"ನಾನು ಕಿಂಗ್ ಅಲ್ಲ, ಕಿಂಗ್ ಮೇಕರ್" ಎನ್ನುವ ಡೈಲಾಗ್ ಡಿಕೆ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುತ್ತೆ. ಡಿಕೆ ಅಲಿಯಾಸ್ ಪ್ರೇಮ್ ಇದನ್ನ ಹೇಳುತ್ತಾರೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕ ಕೂಡಾ, "ನಮ್ಮಣ್ಣ ಪ್ರೇಮ್ ಹೇಳಿದ್ದು ದಿಟ ಕಣ್ಲಾ, ನಮ್ಮ ಪ್ರೇಮು ನಿಜಕ್ಕೂ ಹೀರೋ ಆಗಾಕ್ ಲಾಯಕ್ಕಿಲ್ಲ, ಹೀರೋಗಳ್ನ ಹುಟ್ಟು ಹಾಕೋಕೆ ಫಿಕ್ಸು" ಎಂದು ಹೊಗಳಿದರೆ ಪ್ರೇಮ್‌ಗೆ ಖುಷಿಯಾಗುತ್ತೋ, ಬೇಜಾರಾಗುತ್ತೋ ಗೊತ್ತಿಲ್ಲ.
ಡಿಕೆ ಸಿನಿಮಾ ನೋಡಿದ ನಂತರ ಇಂಥ ಅಭಿಪ್ರಾಯ ಖಂಡಿತ ಮೂಡುತ್ತದೆ. ಪ್ರೇಮ್ ಡೈರೆಕ್ಟರ್ ಆಗಿದ್ದಾಗ ಎಂಥೆಂಥ ಒಳ್ಳೊಳ್ಳೆ ಸಿನಿಮಾ ಕೊಟ್ಟ. ಹೋಗಿ ಹೋಗಿ ಉಪೇಂದ್ರನ ಥರ ಸೂಪರ್ ಸ್ಟಾರ್ ಆಗೋಕೆ ಹೋಗಿ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಕಲ್ಲು ಹಾಕ್ಕೋಳ್ತಾ ಅವ್ನೆ ಎಂದು ಮಂಡ್ಯದ ಬೋರಪ್ಪನೂ ಹೇಳ್ತಾವ್ನೆ.
ಸಿನಿಮಾದಲ್ಲಿ ಹೇಳಿಕೊಳ್ಳುವಂಥದ್ದೂ ಏನೂ ಇಲ್ಲ. ಪ್ರೇಮ್ ಒಸಿ ಡಿಫರೆಂಟ್ ಆಗಿ ಕಂಡವ್ನೆಯಾ ಹೊರ‍್ತು, ಕಥೆ ಪೂರ್ತಿ ಜೊಳ್ಳು ಕಳಾ. ಇತ್ಲಾಗೆ ಕಾಮಿಡಿನೂ ಆಗದೇ, ಅತ್ಲಾಗೆ ರಿವೇಂಜ್ ಸ್ಟೋರಿನೂ ಆಗದೇ ನಗೆಪಾಟ್ಲಗದೆ ಸ್ಟೋರಿ. ವಿಜಯ್ ಹಂಪಾಳಿ ಹೆಸರಿಗಷ್ಟೇ ನಿರ್ದೇಶಕ. ಸಿನಿಮಾ ಪ್ರತಿ ಫ್ರೇಮ್‌ನಲ್ಲೂ ಪ್ರೇಮ್ ತುಂಬಿಕೊಂಡಿರೋದ್ನ ನೋಡಿದ್ರೆ, ಸಿನಿಮಾ ಫೇಲ್ ಆಗುತ್ತೆ ಅಂತ ನಮ್ಮ ಡೌ ರಾಜಾ, ಗಿಮಿಕ್ ರಾಜಾ ಪ್ರೇಮ್‌ಗೆ ಅನ್ಸಿರ‍್ಬೇಕು ಅಂತೀನಿ.
ಸಿನಿಮಾದ ಹೆಸರು ಕೇಳಿದಾಕ್ಷಣ ನಮ್ಮ ಇಂದಿನ ಇಂಧನ ಸಚಿವರು ಡಿ.ಕೆ.ಶಿವಕುಮಾರ್‌ಗೂ ಈ ಸಿನಿಮಾಗೂ ಲಿಂಕ್ ಅದೆ ಅನ್ಕೋಂಡು ಥೇಟರ್‌ಗೆ ಕಾಲಿಟ್ಟರೆ ಎಲ್ಲ ಚಮಕ್ಕೂ ಅಂತಾ ಗೊತ್ತಾಯ್ತದೆ. ಹಾಗಂತ ಹಿಂದಿಯ ಪಿ.ಕೆ.ಗೆ ಪರ್ಯಾಯಾನಾ? ಅನ್ನೋ ಪ್ರಶ್ನೆ ತಲೇಲಿ ಗಿರ್‌ಗಿಟ್ಟಲೇ ಆಡ್ತಿದ್ರೆ ತಗತಾಕೂ ಅತ್ಲಾಗೆ. ಕನ್ನಡದ ಡಿ.ಕೆ.ಗೂ ಹಿಂದಿಯ ಪಿ.ಕೆ.ಗೂ ಏನೂ ಸಂಬಂಧಾನೇ ಇಲ್ಲ ಅಂತೀನಿ.
