PLEASE LOGIN TO KANNADANET.COM FOR REGULAR NEWS-UPDATES


: ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ’ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಸಿವು ಮುಕ್ತ ರಾಜ್ಯ ನಿರ್ಮಾಣ ಮಾಡಲು ಸಂಕಲ್ಪ ಮಾಡಿದೆ ಎಂದು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸರಕಾರದ ಮಹತ್ವಾಕಾಂಕ್ಷೆಯ ’ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್  ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ಮತ್ತು ಗೋಧಿ ವಿತರಣೆ ಮಾಡುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಡವರು ಹೊಟ್ಟೆ ತುಂಬ ಊಟ ಮಾಡಬೇಕು ಎನ್ನುವುದು ರಾಜ್ಯ ಸರಕಾರದ ಆಶಯವಾಗಿದ್ದು, ಇದಕ್ಕೆ ಪೂರಕವೆಂಬಂತೆ ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ವಯ ಪ್ರಸಕ್ತ ಮೇ.೦೧ ರಿಂದ ಜಿಲ್ಲೆಯ ೨,೭೭,೬೪೮ ಸದಸ್ಯರಿಗೆ ಸಂಪೂರ್ಣ ಉಚಿತವಾಗಿ ೫ ಕೆ.ಜಿ ಆಹಾರಧಾನ್ಯ, ರಿಯಾಯಿತಿ ದರದಲ್ಲಿ ೨೫ ರೂ.ಗಳಿಗೆ ೧ ಲೀ. ತಾಳೆ ಎಣ್ಣೆ ಹಾಗೂ ೨ ರೂ.ಗಳಿಗೆ ಅಯೋಡಿನ್ ಉಪ್ಪು ವಿತರಣೆಯಾಗಲಿದೆ. 
ಒಂದು ಸರಕಾರದ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಹೀಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತಿರುವುದು ದೇಶದ ಇತಿಹಾಸದಲ್ಲಿಯೇ ಮೊದಲಾಗಿದೆ ಎಂದು ತಿಳಿಸಿದ ಅವರು, ಅನ್ನ ಭಾಗ್ಯ ಯೋಜನೆಯ ಧಾನ್ಯಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವುದು ಅಲ್ಲಲ್ಲಿ ಕಂಡುಬರುತ್ತಿದ್ದು, ಅಂಥವರ ವಿರುದ್ಧ ಸರಕಾರದಿಂದ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.  
ರಾಜ್ಯಾದ್ಯಂತ ಏ.೧೧ ರಿಂದ ಏ.೩೦ ರವರೆಗೆ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಗಣತಿ ಕಾರ್ಯ ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ ೧೦೦ ರಷ್ಟು ಪೂರ್ಣಗೊಂಡು ದಾಖಲೆ ನಿರ್ಮಿಸಿದೆ. ಸೌಲಭ್ಯ ವಂಚಿತ, ತುಳಿತಕ್ಕೊಳಗಾದ ಸಮಾಜಗಳನ್ನು ಗುರುತಿಸಿ, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಮೀಕ್ಷೆಗೆ ಜನತೆ ಸ್ಪಂದಿಸಿ, ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಈ ಸಮೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಈ ಸಮೀಕ್ಷೆಯಿಂದ ರಾಜ್ಯದ ಜನತೆಗೆ ಒಳ್ಳೆಯ ಸಂದೇಶ ಮೂಡಿಬರಲಿದೆ ಎಂದು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿವರಾಜ ಎಸ್.ತಂಗಡಗಿ ಹೇಳಿದರು.   
ಬಳಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿಗಳ ದೂರದೃಷ್ಟಿಯಿಂದಾಗಿ ರೂಪಗೊಂಡಿರುವ ಈ ಅನ್ನಭಾಗ್ಯ ಯೋಜನೆ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಅನ್ನಭಾಗ್ಯ ಯೋಜನೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಗುಳೆ ಹೋಗುವವರ ಪ್ರಮಾಣ ಕಡಿಮೆಯಾಗುತ್ತಿದೆ. ಈ ಯೋಜನೆಯನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದು ಅವರು ಹೇಳಿದರು. 
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಯುಕ್ತಾಶ್ರಯಲ್ಲಿ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬಿ.ಪಿ.ಎಲ್ ಕಾರ್ಡ ಹೊಂದಿರುವ ಬಡ ಜನರು ಈ ಯೋಜನೆಯ ಸ್ಮಾರ್ಟ ಕಾರ್ಡ ಪಡೆದುಕೊಂಡಲ್ಲಿ ವಾರ್ಷಿಕವಾಗಿ ೩೦ ಸಾವಿರ ರೂ.ಗಳವರೆಗೆ ಚಿಕಿತ್ಸಾ ವೆಚ್ಚವನ್ನು ನಗದು ನೀಡದೇ ಪಡೆಯಬಹುದಾಗಿದ್ದು, ಜಿಲ್ಲೆಯ ಜನತೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಆಹಾರ, ನಾಗರಿಕ ಸರಬಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವೈ.ಹೆಚ್.ಲಂಬು, ತಹಶೀಲ್ದಾರ ಪುಟ್ಟರಾಮಯ್ಯ, ನಗರಸಭೆ ಆಯುಕ್ತ ರಮೇಶ ಪಟ್ಟೇದ್ ಹಾಗೂ ಇತರರು ಇದ್ದರು.  

Advertisement

0 comments:

Post a Comment

 
Top