ಬೆಂಗಳೂರಿನಲ್ಲಿ ಸುಮಾರು ೨೨ ವರ್ಷದ ಯುವತಿಯ ಮೇಲೆ ಮತ್ತು ೬ ವರ್ಷದ ಮಗುವಿನ ಮೇಲೆ ನಡೆದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಘಟನೆಯನ್ನು ಎಸ್.ಐ.ಓ. ಬಲವಾಗಿ ಖಂಡಿಸುತ್ತದೆ. ಅಲ್ಲದೇ ಅತ್ಯಾಚರಾಕ್ಕೊಳಗಾದ ಮುಗ್ಧರಿಗೆ ಸಂತಾಪವನ್ನು ಸೂಚಿಸುತ್ತದೆ. ಈ ಅನೈತಿಕ ಕೃತ್ಯವನ್ನು ಖಂಡಿಸುವುದರೊಂದಿಗೆ ಈ ಘಟನೆಗೆ ಕಾರಣರಾದ ಪೊಲೀಸ್ ಮತ್ತು ಆಡಳಿತ ಮಂಡಳಿಯ ವಿರುದ್ಧ ಧ್ವನಿ ಎತ್ತುತ್ತದೆ. ಇಂತಹ ಪೈಶಾಚಿಕ ಕೃತ್ಯಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕೆಂದು ಮತ್ತು ದೌರ್ಜನ್ಯಕ್ಕೊಳಗಾದವರ ಪರವಾಗಿ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ. ವಿನಂತಿಸುತ್ತದೆ. ನಮ್ಮ ಸಮಾಜದಲ್ಲಿ ಪ್ರಜ್ಞೆಯ ಅಮರ್ಥತೆಯಿಂದಾಗಿ ಮಹಿಳೆಯರ ಮೇಲೆ ಕಿರುಕುಳ ಹೆಚ್ಚಾಗುತ್ತಿದೆ. ಭಾರತೀಯರಾದ ನಾವು ಮಹಿಳೆಯರ ವಿರುದ್ಧ ಹೆಚ್ಚಾಗುತ್ತಿರುವ ಇಂತಹ ಅಪರಾಧಗಳ ಕುರಿತು ಪರಾಮರ್ಶಿಸಿಕೊಳ್ಳಬೇಕಾದ ಅಗತ್ಯವಿದ್ದು ಮತ್ತು ಜನಪ್ರಿಯ ಮಾಧ್ಯಮಗಳ ಮೂಲಕ ಮಹಿಳಾ ಕಟ್ಟಳೆಗಳನ್ನು ಪರೀಕ್ಷಿಸಿಕೊಳ್ಳಬೇಕಾಗಿದೆ ಎಂಬುದು ಎಸ್.ಐ.ಓ.ನ ಬಲವಾದ ನಂಬಿಕೆಯಾಗಿದೆ. ಇಂತಹ ಕೃತ್ಯಗಳು ನಡೆಯದಂತೆ ಸರಕಾರವು ಮುಂದೆ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ವಿನಂತಿಸುತ್ತದೆ.
ಎಸ್.ಐ.ಓ. ನ ಬೇಡಿಕೆಗಳು
೧) ತ್ವರಿತಗತಿಯಲ್ಲಿ ಮಕ್ಕಳಿಗೆ ರಕ್ಷಣೆ ಕುರಿತು ಶಾಲೆ ಮತ್ತು ಪೂರ್ವ ಶಾಲೆಗಳಿಗೆ ಸ್ಪಷ್ಟ ಮಾರ್ಗದರ್ಶನ ರಚಿಸುವುದು.
೨) ಅತ್ಯಾಚಾರ ಮತ್ತು ದೌರ್ಜನ್ಯ ನಡೆಸಿದ ಶಾಲಾ ಕಾಲೇಜಿನ ಮಾನ್ಯತೆಯನ್ನು ರದ್ದುಪಡಿಸಬೇಕು.
೩) ಪಠ್ಯಕ್ರಮದಲ್ಲಿ ಧಾರ್ಮಿಕ ವಿಷಯಗಳ ಅಧ್ಯಯನಕ್ಕೆ ಅವಕಾಶ ನೀಡಬೇಕು.
೪) ಮಹಿಳೆಯರಿಗಾಗಿ ಸಂಬಂಧಿಸಿದ ಹಕ್ಕುಗಳನ್ನು ನಿಭಾಯಿಸುವಲ್ಲಿ ಪೊಲೀಸ್ ಪಡೆಗೆ ಎಚ್ಚರಿಸುವುದು.
೫) ವಿದ್ಯಾರ್ಥಿನಿ ಮತ್ತು ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು.
೬) ಮಹಿಳೆಯರ ಅಶ್ಲೀಲ ಚಿತ್ರಣ ಮತ್ತು ಮಧ್ಯಪಾನದಿಂದಾಗುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
೭) ಅತ್ಯಾಚಾರವೆಸಗಿದ ಯಾವುದೇ ವ್ಯಕ್ತಿಯಾಗಲಿ ಕಠಿಣ ಶಿಕ್ಷೆ ನೀಡಬೇಕು.
ಈ ಎಲ್ಲಾ ಬೇಡಿಕೆಗಳನ್ನು ಎಸ್.ಐ.ಓ. ಮುಂದಿಟ್ಟುಕೊಂಡು ಕೊಪ್ಪಳದ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆಯನ್ನು ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಎಸ್.ಐ.ಓ.ನ ನಗರಘಟಕದ ಅಧ್ಯಕ್ಷರಾದ ಮಹಮ್ಮದ್ ಜಕ್ರಿಯಾ ಖಾನ್, ರಿಯಾಜ್ ಅಹ್ಮದ್ ಖಾನ್, ಕಲೀಮುಲ್ಲಾ ಖಾನ್, ತಲ್ಹಾ ಸುಫಿಯಾನ್, ಟಿಪ್ಪುಸುಲ್ತಾನ, ಫೇರೋಜ್ ಅಲಿ ಮುಂತಾದವರು ಪಾಲ್ಗೊಂಡಿದ್ದರು.
0 comments:
Post a Comment