ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿ.ಪಂ. ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೆ ಶಿಕ್ಷಕರ ಕೊರತೆ ಹೆಚ್ಚಾಗಿದ್ದು, ಶಿಕ್ಷಣ ಇಲಾಖೆಯಿಂದ ಅನ್ಯ ಇಲಾಖೆ ಸೇವೆಗೆ ನಿಯೋಜನೆ ಮೇಲೆ ತೆರಳಿರುವ ಶಿಕ್ಷಕರನ್ನು ಕೂಡಲೆ ಆ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಮಾತೃ ಇಲಾಖೆಗೆ ಮರಳುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ, ಇದುವರೆಗೂ ಕ್ರಮ ಕೈಗೊಳ್ಳದ ಡಿಡಿಪಿಐ ಅವರ ಕ್ರಮಕ್ಕೆ ಜಿ.ಪಂ. ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ತಕ್ಷಣವೇ ಅಂತಹ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಶಿಕ್ಷಕ ಹುದ್ದೆಯ ಕರ್ತವ್ಯಕ್ಕೆ ಮರಳಲು ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಇಂದೇ ಆದೇಶ ಹೊರಡಿಸಲಾಗುವುದು ಎಂದರು.
ಕುಡಿಯುವ ನೀರು : ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ರಾಜೀವ್ ಗಾಂಧಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರ ಕ್ರಮದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಅಧ್ಯಕ್ಷರು, ಕೆಡಿಪಿ ನಂತಹ ಮಹತ್ವದ ಸಭೆಗಳಿಗೆ ಪೂರ್ಣ ಮಾಹಿತಿಯೊಂದಿಗೆ ಬರಬೇಕು. ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಈ ರೀತಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಜಾರಿಯಲ್ಲಿರುವ ಎಲ್ಲ ಕುಡಿಯುವ ನೀರು ಸರಬರಾಜು ಯೋಜನೆಗಳ ಕಾಮಗಾರಿಗಳು ತ್ವರಿತಗೊಳ್ಳಬೇಕು. ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿನ ನೀರಿನ ಟ್ಯಾಂಕ್‌ಗಳನ್ನು ಹಲವು ವರ್ಷಗಳಿಂದ ಸ್ವಚ್ಛಗೊಳಿಸದೇ ಇರುವುದರಿಂದ, ಪಾಚಿ ಕಟ್ಟಿಕೊಂಡು, ಬೇಸಿಗೆಯಲ್ಲಿ ನೀರು ಕಲುಷಿತಗೊಳ್ಳುವ ಸಾಧ್ಯತೆಗಳಿವೆ. ಕೂಡಲೆ ಎಲ್ಲ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ನೀರನ ಮೇಲ್ತೊಟ್ಟಿಗಳನ್ನು ಗುರುತಿಸಿ, ಅಂತಹವುಗಳನ್ನು ದುರಸ್ತಿಗೊಳಿಸಿ ಉಳಿಸಿಕೊಳ್ಳಬೇಕೆ ಅಥವಾ ನೆಲಸಮಗೊಳಿ, ಬೇರೆ ಟ್ಯಾಂಕ್ ನಿರ್ಮಿಸಬೇಕೆ ಎನ್ನುವುದರ ಬಗ್ಗೆ ಮಾಸಾಂತ್ಯದೊಳಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು, ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸುಮಾರು ೩೯ ನೀರಿನ ಟ್ಯಾಂಕ್‌ಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಈಗಾಗಲೆ ೩ ಟ್ಯಾಂಕ್‌ಗಳನ್ನು ಕೆಡವಿ ಹಾಕಲಾಗಿದೆ. ಉಳಿದವುಗಳ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಪ್ಪೆ ರೋಗದಿಂದ ಜಾನುವಾರು ಮೃತಪಟ್ಟಿಲ್ಲ : ತಾಲೂಕಿನ ಕೂಕನಪಳ್ಳಿ ಬಳಿ ಇತ್ತೀಚೆಗೆ ಚಪ್ಪೆರೋಗದಿಂದ ಸುಮಾರು ೮ ಜಾನುವಾರುಗಳು ಮೃತಪಟ್ಟಿವೆ ಎಂಬುದಾಗಿ ಮಾಧ್ಯಮಗಳಲ್ಲಿ ವರಿದಯಾಗಿದ್ದು, ಆದರೆ ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಜಾನುವಾರುಗಳು ಚಪ್ಪೆ ರೋಗದಿಂದ ಮೃತಪಟ್ಟಿಲ್ಲ. ಬಹುಶಃ ಜೋಳದ ಚಿಗುರು ಅಥವಾ ವಿಷಯುಕ್ತ ಆಹಾರ ತಿಂದು ಮೃತಪಟ್ಟಿರುವ ಸಾಧ್ಯತೆ ಹೆಚ್ಚು. ಆದಾಗ್ಯೂ ಮೃತ ಜಾನುವಾರುಗಳ ಮಾದರಿಯನ್ನು ಬಳ್ಳಾರಿಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಕುರಿತಂತೆ ರೈತರಿಗೆ ಸೂಕ್ತ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಪಶುಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಕುರಿ ಮತ್ತು ಮೇಕೆ ಮೃತಪಟ್ಟಾಗ ಮರಣೋತ್ತರ ಪರೀಕ್ಷೆ ನಡೆಸುವಲ್ಲಿ ತೊಂದರೆ ಆಗುತ್ತಿದೆ. ಕುರಿಗಾರರಿಗೆ ಮೃತ ಕುರಿ/ಮೇಕೆಯನ್ನು ಪಶು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಲಾಗುತ್ತಿದೆಯೇ ಹೊರತು, ಕುರಿಗಾರರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶವಿಲ್ಲ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ ನಾಯಕ್ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಆಯಾ ಇಲಾಖೆಗಳ ಪ್ರಗತಿ ವರದಿಯನ್ನು ಸಭೆಗೆ ವಿವರಿಸಿದರು.

0 comments:
Post a Comment