ರಾಕಿಂಗ್ ಸ್ಟಾರ್ ಥರಾ ಹೀರೋಯಿಸಂ ತೋರ‍್ಸೋಕೆ ಹೋಗಿರೋ ಪ್ರೇಮ್ ಸಿನಿಮಾ ಒಂದೇ ವಾರದಲ್ಲಿ ಎತ್ತಂಗಡಿಯಾದರೂ ಅಚ್ಚರಿ ಇಲ್ಲ. ಪ್ರೇಮ್ ಸುಮ್ಮೆ ಮಾತಾಡಿ ಬಿಲ್ಡಪ್ ಕೊಡ್ತಾನೆ, ಆತ ಹೀರೋ ಆಗಿರೋ ಸಿನಿಮಾದಲ್ಲಿ ಏನೂ ಇರಲ್ಲ ಎನ್ನುವ ಮಾತಿಗೆ ಡಿ.ಕೆ. ನಿಜಕ್ಕೂ ಪುಷ್ಟಿ ಕೊಟ್ಟಿದ್ದಾನೆ.
ಜ್ಯೋತಿಷಿಯೊಬ್ಬನ ಮಾತು ಕೇಳಿ ಆಂಧ್ರದ ಡಾನ್ ಒಬ್ಬ, ತನಗೆ ಗಂಡು ಮಕ್ಕಳು ಹುಟ್ಟಿದರೂ ಅವರನ್ನ ಕೂಲಿಯಾಳಿಗಿಂತ ಕಡೇಯಾಗಿ ಕಂಡು ಹೆಣ್ಣುಮಗು ಹುಟ್ಟಿದ ಮೇಲೆ ರಾಜಕೀಯ ಸ್ಥಾನ-ಮಾನ ಗಳಿಸುತ್ತಾನೆ. ಮಗಳೇ ತನ್ನ ಜೀವನದ ಅದೃಷ್ಟಲಕ್ಷ್ಮಿ ಎಂದು ಭಾವಿಸುವ ಡಾನ್ ಚಿತ್ರದ ಕೊನೇವರೆಗೂ ಹೆಂಡತಿಯನ್ನು ಸಿನಿಮಾದಲ್ಲಿ ಬರಲು ಬಿಡುವುದೇ ಇಲ್ಲ. ಅದಕ್ಕೆ ಕಾರಣ ಹೆಂಡತಿಯ ಬಣ್ಣ ಕಪ್ಪು. ಸಿನಿಮಾದಲ್ಲಿ ಮಗಳೇ ಹೇಳುವ ಈ ಒಂದೇ ಡೈಲಾಗ್‌ನಲ್ಲೇ ಒಬ್ಬ ಪೋಷಕ ನಟಿಯ ಖರ್ಚನ್ನು ಉಳಿಸಿಕೊಳ್ಳಲಾಗಿದೆ.
ಜ್ಯೋತಿಷಿ ಡಾನ್‌ನ ಕಾಟ ತಪ್ಪಿಸಿಕೊಳ್ಳಲು ಹೆಣ್ಣುಮಗು ಹುಟ್ಟಿದರೆ ರಾಜಕೀಯ ಭವಿಷ್ಯ ಉಜ್ವಲ ಎಂದು ಹೇಳಿರುತ್ತಾನೆ. ಅದನ್ನೇ ನಂಬಿಕೊಳ್ಳುವ ಡಾನ್ ಹೆಣ್ಣು ಮಗು ಹುಟ್ಟುವ ತನಕ ನಿರಂತರ ಪ್ರಯತ್ನ ನಡೆಸಿ, ಬಳಿಕ ರಾಜಕೀಯಕ್ಕೆ ಕಾಲಿಡುತ್ತಾನೆ. ಕಾಕತಾಳೀಯ ಎನ್ನುವಂತೆ ಡಾನ್ ರಾಜಕೀಯದಲ್ಲಿ ಬೆಳೆಯುತ್ತಾನೆ.
