ಮಂಗಳೂರು, ಅ.23: ಹಲವಾರು ಸಾಮಾಜಿಕ ಕ್ರಾಂತಿಗಳ ಮೂಲಕ ಹೆಸರು ಮಾಡುತ್ತಿರುವ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರವು ಇಂದು ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮತ್ತೊಂದು ಕ್ರಾಂತಿಗೆ ಸಾಕ್ಷಿಯಾಗಿದೆ. ಬ್ರಹ್ಮಶ್ರೀ ನಾರಾಯಣಗುರುಗಳಿಂದ ಸ್ಥಾಪಿಸಲ್ಪಟ್ಟ ಕ್ಷೇತ್ರದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಲಕ್ಷ್ಮೀ ಪೂಜೆಯಲ್ಲಿ ಸಹಸ್ರಾರು ವಿಧವೆಯರು ಭಾಗವಹಿಸುವ ಜತೆಗೆ ಸ್ವತಃ ಲಕ್ಷಿ ಹಾಗೂ ವಿಷ್ಣು ದೇವರಿಗೆ ಮಂಗಳಾರತಿ ನೆರವೇರಿಸಿದರು.
ಬೆಳಗ್ಗೆ ಕ್ಷೇತ್ರದ ಗರ್ಭಗುಡಿಯ ಬಳಿಯ ನಾರಾಯಣ ಗುರುವಿಗೆ ಪೂಜೆ ನೆರವೇರಿಸಿದ ವಿಧವಾ ಶಾಂತಿಯರಾದ ಲಕ್ಷ್ಮಿ, ಚಂದ್ರಾವತಿ ಮತ್ತು ಇಂದಿರಾ ಬಳಿಕ ಗರ್ಭಗುಡಿಯ ಪಕ್ಕದಲ್ಲಿ ಅಲಂಕೃತಗೊಂಡಿದ್ದ ಮಂಟಪದಲ್ಲಿ ಇರಿಸಲಾಗಿದ್ದ ವಿಷ್ಣು ಹಾಗೂ ಲಕ್ಷ್ಮಿಯರ ಪೂಜೆ ನೆರವೇರಿಸಿದರು. ಅಷ್ಟೋತ್ತರ ನಾಮಾ ಅರ್ಚನೆಯೊಂದಿಗೆ ಲಕ್ಷ್ಮೀ ಪೂಜೆಯ ಬಳಿಕ ದೇವಸ್ಥಾನದ ಗರ್ಭಗುಡಿಯ ಪ್ರಾಂಗಣದಲ್ಲಿ ಸೇರಿದ್ದ ವಿಧವೆಯರು ಸೇರಿದಂತೆ ಸಾವಿರಾರು ಮಹಿಳೆಯರು ಲಕ್ಷ್ಮಿ ಹಾಗೂ ವಿಷ್ಣು ದೇವರಿಗೆ ಮಂಗಳಾರತಿ ನೆರವೇರಿಸಲು ಕ್ಷೇತ್ರದ ಪ್ರಧಾನ ಅರ್ಚಕರಾದ ಲಕ್ಷ್ಮಣ ಶಾಂತಿ ಮತ್ತು ಲೋಕೇಶ್ ಶಾಂತಿ ಸಹಕರಿಸಿದರು. ಲಕ್ಷ್ಮೀ ಪೂಜೆಯ ಬಳಿಕ ವಿಷ್ಣು ಹಾಗೂ ಲಕ್ಷ್ಮಿ ದೇವರ ಮೂರ್ತಿಗಳನ್ನು ಬೆಳ್ಳಿ ರಥದಲ್ಲಿರಿಸಲಾಯಿತು. ಬಳಿಕ ಕ್ಷೇತ್ರದ ವಿಧವಾ ಶಾಂತಿಯರು ರಥವೇರಿ ಪೂಜೆಯ ಬಳಿಕ ದೇವರ ಮೂರ್ತಿಗಳೊಂದಿಗೆ ಅರ್ಚಕ ಲಕ್ಷ್ಮಣ ಶಾಂತಿ ಹಾಗೂ ಮಹಿಳಾ ಶಾಂತಿಯರನ್ನೊಳಗೊಂಡ ರಥವನ್ನು ವಿಧವೆಯರು ಎಳೆಯುತ್ತಾ ಕ್ಷೇತ್ರದ ಪ್ರದಕ್ಷಿಣೆಗೈದರು. ಅನಂತರ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ಸಾವಿರಾರು ಮಹಿಳೆಯರಿಗೆ ಸೀರೆ, ಕುಂಕುಮ, ಹೂವು, ರವಿಕೆ ಖಣದ ಜತೆ ಒಂದು ರೂ. ದಕ್ಷಿಣೆಯನ್ನು ಪ್ರಸಾದ ರೂಪವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಜನಾರ್ದನ ಪೂಜಾರಿ, ಪತಿಯನ್ನು ಕಳೆದುಕೊಂಡ ಮಾತೆಯರಿಂದ ಲಕ್ಷ್ಮೀ ಪೂಜೆ ನಡೆಸುವ ಮೂಲಕ ಸಮಾಜಕ್ಕೊಂದು ಸಂದೇಶ ನೀಡಲಾಗಿದೆ ಎಂದರು. ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದಂತೆ ಜಾತಿ, ಮತ ಧರ್ಮಗಳ ಭೇದವಿಲ್ಲದೆ ಇಂದು ನಡೆದ ಪೂಜೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಎಲ್ಲರಿಗೂ ಆಯುರಾರೋಗ್ಯ ಭಾಗ್ಯ, ಸಂಪತ್ತು ಲಭಿಸುವ ಜತೆಗೆ ಜನರು ಪರಸ್ಪರ ಪ್ರೀತಿಯಿಂದ ಬಾಳುವ ಸಂಕಲ್ಪವನ್ನು ಪೂಜೆಯ ಸಂದರ್ಭ ಮಾಡಲಾಯಿತು. ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಇಂತಹ ಪರಿವರ್ತನೆಯಾಗಿದೆ. ಅದನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ ಎಂದು ಜನಾರ್ದನ ಪೂಜಾರಿ ಹೇಳಿದರು. ಮೇಯರ್ ಮಹಾಬಲ ಮಾರ್ಲ, ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ರಾಧಾಕೃಷ್ಣ, ಹರಿಕೃಷ್ಣ ಬಂಟ್ವಾಳ, ರಾಘವೇಂದ್ರಕೂಳೂರು, ಬಿ.ಜಿ.ಸುವರ್ಣ, ಪದ್ಮರಾಜ್, ಲೀಲಾಕ್ಷ ಕರ್ಕೇರ, ಮಹೇಶ್ಚಂದ್ರ, ದೇವದಾಸ್, ದೇವೇಂದ್ರ ಪೂಜಾರಿ, ವಿಶ್ವನಾಥ, ಬಿ.ಕೆ.ತಾರಾನಾಥ, ದೇವದಾಸ್, ಪದ್ಮರಾಜ್, ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್‌ಗಳಾದ ಅಪ್ಪಿ, ನವೀನ್ ಡಿಸೋಜ, ಡೆನ್ನಿಸ್ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.
ದೇವರ ಆರತಿ ಭಾಗ್ಯ ಮನಸ್ಸಿಗೆ ಖುಷಿ ನೀಡಿತು
‘‘ದೇವರಿಗೆ ಮಂಗಳಾರತಿ ಮಾಡುವ ಭಾಗ್ಯ ಸಿಕ್ಕಿರುವುದು ಮನಸ್ಸಿಗೆ ತುಂಬಾ ಖುಷಿ ನೀಡಿದೆ. ಪ್ರತಿ ವರ್ಷ ನವರಾತ್ರಿ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಇದೀಗ ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿ ಪ್ರಥಮ ಬಾರಿಗೆ ದೇವರಿಗೆ ಆರತಿ ಮಾಡುವ ಭಾಗ್ಯ ದೊರಕಿದೆ’’ ಎಂದು ಪಂಜಿಮೊಗರು ನಿವಾಸಿ 33ರ ಹರೆಯದ ವಿಧವೆ ದೇವಕಿ ಎಂಬವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಪತಿಯನ್ನು ಕಳೆದುಕೊಂಡ ಬಳಿಕ ತಾಯಿಯ ಮನೆಯಲ್ಲಿದ್ದುಕೊಂಡು ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವ ದೇವಕಿ ಎರಡು ದಿನಗಳ ಹಿಂದೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾನು ನೋಂದಣಿ ಮಾಡಿಕೊಂಡಿದ್ದೇನೆಂದು ಹೇಳಿದರು.
varthabharati
0 comments:
Post a Comment