ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ೦೯ ಜಿಲ್ಲೆಗಳಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಅನುಭವಿಸಿದ ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ಕರ್ನಾಟಕ ರಾಜ್ಯ ಸರ್ಕಾರ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ರೈತರಿಗೆ ಪರಿಹಾರ ವಿತರಿಸುವ ಸಲುವಾಗಿ ೨೧೬. ೩೫ ಕೋಟಿ ರೂ. ಗಳನ್ನು ಮಂಜೂರು ಮಾಡಿದ್ದು, ಈ ಪೈಕಿ ಕೊಪ್ಪಳ ಜಿಲ್ಲೆಗೆ ೬೭. ೮೭ ಕೋಟಿ ರೂ. ಮಂಜೂರು ಮಾಡಿ ಶುಕ್ರವಾರದಂದು ಆದೇಶ ಹೊರಡಿಸಿದೆ. ಬೆಳೆ ಹಾನಿ ಅನುಭವಿಸಿರುವ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ, ಗದಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೂ ಸೇರಿದಂತೆ ಒಟ್ಟು ೦೯ ಜಿಲ್ಲೆಗಳಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದ ಹಾನಿಯಾದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಿಂತ ಹೆಚ್ಚುವರಿ ದರದಲ್ಲಿ ಪರಿಹಾರ ನೀಡಲು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪ್ರತಿ ಹೆಕ್ಟೇರ್‌ಗೆ ರೂ. ೨೫೦೦೦ ಗಳಂತೆ ಇನ್‌ಪುಟ್ ಸಬ್ಸಿಡಿ ನೀಡಲು ೨೧೬೩೫ ಲಕ್ಷ ರೂ. ಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್‌ಡಿಆರ್‌ಎಫ್) ಅನುದಾನ ಬಿಡುಗಡೆ ಮಾಡಲು ಸರ್ಕಾರ ಮಂಜೂರಾತಿ ನೀಡಿದೆ. ಕೃಷಿ ಮತ್ತು ತೋಟಗಾರಿಕಾ ಬೆಳೆ ನಾಶವಾದ ರೈತರಿಗೆ ನೀಡಲಾದ ಪರಿಹಾರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಏಪ್ರಿಲ್ ತಿಂಗಳಿನಲ್ಲಿ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದ ಪ್ರಕರಣಗಳಿಗೆ ಒಂದು ಬಾರಿಗೆ ಮಾತ್ರ ನೀಡಲಾಗುವುದು. ಸರ್ಕಾರ ಇದೀಗ ಬಿಡುಗಡೆ ಮಾಡಿರುವ ಅನುದಾನವನ್ನು ಆಯಾ ತಹಸಿಲ್ದಾರರು, ನೇರವಾಗಿ ಬೆಳೆ ಹಾನಿ ಅನುಭವಿಸಿದ ರೈತರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ. ಮೂಲಕ ಜಮಾ ಮಾಡುವರು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು, ಬೆಳೆ ಹಾನಿ ಅನುಭವಿಸಿರುವ ಯಾವುದೇ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ೨೭೧೫೧. ೩೦ ಹೆ. ಬೆಳೆ ಹಾನಿಯಾಗಿದ್ದು ೬೭೮೭. ೮೪ ಲಕ್ಷ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ೪೦೧೬೭. ೬೪ ಹೆ. ಬೆಳೆ ಹಾನಿಯಾಗಿದ್ದು, ೧೦೦೪೧. ೭೨ ಲಕ್ಷ ರೂ. ಬಳ್ಳಾರಿ ಜಿಲ್ಲೆಯಲ್ಲಿ ೧೩೬೨೦. ೫೦ ಹೆ. ಬೆಳೆ ಹಾನಿಗಾಗಿ ೩೪೦೫. ೧೩ ಲಕ್ಷ ರೂ. ಯಾದಗಿರಿ ಜಿಲ್ಲೆಯಲ್ಲಿ ೨೪೨೩. ೦೩ ಹೆ. ಬೆಳೆ ಹಾನಿಗೆ ೬೦೫. ೭೬ ಲಕ್ಷ ರೂ. ಕಲಬುರಗಿ ಜಿಲ್ಲೆಯಲ್ಲಿ ೨೧೦೭. ೨೫ ಹೆ. ಬೆಳೆ ಹಾನಿಗೆ ೫೨೬. ೮೨ ಲಕ್ಷ ರೂ. ಬೀದರ್ ಜಿಲ್ಲೆಯಲ್ಲಿ ೧೫೩. ೯೦ ಹೆ. ಬೆಳೆ ಹಾನಿಗೆ ೩೮. ೪೮ ಲಕ್ಷ ರೂ. ವಿಜಯಪುರ ಜಿಲ್ಲೆಯಲ್ಲಿ ೩೪೮ ಹೆ. ಬೆಳೆ ಹಾನಿಗೆ ೮೭ ಲಕ್ಷ ರೂ. ಗದಗ ಜಿಲ್ಲೆಯಲ್ಲಿ ೮೫ ಹೆ. ಬೆಳೆ ಹಾನಿಗೆ ೨೧. ೨೫ ಲಕ್ಷ ರೂ. ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೪೮೪ ಹೆ. ಬೆಳೆ ಹಾನಿಗೆ ೧೨೧ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯದ ೦೯ ಜಿಲ್ಲೆಗಳಲ್ಲಿ ಒಟ್ಟಾರೆ ೮೬೫೪೦. ೬೨ ಹೆ. ನಲ್ಲಿ ಬೆಳೆ ಹಾನಿಯಾಗಿದ್ದು ೨೧೬೩೫ ಲಕ್ಷ ರೂ. ಪರಿಹಾರ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಕೆ. ಶ್ರೀಪಾದರಾವ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment