
ಇತ್ತೀಚೆಗೆ ಬಾಗೇಪಲ್ಲಿಯಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ 4ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಆರ್.ಶೇಷಶಾಸ್ತ್ರಿ ಕನ್ನಡದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು. ಆಂಧ್ರ-ಕರ್ನಾಟಕ ಗಡಿಯ ಚಿಂತಾಮಣಿ ತಾಲೂಕು ವ್ಯಾಪ್ತಿಯ ಸಂತೆಕಲ್ಲಹಳ್ಳಿ ಯವರಾದ ಅವರು ತಮ್ಮ ಸಮಾಜದ ಸೌಹಾರ್ದ ಸಂಬಂಧದ ಸೌಂದರ್ಯ ವನ್ನು ಬಾಲ್ಯದಿಂದ ಕಂಡವರು. ಎಲ್ಲ ಸಮುದಾಯದ ಜನರೊಂದಿಗೆ ಒಡನಾಡಿ ಬೆಳೆದವರು. ಇಂತಹ ಶೇಷಶಾಸ್ತ್ರಿಗೆ ಅನ್ವರ್‌ಸಾಬ್ ಎಂಬ ಸ್ನೇಹಿತರೊಬ್ಬರು ಇದ್ದಾರೆ. ಒಂದು ಜೀವ, ಎರಡು ದೇಹ ಎಂಬಂತಹ ಸ್ನೇಹ ಇವರಿಬ್ಬರದ್ದು.
ಶೇಷಶಾಸ್ತ್ರಿ ಮತ್ತು ಅನ್ವರ್‌ಸಾಬ್ ಅವರ ಸ್ನೇಹ ಎಂತಹದ್ದು ಅಂದ್ರೆ ಮೃತಪಟ್ಟ ನಂತರವೂ ಅಕ್ಕಪಕ್ಕದಲ್ಲೇ ತಮ್ಮ ಸಮಾಧಿಯನ್ನು ಕಟ್ಟಿಸಿಕೊಳ್ಳಲು ಮಾತಾಡಿ, ಅದಕ್ಕಾಗಿ ಒಂದು ಕಾಲದಲ್ಲಿ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದರಂತೆ. ಅನ್ವರ್‌ಸಾಬ್ ಅವರ ತಾಯಿ ತನ್ನ ಮಗನಿಗಿಂತ ಹೆಚ್ಚಾಗಿ ಶೇಷಶಾಸ್ತ್ರಿಯನ್ನೇ ಪ್ರೀತಿಸುತ್ತಿದ್ದರು. ದಿನವೂ ಅವರಿಗಾಗಿ ಮಜ್ಜಿಗೆ ಕೊಟ್ಟು ಬರುತ್ತಿದ್ದರು. ಶಾಲಾ ವ್ಯಾಸಂಗ ಕಾಲದಿಂದಲೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಅನ್ವರ್ ಸಾಬರು ಒಮ್ಮೆ ಮಕ್ಕಾಕ್ಕೆ ಹೋಗಿದ್ದಾಗ, ಅಲ್ಲಿಂದ ಒಂದು ಬಕೆಟ್ ಪವಿತ್ರ ನೀರು ತಂದು ಗೆಳೆಯ ಶೇಷಶಾಸ್ತ್ರಿಗೆ ಕೊಟ್ಟಿದ್ದರು. ವಾರಣಾಸಿಗೆ ಹೋದಾಗಲೂ ಗಂಗಾ ನದಿಯ ನೀರನ್ನು ತಂದುಕೊಟ್ಟಿದ್ದರು ಎಂದು ಶೇಷಶಾಸ್ತ್ರಿಯವರು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಬಾಗೇಪಲ್ಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗ ಅನಂತಪುರದಲ್ಲಿ ನೆಲೆಸಿರುವ ಶೇಷಶಾಸ್ತ್ರಿಯವರು ಬರುತ್ತಾರೆಂದು ತಿಳಿದ ತಕ್ಷಣ ಅನ್ವರ್‌ಸಾಬ್ ಅಲ್ಲಿ ಧಾವಿಸಿ ಬಂದು ಅವರನ್ನು ಬಿಗಿದಪ್ಪಿಕೊಂಡರು. ಇಂತಹ ಮಾನವೀಯ ಸಂಬಂಧಗಳನ್ನು ಮರಳುಗಾಡಿನಲ್ಲಿ ಓಯಸಿಸ್ ಎಂಬಂತೆ ನೋಡುವ ಕಾಲದಲ್ಲಿ ನಾವಿದ್ದೇವೆ. ಮತಾಂಧತೆಯಿಂದ ಕಣ್ಣನ್ನು