PLEASE LOGIN TO KANNADANET.COM FOR REGULAR NEWS-UPDATES


 ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಇಲ್ಲದೇ ಇರುವವರು, ತಮ್ಮ ಗುರುತು ಸಾಬೀತಿಗೆ ಚುನಾವಣಾ ಆಯೋಗ ಪರ್ಯಾಯವಾಗಿ ೨೩ ದಾಖಲೆಗಳನ್ನು ಸೂಚಿಸಿದ್ದು, ಈ ೨೩ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು, ಮತದಾರರು ತಮ್ಮ ಮತ ಚಲಾಯಿಸಬಹುದಾಗಿದೆ.
  ವಿಧಾನಸಭೆ ಚುನಾವಣೆಗೆ ಮೇ. ೦೫ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ಮಾಡಲು ಅವಧಿ ನಿಗದಿಪಡಿಸಲಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಡ್ಡಾಯವಾಗಿ ಇರಬೇಕು. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿರಬೇಕು, ಅಥವಾ ಈ ಬಾರಿ ಬೂತ್ ಮಟ್ಟದ ಅಧಿಕಾರಿಗಳು ನೀಡುವ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಸಾಕು, ಇತರೆ ಯಾವುದೇ ದಾಖಲೆಗಳಿಲ್ಲದೇ ಇದ್ದರೂ ತಮ್ಮ ಮತವನ್ನು ಚಲಾಯಿಸಬಹುದು.  ಮೇಲಿನ ಎರಡೂ ದಾಖಲೆಗಳು ಇಲ್ಲದೇ ಇರುವವರಿಗೂ ಮತ ಚಲಾಯಿಸಲು ಚುನಾವಣಾ ಆಯೋಗ ಪರ್ಯಾಯವಾಗಿ ೨೩ ಬಗೆಯ ದಾಖಲೆಗಳನ್ನು ನಿಗದಿಪಡಿಸಿದ್ದು, ಈ ೨೩ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಗಳಿದ್ದಲ್ಲಿ, ಮತ ಚಲಾಯಿಸಬಹುದಾಗಿದೆ.  ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ವಾಹನ ಚಾಲನ ಪರವಾನಿಗೆ ಪತ್ರ, ಪಾನ್ ಕಾರ್ಡ್, ನೌಕರರ ಗುರುತಿನ ಚೀಟಿ, ಬ್ಯಾಂಕ್ ಖಾತೆ ಪುಸ್ತಕ, ಕಿಸಾನ್ ಕಾರ್ಡ್, ವಿದ್ಯಾರ್ಥಿಗಳಿಗೆ ಕಾಲೇಜುಗಳು ನೀಡುವ ಗುರುತಿನ ಚೀಟಿ, ಭಾವಚಿತ್ರವಿರುವ ಜಮೀನಿನ ಪಟ್ಟಾ, ನೋಂದಣಿಯಾದ ಡೀಡ್, ಭಾವಚಿತ್ರವಿರುವ ಪಡಿತರ ಚೀಟಿ, ಭಾವಚಿತ್ರವಿರುವ ಜಾತಿ ಪ್ರಮಾಣಪತ್ರ, ಮಾಜಿ ಸೈನಿಕರ, ವಯೋವೃದ್ಧ, ವಿಧವಾ ಪಿಂಚಣಿ ಪುಸ್ತಕ, ಸ್ವತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಶಸ್ತ್ರ ಪರವಾನಿಗೆ ಪತ್ರ, ಮಾಜಿ ಸೈನಿಕರ ಸಿಎಸ್‌ಡಿ ಕ್ಯಾಂಟೀನ್ ಕಾರ್ಡ್, ಅಂಗವಿಕಲರ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಮಂಜೂರಾತಿ ಪತ್ರ, ಉದ್ಯೋಗಖಾತ್ರಿ ಗುರುತಿನ ಚೀಟಿ, ಯಶಸ್ವಿನಿ ಕಾರ್ಡ್, ನಗರ/ಸ್ಥಳೀಯ ಸಂಸ್ಥೆಗಳ ನೌಕರರಿಗೆ ನೀಡಿರುವ ಗುರುತಿನ ಚೀಟಿ, ಕಾರ್ಮಿ ಇಲಾಖೆ ನೀಡಿರುವ ಆರೋಗ್ಯ ವಿಮಾ ಪ್ರಮಾಣ ಪತ್ರ, ಆರ್‌ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್, ಆಧಾರ ಕಾರ್ಡ್ ಸೇರಿದಂತೆ ೨೩ ದಾಖಲಾತಿಗಳಲ್ಲಿ ಯಾವುದಾದರೂ ಒಂದು ದಾಖಲೆ ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
