ಕೊಪ್ಪಳ : ಕೊಪ್ಪಳ ನಾಡಿಗೆ ಭವ್ಯವಾದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಇತಿಹಾಸವಿದೆ. ನಮ್ಮ ಹಿರಿಯ ಕವಿಗಳಾದ ಕಾವ್ಯಾನಂದರು, ಕಲ್ಲಿನಾಥಶಾಸ್ತ್ರಿಗಳು, ಅವಧೂತರು ಅದ್ಭುತವಾದ ಸಾಹಿತ್ಯವನ್ನು ನಾಡಿಗೆ ನೀಡಿದ್ದಾರೆ. ಇತ್ತೀಚಿಗೆ ಬರೆಯುತ್ತಿರುವ ಕವಿಗಳು, ಬರಹಗಾರರಿಗೆ ಕಾವ್ಯ ಪರಂಪರೆಯ ಅರಿವು ಬೇಕು ಮತ್ತು ಆ ಭವ್ಯ ಪರಂಪರೆಯ ವಾರಸುದಾರರಾರು ನಾವು ಎನ್ನುವ ಜವಾಬ್ದಾರಿಯಿಂದ ಬರೆಯಬೇಕು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಕವಿಗಳ, ಬರಹಗಾರರ ಸಂಖ್ಯೆ ಬಹಳ ಇದೆ. ಎಲ್ಲರಿಗೂ ಒಂದೇ ಸಲಕ್ಕೆ ಅವಕಾಶ ನೀಡಲಾಗಲ್ಲ ಹಂತ ಹಂತವಾಗಿ ತಮ್ಮ ಗಟ್ಟಿ ಬರವಣಿಗೆಯ ಮೂಲಕ ಗುರುತಿಸಿಕೊಳ್ಳುವವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ನಿರಂತರ ಅಧ್ಯಯನ ಮತ್ತು ಬರವಣಿಗೆಯ ಮೂಲಕ ನಮ್ಮ ಕಾವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು. ಕಾವ್ಯ ಪರಂಪರೆಯ ವಿವಿಧ ಘಟ್ಟಗಳ ಕುರಿತು ವಿದ್ಯಾರ್ಥಿಗಳ ಮನಮುಟ್ಟುವಂತೆ ಮಾತನಾಡಿದರು.
ಕಾರ‍್ಯಕ್ರಮಕ್ಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಸಿ.ಕೊಟ್ರಪ್ಪ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಕಾರ‍್ಯಕ್ರಮಗಳ ಕುರಿತು ವಿವರಣೆ ನೀಡಿದರು. ಸಾಹಿತಿಗಳನ್ನೊಳಗೊಳ್ಳುವ ಕಾರ‍್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಂವಾದ ಕಾರ‍್ಯಕ್ರಮವನ್ನೂ ಸಹ ಯೋಜಿಸಲಾಗಿದೆ ಎಂದರು. ಇನ್ನೊರ್ವ ಅತಿಥಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳಿಂದ ಮಾನಸಿಕ ದೃಡತೆ ಹೆಚ್ಚುತ್ತದೆ. ಸೃಜನಶೀಲ ಚಟುವಟಿಕೆಗಳು ಅವರ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ವಿದ್ಯಾರ್ಥಿಗಳು ಈ ರೀತಿಯ ಕಾರ‍್ಯಕ್ರಮಗಳಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಕವಿಗೋಷ್ಠಿಯಲ್ಲಿ ಶ್ರೀಮತಿ ಅನಸೂಯಾ ಜಾಗೀರದಾರ, ಮಹೇಶ ಬಳ್ಳಾರಿ,ಸಿರಾಜ್ ಬಿಸರಳ್ಳಿ, ಅಕ್ಬರ್ ಕಾಲಿಮಿರ್ಚಿ, ಶ್ರೀಮತಿ ಅನ್ನಪೂರ್ಣ ಮನ್ನಾಪೂರ, ಪರಶುರಾಮಪ್ರಿಯ, ಮಲಕೇಶ ಕೋಟೆ, ರಮೇಶ ಗಬ್ಬೂರ, ಶರಣಪ್ಪ ಮೆಟ್ರಿ, ಶರಣಪ್ಪ ನಿಡಶೇಸಿ, ಶ್ರೀಮತಿ ಸುಶೀಲಾ ತಾಳಿಕೋಟಿ, ದೇವರಾಜ ಬಡಿಗೇರ್, ಪುಷ್ಪಾವತಿ, ನಟರಾಜ್ ಸವಡಿ, ಶರಣಗೌಡ ಯರದೊಡ್ಡಿ, ಎಂ.ಡಿಹುಸೇನ್, ವಿದ್ಯಾರ್ಥಿನಿಯರಾದ ಪವಿತ್ರ,ಲಕ್ಷ್ಮೀ, ಅನಿತಾ ಕಾವ್ಯ ವಾಚನ ಮಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಈರಪ್ಪ ಕಂಬಳಿ,ಕಾಲೇಜಿನ ಹಿರಿಯ ವಾಣಿಜ್ಯ ಶಾಸ್ತ್ರ ಉಪನ್ಯಾಸಕಾರದ ತಿಮ್ಮಾರಡ್ಡಿಯವರು ಮಾತನಾಡಿದರು. . ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ವಾಚಿಸಿದ ಕವನಗಳ ಕುರಿತು ಮಾತನಾಡಿ ನಿರಂತರ ಅಧ್ಯಯನದಿಂದ ಉತ್ತಮ ಕಾವ್ಯ ರಚನೆ ಸಾಧ್ಯ. ವಾಚಿಸಿದ ಕವಿತೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಾನಂದ ಹೊದ್ಲೂರ, ಕೆ.ಸತ್ಯನಾರಾಯಣ ರಾವ್, ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕನ್ನಡ & ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು . ವಂದನಾರ್ಪಣೆಯನ್ನು ಸಿ.ಕೊಟ್ರಪ್ಪ ನೆರವೇರಿಸಿದರು. ಕಾರ‍್ಯಕ್ರಮದ ನಿರೂಪಣೆಯನ್ನು ಸಿ.ವಿ.ಜಡಿಯವರ ಮಾಡಿದರು.
0 comments:
Post a Comment
Click to see the code!
To insert emoticon you must added at least one space before the code.