PLEASE LOGIN TO KANNADANET.COM FOR REGULAR NEWS-UPDATES


ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಹಾಗೂ ಆಹಾರದಿಂದ ವಿವಿಧ ರೋಗಗಳು ಬರುವ ಸಂಭವವಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂಚ್ರನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ನಡೆಯುವ ಜಾತ್ರೆ, ಉರುಸು, ಊರ ಹಬ್ಬ ಆಚರಣೆಗಳಲ್ಲಿ ಕಲುಷಿತ ನೀರು ಆಹಾರ ಸೇವನೆಯಿಂದ ಕರುಳು ಬೇನೆ( ವಾಂತಿ ಭೇದಿ), ಕಾಲರಾ, ವಿಷಮಶೀತಜ್ವರ, ಕಾಮಾಲೆ(ಜಾಂಡಿಸ್) ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಸಾಮಾಜಿಕ ಅಥವಾ ಧಾರ್ಮಿಕ ಸಮಾರಂಭಗಳು ನಡೆಯುವ ಮುನ್ನ ಆಯಾ ತಾಲೂಕು ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ನಡೆಯುವ ಸಮನ್ವಯ ಸಮಿತಿ ಸಭೆಗಳಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಪ್ಪದೇ ಭಾಗವಹಿಸಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು, ಶುದ್ಧ ಸುರಕ್ಷಿತ(ಕ್ಲೋರಿನೇಷನ್ ಮಾಡಿದ) ನೀರು ಪೂರೈಸಲು ಮತ್ತು ಪರಿಸರ ನೈರ್ಮಲ್ಯ ಕಾಪಾಡಲು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.  ಗ್ರಾಮಪಂಚಾಯತಿ ಹಾಗೂ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳು ನೀರು ಸಂಗ್ರಹಿಸುವ ಟ್ಯಾಂಕುಗಳನ್ನು ಬ್ಲೀಚಿಂಗ್ ಪುಡಿಯಿಂದ ಸ್ವಚ್ಚಗೊಳಿಸಬೇಕು. ಕುಡಿವ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು ಹಾಗೂ ಸೋರುವಿಕೆಗಳನ್ನು ಗುರುತಿಸಿ ತಕ್ಷಣ ದುರಸ್ತಿಗೊಳಿಸಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಬೇಕು.  ಜಿಲ್ಲೆಯಲ್ಲಿ ಪೂರೈಸಲಾಗುವ ನೀರಿನ ಎಲ್ಲಾ ಮೂಲಗಳ ಮಾದರಿಗಳನ್ನು ಸಂಗ್ರಹಿಸಿ ಅಸುರಕ್ಷಿತ ಮೂಲಗಳನ್ನು ತಕ್ಷಣ ಕ್ಲೋರಿನೇಷನ್ ಮಾಡಿಸಬೇಕು ಹಾಗೂ ಟ್ಯಾಂಕರ್ ಮೂಲಕ ಪೂರೈಸುವ ನೀರನ್ನು ಸಹ ಕ್ಲೋರಿನೇಷನ್ ಮಾಡಿಸಬೇಕು. ಗುಣಮಟ್ಟದ ಬ್ಲೀಚಿಂಗ್ ಪೌಡರ್ ಶೇಖರಿಸಿಕೊಂಡು ಸೊಳ್ಳೆಗಳ ನಿಂಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.  ಜಾತ್ರೆ, ಸಮಾರಂಭ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಅಗತ್ಯ ಸಿಬ್ಬಂದಿ ನಿಯೋಜಿಸಿ ಔಷಧಿ ಪೂರೈಸಿ ಚಿಕಿತ್ಸಾ ಸೌಲಭ್ಯ ನೀಡುವುದು. ರಸ್ತೆ ಬದಿಯಲ್ಲಿ, ಹೋಟೆಲ್‌ಗಳಲ್ಲಿ ತಯಾರಿಸುವ ಆಹಾರ ಮತ್ತು ಸಿಹಿ ಪದಾರ್ಥಗಳ ಸುರಕ್ಷತೆ ಕಡೆ ಗಮನ ಹರಿಸಬೇಕು. ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡದಂತೆ, ವಯಕ್ತಿಕ ರಕ್ಷಣೆ, ಪರಿಸರ ನೈರ್ಮಲ್ಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು.  ವಸತಿ ನಿಲಯಗಳ ವಿದ್ಯಾರ್ಥಿಗಳಲ್ಲಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು, ಸೂಕ್ತ ಮಾದ್ಯಮಗಳ ಮೂಲಕ ಆರೋಗ್ಯ ಶಿಕ್ಷಣ ನೀಡಬೇಕು ಎಂದು ಜಿಪಂ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂಚ್ರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 
ಆರೋಗ್ಯ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ಹಲವು ಯೋಜನೆಗಳ ಕುರಿತು ಇದೇ ಸಂದರ್ಭದಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಯಿತು. 
  ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ, ಡಾ. ಅಲಕಾನಂದ, ಡಾ.ರಮೇಶ ಮೂಲಿಮನಿ, ಡಾ. ದಾನರೆಡ್ಡಿ, ಜಿಲ್ಲಾ ಸರ್ಜನ್ ಡಾ. ಲೋಕೇಶ್ ಜಿಲ್ಲಾ ಆಯುಷ್ ಅಧಿಕಾರಿ ಬಸಪ್ಪ ವಾಲಿಕಾರ, ಡಾ. ಕಟ್ಟಿಮನಿ, ಡಾ. ವಿರುಪಾಕ್ಷಿರೆಡ್ಡಿ ಮಾದಿನೂರ ಹಾಗೂ ಹಲವು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

31 Mar 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top