PLEASE LOGIN TO KANNADANET.COM FOR REGULAR NEWS-UPDATES


ಬಹುನಿರೀಕ್ಷಿತ ಧರ್ಮಾಧಾರಿತ ಜನಗಣತಿಯ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಒಂದು ಒಳ್ಳೆಯ ಸುದ್ದಿ ಎಂದರೆ, ಈ ಅಂಕಿ-ಅಂಶಗಳು ಕೆಲವು ಶಂಕಿತ ವಲಯಗಳಲ್ಲಿ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದೆ. ಮುಸ್ಲಿಂ ಜನಸಂಖ್ಯಾ ಬಾಂಬ್ ಸ್ಫೋಟಗೊಳ್ಳಲು ಕಾಯುತ್ತಿದೆ ಹಾಗೂ ಇದನ್ನು ಎದುರಿಸಲು ಹಿಂದೂಗಳು ಹೆಚ್ಚು ಮಕ್ಕಳನ್ನು ಸೃಷ್ಟಿಸಬೇಕು ಎಂಬ ‘ಪ್ರಳಯಕಾರಿ’ ಸಿದ್ಧಾಂತಗಳಲ್ಲಿ ಹುರುಳಿಲ್ಲ ಎನ್ನುವುದು ಸಾಬೀತಾಗಿದೆ.
2001-2011ರ ದಶಕದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ 24 ಶೇ. ವೃದ್ಧಿ ಆಗಿದೆ ಎಂಬ ತಲೆಬರಹದಲ್ಲಿ ಅಡಗಿರುವ ವಾಸ್ತವವೊಂದನ್ನು ನಾವು ಮರೆಯಬಾರದು. ಅಂದರೆ ಈ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಗಮನಾರ್ಹ ಕಡಿತ ಉಂಟಾಗಿದೆ. ಅಂದರೆ, ಬೆಳವಣಿಗೆ ದರ 5 ಶೇ.ದಷ್ಟು ಕಡಿಮೆಯಾಗಿದೆ. ವಿಶೇಷವೆಂದರೆ ಉತ್ತರ ಭಾರತದ ಮುಸ್ಲಿಂ ಕೊಳೆಗೇರಿಗಳಲ್ಲೂ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಇಳಿಕೆಯಾಗಿದೆ.
 ಹಾಗಾಗಿ, ಪಿತೂರಿ ಸಿದ್ಧಾಂತಗಳ ಪ್ರತಿಪಾದಕರು ನಿರಾಳಗೊಳ್ಳ ಬಹುದು. ಇಲ್ಲಿ ಮುಸ್ಲಿಂ ಟೈಂ ಬಾಂಬ್ ಇಲ್ಲ. ಹಿಂದೂಗಳು ತಮ್ಮದೇ ದೇಶದಲ್ಲಿ ಅಲ್ಪಸಂಖ್ಯಾತರಾಗುವ ಅಪಾಯವೂ ಇಲ್ಲ. ಹಾಗಾಗಿ, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತು ಅವರ ಸಂಗಡಿಗರು ಸಲಹೆ ಮಾಡಿರುವಂತೆ ಹಿಂದೂಗಳು ಕಾರ್ಖಾನೆಗಳೋಪಾದಿಯಲ್ಲಿ ಮಕ್ಕಳನ್ನು ಸೃಷ್ಟಿಸುವ ಧಾವಂತಕ್ಕೊಳಗಾಗುವ ಅಗತ್ಯವಿಲ್ಲ.
