರಸಭೆಯು ತೆಗೆದುಕೊಳ್ಳುವ ಕಠಿಣ ಕ್ರಮಗಳಿಗೆ ಆಯಾ ವ್ಯಾಪಾರಸ್ಥರೇ ಜವಾಬ್ದಾರರಾಗುತ್ತಾರೆ.  ವ್ಯಾಪಾರ ಪರವಾನಿಗೆ ಪಡೆಯಲು ವ್ಯಾಪಾರಸ್ಥರು/ ಉದ್ದಿಮೆದಾರರು ಅರ್ಜಿಯೊಂದಿಗೆ ೨೦೧೧-೧೨ನೇ ಸಾಲಿನ ಆಸ್ತಿಕರ ಪಾವತಿಸಿದ ಪ್ರತಿ, ನಮೂನೆ-೩, ೨೦ ರೂ. ಬಾಂಡ್‌ಪೇಪರ್‌ನಲ್ಲಿ ಮಾಡಿಕೊಂಡಿರುವ ಕರಾರು ಪತ್ರ,ಮಾಲಕರ ಒಪ್ಪಿಗೆ ಪತ್ರ, ವಿದ್ಯುತ್ ಸಂಪರ್ಕ ಪಡೆದ ಆರ್.ಆರ್. ನಂ./ ನೀಲಿನಕಾಶೆ ಪ್ರತಿ ಸಲ್ಲಿಸಬೇಕು.  ಆದ್ದರಿಂದ ನಗರಸಭೆ ವ್ಯಾಪ್ತಿಯೊಳಗಿರುವ ಎಲ್ಲ ವ್ಯಾಪಾರಸ್ಥರು/ ಉದ್ದಿಮೆದಾರರು ಫೆ. ೨೧ ರ ಒಳಗಾಗಿ ಕಡ್ಡಾಯವಾಗಿ ಪರವಾನಿಗೆ / ನವೀಕರಣ ಪಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.  ಪರವಾನಿಗೆ ಪಡೆದ ಅಥವಾ ನವೀಕರಣ ಪಡೆದ ಎಲ್ಲಾ ವ್ಯಾಪಾರಸ್ಥರು/ಉದ್ದಿಮೆದಾರರು ೪೦ ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸ್ಥಗಿತಗೊಳಿಸಬೇಕು, ಈ ನಿಯಮ ಉಲ್ಲಂಘಿಸಿದವರಿಗೆ ಸಗಟು ವ್ಯಾಪಾರಿಗಳಿಗೆ ರೂ. ೫೦೦೦, ಕಿರಾಣಿ ಅಂಗಡಿ ಮತ್ತು ಇತರೆಯವರಿಗೆ ರೂ. ೫೦೦ ರಂತೆ ದಂಡ ವಿಧಿಸಲಾಗುವುದು.  ಅಂಗಡಿಯ ಕಸವನ್ನು ರಸ್ತೆಗೆ ಸುರಿಯದೆ ಒಂದು ಡಬ್ಬಿಯಲ್ಲಿ ಹಾಕಿರಿಸಬೇಕು.  ಒಂದು ವೇಳೆ ಯಾವುದೇ ಅಂಗಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಚೀಲ ಬಳಕೆ ಕಂಡುಬಂದಲ್ಲಿ ಅಂತಹವರ ಪರವಾನಿಗೆ ರದ್ದುಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ   ತಿಳಿಸಿದ್ದಾರೆ.

Advertisement

0 comments:

Post a Comment

 
Top