ಮಾತ್ರವಲ್ಲ ಹೃದಯವನ್ನು ಕಳೆದುಕೊಂಡವರು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಇಂತಹ ಓಯಸಿಸ್‌ಗಳ ಸಂಖ್ಯೆಯೂ ಹೆಚ್ಚಾಗಬೇಕಿದೆ. ಬಾಗೇಪಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಶೇಷಶಾಸ್ತ್ರಿಯವರು ಮಾಡಿದ ಭಾಷಣ ಅದ್ಭುತವಾಗಿತ್ತು. ನಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂದು ಬಯಸುತ್ತೇವೆ. ಆದರೆ ಉಳಿದು ಏನೇ ಆಗಲಿ, ಅವರು ಮೊದಲು ಮನುಷ್ಯರಾಗಬೇಕು. ಮನುಷ್ಯರಾಗಲು ಯಾರೂ ಹಾತೊರೆಯುತ್ತಿಲ್ಲ. ಏನೋ ಆಗಲು ಹೋಗಿ ಏನೇನೋ ಆಗುತ್ತಾರೆ. ಜಾತಿ-ಧರ್ಮದ ಗೆರೆ ದಾಟಿ, ಸೌಹಾರ್ದ ಸಂಬಂಧವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಈಗ ಅನಂತಪುರದಲ್ಲಿ ನೆಲೆಸಿದ್ದರೂ ತಮ್ಮ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಇರುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಅವರು ಮನುಷ್ಯರಿಗೆ ಕಾಡುತ್ತಿರುವ ನೀರಿನ ಸಮಸ್ಯೆ ಬಗ್ಗೆ ಚಿಂತೆ ಮಾಡುತ್ತೇವೆಯೇ ಹೊರತು ಪ್ರಾಣಿಪಕ್ಷಿಗಳು ಪಡುತ್ತಿರುವ ಯಾತನೆ ಬಗ್ಗೆ ಗಮನಿಸುತ್ತಿಲ್ಲ. ಅವುಗಳ ಬಗ್ಗೆ ದನಿಯೆತ್ತುವುದಿಲ್ಲ. ಬರಗಾಲ ಎಂಬುದು ಬರೀ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ಸಮಸ್ಯೆ ಮಾತ್ರವಲ್ಲ. ಪಶುಪಕ್ಷಿಗಳಿಗೂ ನೀರಿಲ್ಲದಂತಾಗಿದೆ. ಇಂತಹ ಸ್ಥಿತಿಯಲ್ಲೂ ಸಾವಿರ ಅಡಿ ಕೊಳವೆಬಾವಿಗಳು ಕೊರೆಯುತ್ತೇವೆ. ಅವುಗಳಲ್ಲಿ ನಮ್ಮ ಪಾಲು ಎಷ್ಟು? ಪಶುಪಕ್ಷಿಗಳು ಪಾಲು ಎಷ್ಟು ಎಂಬುದು ಯೋಚಿಸುವುದಿಲ್ಲ. ಕನ್ನಡ ಸಾಹಿತ್ಯ-ಸಂಸ್ಕೃತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡುಗೆ ಬಗ್ಗೆ ಪ್ರಸ್ತಾಪಿಸಿದ ಅವರು, ಅಲ್ಪಸಂಖ್ಯಾತ ಸಮುದಾಯದ ಕೊಡುಗೆ ಗಣನೀಯವಾದುದು ಎಂದು ಹೇಳಿದರು. ಶಿಡ್ಲಘಟ್ಟದ ಅದೀಬ್ ಹುಸೈನ್ ಸಾಹೇಬರು ಉರ್ದುವಿನಲ್ಲಿ ದೊಡ್ಡ ಲೇಖಕರಾಗಿದ್ದರು. ಇತಿಹಾಸಕಾರರು ಆಗಿದ್ದರು. ಉರ್ದು ವ್ಯಾಕರಣ ಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ.

-varthabharati ಕೃಪೆ
0 comments:
Post a Comment