PLEASE LOGIN TO KANNADANET.COM FOR REGULAR NEWS-UPDATES




ಶೈಕ್ಷಣಿಕವಾಗಿ ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಹಾಸ್ಟೆಲ್‍ಗಳಿಗೆ ನಿವೇಶನ, ಬಡ ಕಸುಬುದಾರರಿಗೆ ಕಲ್ಲು ಗಣಿಗಾರಿಕೆಗೆ ಅನುಮತಿ, ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪುರೇಷೆ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲವು ವಸತಿ ಸಮಸ್ಯೆಗೆ ಪರಿಹಾರ ಇವು ತಮ್ಮ ಕಳೆದ 11 ತಿಂಗಳು ಜಿಲ್ಲೆಯಲ್ಲಿನ ಸೇವೆಯಲ್ಲಿ ಕೈಗೊಂಡ ಪ್ರಮುಖ ಕಾರ್ಯಗಳಾಗಿದ್ದು,  ಜಿಲ್ಲೆಯಲ್ಲಿನ ಸೇವೆ ತೃಪ್ತಿ ತಂದಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ಹೇಳಿದರು.
          ಕೆ.ಪಿ. ಮೋಹನ್‍ರಾಜ್ ಅವರು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆಗೊಂಡ ನಿಮಿತ್ಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಹೃದಯಸ್ಪರ್ಶಿ ಸಮಾರಂಭದಲ್ಲಿ ಅವರು ಮಾತನಾಡಿದರು.
          ಕೊಪ್ಪಳ ಜಿಲ್ಲೆ ಕೇವಲ ನಾಲ್ಕು ತಾಲೂಕು ಒಳಗೊಂಡ ಸಣ್ಣ ಜಿಲ್ಲೆಯಾಗಿದ್ದು, ಇಲ್ಲಿ ಅಭಿವೃದ್ಧಿಗಾಗಿ ಮಾಡಬೇಕಾದ ಕೆಲಸ ಬಹಳಷ್ಟಿದೆ.  ಪದೇ ಪದೇ ಬರುವ ಬರ, ಮಕ್ಕಳಲ್ಲಿನ ಅಪೌಷ್ಠಿಕತೆ, ಶಿಶು-ತಾಯಿ ಮರಣ, ಶೈಕ್ಷಣಿಕವಾಗಿ ಹಿಂದುಳಿದಿರುವುಕೆ, ಗುಳೇ ಹೋಗುವುದು, ಜಿಲ್ಲಾ ಕೇಂದ್ರವಾಗಿದ್ದರೂ, ಕೊಪ್ಪಳದಲ್ಲಿ ಸಮಸ್ಯೆಯ ಸರಮಾಲೆ ಹೀಗೆ ಹಲವು ಸವಾಲುಗಳನ್ನು ಇಲ್ಲಿ ಎದುರಿಸಬೇಕಿದೆ.  ಆದರೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶಕ್ತಿ ಮೀರಿ ಯತ್ನಿಸಿದ್ದೇನೆ.  ಶೈಕ್ಷಣಿವಾಗಿ ಕೊಪ್ಪಳ ಜಿಲ್ಲೆ ಹಿಂದುಳಿದಿದ್ದು, ಬಡತನವೂ ಇಲ್ಲಿ ಹೆಚ್ಚಿದೆ.  ಶಿಕ್ಷಣಕ್ಕಾಗಿ ಮಕ್ಕಳಿಗೆ ತೊಂದರೆಯಾಗದಂತೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ವಸತಿನಿಲಯಗಳನ್ನು ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸಲು ನಿವೇಶನವನ್ನು ಒದಗಿಸಲಾಗಿದೆ.  ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಹೊಸ ಪದ್ಧತಿಯ ಪೌಷ್ಠಿಕ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.  ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ರೂಪರೇಷೆಯನ್ನು ಸಿದ್ಧಪಡಿಸಲಾಗಿದೆ. ಮುಂದೆ ಬರುವ ಜಿಲ್ಲಾಧಿಕಾರಿಗಳಿಗೆ ಇದನ್ನು ಕಾರ್ಯಗತಗೊಳಿಸುವ ಕುರಿತು ಚರ್ಚಿಸುತ್ತೇನೆ. ತಮ್ಮ  ಅಧಿಕಾರದ ಅವಧಿಯಲ್ಲಿ ಸಹಕರಿಸಿದ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಕೆ.ಪಿ. ಮೋಹನ್‍ರಾಜ್ ಅವರು ನುಡಿದರು.
          ಜಿಲ್ಲಾಧಿಕಾರಿಗಳ ಹೆಚ್ಚುವರಿ ಪ್ರಭಾರ ವಹಿಸಿಕೊಂಡ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ನೇರ ನಡೆ-ನುಡಿ ಹೊಂದಿದ್ದ ಕೆ.ಪಿ. ಮೋಹನ್‍ರಾಜ್ ಅವರು ಜನ ಸಮೂಹವನ್ನು ಜೊತೆ, ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದ ಒಳ್ಳೆಯ ಸ್ನೇಹಜೀವಿ. ಲೋಕಸಭಾ ಚುನಾವಣೆಯನ್ನು ಜಿಲ್ಲೆಗೆ ಯಾವುದೇ ಕಪ್ಪುಚುಕ್ಕೆ ಬಾರದ ರೀತಿಯಲ್ಲಿ ಸಮರ್ಥವಾಗಿ ಸಮರ್ಪಕವಾಗಿ ನಡೆಸಲು ಶ್ರಮಿಸಿದರು.  ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿಪರ ಕಾರ್ಯ ನಿರ್ವಹಿಸಿ ಜಿಲ್ಲೆಗೆ ಒಳ್ಳೆಯ ಆಡಳಿತ ಕೊಟ್ಟಿದ್ದರಲ್ಲದೆ  ಜನಾನುರಾಗಿಗಳಾಗಿದ್ದರು ಎಂದು ಹೇಳಿದರು.
      ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಉದಪುಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆ.ಪಿ. ಮೋಹನ್‍ರಾಜ್ ಅವರು ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ವೇಗ ಒದಗಿಸಿದರಲ್ಲದೆ, ಜನಸಾಮಾನ್ಯರ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿದ್ದ ಬಗೆ ಎಲ್ಲರಿಗೂ ಅನುಕರಣೀಯ ಎಂದರು.
         ಸಹಕಾರ ಇಲಾಖೆ ಉಪನಿಬಂಧಕ ಮುನಿಯಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಬಿಸಿಎಂ ಜಿಲ್ಲಾ ಅಧಿಕಾರಿ ಕಲ್ಲೇಶ್ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
          ಇದೇ ಸಂದರ್ಭದಲ್ಲಿ ಕೆ.ಪಿ. ಮೋಹನ್‍ರಾಜ್ ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಭಾರ ಹೃದಯದಿಂದ ಬೀಳ್ಕೊಡಲಾಯಿತು.

Advertisement

0 comments:

Post a Comment

 
Top