-ಬಸವರಾಜ್ ಕೌತಾಳ್, ಬೆಂಗಳೂರು
ಕೈಯಲ್ಲಿ ಪೊರಕೆ ಹಿಡಿದು ಬೀದಿ ಕಸಗುಡಿಸುವುದರ ಮೂಲಕ ಸ್ವಚ್ಛ ಭಾರತ ಕಾರ್ಯಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿಗಳ ಆಶಾದಾಯಕ ಕಾರ್ಯಕ್ರಮವನ್ನು ತುಂಬು ಹೃದಯದಿಂದ ಸ್ವಾಗತಿಸಬೇಕಾಗಿದೆ! ಭಾರತದ ಎಲ್ಲ ಜಾತಿವರ್ಗಗಳಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿ ಇನ್ನಿತರ ಜೀವರಾಶಿಗಳಿಗೆ ಉತ್ತಮ ನೀರು, ಗಾಳಿ, ಬೆಳಕು, ಉಸಿರಾಟ ಹಾಗೂ ಉತ್ತಮ ಆರೋಗ್ಯದಂತಹ ಸೌಕರ್ಯಗಳು ಸ್ವಚ್ಛ ಪರಿಸರದಿಂದಲೇ ಸಾಧ್ಯ ಎನ್ನುವುದು ಕಟು ಸತ್ಯ. ಆದರೆ ತಲೆ ತಲಾಂತರಗಳಿಂದ ಊರುಕೇರಿ, ನಗರ ಬೀದಿಗಳನ್ನು ಗುಡಿಸಿ ಮಲ-ಮೂತ್ರ ಕೊಳೆತುನಾರುವ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಪೌರಕಾರ್ಮಿಕ ಸಫಾಯಿ ಕರ್ಮಚಾರಿಗಳ/ಆದರೆ ಮಹಿಳೆಯರು, ಮಕ್ಕಳ ಬದುಕು ಮಾತ್ರ ನಿಕೃಷ್ಟ. ಈ ಕೆಲಸವನ್ನು ಗೌರವದ ಕಾರ್ಯ ಎನ್ನುವುದಾದರೆ ಈ ಗೌರವಾನ್ವಿತ ಕೆಲಸ ಕಾರ್ಯವನ್ನು ಮನುವಾದಿ ಬ್ರಾಹ್ಮಣಶಾಹಿಗಳೇ ಗುತ್ತಿಗೆ ಪಡೆದು ನಿರ್ವಹಿಸಲಿ ಎನ್ನುವುದು ನಮ್ಮ ವಿನಯಪೂರ್ವಕ ಮನವಿ. ಇಲ್ಲವಾದರೆ ಈ ನಿಕೃಷ್ಟ ಕೆಲಸದ ಬಗ್ಗೆ ಭಾವನಾತ್ಮಕ ಶಹಭಾಸ್‌ಗಿರಿ ಕೊಡುವ ಬೊಗಳೆ ಮಾತು ನಿಲ್ಲಿಸಿ ನೂರಾರು ವರ್ಷಗಳಿಂದ ಇಂದಿಗೂ ತಲೆಯ ಮೇಲೆ ಮಲಹೊರುತ್ತಾ ಊರುಕೇರಿ ಬೀದಿ ಗುಡಿಸುವ ಕಾಯಕದಲ್ಲಿರುವ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಬದುಕನ್ನು ಬದಲಾಯಿಸಲು, ಅವರ ಮಕ್ಕಳಿಗೆ ಉನ್ನತ ಮಟ್ಟದ ಗುಣಾತ್ಮಕ ಉಚಿತ ಶಿಕ್ಷಣ ಹಾಗೂ ಉದ್ಯೋಗ ಕೊಟ್ಟು ಭಾರತಕ್ಕೆ ಅಂಟಿಕೊಂಡ ಪಾಪಶಾಪದಿಂದ ಜಾತಿವಾದಿ ನಾಗರಿಕ ಸಮಾಜ ಮುಕ್ತಿ ಪಡೆದುಕೊಳ್ಳಲಿ ಎಂಬುವುದು ದಲಿತ ಸಮುದಾಯದ ಮನವಿ!!