ಮಹಾರಾಜ ಮತ್ತು ಅವರ ಸಂಗಡಿಗರ ವಿಷಯಕ್ಕೆ ಮತ್ತೆ ಬರುತ್ತೇನೆ. ಮೊದಲು, ಅಧಿಕೃತವಾಗಿ ಪ್ರಕಟಗೊಳ್ಳುವ ಮೊದಲೇ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟಗೊಂಡ ಜನಗಣತಿಯ ಅಂಕಿ-ಅಂಶಗಳತ್ತ ಒಮ್ಮೆ ಗಮನಹರಿಸೋಣ. 1991-2001ರ ದಶಕದ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರ 29 ಶೇ. ಆಗಿತ್ತು. ಅದು 2001-2011ರ ಅವಧಿಯಲ್ಲಿ 24 ಶೇ.ಕ್ಕೆ ಇಳಿದಿದೆ. ಸರಾಸರಿ ರಾಷ್ಟ್ರೀಯ ಜನಸಂಖ್ಯಾ ಬೆಳವಣಿಗೆ ದರವಾಗಿರುವ 18 ಶೇ.ಕ್ಕೆ ಹೋಲಿಸಿದರೆ ಇದು ಹೆಚ್ಚೇ ಆದರೂ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಪಾಲು ಕಳೆದ ದಶಕಗಳಿಗೆ ಹೋಲಿಸಿದರೆ ಅತಿ ಕಡಿಮೆ ಅಂದರೆ 0.8 ಶೇ.ದಷ್ಟು ಹೆಚ್ಚಿದೆ.
ಪಶ್ಚಿಮಬಂಗಾಳ ಮತ್ತು ಅಸ್ಸಾಂಗಳಲ್ಲಿ ಮುಸ್ಲಿಂ ಜನಸಂಖ್ಯೆ ಯಲ್ಲಿ ತೀವ್ರ ಏರಿಕೆ ದಾಖಲಾಗಿರದಿದ್ದರೆ ಪರಿಸ್ಥಿತಿ ಇನ್ನಷ್ಟು ಸುಧಾರಿಸುತ್ತಿತ್ತು. ಈ ರಾಜ್ಯಗಳಲ್ಲಿನ ಮುಸ್ಲಿಂ ಜನಸಂಖ್ಯೆ ಏರಿಕೆಗೆ ಬಾಂಗ್ಲಾದೇಶಿಗರ ಅಕ್ರಮ ವಲಸೆ ಕಾರಣ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶೀಯರ ವಲಸೆ ಅಸ್ಸಾಂನಲ್ಲಿ ವಿವಾದಾಸ್ಪದ ವಿಷಯವಾಗಿದೆ ಹಾಗೂ ಆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಆದಾಗ್ಯೂ, ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅಸ್ಸಾಂ ಮತ್ತು ಪಶ್ಚಿಮಬಂಗಾಳಗಳು ಅಪವಾದಗಳು ಹಾಗೂ ದೇಶದ ಉಳಿದ ಭಾಗದಲ್ಲಿ ಕಂಡುಬರುತ್ತಿರುವ ಇಳಿಮುಖ ಪ್ರವೃತ್ತಿ ಅಲ್ಲಿ ಕಂಡುಬರುತ್ತಿಲ್ಲ. ಅತ್ಯಂತ ಗಮನಾರ್ಹ ಸಂಗತಿಯೆಂದರೆ ಉತ್ತರಪ್ರದೇಶ, ಬಿಹಾರ ಮುಂತಾದ ಉತ್ತರದ ಹಲವಾರು ರಾಜ್ಯಗಳಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಇಳಿಕೆ ದಾಖಲಾಗಿದೆ. ಹಿಂದೆ ಈ ರಾಜ್ಯಗಳು ಅತ್ಯಧಿಕ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರಕ್ಕೆ ಕುಖ್ಯಾತವಾಗಿದ್ದವು. ಮೇಘಾಲಯ, ಒಡಿಶಾ ಮತ್ತು ಅರುಣಾಚಲಪ್ರದೇಶಗಳಲ್ಲಿ ಕನಿಷ್ಠ ಹೆಚ್ಚಳವಾಗಿದೆ. ಮಣಿಪುರದಲ್ಲಿ, ವಾಸ್ತವಿಕವಾಗಿ ಮುಸ್ಲಿಂ ಜನಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಂದು ಶೇ.ದಷ್ಟು ಇಳಿದಿದೆ.
ಈ ಅಂಕಿ-ಅಂಶಗಳು ಭಯ-ನಿರ್ಮಾಪಕ ಹಿಂದುತ್ವವಾದಿಗಳ ಉತ್ಸಾಹಕ್ಕೆ ತಣ್ಣೀರೆರಚುವುದಂತೂ ಸತ್ಯ. ಇತ್ತೀಚಿನ ವಾರಗಳಲ್ಲಿ ಅವರ ಹಿಂದೂ ಧರ್ಮ ರಕ್ಷಣೆಯ ಅಭಿಯಾನ ವಿಜೃಂಭಿಸಿತ್ತು. ಮೊದಲಿಗೆ, ‘‘ಕ್ಷಿಪ್ರವಾಗಿ ಬೆಳೆಯುತ್ತಿರುವ’’ ಮುಸ್ಲಿಂ ‘‘ದೇಶದ್ರೋಹಿ’’ಗಳಿಂದ ಎದುರಾಗಿರುವ ಬೆದರಿಕೆಯನ್ನು ಎದುರಿಸುವಂತೆ ಸಾಕ್ಷಿ ಮಹಾರಾಜ್ ಹಿಂದೂ ಮಹಿಳೆಯರಿಗೆ ನೀಡಿದ ಕರೆ ನೀಡಿದರು.
‘‘ನಾವು ‘ಹಮ್ ದೋ, ಹಮಾರಾ ಏಕ್’ ಎಂಬ ಘೋಷವಾಕ್ಯವನ್ನು ಸ್ವೀಕರಿಸಿದ್ದೇವೆ ಆದರೆ ಈ ದೇಶದ್ರೋಹಿಗಳು ಸಂತೃಪ್ತರಾಗಿಲ್ಲ. ಈಗ ಅವರು ಇನ್ನೊಂದು ಘೋಷವಾಕ್ಯ ಕೊಡುತ್ತಿದ್ದಾರೆ- ‘ಹಮ್ ದೋ ಔರ್ ಹಮಾರಾ....’.... ಹುಡುಗಿಯನ್ನು ಇನ್ನೊಂದು ಹುಡುಗಿಗೆ ಮತ್ತು ಹುಡುಗನನ್ನು ಮತ್ತೊಂದು ಹುಡುಗನಿಗೆ ಮದುವೆ ಮಾಡಿಕೊಡುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಹಿಂದಿನ ಸರಕಾರ ಮಾಡಿದ್ದು ಇದನ್ನೇ. ಹಾಗಾಗಿ... ಕನಿಷ್ಠ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಎಂದು ನಾನು ಮಹಿಳೆಯರಿಗೆ ಮನವಿ ಮಾಡುತ್ತೇನೆ. ಒಂದನ್ನು ಸಾಧುಗಳು ಮತ್ತು ಸಂತರಿಗೆ ಕೊಡಿ. ಯುದ್ಧವಿರಾಮ ಉಲ್ಲಂಘನೆಗಳು ನಡೆಯುತ್ತಿವೆ ಎಂದು ಮಾಧ್ಯಮಗಳು ಹೇಳುತ್ತಿವೆ. ಹಾಗಾಗಿ ಒಂದನ್ನು ಗಡಿಗೆ ಕಳುಹಿಸಿ’’ ಎಂದು ಅವರು ಮೀರತ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶವೊಂದರಲ್ಲಿ ಹೇಳಿದರು.
 ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂಬುದಾಗಿ ಬಿಜೆಪಿ ಹೇಳಿದ ಬೆನ್ನಿಗೇ, ಪಕ್ಷದ ಪಶ್ಚಿಮಬಂಗಾಳದ ನಾಯಕ ಶ್ಯಾಮಲಾಲ್ ಗೋಸ್ವಾಮಿ ಇನ್ನೊಂದು ಹೆಜ್ಜೆ ಮುಂದೆ ಹೋದರು. ಸ್ಫೋಟಗೊಳ್ಳುತ್ತಿರುವ ಮುಸ್ಲಿಂ ಜನಸಂಖ್ಯೆ ಭಾರತದ ಜನಸಂಖ್ಯಾ ‘ಸಮತೋಲನ’ಕ್ಕೆ ಬೆದರಿಕೆಯೊಡ್ಡಿದೆ ಎಂದು ಅವರು ಎಚ್ಚರಿಸಿದರು ಹಾಗೂ ‘‘ನನ್ನ ಹಿಂದೂ ಮಾತೆಯರು ಮತ್ತು ಸಹೋದರಿಯರು’’ ತಲಾ ಐದು ಮಕ್ಕಳನ್ನು ಹೆರಬೇಕು ಎಂದು ಕರೆ ನೀಡಿದರು.
