PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಫೆ. ೧೮- ಕಟ್ಟಡ ಕಾರ್ಮಿಕರು ವಿವಿಧ ಸೌಲಭ್ಯಗಳನ್ನು ಪಡೆಯಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅನೇಕ ದಾಖಲೆಗಳನ್ನು ಒದಗಿಸಲಾರದೆ ವಂಚಿತರಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಹೇಳಿದರು.
ಕೊಪ್ಪಳ ತಾಲೂಕಿನ ಕವಲೂರನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಗ್ರಾಮ ಘಟಕದಿಂದ ಕಲ್ಯಾಣ ಮಂಡಳಿಯಿಂದ ರಾಜೇಸಾಬ ಹುಸೇನ ಮೌಲಾಸಾಬ ತಹಶೀಲ್ದಾರ, ಮಹೆಬೂಬಸಾಬ ಪೀರಸಾಬ ಮಕಾಂದಾರ್ ಇಬ್ಬರಿಗೂ ಮದುವೆ ಧನ ಸಹಾಯ ತಲಾ ಐವತ್ತು ಸಾವಿರ ರೂಪಾಯಿಗಳ ವಿತರಣೆ ಹಾಗೂ ಗ್ರಾಮ ಘಟಕದ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಎಸ್.ಎ. ಗಫಾರ್ ಮುಂದುವರೆದು, ಮಂಡಳಿ ರಚನೆಯಾದಾಗಿನಿಂದ ಚೆನ್ನಾಗಿ ಸೌಲಭ್ಯಗಳ ಒದಗಿಸಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಟ್ಟಡ ಕಾರ್ಮಿಕರಿಗೆ ಸರಳಾಗಿ ಸಿಗುತ್ತಿದ್ದ ಸೌಲಭ್ಯಗಳಿಗೆ ಒದಗಿಸುವ ದಾಖಲೆಗಳ ಹೆಚ್ಚಿಸಿದ್ದಲ್ಲದೆ ಧನ ಸಹಾಯ ವಿತರಣೆಯಲ್ಲಿ ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಮಂಡಳಿಯಲ್ಲಿ ಮೂರು ಸಾವಿರ ಕೋಟಿಗೂ ಹೆಚ್ಚು ಹಣ ಜಮಾ ಆಗಿದೆ. ಕಟ್ಟಡ ಕಾರ್ಮಿಕರಿಗೆ ಮಂಡಳಿ ಪ್ರಾರಂಭವಾದಾಗಿನಿಂದ ಇನ್ನೂವರೆಗೆ ಮೂವತ್ತು ಕೋಟಿಗೂ ಕಡಿಮೆ ಧನ ಸಹಾಯ ನೀಡಲಾಗಿದೆ. ಬಹುತೇಕ ಕಟ್ಟಡ ಕಾರ್ಮಿಕರು ಅವಿದ್ಯಾವಂತರಾಗಿದ್ದಾರೆ, ಮಂಡಳಿಯಿಂದ ಪದೇ-ಪದೇ ಹೊಸ ನಿಯಮಗಳು, ವಿವಿಧ ದಾಖಲೆಗಳನ್ನು ಒದಗಿಸುವಂತೆ ನಿರ್ಭಂದನೆ ಹಾಕುತ್ತಿದ್ದರಿಂದ ರಾಜ್ಯದಲ್ಲಿಯ ಬಹುತೇಕ ಕಟ್ಟಡ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಸಂಘಟತರಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಹನ್ನೆರಡು ಸೌಲಭ್ಯಗಳನ್ನು ಸಹಜವಾಗಿ ಬಂದಿದ್ದಲ್ಲ. ನಮ್ಮ ಸಂಘಟನೆಯ ರಾಜ್ಯ ನಾಯಕರು ನಿರಂತರ ಹೋರಾಟ ಮಾಡಿದರ ಪರಿಣಾಮವಾಗಿ ಆಗಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ, ಕಾರ್ಮಿಕ ಸಚಿವರಾಗಿದ್ದ ಇಕ್ಬಾಲ್ ಅನ್ಸಾರಿ ಅವರು ಒಪ್ಪಿ ಸಂಘಟನೆಯ ರಾಜ್ಯ ಅಧ್ಯಕ್ಷ  ಹೆಚ್.ಕೆ. ರಾಮಚಂದ್ರಪ್ಪ ಅವರ ಅನೇಕ ಸಲಹೆ, ಮಾರ್ಗದರ್ಶನದಿಂದ ಮಂಡಳಿ ರಚಿಸಿ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಇಲ್ಲಿಯ ಇಬ್ಬರಿಗೆ ಮದುವೆ ಧನ ಸಹಾಯ ಕೊಡಿಸಲು ಸಾಧ್ಯವಾಯಿತು. ಇದರಂತೆ ಎಲ್ಲರೂ ಮಂಡಳಿಯ ನಿಯಮಗಳನ್ನು ಪಾಲಿಸಿ ಸೌಲಭ್ಯಗಳನ್ನು ಪಡೆಯಬೇಕೆಂದು   ಹೇಳಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ ಮಾತನಾಡಿ, ಕವಲೂರ ಗ್ರಾಮದಲ್ಲಿಯ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸೌಲಭ್ಯಗಳನ್ನು ಕೊಡಿಸುವದರಲ್ಲಿ ಮಾದರಿಯಾಗಿದ್ದಾರೆ. ಬೇರೆ ಗ್ರಾಮ ಘಟಕಗಳ ಪದಾಧಿಕಾರಿಗಳು ಕ್ರೀಯಶೀಲರಾಗಿ ಮಂಡಳಿಯ ಸೌಲಭ್ಯಗಳನ್ನು ಕೊಡಿಸಬೇಕು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೊದಲು ಹತ್ತನೇ ತರಗತಿಯಿಂದ ಪದವಿವರೆಗೆ ಧನ ಸಹಾಯ ನೀಡುತ್ತಿದ್ದರು. ಸಂಘಟನೆಯ ಹೋರಾಟದಿಂದಾಗಿ ಐದನೇ ತರಗತಿಯಿಂದ ಧನ ಸಹಾಯ ನೀಡಲಾಗುತ್ತಿದೆ. ಮುಂದೆ ಒಂದನೇ ತರಗತಿಯಿಂದ ಧನ ಸಹಾಯಕ ಕೊಡುವಂತೆ ಹೋರಾಟ ಮಾಡಲಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ತಾಲೂಕಾ ಬಡಿಗತನ ಕೆಲಸಗಾರರ ಸಂಘದ ಅಧ್ಯಕ್ಷ ಮರ್ದಾನಅಲಿ ಸಿದ್ದಿ ಅವರಿಗೆ ಸನ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕವಲೂರ ಗ್ರಾಮ ಘಟಕದ ಅಧ್ಯಕ್ಷ ಹುಸೇನ ಮೌಲಾಸಾಬ ತಹಶೀಲ್ದಾರ ಅಧ್ಯಕ್ಷತೆ ವಹಿಸಿದ್ದರು. ಭಾಗ್ಯ, ಕವಿತಾ, ಶಿಲ್ಪರಿಂದ ಪ್ರಾರ್ಥನ ಗೀತೆ, ಸ್ವಾಗತ ಪ್ರಭುಗೌಡ ಬಾಲಪ್ಪನವರ, ಗ್ರಾ.ಪಂ. ಮಾಜಿ ಅಧ್ಯಕ್ಷ ವೀರಪ್ಪ ವೆಂಕಪ್ಪ ದಸ್ತೆನವರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Advertisement

0 comments:

Post a Comment

 
Top