PLEASE LOGIN TO KANNADANET.COM FOR REGULAR NEWS-UPDATES


ಬ್ರಿಟಿಷ್ ಪ್ರಭುತ್ವದ ವಿರುದ್ಧ ಮಹಾತ್ಮಾ ಗಾಂಧಿ ಅನ್ವೇಷಿಸಿದ ಸತ್ಯಾಗ್ರಹ ತಂತ್ರ ಕೇವಲ ರಾಜಕೀಯ ಗುರಿ ಸಾಧನೆಗೆ ಸೀಮಿತವಾಗಿರದೆ, ಜನರ ಪ್ರಜ್ಞೆಯ ಭಾಗವಾಗಿ ಸಂಕೀರ್ಣ ಮತ್ತು ಬಹುಆಯಾಮದ ಪರಿವರ್ತನೆಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಿತು. ಸುಮಾರು ಆರು ದಶಕಗಳಿಂದ ಗಾಂಧಿ ಸೇರಿದಂತೆ ಅವರ ಅನುಯಾಯಿಗಳು ಅನುಸರಿಸುತ್ತಿರುವ ಸತ್ಯಾಗ್ರಹದಂತಹ ತಂತ್ರಗಳು ಸ್ವಾತಂತ್ರ್ಯಪೂರ್ವ ಮತ್ತು ನಂತರದ ಭಾರತದಲ್ಲಿ ತಲೆದೋರಿದ ಧರ್ಮ ಸೂಕ್ಷ್ಮತೆ, ಕೋಮು ಗಲಭೆೆ, ಅಸ್ಪಶ್ಯತೆ ಮತ್ತು ಮಹಿಳಾ ಶೋಷಣೆಯಂತಹ ಅನೇಕ ಸಾಮಾಜಿಕ ಸಮಸ್ಯೆಗಳನ್ನು ತಾರ್ಕಿಕವಾಗಿ ಮತ್ತು ಪ್ರಾಯೋಗಿಕವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಬಹುಷ: ಇದೇ ಕಾರಣಕ್ಕೆ ಗಾಂಧಿ ತನ್ನ ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ನೇತಾರರಿಂದ ಭಿನ್ನವಾಗಿ ನಿಲ್ಲುತ್ತಾರೆ. ಅಂದು ಸಾರ್ವಜನಿಕವಾಗಿ ಗುರುತಿಸಿಕೊಂಡ ಬಹುತೇಕರ ಸಿದ್ಧಾಂತ ಮತ್ತು ಯೋಚನೆಗಳು ಘಟನೆ ಕೇಂದ್ರಿತ ಅಥವಾ ಸನ್ನಿವೇಶಗಳಿಗೆ ತೋರಿದ ತಕ್ಷಣದ ಪ್ರತಿಕ್ರಿಯೆಯಾಗಿ ಕಂಡು ಬಂದರೆ, ಗಾಂಧೀಜಿಯ ಸಿದ್ಧಾಂತ ಮತ್ತು ಪ್ರಯೋಗಗಳು ಸಾರ್ವಕಾಲಿಕ ಸತ್ಯವಾಗಿ ಹೊರಜಗತ್ತಿಗೆ ಪ್ರಕಟಗೊಂಡಿತ್ತು. ಇದೇ ಕಾರಣಕ್ಕಾಗಿ ಶಾಂತಿ, ಏಕತೆ ಮತ್ತು ಕೋಮು ಸಾಮರಸ್ಯಗಳಂತಹ ಜಾಗತಿಕ ಕಾರ್ಯಸೂಚಿಗಳ ವಿಶ್ಲೇಷಣೆಯಲ್ಲಿ ಮತ್ತು ನೀತಿ ನಿರೂಪಣೆಯಲ್ಲಿ ಗಾಂಧಿ ಅತೀ ಪ್ರಸ್ತುತವಾಗುತ್ತಾರೆ. ಪ್ರಚಲಿತ ತಲ್ಲಣಗಳಿಗೆ ಪರಿಹಾರ ಸೂಚಿಸುವ ಮತ್ತು