‘‘ಸ್ವಚ್ಛ ಭಾರತದ ಆದೋಲನ’’ (ಸ್ವಚ್ಛ್ ಭಾರತ್ ಆಂದೋಲನ್) ಎಂಬ ಹೆಸರಿನಲ್ಲಿ ಭಾರತದ ನೈಜ ಸತ್ಯವನ್ನು ಕತ್ತಲೆಯಲ್ಲಿಡುವಂತಹ ಕಾರ್ಯಕ್ರಮಗಳು ಸದ್ಯ ನಡೆಯುತ್ತಿವೆ. ದೇವರು, ಧರ್ಮ, ಸಂಸ್ಕೃತಿ, ಗಡಿ, ಭಾಷೆ, ದೇಶಪ್ರೇಮ, ರಾಷ್ಟ್ರಭಕ್ತಿ, ಬಣ್ಣ, ಬಾವುಟ, ಶುದ್ಧ-ಅಶುದ್ಧ ಎಂಬ ಹೆಸರುಗಳಲ್ಲಿ ಮಾತ್ರವಲ್ಲದೇ ಮುಗ್ಧ ಸೈನಿಕರನ್ನು, ಪೊಲೀಸರನ್ನು, ಕಕ್ಕಸು, ಕಸಗುಡಿಸುವವರನ್ನು ಸೇವೆಯ ಭಾವನೆಗಳ ಬಂಡವಾಳ ಮಾಡಿಕೊಂಡು ಬಹುಜನ ಶೋಷಿತ ಸಮುದಾಯಗಳನ್ನು ಮತ್ತೊಮ್ಮೆ ಮೋಸಕ್ಕೆ ಗುರಿಪಡಿಸುವ ಜಾತಿವಾದ, ಮನುವಾದಿ ಕುತಂತ್ರವಲ್ಲದೇ ಮತ್ತೇನೂ ಇರಲಾರದು.
ವಿದೇಶಿ ಆಳರಸರ ಶೋಷಣೆಯ ವಿರುದ್ಧ ಹೋರಾಟ ಎಷ್ಟು ಮುಖ್ಯವೋ, ಅಷ್ಟೇ ದೇಶಿಯ ಜಾತಿವಾದಗಳ, ಭೂಮಾಲಕರ ಪಾಳೇಗಾರರ, ಪುರೋಹಿತಶಾಹಿ ಆಳರಸರ ಸಾಮಾಜಿಕ ದಬ್ಬಾಳಿಕೆ ಆರ್ಥಿಕ ಶೋಷಣೆ ವಿರುದ್ಧವೂ ಏಕಕಾಲಕ್ಕೆ ಸಮರಸಾರುವುದರಿಂದ ಗಳಿಸುವ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಎಂದು ಭಾವಿಸಿದ ಬಾಬಾ ಸಾಹೇಬರು ಭಾರತದ ನೈಜ ಸೈದ್ಧಾಂತಿಕ ಹೋರಾಟಕ್ಕೆ ಕರೆಕೊಡುತ್ತ ಬ್ರಿಟಿಷ್‌ರಿಂದ ಸ್ವಾತಂತ್ರ ಪಡೆಯುವುದು ಎಷ್ಟು ಮುಖವೋ ಅಷ್ಟೇ ಮುಖ್ಯ ಸ್ವಾತಂತ್ರ್ಯೊತ್ತರ ಭಾರತ ಯಾವ ದಿಕ್ಕಿನತ್ತ ಸಾಗಬೇಕು, ಎಂತಹ ರಾಜಕೀಯ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಬೇಕು ಎನ್ನುವುದರ ಬಗ್ಗೆಯೂ ಉಜ್ವಲ-ಪ್ರಜ್ವಲ ಕನಸು ಕಾಣುವುದು, ಆ ಕನಸನ್ನು ನನಸು