PLEASE LOGIN TO KANNADANET.COM FOR REGULAR NEWS-UPDATES




  ವಿವಿಧ ವರ್ಗಗಳ ಸಮಾಜ ಬಾಂಧವರಲ್ಲಿ ಏಕತೆ ಮೂಡಿಸುವುದು ಹಾಗೂ ಧರ್ಮ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಸಂಸದ ಶಿವರಾಮಗೌಡ ಅವರು ಹೇಳಿದರು.
  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಛತ್ರಪತಿ ಶಿವಾಜಿ ಮರಾಠ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ಗೌರಿ ಅಂಗಳದ ಶ್ರೀ ತುಳಜಾಭವಾನಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಈ ನಾಡಿನಲ್ಲಿ ಸ್ವರಾಜ್ಯದ ಪರಿಕಲ್ಪನೆ ಹುಟ್ಟು ಹಾಕಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಆದೇಶ ಹೊರಡಿಸುವ ಮೂಲಕ ಸರ್ಕಾರ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.  ಸರ್ಕಾರದ ಆದೇಶದಂತೆ ಇದೇ ಪ್ರಥಮ ಬಾರಿಗೆ ಶಿವಾಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.  ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ವೀರ ಅಷ್ಟೇ ಅಲ್ಲ, ಸ್ತ್ರೀಯರ ಬಗ್ಗೆ ಹೆಚ್ಚು ಗೌರವ ಹೊಂದಿದ್ದರು, ಜನಸಾಮಾನ್ಯರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರಿಂದಲೇ ಅವರು ಜನಾನುರಾಗಿ ರಾಜರಾಗಿದ್ದರು.  ಶ್ರೀ ರಾಘವೇಂದ್ರ ಸ್ವಾಮಿಗಳಿಂದ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ, ರಾಘವೇಂದ್ರ ಸ್ವಾಮಿಗಳು ಶಿವಾಜಿಗೆ ’ನಾವು ಶಾಸ್ತ್ರ ಹೇಳುವ ಕೆಲಸ ಮಾಡುವ ಮೂಲಕ ಸೇವೆ ಮಾಡುತ್ತಿದ್ದರೆ, ನೀನು ಶಸ್ತ್ರ ಹಿಡಿಯುವ ಮೂಲಕ ಧರ್ಮ ರಕ್ಷಣೆ ಮಾಡುತ್ತಿದ್ದೀರಿ’, ನಾವು ಯೋಗಿಯಾಗಿದ್ದರೆ, ನೀನು ಯೋಧನಾಗಿದ್ದೀಯ’ ಎಂದು ಆತ್ಮೀಯವಾಗಿ ಆಶೀರ್ವಾದ ಮಾಡಿದ್ದರು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.  ದೇಶದಲ್ಲಿನ ಈಗಿನ ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ, ಶಿವಾಜಿ ಮಹಾರಾಜರ ರಾಜ ತಂತ್ರ ಹಾಗೂ ಬುದ್ದಿವಂತಿಕೆ ನಾಡಿಗೆ ಪ್ರೇರಣೆಯಾಗಿದೆ ಎಂದು ಸಂಸದ ಶಿವರಾಮಗೌಡ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಅವರು ಮಾತನಾಡಿ, ಶಿವಾಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸರ್ಕಾರ ಸೂಚನೆ ನೀಡಿದ್ದರೂ ಸಹಾ, ಬಹಳಷ್ಟು ಅಧಿಕಾರಿಗಳು, ಪ್ರಮುಖವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೇ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ಶಿವಾಜಿ ಮಹಾರಾಜರ ಖ್ಯಾತಿಯ ಹಿಂದೆ ಅವರ ತಾಯಿ ಜೀಜಾಬಾಯಿಯ ಶ್ರಮ ಹೆಚ್ಚಿನ ಮಹತ್ವ ಹೊಂದಿದೆ.  ಈಗಿನ ತಾಯಂದಿರು, ಜೀಜಾಬಾಯಿಯಂತೆ ತಮ್ಮ ಮಕ್ಕಳ ಶ್ರೇಯಸ್ಸಿಗೆ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿಸಲು ಶ್ರಮಿಸಬೇಕು.  ಮರಾಠ ಸಮಾಜದವರು ಒಗ್ಗೂಡಿ, ಶಿವಾಜಿ ಮಹಾರಾಜರಂತೆ ಈ ನಾಡಿನ ಐಕ್ಯತೆ ಹಾಗೂ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
  ನಿವೃತ್ತ ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರ ಅವರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಶಿವಾಜಿಯ ಮೂಲ ಈಗಿನ ಕರ್ನಾಟಕ ರಾಜ್ಯವಾಗಿದೆ.  ಅವರ ತಂದೆ ಷಹಾಜಿ ಬೆಂಗಳೂರನ್ನು ಆಳುತ್ತಿದ್ದರಿಂದ ಬೆಂಗಳೂರಿನಲ್ಲಿ ಅವರು ೨ ವರ್ಷ ನೆಲೆಸಿದ್ದರು, ಜನಸಾಮಾನ್ಯರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದರಿಂದಲೇ ಶಿವಾಜಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.  ಆತನ ಸಾಮ್ರಾಜ್ಯ ದಕ್ಷಿಣದಲ್ಲಿ ಬೆಂಗಳೂರು, ತಂಜಾವೂರು ವರೆಗೂ ಹಬ್ಬಿತ್ತು.  ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಬಾಂಧವ್ಯ ಹಾಳುಗೆಡವಲು ಬಯಸುವವರು ಶಿವಾಜಿ ಮಹಾರಾಜರ ಇತಿಹಾಸವನ್ನು ಅವಲೋಕಿಸಲಿ ಎಂದರು.
  ಶ್ರೀ ಛತ್ರಪತಿ ಶಿವಾಜಿ ಮರಾಠ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಬಡಿಗೇರ, ಸಹಾಯಕ ಆಯುಕ್ತ ಶರಣಬಸಪ್ಪ, ತಹಸಿಲ್ದಾರ್ ಬಿ.ಎಲ್. ಘೋಟೆ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
  ಸಮಾರಂಭಕ್ಕೂ ಮುನ್ನ ಬೆಳಿಗ್ಗೆ ನಗರದ ಕಿನ್ನಾಳ ರಸ್ತೆಯ ಶ್ರೀ ಗೋವಿಂದರಾಯ ದೇವಸ್ಥಾನ ಆವರಣದಿಂದ ಪ್ರಾರಂಭಗೊಂಡ ಮೆರವಣೆಗೆಗೆ ಶಾಸಕ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಮರಾಠಾ ಸಮಾಜದ ತಾಲೂಕಾ ಅಧ್ಯಕ್ಷ ಮಾರುತಿರಾವ್ ನಿಕ್ಕಂ, ಅವರು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಅರ್ಪಿಸಿದರು.  ಮೆರವಣಿಗೆ ಅಶೋಕವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ ಮಾರ್ಗವಾಗಿ ಗೌರಿ ಅಂಗಳದ ಶ್ರೀ ತುಳಜಾಭವಾನಿ ದೇವಸ್ಥಾನದವರೆಗೆ ನಡೆಯಿತು.  ಮರಾಠ ಸಮಾಜದಿಂದ ೧೨೫ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಯನ್ನು ಇನ್ನಷ್ಟು ಆಕರ್ಷಿತಗೊಳಿಸಿದವು.

Advertisement

0 comments:

Post a Comment

 
Top