ಸಮಷ್ಟಿಯನ್ನು ಒತ್ತೊಟ್ಟಿಗೆ ಸೇರಿಸಿ ಮುನ್ನಡೆಯುವ ಅಂತ:ಶಕ್ತಿಯಿರುವುದು ಗಾಂಧಿ ಚಿಂತನೆಗೆ ಮಾತ್ರ. ಅಖಂಡತೆ, ಸಮಷ್ಟಿ ಮತ್ತು ಧಾರ್ಮಿಕ ಸಾಮರಸ್ಯದ ಕುರಿತಾದ ಗಾಂಧೀಜಿಯ ನಿಲುವು ಮತ್ತು ಸೈದ್ಧಾಂತಿಕ ಚೌಕಟ್ಟುಗಳು ಇಂದಿಗೂ ಭಾರತದಂತಹ ಧಾರ್ಮಿಕ ಸೂಕ್ಷ್ಮತೆಯುಳ್ಳ ದೇಶಗಳಿಗೆ ಮಾರ್ಗಸೂಚಿಗಳಿದ್ದಂತೆ. 1885ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆಯೊಂದಿಗೆ ಸಾಮಾಜಿಕ ಸುಧಾರಣೆಯ ಹೊಸ ಆಶಯ ಮತ್ತು ಸಾಂವಿಧಾನಿಕ ಅಧಿಕಾರ ಸ್ಥಾಪನೆಯ ಮೂಲಕ ದೇಶದ ಸ್ವಾತಂತ್ರ್ಯಗಳಿಸುವ ಯೋಚನೆ ಪ್ರಖರವಾಗಿ ಮೂಡಿಬಂತು. 1929ರಲ್ಲಿ ನೆಹರು ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನ ಈ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯನ್ನಿಟ್ಟಿತ್ತು. ಈ ಮಧ್ಯೆ ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ ಹೊತ್ತಿಗೆ ಭಾರತೀಯ ಕಾಂಗ್ರೆಸ್ ಮೂರು ದಶಕಗಳ ಸಂಕ್ಷಿಪ್ತ ಸಮಾಜೋ-ರಾಜಕೀಯ ಇತಿಹಾಸವನ್ನು ಹೊಂದಿತ್ತು. ಗಾಂಧೀಜಿ ಸತ್ಯಾಗ್ರಹದ ಮೂಲರೂಪವಾದ ‘ಸದಾಗ್ರಹ’ ಹುಟ್ಟಿಕೊಂಡಿದ್ದು 1906ರಲ್ಲಿ, ದಕ್ಷಿಣ ಅಫ್ರಿಕಾದಲ್ಲಿ ವಲಸಿಗ ಭಾರತೀಯರ ಹೋರಾಟದ ಸಂದಭರ್ದಲ್ಲಿ. ತದನಂತರ ಭಾರತದ ಸ್ವಾತಂತ್ರ್ಯ ಹೋರಾಟದ ಸಂದಭರ್ದಲ್ಲಿ ದೇಶಿಯ ಸಮಾಜೋ-ಆರ್ಥಿಕ ಸನ್ನಿವೇಶಕ್ಕೆ ಪೂರಕವಾಗಿ ಸತ್ಯಾಗ್ರಹವೆಂಬ ಪರಿಷ್ಕೃತ ತಂತ್ರವನ್ನು ಪರಿಚಯಿಸಲಾಯಿತು. ಇದು ಕೇವಲ ಸತ್ಯದ ಪ್ರತಿಪಾದನೆ, ಸತ್‌ಚಿಂತನೆ ಮತ್ತು ಅಹಿಂಸೆಗಳೆಂಬ ಮೃದು ಧೋರಣೆಯ ಪದಪುಂಜಗಳಲ್ಲ, ಬದಲಾಗಿ ಸಂಕೀರ್ಣವಾದ ಮತ್ತು ಬಹುಶಿಸ್ತೀಯ ತಾತ್ವಿಕ ಚಿಂತನೆ. ಸತ್ಯಾಗ್ರಹವನ್ನು