ಮಾಡುತ್ತ ಸ್ವತಂತ್ರ ಭಾರತ ಹೋರಾಟಕ್ಕೆ ಒಂದು ಹೊಸ ಅರ್ಥವನ್ನು ಕೊಟ್ಟರು. ಸ್ವಚ್ಛ ಭಾರತ ಎಂಬ ರಾಷ್ಟ್ರ ಮಟ್ಟದ ಬೀದಿ ನಾಟಕವನ್ನು ಪ್ರಾರಂಭಿಸಿದ ಮತೀಯವಾದಿ ಸಮಾಜವನ್ನು ಮರೆಯುವಂತಿಲ್ಲ. ಅಂದು ದೇಶಿಯವಾದಿ, ಕೋಮುವಾದಿ ಆಳರಸರ ಪರವಾಗಿ ಪ್ರಾರಂಭಿಸಿದ ರಾಜಕೀಯ ಸ್ವಾತಂತ್ರ್ಯದ ನಾಟಕ ಸಾಮಾಜಿಕ ಮತ್ತು ಆರ್ಥಿಕ ಜ್ವಲಂತ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಕಾಣದ ಪರಿಸ್ಥಿತಿ ಉಂಟಾಗಿದೆ.
ಇಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಎಂಬ ಬೀದಿಗುಡಿಸುವ ಬೀದಿ ನಾಟಕದಿಂದ ಭಾರತ ಶುದ್ಧವಾಗಬೇಕು. ಇಲ್ಲ ಇಡೀ ಭಾರತ ಸಮಾಜವನ್ನು ಕೊಳೆತು ನಾರುವಂತೆ ಮಾಡಲು ಕಾರಣೀಭೂತವಾದ ಹಿಂದು ಬ್ರಾಹ್ಮಣಶಾಹಿ ಮನುವಾದಿ, ಜಾತಿವಾದಿ, ಮತೀಯವಾದಿ ಮನಸ್ಸುಗಳು ಶುದ್ಧಿಯಾಗಬೇಕೆಂಬುದನ್ನು ಸ್ವಚ್ಛ ಭಾರತದ ಭಾವನಾತ್ಮಕ ರಾಜಕೀಯ ಕಾರ್ಯಕ್ರಮ ಕೊಡುವ ಸನಾತನಿಗಳು ಆತ್ಮ ಸಾಕ್ಷಿಯಿಂದ ಮಾತನಾಡಲಿ. ಅಶುದ್ಧ ಭಾರತಕ್ಕೆ ಕಾರಣರಾರು? ಬೀದಿಯಲ್ಲಿರುವ ಕಸವನ್ನು ಗುಡಿಸುವುದರಿಂದ ಭಾರತ ಶುದ್ಧವಾಗುತ್ತಿದೆಯೋ? ಸಾವಿರಾರು ವರ್ಷಗಳಿಂದ ಜಾತಿ ಆಧಾರಿತ ಅಸಮಾನತೆ, ಅನ್ಯಾಯ, ಮಡಿ ಮೈಲಿಗೆ ಸಾಮಾಜಿಕ, ಧಾರ್ಮಿಕ ಅಸಂಖ್ಯಾತ ಅಸಮಾಜತೆ, ಅಂಧಃಕಾರ ಅವಮಾನಗಳಿಂದ ಕೊಳೆತು ನಾರುವ ಭಾರತದ ಜಾತಿವಾದಿ, ಮತೀಯವಾದಿ ಮನುವಾದಿ ಮನಸ್ಸುಗಳು ಶುದ್ಧವಾಗದೆ ಕೇವಲ ಬೀದಿಯಲ್ಲಿ ಇರುವ ಕಸವನ್ನು ಗುಡಿಸುವುದರಿಂದ ಭಾರತ ಸ್ವಚ್ಛವಾಗುತ್ತದೆಯೋ ಎಂಬ ಸಂಗತಿಯನ್ನು ಪ್ರಜ್ಞಾವಂತ ಸಮಾಜ ಚಿಂತಿಸಬೇಕಾಗಿದೆ. ಬಹುಸಂಖ್ಯಾತ ದಲಿತ ಸಮುದಾಯಗಳನ್ನು ಇಂದಿಗೂ ಅತೀ ಕ್ರೂರವಾಗಿ ನಡೆಸಿಕೊಳ್ಳುತ್ತಿರುವ ಹಿಂದೂ ಮನುವಾದಿ ಜಾತಿ ವ್ಯವಸ್ಥೆಯು ಇಡೀ ಭಾರತವನ್ನು ಅಶುದ್ಧಗೊಳಿಸಿ ಕರಾಳ ಕಗ್ಗತ್ತಿನಲ್ಲಿಡಲು ಕಾರಣವಾಗಿದೆ. ದೇಶದ 6 ಲಕ್ಷ ಹಳ್ಳಿಗಳಲ್ಲಿ ಇಂದಿಗೂ ಕೊಳತು ನಾರುವಂತಹ ಅಸ್ಪಶ್ಯತೆಯ ಅವಮಾನಗಳು, ಭೇದ-ಭಾವ, ಮಡಿಮೈಲಿಗೆಯಿಂದ ಒಂದಲ್ಲ ಒಂದು ಕಾರಣಕ್ಕೆ ಜಾತಿವಾದಿ ಭೂಮಾಲಕರ ದಬ್ಬಾಳಿಕೆ, ಹಿಂಸೆಯ ಕೂಪಗಳಂತಿರುವ ಹಳ್ಳಿಗಳಲ್ಲಿ ಮುಗ್ಧ ದಲಿತ ಮಹಿಳೆಯ ಮೇಲೆ ಅಮಾನುಷ ಅತ್ಯಾಚಾರಗಳು, ಅರೆಬೆತ್ತಲೆ ಮೆರವಣಿಗೆಗಳು ಹಾಗೂ ಹಿಂದೂ ಮನುವಾದಿ ದೇವರು ಧರ್ಮಗಳ ಹೆಸರಿನಲ್ಲಿ ಬೆತ್ತಲೆ ಸೇವೆಗಳು ಮಹಿಳೆಯರ ಘನತೆ ಗೌರವವನ್ನೆ ನಾಶಮಾಡುವಂತಹ ದೇವದಾಸಿ ಅನಿಷ್ಟ ಪದ್ಧತಿಗಳು ಹಳ್ಳಿಗಳನ್ನು ಆವರಿಸಿಕೊಂಡಿವೆ. ಜಾತಿವಾದಿಗಳ ಕ್ರೌರ್ಯದಲ್ಲೆ ತಳ ಸಮುದಾಯಗಳು ನಿಕೃಷ್ಟ ಬದುಕನ್ನು ನಡೆಸಬೇಕಾ. ಕ್ರೂರ ಸ್ಥಿತಿ ಭಾರತವನ್ನಾವರಿಸಿಕೊಂಡಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ ದಿನಕ್ಕೆ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ, 18 ಮಹಿಳೆಯರನ್ನು ನಗ್ನಗೊಳಿಸಲಾಗುತ್ತದೆ. ಪ್ರತಿ 18 ನಿಮಿಷಕ್ಕೊಮ್ಮೆ ದಲಿತರ ಮೇಲೆ ಅಕ್ರಮಗಳು, ಹಲ್ಲೆಗಳು ನಡೆಯುತ್ತಿವೆ. ಅಂದರೆ ಪ್ರತಿ ವರ್ಷ ಸರಕಾರದ ಲೆಕ್ಕಾಚಾರ ಪ್ರಕಾರ ದೇಶದಲ್ಲಿ 36 