ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರದಂದು ಕೊಪ್ಪಳ ತಾಲೂಕು ಟಣಕನಕಲ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿ, ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಶುಕ್ರವಾರದಂದು ಕುಷ್ಟಗಿಯಲ್ಲಿನ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದರು. ಹಾಸ್ಟೆಲ್ ಭೇಟಿ ಕುರಿತು ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮ ಇರಲಿಲ್ಲವಾದರೂ, ಕುಷ್ಟಗಿಯಲ್ಲಿನ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಕೊಪ್ಪಳ ಮಾರ್ಗವಾಗಿ ಎಂಎಸ್‌ಪಿಎಲ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ಮಾರ್ಗ ಮಧ್ಯದಲ್ಲಿ ಟಣಕನಕಲ್ ಬಳಿ ರಸ್ತೆಯ ಪಕ್ಕದಲ್ಲೇ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದರು. ಮುಖ್ಯಮಂತ್ರಿಗಳ ದಿಢೀರ್ ಭೇಟಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರೋಚಕ ಅನುಭವ ಒಂದೆಡೆಯಾದರೆ, ಸ್ವಯಂ ಮುಖ್ಯಮಂತ್ರಿಗಳೇ ನಮ್ಮನ್ನು ಭೇಟಿಯಾಗಲು ಬಂದರಲ್ಲ ಎಂಬ ಸಂತಸ ಇನ್ನೊಂದು ಕಡೆ. ವಿದ್ಯಾರ್ಥಿಗಳೊಂದಿಗೆ ಸಂತಸದಿಂದ ಬೆರೆತ ಮುಖ್ಯಮಂತ್ರಿಗಳು, ವಸತಿಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟೋಪಹಾರ, ವಸತಿ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ಬಗ್ಗೆ ವಿಚಾರಣೆ ನಡೆಸಿದರು. ವಸತಿ ಶಾಲೆಯಲ್ಲಿ ಮಕ್ಕಳಿಗೆ ಒದಗಿಸಲಾಗುತ್ತಿರುವ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ವಸತಿ ಶಾಲೆಯ ವಾತಾವರಣ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರಿಂದ, ವಸತಿ ಶಾಲೆಯ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದ ವಿವರ ಪಡೆದ ಮುಖ್ಯಮಂತ್ರಿಗಳು, ಹಾಸ್ಟೆಲ್‌ನಲ್ಲಿ ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾದ ಬಗ್ಗೆ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ಇದೇ ಹಾಸ್ಟೆಲ್‌ನ ವಿದ್ಯಾರ್ಥಿ ಶೇ. ೯೫ ಅಂಕ ಪಡೆದು ಉತ್ತೀರ್ಣರಾಗಿದ್ದನ್ನು ಕೇಳಿ, ಸಂತಸಗೊಂಡ ಮುಖ್ಯಮಂತ್ರಿಗಳು, ಎಲ್ಲ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡುವಂತೆ ಕಿವಿಮಾತು ಹೇಳಿದರು.
ರಾಜ್ಯ ಸಹಕಾರ ಸಚಿವ ಮಹದೇವ ಪ್ರಸಾದ್, ಆಹಾರ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment