ರಾಜ್ಯದ ಸಾವಿರಾರು ಐಟಿಐ ವಿದ್ಯಾರ್ಥಿಗಳು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ, ದಿನಾಂಕ ೦೯.೦೧.೨೦೧೫ ರಂದು ಬೆಂಗಳೂರಿನಲ್ಲಿ ಎಐಡಿವೈಓ ನೇತೃತ್ವದಲ್ಲಿ ನಡೆಸಿದ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ರ‍್ಯಾಲಿಯ ನಂತರ ಮಾನ್ಯ ಕಾರ್ಮಿಕ ಸಚಿವರು ಎಐಡಿವೈಓ ನ ರಾಜ್ಯ ನಾಯಕರ ಮನವಿಯ ಮೇರೆಗೆ, ಉನ್ನತ ಅಧಿಕಾರಿಗಳು ಮತ್ತು ವಿದ್ಯಾರ್ಥಿ ಮುಖಂಡರ ಜೊತೆ ಐಟಿಐ ವಿದ್ಯಾರ್ಥಿಗಳ ಬೇಡಿಕೆಗಳನ್ನು ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ್ದರು.
ಇದರ ಹಿನ್ನೆಲೆಯಲ್ಲಿ ದಿನಾಂಕ ೦೨.೦೨.೨೦೧೫ರಂದು ಎಐಡಿವೈಓ ನ ರಾಜ್ಯಾಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ, ರಾಜ್ಯ ಕಾರ್ಯದರ್ಶಿಗಳಾದ ಡಾ|| ಜಿ.ಎಸ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಎನ್. ರವಿ, ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಬಿ.ಆರ್ ಉಮೇಶ್, ಚಂದ್ರಶೇಖರ್ ಮೇಟಿ ಮತ್ತು ಕೆ. ವಿಜಯ್‌ರವರಿದ್ದ ನಿಯೋಗವು ಮಾನ್ಯ ಕಾರ್ಮಿಕ ಸಚಿವರಾದ ಪಿ.ಟಿ.ಪರಮೇಶ್ವರ್ ನಾಯ್ಕ್ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಐಟಿಐ ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಯ ವಿರುದ್ಧ ಕಳೆದ ಒಂದು ವರ್ಷದಿಂದ ರಾಜ್ಯದಾದ್ಯಂತ ನೆಡೆಸಿದ ಹೋರಾಟದ ಬಗ್ಗೆ ವಿವರಿಸಿ, ವಿವಿಧ ಬೇಡಿಕೆಗಳನ್ನು ಕುರಿತು ಚರ್ಚಿಸಿತು.
ಸಮಸ್ಯೆಗಳ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ತರಬೇತಿಭತ್ಯೆ ಐಟಿಐ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಕೆಲವು ಪ್ರಮುಖ ಬೇಡಿಕೆಗಳನ್ನು ಇಲಾಖೆಯಲ್ಲಿ ಚರ್ಚಿಸಿ ಬರಲಿರುವ ಹೊಸ ಬಜೆಟ್‌ನಲ್ಲಿ ಪರಿಗಣಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದು ಭರವಸೆ ನೀಡಿದರು. ಐಟಿಐ ಮುಗಿಸಿದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ವ್ಯಾಸಾಂಗ ಮಾಡಲು ಕನಿಷ್ಠ ಶೇ. ೧೫ರಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸುವುದಾಗಿಯೂ ತಿಳಿಸಿದರು.
ಸಚಿವರ ಸ್ಪಂದನೆಯನ್ನು ಸ್ವಾಗತಿಸುತ್ತಾ, ಸರ್ಕಾರದ ಪ್ರತಿಕ್ರಿಯೆಯ ಆಧಾರದ ಮೇಲೆ ಮುಂದಿನ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲು ಎಐಡಿವೈಓ ಮತ್ತು ಐ.ಟಿ.ಐ ವಿದ್ಯಾರ್ಥಿಗಳ ಹೋರಾಟ ಸಮಿತಿಗಳು ತೀರ್ಮಾನಿಸಿವೆ.
0 comments:
Post a Comment