ಸಾವಿರ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇನ್ನೂ ಲೆಕ್ಕಕ್ಕೆ ಬಾರದ್ದು ಅಸಂಖ್ಯ. ಅ ಪ್ರತಿ ದಿನ ಇಬ್ಬರು ದಲಿತರ ಕಗ್ಗೊಲೆ ನಡೆಯುತ್ತಿದೆ. ಪ್ರತಿ ವರ್ಷ 720 ದಲಿತರ ಕಗ್ಗೊಲೆ ನಡೆಯುವುದಾದರೆ ಇದು ನಾಗರಿಕ ದೇಶವೆ ಅಲ್ಲ. ಇಷ್ಟೊಂದು ಜಾತಿವಾದದ ಕ್ರೌರ್ಯದಿಂದ ಕೊಳತು ನಾರುತ್ತಿರುವ ಈ ಕ್ರೂರ ಮನಸ್ಸುಗಳನ್ನು ಸ್ವಚ್ಛಗೊಳಿಸುವವರ್ಯಾರು. ಸ್ವಚ್ಛ ಭಾರತದ ವರಸುದಾರರು ಉತ್ತರಿಸಬೇಕಾಗಿದೆ. ಇದು ಜನ ಸಾಮಾನ್ಯರ, ದಲಿತರ ಸ್ಥಿತಿಯಾದರೆ ದೇಶದ ರಾಜಕೀಯ ಸ್ಥಾನಮಾನದಲ್ಲಿರುವ ಬಿಹಾರ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರವೇಶಿಸಿದ ದೇವಾಲಯವನ್ನು ಮುಟ್ಟು ಮೈಲಿಗೆಯಾಗಿದೆ ಎಂದು ಶುದ್ಧೀಕರಿಸಿದ್ದ ಉದ್ದೇಶ ಉಪ ಪ್ರಧಾನಮಂತ್ರಿ ಜಗಜೀವನರಾಂ, ಕೆ.ಆರ್. ನಾರಾಯಣನ್, ಖ್ಯಾತ ಗಾಯಕ ಯೇಸುದಾಸ್‌ರನ್ನು ಅವಮಾನಿಸಿದ್ದು ಮಾತ್ರವಲ್ಲ ದಲಿತ ಶಾಸಕರನ್ನು, ಮಂತ್ರಿಗಳನ್ನು, ಐ.ಎ.ಎಸ್. ಜಾತಿ ಆಧಾರಿತ ಅವಮಾನಗಳು ಅವರ ಬೆನ್ನು ಬಿಟ್ಟಿಲ್ಲ. ಉನ್ನತ ಶಿಕ್ಷಣ ಪಡೆಯುವ ದಲಿತ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಲಿತರನ್ನು ಜಾತಿ ಕಾರಣಕ್ಕಾಗಿ ಅವಮಾನಿಸಲಾಗುತ್ತಿದೆ. ಜಾತಿವಾದ ಅನಾಗರಿಕ ಮನಸ್ಥಿತಿ, ವಿಕೃತ ರೂಪ ಪಡೆಯುತ್ತಿದೆ. ಹಾಗಾದರೆ ‘‘ಬೀದಿ ಸ್ವಚ್ಛಗೊಳಿಸಬೇಕೆ ಇಲ್ಲ ಕೊಳೆತು ನಾರುವ ಜಾತಿವಾದಿ ಮನಸುಗಳು ಶುದ್ಧಿಯಾಗಬೇಕೆ ನಾಗರಿಕ ಸಮಾಜವೇ ಆಲೋಚಿಸಬೇಕು’’.