ಇಲ್ಲಿಂದ ಶುರುವಾಗುವ ಕಥೆ, ಪರೀಕ್ಷೆಯಲ್ಲಿ ಪಾಸ್ ಮಾಡದಿದ್ದರೆ ನಿನ್ನ ತಲೆ ನನ್ನ ಕೈಯಲ್ಲಿ ಎನ್ನುವ ಆರ್ಥದ ಚಿತ್ರ ಬರೆಯುವ ನಾಯಕನಿಂದ ಮುಂದುವರೆದು, ಡಾನ್‌ನ ಅದೃಷ್ಟಲಕ್ಷ್ಮಿ ಮಗಳಿಗೂ, ಊರಿಗೆ ಪೋರ್ಕಿಯಂತೆ ಕಾಣುವ ಡಿಕೆಗೆ ಲವ್ ಅಗುವವರೆಗೆ ಮುಂದುವರೆದು, ಮದುವೆಯಾಗುವಲ್ಲಿಗೆ ವಿರಾಮ.
ಆಷ್ಟರಲ್ಲಿಯೇ ಡಿಕೆಗೆ ಒಬ್ಬ ಚೋರ್ ಗುರು ಪ್ರಾಪ್ತ. ಅವನೋ ಪಬ್ಲಿಸಿಟಿ ಕುಮಾರ ಹೇಗಾದರೂ ಸರಿ ಎಂಪಿ ಆಗುವ ಕನಸು ಅವನದು. ತನ್ನ ಮಾವ ಹಾಗೂ ತನ್ನ ಗುರುವಿನ ನಡುವಿನ ರಾಜಕೀಯ ಸಮರದಲ್ಲಿ ಹಾವು-ಏಣಿ ಆಟ ಆಡಿ ತಾನೇ ಎಂ.ಪಿ ಆಗಬೇಕು ಎನ್ನುವ ಸ್ಕೇಚ್ಚು ಡಿಕೆದೂ. ಕೊನೆಗೆ ಎಂಪಿ ಯಾರಾಗ್ತಾರೆ ಎನ್ನುವ ಕುತೂಹಲ ಕಾಡುತ್ತಿದ್ದರೆ ಮಾತ್ರ ಡಿಕೆನನ್ನ ಒಮ್ಮೆ ನೋಡಿ. ನಂತರ ಮರೆಯುವುದೋ? ನೆನಪಿಲ್ಲಿ ಇಟ್ಟುಕೊಳ್ಳುವುದೋ? ನಿಮಗೆ ಬಿಟ್ಟದ್ದು.
ಹೀರೋ ಆಗಿ ಪ್ರೇಮ್‌ನನ್ನು ಒಪ್ಪಿಕೊಳ್ಳುವುದು ಕಷ್ಟ. ಆದರೆ ಬಜಾರಿ ಪಾತ್ರ ಮಾಡಿರೋ ನಾಯಕಿ ಚೈತ್ರಾಳನ್ನ ಕಣ್ಮುಚ್ಚಿ ಒಪ್ಪಿಕೊಳ್ಳಬಹುದು. ಶರತ್ ಲೋಹಿತಾಶ್ವ, ಶೋಭರಾಜ್, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಋಷಿಕುಮಾರಸ್ವಾಮಿ ಕೊಂಚ ಓವರ್ ಎನಿಸುತ್ತಾರೆ. ಅರ್ಜುನ್ ಜನ್ಯ ಮ್ಯೂಸಿಕ್‌ನಲ್ಲಿ ಎರಡೂ ಹಾಡುಗಳಿಗೆ ಸ್ಟೆಪ್ ಹಾಕಬೇಕು ಅನಿಸುತ್ತದೆ. ಚಿತ್ರದ ನಿಜವಾದ ಹೀರೋ ಎಂದರೆ ಛಾಯಾಗ್ರಹಣ ಮತ್ತು ಸಿನಿಮಾದ ಅಲ್ಲಲ್ಲಿ ಬರುವ ಪಂಚಿಂಗ್ ಡೈಲಾಗ್‌ಗಳು.
ಸಿನಿಮಾದಲ್ಲಿ ಮಗನನ್ನೂ ತೋರಿಸಿ ಬೀಗುತ್ತಿರುವ ಪ್ರೇಮ್ ಅವರನ್ನ, ಮುಂದೆ ಹೀರೋ ಆಗಿ ಕಾಣಿಸಿಕೊಳ್ಳಲಿರುವ ೭ ಸಿನಿಮಾಗಳನ್ನ ಹೇಗೆ ಸಹಿಸಬೇಕೋ ಎನ್ನುವುದನ್ನು ಬಂಬಂ ಬೋಲೇನಾಥ್‌ನೇ ಪರಿಸಹರಿಸಬೇಕು.
0 comments:
Post a Comment
Click to see the code!
To insert emoticon you must added at least one space before the code.