ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ೧೦೦೦೦೧ನೇ ಶೌಚಾಲಯವನ್ನು ಜ.೩೦ ರಂದು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವೈಯಕ್ತಿಕ ಶೌಚಾಲಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಶೌಚಾಲಯಗಳು ನಿರ್ಮಾಣ ಆಗುತ್ತಿರುವುದರಿಂದ ಪ್ರತಿ ಗ್ರಾ.ಪಂ. ವಾರು ಸಿದ್ಧಪಡಿಸಿದ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಬೇಕು. ಪ್ರತಿ ಶೌಚಾಲಯದ ಜಿ.ಪಿ.ಎಸ್. ಆಧಾರಿತ ಫೋಟೊ ತೆಗೆದು ಗ್ರಾ.ಪಂ.ವಾರು ಮತ್ತು ಗ್ರಾಮವಾರು ಅಲ್ಬಂ ನಿರ್ವಹಿಸಬೇಕು. ಪ್ರತಿ ಶೌಚಾಲಯದ ವಿಡಿಯೋ ಚಿತ್ರೀಕರಣ ಮಾಡಿ ಸಿ.ಡಿ. ರೂಪದಲ್ಲಿ ಇಡಬೇಜಯ, ಮಹತ್ವದ ಈ ಮೂರು ದಾಖಲೆಗಳ ಒಂದು ಪ್ರತಿಯನ್ನು ತಾಲೂಕ ಪಂಚಾಯತ್‌ಗೆ ಹಾಗೂ ಜಿಲ್ಲಾ ಪಂಚಾಯತ್‌ಗೆ ಒಂದು ವಾರದೊಳಗೆ ಸಲ್ಲಿಸಬೇಕು. ಎಲ್ಲಾ ಫಲಾನುಭವಿಗಳ ಕ್ರಮ ಸಂಖ್ಯೆವಾರು, ಗ್ರಾಮವಾರು ಅದಕ್ಕೆ ಸಂಬಂಧಿಸಿದ ನಮೂನೆಯಲ್ಲಿ ಮಾಹಿತಿ ತಯಾರಿಸಿ ತುರ್ತಾಗಿ ಎಲ್ಲಾ ದಾಖಲೆಗಳನ್ನು ಎಂಟ್ರಿ ಮಾಡಬೇಕು. ಇದರ ಆಧಾರದ ಮೇಲೆ ಪ್ರತಿಯೊಂದು ಮನೆಗೆ ಹೋಗಿ ಜಿಪಿಎಸ್ ಹಾಗೂ ವಿಡಿಯೋ, ಫೋಟೋಗ್ರಾಫಿ ಮಾಡಬೇಕು. ಸಂಬಂಧಪಟ್ಟ ಫಲಾನುಭವಿಗಳ ಪಟ್ಟಿ, ದಾಖಲೆ ಫೋಟೋ ಈ ರೀತಿಯಾಗಿ ಗ್ರಾ.ಪಂ.ನಲ್ಲಿ ಒಂದು ಸಿ.ಡಿ. ರೂಪಿಸಿ ಅದರಲ್ಲಿ ಶೌಚಾಲಯಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆ ಜವಾಬ್ದಾರಿಯನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಮ್ಮ ಹಂತದಲ್ಲಿ ಪಂಚಾಯತಿಯ ಇತರೆ ಸಿಬ್ಬಂದಿ ಅಥವಾ ಹೊರಗಿನ ಆಸಕ್ತ ನಿರುದ್ಯೋಗಿ ಪದವೀಧರರನ್ನು ಒಗ್ಗೂಡಿಸಿಕೊಂಡು ನಿರ್ವಹಿಸಬೇಕು. ಇದರಲ್ಲಿ ಯಾವುದೇ ರೀತಿಯಾಗಿ ತೊಂದರೆ/ಸಮಸ್ಯೆ ಉದ್ಭವಿಸಿದಲ್ಲಿ ತಕ್ಷಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬೇಕು. ಅತೀ ಅವಶ್ಯಕವಾಗಿ ವೈಯಕ್ತಿಕ ಫಲಾನುಭವಿಗಳ ಕಡತಗಳನ್ನು ಸಹ ನಿರ್ವಹಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ವಿಳಂಬವಿಲ್ಲದೆ ಜ.೧೫ ರೊಳಗೆ ಎಲ್ಲಾ ದಾಖಲೆ/ಮಾಹಿತಿ ಸಂಗ್ರಹಿಸಲು ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ದಿವಸ ಆಯಾ ಗ್ರಾ.ಪಂ. ನಿಂದ ಮಾಹಿತಿ ಸಂಗ್ರಹಿಸಿ ಅಂದೇ ಜಿ.ಪಂ. ಕಾರ್ಯಾಲಯಕ್ಕೆ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
0 comments:
Post a Comment