‘‘ಹಿಂದೂ ಮಹಿಳೆಯರು ಐವರು ಮಕ್ಕಳನ್ನು ಹೆರಬೇಕು. ನೀವು ಐದು ಮಕ್ಕಳನ್ನು ಹೊಂದದಿದ್ದರೆ ಭಾರತದಲ್ಲಿ ಇನ್ನು ಮುಂದೆ ಸಮತೋಲನ ಇರುವುದಿಲ್ಲ ಎಂದು ನಾನು ನನ್ನ ಹಿಂದೂ ಮಾತೆಯರು ಮತ್ತು ಸಹೋದರಿಯರಿಗೆ ಹೇಳಲಿಚ್ಛಿಸುತ್ತೇನೆ. ನನ್ನನ್ನು ತಪ್ಪು ತಿಳಿಯಬೇಡಿ. ನನ್ನ ಹಿಂದೂ ಮಾತೆಯರು ಮತ್ತು ಸಹೋದರಿಯರು ಐವರು ಮಕ್ಕಳನ್ನು ಹೊಂದದಿದ್ದರೆ, ಭಾರತದಲ್ಲಿ ಹಿಂದೂಗಳು ಉಳಿಯುವುದು ಕಷ್ಟ. ಹಿಂದೂ ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಎಲ್ಲ ಹಿಂದೂಗಳು ಐವರು ಮಕ್ಕಳನ್ನು ಹುಟ್ಟಿಸುವುದು ಅಗತ್ಯವಾಗಿದೆ’’ ಎಂದು ಅವರು ಹೇಳಿದರು.
ಇಂಥದೇ ಮಾದರಿಯ ಇನ್ನೊಂದು ಹೇಳಿಕೆಯೂ ಇಲ್ಲಿದೆ. ಇದನ್ನು ನೀಡಿದ್ದು ವಿಎಚ್‌ಪಿಯ ಸಾಧ್ವಿ ಪ್ರಾಚಿ. ‘‘ಹಿಂದೂ ರಾಷ್ಟ್ರದ ಕನಸ’’ನ್ನು ನನಸಾಗಿಸಲು ‘‘ಹಮ್ ದೋ, ಹಮಾರೆ ಚಾರ್’’ (ನಾವಿಬ್ಬರು, ನಮಗೆ ನಾಲ್ವರು) ಎಂಬ ಕಾನೂನನ್ನು ಜಾರಿಗೆ ತರಬೇಕು ಎಂಬುದು ಅವರ ಬೇಡಿಕೆ.
‘‘ಹಿಂದೆ ನಾವು ‘ಹಮ್ ದೋ ಹಮಾರಾ ದೋ’ ಎಂದು ಹೇಳುತ್ತಿದ್ದೆವು. ಆದರೆ, ಈಗ ನಾವು ‘ಶೇರ್ ಕಾ ಬಚ್ಚಾ, ಎಕ್ ಹೀ ಅಚ್ಚಾ (ಒಂದು ಸಿಂಹಕ್ಕೆ ಒಂದೇ ಸಂತತಿ ಸಾಕು). ಇದು ತಪ್ಪು... ಅವರ (ಮುಸ್ಲಿಂ) ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ನಮ್ಮ ಜನಸಂಖ್ಯೆ ಕುಸಿಯುತ್ತಿದೆ... (ಹಿಂದೂ ಮಹಿಳೆಯರು) ನಾಲ್ಕು ಮಕ್ಕಳನ್ನು ಪಡೆದರೆ, ಒಂದು ಎಂಜಿನಿಯರ್ ಆಗಬಹುದು, ಒಂದು ಡಾಕ್ಟರ್ ಆಗಬಹುದು, ಒಂದು ಗಡಿಯನ್ನು ಕಾಯಬಹುದು ಹಾಗೂ ಒಂದನ್ನು ಸಾಮಾಜಿಕ ಸೇವೆಗಾಗಿ ಮೀಸಲಿಡಬಹುದು’’ ಎಂದು ರಾಜಸ್ತಾನದ ಭಿಲ್ವಾರದಲ್ಲಿ ನಡೆದ ವಿಎಚ್‌ಪಿಯ ‘ವಿರಾಟ್ ಹಿಂದೂ’ ಸಮಾವೇಶದಲ್ಲಿ ನೆರೆದ ಜನರನ್ನುದ್ದೇಶಿಸಿ ಪ್ರಾಚಿ ಹೇಳಿದರು.
