PLEASE LOGIN TO KANNADANET.COM FOR REGULAR NEWS-UPDATES


ಕುಷ್ಟಗಿ: ಪಟ್ಟಣದ 12ನೇ ವಾರ್ಡ್‌ನಲ್ಲಿರುವ ಪ್ರಮುಖ ರಸ್ತೆಯ ಕಾಂಕ್ರೀಟ್ ಸೇತುವೆ ಕುಸಿದು ಹಾಳಾಗಿದ್ದು ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದಿದೆ.

ವರ್ಷದ ಹಿಂದಷ್ಟೇ ನಿರ್ಮಿಸಿರುವ ಈ ಕಾಂಕ್ರೀಟ್ ಸೇತುವೆ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರು ಕಳಪೆ ಕೆಲಸ ನಡೆಸಿದ್ದರಿಂದ ಅದು ಕುಸಿದು ಬಿದ್ದಿದೆ. ತಿಂಗಳ ಹಿಂದೆ ರಸ್ತೆ ಮಧ್ಯೆ ಗುಂಡಿ ಬಿದ್ದರೂ ಪುರಸಭೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ದೂರಿದರು. 

ಹಳೆ ಬಜಾರದ ಮೂಲಕ ತಹಶೀಲ ಕಚೇರಿ, ಶಾಲಾ ಕಾಲೇಜುಗಳು, ಹನಮಸಾಗರ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮೂಲಕ ನಿತ್ಯ ಸಾಕಷ್ಟು ಜನ ಸಂಚರಿಸುತ್ತಾರೆ. ರಸ್ತೆ ಅಕ್ಕಪಕ್ಕದಲೇ ಮನೆಗಳಿದ್ದು ಮಕ್ಕಳು ಅಲ್ಲಿಯೇ ಆಟವಾಡಿಕೊಂಡಿರುತ್ತವೆ. ಸೇತುವೆ ಕುಸಿದು ಕಬ್ಬಿಣ ರಾಡ್‌ಗಳು ಮೇಲೆ ಬಂದಿವೆ. ರಾತ್ರಿವೇಳೆ ಇದು ಗೊತ್ತಾಗದೇ ಅನೇಕ ಜನರು ತೊಂದರೆ ಅನುಭವಿಸಿದ್ದರೆ ವಾಹನಗಳು ಮುಗ್ಗರಿಸ ಬಿದ್ದಿವೆ ಎಂದು ಅಲ್ಲಿಯ ಜನ ಅಳಲು ತೋಡಿಕೊಂಡರು.

ಅಲ್ಲದೇ ಪುರಸಭೆ ಸದಸ್ಯರಿಗೆ ಇದರ ಬಗ್ಗೆ ಗಮನವಿಲ್ಲ, ಪ್ರಭಾರ ಅಧಿಕಾರ ವಹಿಸಿಕೊಂಡಿರುವ ತಹಶೀಲ್ದಾರರು ಈ ಮಾರ್ಗದಲ್ಲಿ ಸಂಚರಿಸುವುದಿಲ್ಲ. ಪುರಸಭೆ ಸಿಬ್ಬಂದಿ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತಿಲ್ಲ ಎಂದು ಹೇಳಿದರು.

ಈ ಕುರಿತು ವಿವರಿಸಿದ ಸದರಿ ವಾರ್ಡಿನ ಸದಸ್ಯ ಅಮೀನುದ್ದೀನ ಮುಲ್ಲಾ, ಕುಸಿದುಬಿದ್ದಿರುವ ರಸ್ತೆಸೇತುವೆಯನ್ನು ದುರಸ್ತಿಗೊಳಿಸಲು ಎಂಜಿನಿಯರ್‌ರಿಗೆ ಸೂಚಿಸುವಂತೆ ತಹಶೀಲ್ದಾರರಿಗೆ ಪತ್ರ ಬರೆದಿದ್ದು ನಾಳೆಯೇ ಕೆಲಸ ಆರಂಭಗೊಳ್ಳಲಿದೆ ಎಂದರು.

ಒತ್ತಾಯ: ಸಾಕಷ್ಟು ಹಣ ಪಡೆದುಕೊಂಡರೂ ಕಳಪೆ ಕೆಲಸ ನಿರ್ವಹಿಸಿದ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸುವಂತೆ ಜನರು ಒತ್ತಾಯಿಸಿದ್ದಾರೆ.

Advertisement

0 comments:

Post a Comment

 
Top