ಕೊಪ್ಪಳ,
ಆ.೨೮ (ಕ ವಾ) ಕೂಲಿಕಾರರ ಸಮಸ್ಯೆಗಳಾದ ಕೂಲಿ ಹಾಜರಾತಿ, ಕೆಲಸದ ಅಳತೆ,
ಕೂಲಿ ಹಣ ಮುಂತಾದವುಗಳನ್ನು ನಿವಾರಿಸುವ ಸಲುವಾಗಿ ಸರ್ಕಾರದ ವತಿಯಿಂದ ಕಾಯಕ
ಬಂಧುಗಳನ್ನು ನೇಮಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿ ಕೃಷ್ಣ ಡಿ.ಉದಪುಡಿ ಹೇಳಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಮತ್ತು ಕಾಯಕಬಂಧುಗಳ ಜವಾಬ್ದಾರಿಗಳು
ಮತ್ತು ಕಾರ್ಯನಿರ್ವಹಣೆ ಕುರಿತು ಆ.೨೬ ರಂದು ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ತಾಲೂಕಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕೂಲಿಕಾರರು ನೇರವಾಗಿ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು
ಸಾಧ್ಯವಾಗದೇ ಇರುವುದನ್ನು ಮನಗಂಡಿರುವ ಸರ್ಕಾರ ಕೂಲಿಕಾರರ ಮೇಲ್ವಿಚಾರಣೆಯನ್ನು
ಸುಗಮವಾಗಿ ನಿರ್ವಹಿಸಲು ಕಾಯಕ ಬಂಧುಗಳನ್ನು ನೇಮಿಸಿದೆ. ಈ ಯೋಜನೆಯಡಿ ಕಾರ್ಯನಿರ್ವಹಿಸುವ
೨೦ ರಿಂದ ೨೫ ಜನ ಕೂಲಿಕಾರರರಿಗೆ ಒಬ್ಬ ಕಾಯಕ ಬಂಧುವನ್ನು ನೇಮಿಸಲಾಗಿರುತ್ತದೆ. ಕಾಯಕ
ಬಂಧುಗಳು ನೇರವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದರಿಂದ
ಕೂಲಿಕಾರರ ಸಮಸ್ಯೆಗಳು ಬಹುಬೇಗನೆ ಇತ್ಯರ್ಥಗೊಳ್ಳಲಿವೆ. ಅಲ್ಲದೇ, ಪ್ರತಿಯೊಬ್ಬ
ಕೂಲಿಕಾರನಿಗೆ ರೂ.೩ ರಂತೆ ಕಾಯಕ ಬಂಧುಗಳಿಗೆ ಹೆಚ್ಚುವರಿಯಾಗಿ ಹಣ ಪಾವತಿಸಲು ಅವಕಾಶ
ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಮಳೆಯ ಪ್ರಮಾಣ
ಕಡಿಮೆ ಆಗಿರುವುದರಿಂದ ಸರ್ಕಾರ ಈಗಾಗಲೇ ಕೊಪ್ಪಳ ಜಿಲ್ಲೆಯನ್ನು ಬರಗಾಲ ಪ್ರದೇಶ ಎಂದು
ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗುಳೆ ಪ್ರಮಾಣ ಕಡಿಮೆಗೊಳಿಸುವ
ನಿಟ್ಟಿನಲ್ಲಿ ಕಾಯಕಬಂಧುಗಳು ಯಾವುದೇ ಕೂಲಿಕಾರರು ಗುಳೆ ಹೋಗದಂತೆ ಅವರಲ್ಲಿ ಮನವರಿಕೆ
ಮಾಡಿ, ಕೂಲಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ
ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುವಂತಹ ಕಾಮಗಾರಿಗಳನ್ನು ಆಯ್ದುಕೊಂಡು ಅನುಮೊದನೆ
ಮಾಡಲಾಗಿದೆ. ಹೆಚ್ಚುವರಿಯಾ
ಗಿ ಕೂಲಿಕಾರರು ಕೂಲಿ ಕೆಲಸ ಬಯಸಿದಲ್ಲಿ ಸಂಬಧಿಸಿದ ಗ್ರಾಮ
ಪಂಚಾಯಿತಿಗಳಿಗೆ ಹೆಚ್ಚುವರಿ ಕ್ರಿಯಾ ಯೋಜನೆ ಅನುಮೋದನೆ ಮಾಡಿ, ಅವರಿಗೆ ಕೂಲಿ ಕೆಲಸ
ನೀಡಲಾಗುತ್ತದೆ. ದುಡಿಯುವ ಕೈಗಳಿಗೆ ಕೆಲಸ ಎಂಬ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ
ಯೋಜನೆಯಡಿ ಕೂಲಿ ವಿತರಿಸುವಲ್ಲಿ ಅನಗತ್ಯ ವಿಳಂಬ ಧೋರಣೆ ತೊರುವವರ ವಿರುದ್ಧ ಕ್ರಮ
ಜರುಗಿಸಲಾಗುವುದು. ಸರ್ಕಾರದ ಸುತ್ತೋಲೆಗಳಿಗೆ ನಾವೆಲ್ಲರೂ ಬದ್ಧರಾಗಿ ಯೋಜನೆಯಡಿ ಕೂಲಿ
ನಿರ್ವಹಿಸಿ, ಗ್ರಾಮಗಳ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಿಲ್ಲಬೇಕು ಎಂದು ಕೃಷ್ಣ ಉದಪುಡಿ
ಅವರು ಕರೆ ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ತಾಲೂಕಿನ ಕವಲೂರು,
ಬಂಡಿಹರ್ಲಾಪುರ, ಹುಲಿಗಿ, ಬಿಸರಳ್ಳಿ ಹಾಗೂ ಇತರೆ ಗ್ರಾಮ ಪಂಚಾಯಿತಿಗಳ ಕೂಲಿಕಾರರ
ಸಮಸ್ಯೆಗಳನ್ನು ಆಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಇದೇ ಸಂದರ್ಭದಲ್ಲಿ
ಕಾಯಕ ಬಂಧುಗಳಿಗೆ ಹಳದಿ ಬಣ್ಣದ ಗುರುತಿನ ಚೀಟಿಗಳನ್ನು ವಿತರಿಸಿದರು.
ಕಾರ್ಯಾಗಾರದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಸಹಾಯಕ
ನಿರ್ದೇಶಕ ಅಶೋಕ ಕುಲಕರ್ಣಿ, ತಾಲೂಕಾ ಐಇಸಿ ಸಂಯೋಜಕ ದೇವರಾಜ ಪತ್ತಾರ, ಎಂಐಎಸ್ ಸಂಯೋಜಕ
ಮಂಜುನಾಥ ಜವಳಿ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಸೇರಿದಂತೆ ಕಿರಿಯ ಅಭಿಯಂತರರು,
ವಿವಿಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಉಪಸ್ಥಿತರಿದ್ದರು.
0 comments:
Post a Comment