PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಹೋಟೆಲ್, ಉದ್ದಿಮೆ, ವಾಣಿಜ್ಯ ಚಟುವಟಿಕೆ ನಡೆಸುವ ಮಾಲೀಕರು ಗ್ರಾಹಕರಿಗೆ ಕುಡಿಯಲು ಶುದ್ಧನೀರು ಕೊಡುವಂತೆ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಸೂಚನೆ ನೀಡಿದ್ದಾರೆ.
ಶುದ್ಧ ನೀರು ನೀಡಿ : ಬೇಸಿಗೆಯಲ್ಲಿ ಆಹಾರದಿಂದ, ನೀರಿನಿಂದ ಸಾರ್ವಜನಿಕರಿಗೆ ರೋಗಗಳು ಹರಡುವ ಸಂಭವವಿದ್ದು  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೊಳೆಯ ನೀರು, ಬೋರ್‌ವೆಲ್ ನೀರನ್ನು ನೇರವಾಗಿ ಕುಡಿಯಲು ನೀಡದೆ ಕಡ್ಡಾಯವಾಗಿ ಫಿಲ್ಟರ್ ನೀರನ್ನು ಒದಗಿಸಬೇಕು. 
ಎಲ್ಲೆಂದರಲ್ಲಿ ಕಸ ಬಿಸಾಡದಿರಿ : ವಾಣಿಜ್ಯ ಚಟುವಟಿಕೆ ನಡೆಸುವಂತಹ ಎಲ್ಲಾ ಹೋಟೆಲ್, ಉದ್ದಿಮೆದಾರರು ಕಸವನ್ನು ಚರಂಡಿಯಲ್ಲಿ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಹಲವಾರು ಬಾರಿ ನೋಟಿಸ್ ನೀಡಲಾಗಿದ್ದರೂ ಸಹ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಕಂಡುಬಂದಿದೆ.  ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಸವನ್ನು ಮೂಲ ಹಂತದಲ್ಲಿ ಹಸಿ, ಒಣ ಕಸವನ್ನಾಗಿ ಬೇರ್ಪಡಿಸಿ, ನಗರಸಭೆ ವಾಹನಗಳಲ್ಲಿ ಹಾಕಬೇಕು. ಹೋಟೆಲ್ ಹಾಗೂ ಅಂಗಡಿಗಳ ಮುಂಭಾಗ ಅಥವಾ ಅಕ್ಕಪಕ್ಕದ ಚರಂಡಿಯಲ್ಲಿ ಬಿಸಾಡಿರುವುದು ಕಂಡುಬಂದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುವುದು ಅಲ್ಲದೆ, ವಾಣಿಜ್ಯ ಪರವಾನಿಗೆಯನ್ನು ಸ್ಥಗಿತಗೊಳಿಸಲಾಗುವುದು. 
ಸಕ್ಕಿಂಗ್ ಯಂತ್ರ ಬಳಸಿ : ಉದ್ದಿಮೆ ಹಾಗೂ ಮನೆಗಳಲ್ಲಿನ ಶೌಚಾಲಯ ಸ್ವಚ್ಛತೆಗೆ ಕಡ್ಡಾಯವಾಗಿ ಸಕ್ಕಿಂಗ್ ಮಷೀನ್ ಬಳಸಿ ಸ್ವಚ್ಛಗೊಳಿಸಬೇಕು. ಕಾರ್ಮಿಕರನ್ನು ಬಳಸಿ ಸ್ವಚ್ಛಗೊಳಿಸುವಂತಿಲ್ಲ.  ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ರೂಲ್ಸ್ ಪ್ರಕಾರ ಮಾನವ ಸಂಪನ್ಮೂಲದಿಂದ ಸ್ವಚ್ಛಗೊಳಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು ತಪ್ಪಿದಲ್ಲಿ ದಂಡನೆಗೆ ಗುರಿಪಡಿಸಲಾಗುವುದು. 
ಉದ್ದಿಮೆ ನವೀಕರಿಸಿ : ನಗರದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ನಗರಸಭೆಯಿಂದ ಪ್ರತಿ ವರ್ಷ ಉದ್ದಿಮೆ ಪರವಾನಿಗೆ ಪಡೆದುಕೊಳ್ಳಬೇಕು ಹಾಗೂ ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು. ತಪ್ಪಿದಲ್ಲಿ ಉದ್ದಿಮೆಯನ್ನು ಸ್ಥಗಿತಗೊಳಿಸಲು ಕ್ರಮ ಜರುಗಿಸಲಾಗುವುದು. 
ಪ್ಲಾಸ್ಟಿಕ್ ನಿಷೇಧ : ಸರಕಾರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದು ನಗರದಲ್ಲಿಯೂ ಕಡ್ಡಾಯವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿ, ಹೋಟೆಲ್, ಮುಂತಾದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್‌ಗ್ಲಾಸ್, ಮುಂತಾದ ವಸ್ತುಗಳ ಬಳಕೆ ಕಂಡುಬಂದಲ್ಲಿ ಸೂಕ್ತ ಕ್ರಮಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ  ತಿಳಿಸಿದ್ದಾರೆ.

Advertisement

0 comments:

Post a Comment

 
Top