‘ಲವ್ ಜಿಹಾದ್’ ವಿರುದ್ಧದ ತನ್ನ ಸಂಘಟನೆಯ ಅಭಿಯಾನವನ್ನು ಬಜರಂಗದಳದ ರಾಜೇಶ್ ಪಾಂಡೆ ಸಮರ್ಥಿಸಿಕೊಂಡರು. ‘ಲವ್ ಜಿಹಾದ್’ನ ಗುರಿ ‘‘ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುವುದು’’ ಎಂದು ಅವರು ಹೇಳಿಕೊಂಡರು.
ಈ ವಿಷಯದಲ್ಲಿ ಬಲಪಂಥೀಯ ಹಿಂದುತ್ವ 100 ವರ್ಷಗಳ ಹಿಂದಿನಿಂದಲೂ ಒಂದು ಮಾದರಿಯನ್ನು ಅನುಸರಿಸಿಕೊಂಡು ಬರುತ್ತಿದೆ. 1909ರಲ್ಲೇ ತೀವ್ರ ಬಲಪಂಥೀಯ ಹಿಂದುತ್ವ ಚಿಂತಕ ಯು.ಎನ್.ಮುಖರ್ಜಿ ಕರಪತ್ರವೊಂದನ್ನು ಸಿದ್ಧಪಡಿಸಿದ್ದರು. 1881-1901ರ ಜನಗಣತಿಯ ಅಂಕಿ-ಸಂಖ್ಯೆಗಳನ್ನು ಆಧರಿಸಿದ ‘ಹಿಂದೂಗಳು: ಅಳಿಯುತ್ತಿರುವ ಜನಾಂಗ’ ಎಂಬ ಹೆಸರಿನ ಕರಪತ್ರವು ‘‘ಮುಸ್ಲಿಮರ ಜನಸಂಖ್ಯಾ ಹೆಚ್ಚಳ ಈಗಿನ ದರದಲ್ಲೇ ಮುಂದುವರಿದರೆ ಭಾರತದ ನೆಲದಿಂದ ಹಿಂದೂ ಜನಾಂಗ ನಾಶಗೊಳ್ಳುವುದು’’ ಎಂದು ಭವಿಷ್ಯ ನುಡಿದಿತ್ತು. ಈ ‘ಭವಿಷ್ಯ’ದ ಆಧಾರದಲ್ಲಿ ಅಂದು ಸ್ವಾಮಿ ಶ್ರದ್ಧಾನಂದ, ಇಂದಿನ ‘ಘರ್ ವಾಪಸಿ’ ಮಾದರಿಯಲ್ಲಿ ಮತಾಂತರಗೊಂಡ ಹಿಂದೂಗಳನ್ನು ಮರಳಿ ಮಾತೃ ಧರ್ಮಕ್ಕೆ ತರಲು ಶುದ್ಧಿ ಮತ್ತು ಸಂಘಟನೆಯನ್ನು ಕೈಗೊಂಡಿದ್ದರು.