ಪ್ರಯೋಗಿಸುವುದಕ್ಕಿಂತಲೂ ಅದರೊಳಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುವುದೂ ಕೂಡ ಸೂಕ್ಷ್ಮ ಮಟ್ಟದ ಪರಿವರ್ತನೆಯೇ ಆಗಿದೆ. ಸತ್ಯಾಗ್ರಹದ ಆಧ್ಯಾತ್ಮಿಕ ಮತ್ತು ಸೈದ್ಧಾಂತಿಕ ಸಂಲಗ್ನತೆಯೂ ಅನನ್ಯ. ಹಿಂದೂ ಧರ್ಮದ ಚಿಂತನೆಯಲ್ಲಿ ಸತ್ಯಾಗ್ರಹ ತಂತ್ರದ ಬೇರಿದ್ದರೂ, ಅದರ ಪ್ರಾಯೋಗಿಕ ಪ್ರಕ್ರಿಯೆಗೆ ತಾತ್ವಿಕ ಅನ್ವಯಿಕತೆ ಮತ್ತು ತಾರ್ಕಿಕ ಚೌಕಟ್ಟನ್ನು ಕಟ್ಟಿಕೊಟ್ಟದ್ದು ಭಾರತೀಯ ತತ್ವಶಾಸ್ತ್ರ ಮತ್ತು ಯೋಗ ಶಾಸ್ತ್ರಗಳು. ಬಹಳಷ್ಟು ಸಂದಭರ್ಗಳಲ್ಲಿ ಸತ್ಯಾಗ್ರಹದ ಚಲನೆ ಏಕಮುಖವೆಂದು ಗ್ರಹಿಸಲ್ಪಟ್ಟಿದೆ. ಆದರೂ ಇದು ಕೇವಲ ದೈಹಿಕ ದಂಡನೆಯ ಕ್ರಿಯೆಯಾಗಿರದೆ, ಆತ್ಮ ಶುದ್ಧೀಕರಣ ಮತ್ತು ಪ್ರತಿವಾದಿಯ ಕೆಟ್ಟನಡತೆಯಲ್ಲೂ ಒಳೆಯತನವನ್ನು ಹುಡುಕುವ ಪ್ರಜ್ಞಾಪೂರ್ವಕ ಪ್ರಯತ್ನ. ಇಲ್ಲಿ ನ್ಯಾಯ ಬಯಸುವವನ ಅಚಲ ಸಹನಾಶಕ್ತಿಯೂ ದೀರ್ಘವಾಗಿ ಪರೀಕ್ಷೆಗೊಳಗಾಗುತ್ತದೆ. ಪ್ರತಿವಾದಿಯ ಪ್ರಜ್ಞೆಯ ಭಾಗವಾಗಿ ಮತ್ತು ಆತನ ನಡವಳಿಕೆ ಹಾಗೂ ಪ್ರತಿಕ್ರಿಯೆಯಲ್ಲಿ ಅಗಾಧ ಬದಲಾವಣೆ ಸಾಧಿಸುವುದಕ್ಕೆ ಸಾಧ್ಯವಾಗುವ ಸನ್ನಿವೇಶದಲ್ಲಿ ಸತ್ಯಾಗ್ರಹ ಸಂಪೂರ್ಣವಾಗಿ ಸಾಕ್ಷಾತ್ಕರಿಸುತ್ತದೆಯೆಂಬುದು ವಿನೋಭಾ ಬಾವೆಯವರ ವಿಶ್ಲೇಷಣೆ. ಧಾರ್ಮಿಕ ಸಾಮರಸ್ಯ ಮತ್ತು ಸಮನ್ವಯತೆಯ ಮೂಲಕ ರಾಜಕೀಯ ಚಳವಳಿಯನ್ನು ಕಟ್ಟಿಕೊಳ್ಳುವ ಹೊಸ ಚಿಂತನೆಯನ್ನು ಜಗತ್ತಿಗೆ ತೋರಿಸಿದ ದಾರ್ಶನಿಕರಲ್ಲಿ ಗಾಂಧೀಜಿ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರ ಸ್ವಾತಂತ್ರ್ಯ ಕಲ್ಪನೆಯಾದ ‘ಸ್ವರಾಜ್ ಭಾರತ್’ ಹಿಂದೂ-ಮುಸ್ಲಿಮರ ಹೃದಯಾಳದ ಏಕತೆಯಿಂದ ಸಾಧಿಸಲ್ಪಡಬೇಕೆಂದು