ಈ ಶೋಷಿತ ಸಮುದಾಯಗಳ ವಿಶೇಷ ಆರ್ಧಿಕ ಸಾಮಾಜಿಕ ಸೌಲಭ್ಯಗಳೆಲ್ಲ ಈ ಹಿಂದೂ ಮನುವಾದಿ ಬ್ರಾಹ್ಮಣಶಾಹಿ ಜಾತಿವಾದಿಗಳ ಆಡಳಿತ ವ್ಯವಸ್ಥೆಯಿಂದ ನಿಯಂತ್ರಿಸಲ್ಪಟ್ಟು ಇಡೀ ಭಾರತೀಯ ಸಮಾಜವೇ ಜಾತಿವಾದದ ಅಸಮಾನತೆಯಂದ ಕೊಳೆತು ನಾರುತ್ತಿದೆ. ಆದ್ದರಿಂದ ಸ್ವಚ್ಛ, ಶುದ್ಧ ಭಾರತ ಹೆಸರಿನಲ್ಲಿ ಬೀದಿಯಲ್ಲಿರುವ ಕಸ ಗುಡಿಸುವುದನ್ನು ಬಿಟ್ಟು ಭಾರತೀಯ ಸಮಾಜಕ್ಕೆ ಆವರಿಸಿಕೊಂಡ ಅವಮಾನಕ್ಕೆ ಕಾರಣವಾದ ಹಿಂದೂ ಮನುವಾದಿ ಬ್ರಾಹ್ಮಣಶಾಹಿ ಕೊಳಕನ್ನು ಸ್ವಚ್ಛಗೊಳಿಸಲು ಮುನುವಾದಿಗಳು ಮೊದಲು ಮುಂದಾಗಲಿ!
ಬಹುಸಂಖ್ಯಾತ ಶೋಷಿತ ಹಾಗೂ ಹಿಂದುಳಿದ ಆದಿವಾಸಿ ಸಮುದಾಯಗಳ ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಭಾರತೀಯ ಸಮಾಜವನ್ನು ವಿಕೃತ ಹಿಂದೂ ಮನುವಾದೀಕರಣಗೊಳಿಸುವ ಬ್ರಾಹ್ಮಣಶಾಹಿ ಸಂಘ ಪರಿವಾರದ ಸಂಚನ್ನು ಅರ್ಥಮಾಡಿಕೊಂಡು ಬಾಬಾ ಸಾಹೇಬರು ಮುನ್ನಡೆಸಿದ ‘ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯಲಾರೆ’ ಎಂಬ ಸೈದ್ಧ್ಯಾಂತಿಕ ಹಾಗೂ ವೈಚಾರಿಕ ಹೋರಾಟವನ್ನು ಮುನ್ನಡೆಸಬೇಕಾದ ತುರ್ತು ಅನಿವಾರ್ಯತೆ ಇದೆ. ಇದೇ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಅರೆ ಅವಕಾಶಗಳಿಗಾಗಿ ಬಾಬಾ ಸಾಹೇಬರನ್ನು ದುರ್ಬಳಕೆ ಮಾಡಿಕೊಳ್ಳುತ್ತ ಹಿಂದೂ ಮನುವಾದಿ ಬ್ರಾಹ್ಮಣಶಾಹಿ ಕರಾಳ ಮನಸ್ಸುಳ್ಳ ಖೋಟಾ ದಲಿತ ನಾಯಕರ ಬಗ್ಗೆ ಎಚ್ಚರಿಕೆಯಿಂದಿದ್ದು, ಬಾಬಾ ಸಾಹೇಬರ ವೈಜ್ಞಾನಿಕ, ಪ್ರಜಾಸತ್ತಾತ್ಮಕ ಹೋರಾಟವನ್ನು ಮುನ್ನಡೆಸಬೇಕಾದ ಜವಾಬ್ದಾರಿಯು ದಲಿತ, ಹಿಂದುಳಿದ ಹಾಗೂ ಎಲ್ಲಾ ಶೋಷಿತ ಸಮುದಾಯಗಳ ಆದ್ಯ ಕಾರ್ಯಕ್ರಮವಾಗಬೇಕಾಗಿದೆ
- courtesy : varthabharati
0 comments:
Post a Comment