ಮುಸ್ಲಿಂ ಬೆದರಿಕೆಯ ಕುರಿತ ಸಂಘ ಪರಿವಾರದ ಗೀಳಿನ ಬಗ್ಗೆ ಹಿಂದುತ್ವದ ಬೆಂಬಲಿಗರೂ ಕಿಡಿ ಕಾರಲು ಆರಂಭಿಸಿದ್ದಾರೆ. ಬೆಲ್ಜಿಯಂನ ಭಾರತೀಯ ಅಧ್ಯಯನಕಾರ ಕೋಯನ್‌ರಾಡ್ ಎಲ್ಸ್‌ಟ್‌ರನ್ನು ಆರ್‌ಎಸ್‌ಎಸ್ ಮತ್ತು ಅದರ ಬೆಂಬಲಿಗ ಸಂಘಟನೆಗಳು ಪದೇ ಪದೇ ತಮ್ಮ ಅನುಕೂಲಕ್ಕಾಗಿ ಉಲ್ಲೇಖಿಸುತ್ತಿವೆ. ಅವರು ಹೀಗೆ ಬರೆದಿದ್ದಾರೆ: ‘‘ ‘ಅವರು ಅವರ ಲಾಭಗಳನ್ನು ಎಣಿಸುತ್ತಿದ್ದಾರೆ, ನಾವು ನಮ್ಮ ನಷ್ಟಗಳನ್ನು ಲೆಕ್ಕಹಾಕುತ್ತಿದ್ದೇವೆ’ ಎಂಬ ಮುಖರ್ಜಿ ಕರಪತ್ರದ ವಾಕ್ಯವನ್ನು ಹಿಂದೂ ಮಹಾಸಭಾ 1979ರಷ್ಟು ಈಚೆಗೆ ತನ್ನ ಕರಪತ್ರವೊಂದರ ಹೆಸರನ್ನಾಗಿಸಿತು. ಏನಿದ್ದರೂ, ಹಿಂದೂ ಜನಸಂಖ್ಯೆ ಕುರಿತ ಭೀತಿಯ ಜ್ವರ ಮಾತ್ರ ಏರುತ್ತಿದೆ.’’
 ‘‘ತನ್ನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಹಿಂದೂ ಧರ್ಮದಿಂದ ಭೂಭಾಗಗಳನ್ನು ವಶಪಡಿಸಿಕೊಳ್ಳಲು ಇಸ್ಲಾಂ ತನ್ನ ಜನಸಂಖ್ಯೆಯನ್ನು ಬಳಸಿಕೊಳ್ಳುತ್ತಿದೆ ಎಂಬ ಹಿಂದೂ ಅನುಮಾನ ನಿರಂತರವಾಗಿ ಕನಿಷ್ಠ 1909ರಿಂದ ಇಂದಿನವರೆಗಿನ ಹಿಂದೂ ಪುನರುತ್ಥಾನ ಬರಹಗಳಲ್ಲಿನ ವಿಷಯವಾಗಿದೆ. ಈ ಆವೇಶಭರಿತ ಮಾತುಗಳು ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಬೊಬ್ಬೆಯಾಗಿರುತ್ತದೆ ಮತ್ತು ಅತಿರಂಜಿತವಾಗಿರುತ್ತದೆ. ತಮ್ಮ ಆರೋಪಗಳಿಗೆ ಪೂರಕವಾಗಿ ಅವರು ಮಂಡಿಸುವ ವಾದ ತಪ್ಪಾಗಿರುತ್ತದೆ. ‘ಮುಸ್ಲಿಮರಿಗೆ ತುಂಬಾ ಮಕ್ಕಳಿದ್ದಾರೆ, ಯಾಕೆಂದರೆ ಅವರಿಗೆ ನಾಲ್ವರು ಹೆಂಡತಿಯರಿದ್ದಾರೆ’ : ಎಂಬುದು ಇದಕ್ಕೊಂದು ಉದಾಹರಣೆ’’ ಎಂಬುದಾಗಿ ತನ್ನ ವೆಬ್‌ಸೈಟ್‌ನಲ್ಲಿ ಅವರು ಬರೆದಿದ್ದಾರೆ.
 ದೊಡ್ಡ ಕುಟುಂಬಗಳನ್ನು ಹೊಂದುವ ಪ್ರವೃತ್ತಿಯನ್ನು ಮುಸ್ಲಿಮರು ಹೊಂದಿದ್ದಾರೆ ಎನ್ನುವುದು ಸರಿಯೇ. ಆದರೆ, ಅದು ಭಾರತವನ್ನು ‘‘ವಶಪಡಿಸಿಕೊಳ್ಳುವ’’ ಇಸ್ಲಾಮಿಕ್ ಪಿತೂರಿಯ ಭಾಗವಾಗಿ ಅಲ್ಲ. ಇದರ ಹಿಂದೆ ಸಾಮಾಜಿಕ-ಆರ್ಥಿಕ ಕಾರಣಗಳಿವೆ, ವಿಶೇಷವಾಗಿ ಶೈಕ್ಷಣಿಕ ಹಿಂದುಳಿದಿರುವಿಕೆ ಇದಕ್ಕೆ ಕಾರಣ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಮುಸ್ಲಿಮರು ಆರ್ಥಿಕವಾಗಿ ಹೆಚ್ಚು ಸಮೃದ್ಧಿ ಹೊಂದಿದ್ದಾಗ ಅವರ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಿತ್ತು ಎನ್ನುವುದು ಐತಿಹಾಸಿಕ ಸತ್ಯ. ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಜನಸಂಖ್ಯೆ ಬೆಳವಣಿಗೆ ದರ ಹೆಚ್ಚಿತು.
ಈಗ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಿರುವುದಕ್ಕೂ ಇದೇ ಕಾರಣ. ಮುಸ್ಲಿಮರ ಯುವ ತಲೆಮಾರು ಹೆಚ್ಚು ಸುಶಿಕ್ಷಿತವಾಗಿದೆ ಹಾಗೂ ಹೆಚ್ಚಿನ ಆಶೋತ್ತರಗಳನ್ನು ಹೊಂದಿದೆ. ವಿಶೇಷವಾಗಿ, ವಿದ್ಯಾವಂತ ಹಾಗೂ ಮಹತ್ವಾಕಾಂಕ್ಷೆಯ ಮುಸ್ಲಿಂ ಮಹಿಳೆಯರು ಕುಟುಂಬ ಯೋಜನೆ ಬಗ್ಗೆ ಹಿಂದೂ ಮಹಿಳೆಯರಷ್ಟೇ ಕಾಳಜಿ ಹೊಂದಿದ್ದಾರೆ. 30 ದಾಟಿದರೂ ಮಕ್ಕಳನ್ನು ಹೊಂದಿರದ ಅಸಂಖ್ಯ ಮುಸ್ಲಿಂ ದಂಪತಿಗಳ ಬಗ್ಗೆ ನನಗೆ ಗೊತ್ತು. ಕುಟುಂಬಗಳ ಒತ್ತಡವಿದ್ದರೂ ಅವರು ಮಕ್ಕಳನ್ನು ಹೊಂದಿಲ್ಲ. ಮಕ್ಕಳಿಗೆ ಶ್ರೇಷ್ಠ ಆರೈಕೆ ನೀಡಲು ಸಾಧ್ಯವಾಗದಿದ್ದರೆ ತಮಗೆ ಮಕ್ಕಳೇ ಬೇಡ ಎನ್ನುವ ನಿಲುವು ಅವರದು.
  ಮುಸ್ಲಿಂ ಜನಸಂಖ್ಯೆ ಬೆಳವಣಿಗೆ ಪ್ರವೃತ್ತಿ ಈಗಲೂ ರಾಷ್ಟ್ರೀಯ ಪ್ರವೃತ್ತಿಗಿಂತ ತುಂಬಾ ಭಿನ್ನವೇ ಆಗಿದೆ. ಆದರೆ, ಇತ್ತೀಚಿನ ಅಂಕಿ-ಅಂಶಗಳು ಹೇಳುವಂತೆ, ಒಂದು ದಿನ ಈ ಎರಡು ಪ್ರವೃತ್ತಿಗಳು ಒಂದಾಗಲೇಬೇಕು. ಆದಾಗ್ಯೂ, ಇನ್ಶಾ ಅಲ್ಲಾ, ಕಾಲ್ಪನಿಕ ಮುಸ್ಲಿಂ ‘ವಶೀಕರಣ’ದ ಕುರಿತ ತನ್ನ ಗೀಳನ್ನು ಪರಿವಾರ ತ್ಯಜಿಸುತ್ತದೆ ಎನ್ನುವ ಖಾತರಿಯೇನೂ ಇಲ್ಲ.

-varthabharati

Advertisement

0 comments:

Post a Comment

 
Top