ಬಯಸಿದ್ದರು. ಧರ್ಮಗಳ ನಡುವಿನ ಕಲಹ, ಭಯ, ಅಶಾಂತಿಯಿಂದ ಸ್ವರಾಜ್ಯ ಭಾರತದ ನಿರ್ವಚನೆ ಸಾಧ್ಯವಿಲ್ಲ, ಬದಲಾಗಿ ಎರಡೂ ಧರ್ಮಗಳ ಧಾರ್ಮಿಕ ಅಂತ:ಶಕ್ತಿಗಳ ಸಹಭಾಗಿತ್ವ ಮತ್ತು ಪರಸ್ಪರ ಗೌರವಗಳ ಮೂಲಕ ಧಾರ್ಮಿಕ ಏಕತೆ ಮತ್ತು ಸುಸ್ಥಿರ ಸ್ವತಂತ್ರತೆಯ ಕಲ್ಪನೆಯನ್ನು ಪ್ರತಿಪಾದಿಸಿದ್ದರು. ಕೆಲವು ಬಾರಿ ಈ ಯೋಚನೆ ತೀರಾ ಭಾವುಕತೆಯ ಅಭಿವ್ಯಕ್ತಿಯಾಗಿ ಕಂಡರೂ, ಭಿನ್ನತೆ ಮತ್ತು ಅತೀ ಸಂಕೀರ್ಣತೆಯುಳ್ಳ ಸಮಾಜೋ-ರಾಜಕೀಯ ವ್ಯವಸ್ಥೆಯಲ್ಲಿ ಸಮಭಾವವುಳ್ಳ ಸಾಮಾಜಿಕತೆ ಸೃಷ್ಟಿಸಲು ಇಂತಹ ಯೋಚನೆಗಳು ಅಗತ್ಯವಾಗುತ್ತದೆ ಮತ್ತು ಎರಡೂ ಧರ್ಮಗಳ ಮಧ್ಯೆ ಇರುವ ಸೈದ್ಧಾಂತಿಕ ಭಿನ್ನಭಿಪ್ರಾಯವನ್ನು ಬದಿಗಿರಿಸಿ ಪರಸ್ಪರ ನಂಬಿಕೆಯ ಮುನ್ನಡೆಯುವಿಕೆ ಸಾಧ್ಯವಿದೆ.
ಗಾಂಧೀಜಿ 1920ರಲ್ಲಿ ಕೈಗೊಂಡ ಐತಿಹಾಸಿಕ ಅಸಹಕಾರ ಚಳವಳಿ ನೇರವಾಗಿ ಖಿಲಾಪತ್ ವಿಷಯಕ್ಕೆ ಸಂಬಂಧಪಟ್ಟದ್ದಾದರೂ, ಗಾಂಧಿ ಅಂತರ್ಯದ ಹಿಂದೂ-ಮುಸ್ಲಿಮ್ ಏಕತೆಯ ಕನಸು ಈ ಸಂದಭರ್ದಲ್ಲಿ ದಟ್ಟವಾಗಿ ಅನಾವರಣಗೊಂಡಿತ್ತು. ಮೊದಲ ಮಹಾಯುದ್ಧದ ನಂತರ ‘ಖಿಲಾಫತ್’ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ಕಾರ್ಯಸೂಚಿಯಾಗಿದ್ದರೂ, ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಭಾರತದ ವಿಘಟಿತ ಧರ್ಮಗಳನ್ನು ಒಂದೇ ಸೂರಿನಡಿಗೆ ತರುವ ಹಾಗೂ ಧಾರ್ಮಿಕ ಐಕ್ಯತೆಯ ಮೂಲಕ ಸ್ವರಾಜ್ಯ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವುದಾಗಿತ್ತು. ಸ್ವಾತಂತ್ರ ಪೂರ್ವ ಭಾರತದಲ್ಲಿ ಬ್ರಿಟಿಷ್ ಆಡಳಿತ, ಹಿಂದೂ ಮತ್ತು ಇಸ್ಲಾಮ್ ಧರ್ಮಗಳು ಪ್ರಮುಖ ಶಕ್ತಿಕೇಂದ್ರಗಳಾಗಿ ತ್ರಿಕೋನ ಸ್ಥಾನದಲ್ಲಿದ್ದವು. ಇವುಗಳ ಪೈಕಿ ಹಿಂದೂ ಮತ್ತು ಮುಸ್ಲಿಮರು ತಮ್ಮ ವೈಮನಸ್ಸನ್ನು ಬದಿಗಿರಿಸಿ ಏಕತೆಯನ್ನು ಕಂಡುಕೊಂಡರೆ ಅತೀ ಸುಲಭವಾಗಿ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆಯಬಹುದೆಂಬುದು ಗಾಂಧಿಯ ಇಂಗಿತವಾಗಿತ್ತು. ಗಾಂಧಿ ಮಾತಿನಲ್ಲೇ ಹೇಳುವುದಾದರೆ ‘‘ಖಿಲಾಫತ್ ಚಳವಳಿ ಕೇವಲ ರಾಜಕೀಯ ಚಟುವಟಿಕೆಯಲ್ಲ, ಬದಲಾಗಿ ಅತೀ ಜರೂರಾಗಿ ನಾನು ಪಾಲಿಸಬೇಕಾದ ಧರ್ಮ’’ವೆಂದಿದ್ದರು. ಈ ಚಳವಳಿಯ ಮೂಲಕ ಅಹಿಂಸೆಯ ನೈಜ ಸ್ವರೂಪವನ್ನು ಜಗತ್ತಿಗೆ ತೆರೆದಿಟ್ಟ ಗಾಂಧಿ, ಅಹಿಂಸೆ ಮತ್ತು ಅಸಹಕಾರ ಚಳವಳಿಯ ಯಶಸ್ಸು ದೇಶದ ಕ್ಷೀಪ್ರ ಬದಲಾವಣೆಗೆ ಮುನ್ನುಡಿಯಾಗಲಿದೆಯೆಂದು ಭಾವಿಸಿದ್ದರು. 1920 ರ ಮಧ್ಯ ಭಾಗದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಕೋಮು ದಂಗೆ ಭುಗಿಲೆದ್ದಾಗ, ಗಾಂಧಿ ಬೇಸತ್ತು ಇಪ್ಪತ್ತೊಂದು ದಿನಗಳ ಕಾಲ ನಿರಂತರ ಉಪವಾಸವನ್ನು ವೌಲಾನಾ ಮುಹಮ್ಮದ್ ಅಲಿಯವರ ದೆಹಲಿ ನಿವಾಸದ ಮುಂದೆ ನಡೆಸಿದರು. ಈ ಉಪವಾಸ ಧರ್ಮೋಚಿತವಾದುದು ಹಾಗೂ ತಾನು ನಂಬಿದ ಧರ್ಮ ಇಂತಹ ಕ್ಲಿಷ್ಟ ಸಂದರ್ಭಗಳನ್ನು ಪ್ರಾರ್ಥನೆ ಮತ್ತು ಉಪವಾಸಗಳ ಮೂಲಕ ತಹಬದಿಗೆ ತರಲು ಸಾಧ್ಯವಿದೆಯೆಂಬುದನ್ನು ಬೋಧಿಸಿದೆಯೆಂದರು. ಇಂತಹ ಕೋಮುದಂಗೆಗಳನ್ನು ಹಿಂದೂ, ಇಸ್ಲಾಮ್ ಧರ್ಮದ ಮುಖಂಡರು ಮತ್ತು ಬ್ರಿಟಿಷ್ ಅಧಿಕಾರಿಗಳ ಮಾತುಕತೆಯ ಮೂಲಕ, ಹಾಗೂ ಎರಡೂ ಧರ್ಮದ ಜನರು ತಮ್ಮಲ್ಲಿ ಬೇರೂರಿರುವ ಧರ್ಮಕ್ರೋಧವನ್ನು ಮೀರಿ, ಹೃದಯಾಳದಲ್ಲಿ ದೈವತ್ವವನ್ನು ಪುನ:ಸ್ಥಾಪಿಸುವ ಮೂಲಕ ಪರಿಹರಿಸಬೇಕೆಂಬ ಸಂದೇಶವನ್ನು ನೀಡಿದ್ದರು ಗಾಂಧಿಯ ಪ್ರಕಾರ ಕೋಮು ಗಲಭೆೆಗಳು ಭುಗಿಲೇಳುವುದು ಎರಡೂ ಧರ್ಮಗಳ ನಡುವಿನ ಆಧ್ಯಾತ್ಮಿಕ ಅನುಸಂಧಾನದ ಕೊರತೆಯಿಂದ. ಆದುದರಿಂದ ಧರ್ಮಗಳ ಅಂತಃಸತ್ವವನ್ನು ಮುಂಚೂಣಿಗೆ ತಂದು ಪರಸ್ಪರ ಭ್ರಾತೃತ್ವದ ಮೂಲಕ ಧಾರ್ಮಿಕ ಅನುಸಂಧಾನ ನಡೆಸಿ ಕೋಮು ಸಾಮರಸ್ಯವನ್ನು ತರುವುದಕ್ಕೆ ಸಾಧ್ಯವಿದೆಯೆಂದು ಭಾವಿಸಿದ್ದರು. ಅವರ ಪ್ರಕಾರ ಭಾರತದ ದೇಶಿಯ ಸ್ವರೂಪ ಪ್ರಕಟಗೊಳ್ಳುವುದು ಎರಡೂ ಧರ್ಮಗಳ ಅಸ್ತಿತ್ವ ಮತ್ತು ಸಮನ್ವಯತೆಯಿಂದ. ಇವುಗಳಲ್ಲಿ ಯಾವುದೇ ಒಂದು ಧರ್ಮವು ತನ್ನ ಅಸ್ತಿತ್ವವನ್ನು ಕಳೆದುಕೊಂಡರೆ ಭಾರತವೂ ಕೂಡ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆಯೆನ್ನುವ ಮೂಲಕ ಭಾರತದ ಏಕತೆಗೆ ಭದ್ರವಾದ ಕೋಮು ಸಾಮರಸ್ಯದ ಚೌಕಟ್ಟನ್ನು ಒದಗಿಸಿಕೊಟ್ಟಿದ್ದರು. ತದನಂತರ, ಕಲ್ಕತ್ತಾದಲ್ಲಿ ಭುಗಿಲೆದ್ದ ಕೋಮುಗಲಭೆೆಯ ಸಂದಭರ್ದಲ್ಲೂ ಗಾಂಧಿ ತನ್ನ ಅನಾರೋಗ್ಯವನ್ನು ಬದಿಗೊತ್ತಿ ದಂಗೆಯ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದರು. ಹಿಂದೂ, ಮುಸ್ಲಿಮ್ ಸೇರಿದಂತೆ ಇನ್ನಿತರ ಧರ್ಮದವರು ಸಹಬಾಳ್ವೆ ನಡೆಸುವ ದೃಷ್ಟಿಯಿಂದ ದೇಶದ ವಿಭಜನೆಯನ್ನು ಕಟುವಾಗಿ ವಿರೋಧಿಸಿದರು. ಆದರೂ ಅವರ ಆಶಯ ಈಡೇರಲಿಲ್ಲವೆಂಬುದು ಬೇರೆ ಮಾತು. ಇಂದಿನ ರಾಜಕೀಯ ಧ್ರುವೀಕರಣದ ಸಂಕೀರ್ಣ ಸಂದಭರ್ಗಳಲ್ಲಿ ದೇಶದ ಏಕತೆಗೆ ಹಾಗೂ ಆಂತರಿಕ ಭದ್ರತೆಗೆ ವ್ಯಾಪಕವಾಗಿ ಸವಾಲೊಡ್ಡುತ್ತಿರುವ ಕೋಮುಗಲಭೆೆಯಂತಹ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ದೃಷ್ಟಿಯಿಂದ ಗಾಂಧಿಯ ಸತ್ಯಾಗ್ರಹ ತಂತ್ರದ ನಿಲುವು ಮತ್ತು ಅನ್ವಯಿಸುವಿಕೆಯ ಸಾಧ್ಯತೆಯನ್ನು ಪುನರಪಿ ಅರ್ಥೈಸುವ ಅಗತ್ಯವಿದೆ.
varthabharati

Advertisement

0 comments:

Post a Comment

 
Top