ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಜೂ. ೦೫ ರಂದು ಮತ ಎಣಿಕೆ ಕಾರ್ಯ ಕೊಪ್ಪಳ, ಕುಷ್ಟಗಿ, ಕುಕನೂರು ಮತ್ತು ಗಂಗಾವತಿಯಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರಗಳ ಬಳಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ ಎಣಿಕೆ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ.
ಮತಗಳ ಎಣಿಕೆ ಕಾರ್ಯ ಜೂ. ೦೫ ರಂದು ಬೆಳಿಗ್ಗೆ ೮ ಗಂಟೆಯಿಂದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ, ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಬುರ್ಗಾ ತಾಲೂಕು ಕುಕನೂರಿನ ಜವಾಹರ ನವೋದಯ ವಿದ್ಯಾಲಯ ಮತ್ತು ಗಂಗಾವತಿಯ ಜನತಾ ಸೇವಾ ಶಿಕ್ಷಣ ಸಂಸ್ಥೆ (ಜೆಎಸ್‌ಎಸ್) ನಲ್ಲಿ ಪ್ರಾರಂಭವಾಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಂದು ಬೆಳಿಗ್ಗೆ ೬ ಗಂಟೆಯಿಂದ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವವರೆಗೆ ಮತ ಎಣಿಕೆ ಕೇಂದ್ರಗಳ ಸುತ್ತ ೧೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ಮತ ಎಣಿಕೆ ಕೇಂದ್ರ ಸುತ್ತ ೧೦೦ ಮೀ. ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು, ಇತರೆ ಸಂತೆ, ಜಾತ್ರೆ, ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅಧಿಕೃತ ಪ್ರವೇಶಪತ್ರ ಹೊಂದಿರುವ ನೌಕರರು, ಅಭ್ಯರ್ಥಿಗಳು, ಎಣಿಕೆ ಏಜೆಂಟರು, ಜಾಗೃತ ದಳದವರನ್ನು ಹೊರತುಪಡಿಸಿ, ಪರವಾನಗಿ ಇಲ್ಲದೆ ಯಾರೂ ಪ್ರವೇಶ ಮಾಡುವಂತಿಲ್ಲ. ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಹಾಗೂ ಇತರೆ ಸಾಮಗ್ರಿಗಳನ್ನು ತರುವಂತಿಲ್ಲ. ಮತ ಎಣಿಕೆ ಕೇಂದ್ರ ಸುತ್ತ ೧೦೦ ಮೀ. ವ್ಯಾಪ್ತಿಯಲ್ಲಿ ಯಾವುದೇ ಸಮಾರಂಭ ಅಥವಾ ವಿಜಯೋತ್ಸವ, ಮೆರವಣಿಗೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment