PLEASE LOGIN TO KANNADANET.COM FOR REGULAR NEWS-UPDATES

  ರಾಜ್ಯದ 5 ವಿಮಾನ ನಿಲ್ದಾಣಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿಕೊಡುವಂತೆ ಮಾರ್ಚ್ ಮಾಹೆಯ ಮೊದಲ ವಾರದಲ್ಲಿ ಕೇಂದ್ರ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರ ಬಳಿಗೆ ಎಲ್ಲಾ 5 ಜಿಲ್ಲೆಗಳ ಜನಪ್ರತಿನಿಧಿಗಳ ನಿಯೋಗವನ್ನು ಕರೆದುಕೊಂಡು ಹೋಗುವುದಾಗಿ  ವಾರ್ತಾ, ಮೂಲ  ಸೌಲಭ್ಯ ಅಭಿವೃದ್ಧಿ ಮತ್ತು ಹಜ್ ಸಚಿವ  ಆರ್. ರೋಷನ್ ಬೇಗ್ ಅವರು ತಿಳಿಸಿದರು.ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಶಿವಮೊಗ್ಗ, ಕಲಬುರಗಿ, ವಿಜಯಾಪುರ, ಬಳ್ಳಾರಿ ಮತ್ತು ಬೀದರ್ ಜಿಲ್ಲೆಗಳ ಜನಪ್ರತಿನಿಧಿಗಳು, ಸಚಿವರು, ಇಲಾಖಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಂತರ ಸಚಿವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರವು ದಾರಾಳವಾಗಿ ಅನುದಾನವನ್ನು ನೀಡಲು ಸಿದ್ದವಿದೆ.  ಆದರೆ ಈ 5 ಜಿಲ್ಲೆಗಳಲ್ಲಿ ವಿವಿಧ ಕಾರಣಗಳಿಂದ ಹಾಗೂ ಖಾಸಗಿ ಅಭಿವೃದ್ಧಿದಾರರ ನಡುವಿನ ವೈಮಸ್ಸಿನ ಇರುವ ಕಾರಣದಿಂದ ಕಾಮಗಾರಿಯು ಕುಂಠಿತಗೊಂಡಿದೆ.  ಆದ್ದರಿಂದ ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅವರ ಮೂಲಕ  ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೊಡುವ ಮೂಲಕ 5 ಜಿಲ್ಲೆಗಳಲ್ಲಿ ವಿಮಾನ ಹಾರಾಟವನ್ನು ಶೀಘ್ರದಲ್ಲಿ ಪ್ರಾರಂಭಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ತಮ್ಮ ನೇತೃತ್ವದಲ್ಲಿ ನಿಯೋಗವನ್ನು ಕರೆದುಕೊಂಡು ಹೋಗಿ ಚರ್ಚಿಸಲಾಗುವುದೆಂದರು.
ವಿಧಾನ ಪರಿಷತ್ತಿನ ಕಲಾಪ ವೇಳೆಯಲ್ಲಿ ಈ ಕುರಿತು ಬಹಳಷ್ಟು ಸದಸ್ಯರು  ಪ್ರಶ್ನೆಗಳನ್ನು ಕೇಳಿದ್ದರು.  ಉತ್ತರದ ವೇಳೆ  ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ನಿಯೋಗವನ್ನು ಕರೆದೊಯ್ಯುವುದಾಗಿ ಆಶ್ವಾಸನೆ ನೀಡಿದ್ದಂತೆ ದೆಹಲಿಗೆ ಮಾರ್ಚ್ ಮಾಹೆಯ ಮೊದಲ ವಾರದಲ್ಲಿ ನಿಯೋಗವನ್ನು ಕರೆದೊಯ್ಯಲಾಗುವುದೆಂದರು.  ಅದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ನಡೆಸುವ ಮೂಲಕ ಈ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳ ಸಲಹೆ ಸೂಚನೆಯನ್ನು ಪಡೆಯಲಾಯಿತೆಂದು ಸಚಿವರು ತಿಳಿಸಿದರು.
ಮೂಲ  ಸೌಲಭ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮ ಅವರು 5 ಕಾಮಗಾರಿಗಳ ವಸ್ತುಸ್ಥಿತಿ, ವ್ಯಾಜ್ಯಗಳು ಹಾಗೂ  ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ಮನವಿಗಳ ಕುರಿತು ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.
ಈ ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಖಮರುಲ್ ಇಸ್ಲಾಂ, ವಿಧಾನ ಪರಿಷತ್ತಿನ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ವಿರೋಧ ಪಕ್ಷದ ನಾಯಕ  ಕೆ.ಎಸ್. ಈಶ್ವರಪ್ಪ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಅಪ್ಪಾಜಿ ಸಿ.ಎಸ್. ನಾಡಗೌಡ, ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು 5 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top