 ಸ್ವೀಪ್ ಪರಿಣಾಮ : ಮತದಾನ ಪ್ರಮಾಣದಲ್ಲಿ ಹೆಚ್ಚಳದ ನಿರೀಕ್ಷೆ- ಡಿ.ಕೆ. ರವಿ
ಕೊಪ್ಪಳ ಮೇ. ೦೨ (ಕ.ವಾ): ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಜಾರಿಗೆ ತಂದ ಸ್ವೀಪ್ ಕಾರ್ಯಕ್ರಮದ ಪರಿಣಾಮವಾಗಿ ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣವನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  ಮತದಾರರ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮದಡಿ ಕೈಗೊಂಡ ಹಲವು ಕ್ರಮಗಳ ಪ್ರಗತಿ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಮತದಾರರು ತಮ್ಮ ಪವಿತ್ರ ಕರ್ತವ್ಯದಿಂದ ವಿಮುಖರಾಗುತ್ತಿರುವ ಪರಿಣಾಮವಾಗಿ ದೇಶದ ಅನೇಕ ಕಡೆಗಳಲ್ಲಿ ಕನಿಷ್ಟ ಪ್ರಮಾಣದ ಮತದಾನ ದಾಖಲಾಗಿರುವುದು ಆತಂಕಕಾರಿ ಸಂಗತಿಯಾಗಿದೆ.  ಜನಹಿತ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುವಂತಹ ಜವಾಬ್ದಾರಿಯನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಹಿಸಿಕೊಡಲಾಗಿದ್ದು, ಇಂತಹ ಜನಪ್ರತಿನಿಧಿಗಳು ಈ ನಾಡಿನ ಎಲ್ಲ ಮತದಾರರ ಪ್ರತಿನಿಧಿಯಾಗಿರುತ್ತಾರೆ.  ಇಂತಹ ಜನಪ್ರತಿನಿಧಿಯನ್ನು ಶೇ. ೧೦೦ ರಷ್ಟು ಮತದಾರರೇ ಆಯ್ಕೆ ಮಾಡಿದಲ್ಲಿ, ಅದು ಸೂಕ್ತ.  ಆದರೆ ಕೇವಲ ಶೇ. ೬೦ ರಿಂದ ೬೫ ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದಲ್ಲಿ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ.  ಎಲ್ಲ ಮತದಾರರು ಅಂದರೆ ಶೇ.  ೧೦೦ ರಷ್ಟು ಮತದಾನವಾಗಬೇಕೆಂಬುದೇ ನಮ್ಮ ಜನತಂತ್ರದ ಸಿದ್ದಾಂತವಾಗಿದ್ದು, ಹೀಗಾದಾಗ ಮಾತ್ರ ಜನಪ್ರತಿನಿಧಿಯ ಆಯ್ಕೆ ಸಮಂಜಸ ಎನಿಸಿಕೊಳ್ಳುತ್ತದೆ.  ಜಿಲ್ಲೆಯಲ್ಲಿ ಈಗ ಸುಮಾರು ೯. ೩೩ ಲಕ್ಷ ಮತದಾರರಿದ್ದಾರೆ.  ಇವರಲ್ಲಿ ಎಲ್ಲ ಮತದಾರರಾದರೂ ತಮ್ಮ ಹಕ್ಕನ್ನು ಚಲಾಯಿಸಿದಾಗ ಮಾತ್ರ ಚುನಾವಣೆ ವ್ಯವಸ್ಥೆಗೆ ಒಂದು ಅರ್ಥ ಬಂದಂತಾಗುತ್ತದೆ ಎಂದರು.
ಕಳಪೆ ಸಾಧನೆ : ಕಳೆದ ೨೦೦೮ ರಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿ ಶೇ. ೬೦. ೭೩, ಕನಕಗಿರಿ- ಶೇ. ೫೬. ೩೦, ಗಂಗಾವತಿ- ಶೇ. ೬೩. ೩೪, ಯಲಬುರ್ಗಾ- ಶೇ. ೬೬. ೫೪ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೬೫. ೨೨ ರಷ್ಟು ಅಂದರೆ ಒಟ್ಟಾರೆ ಜಿಲ್ಲೆಯಲ್ಲಿ ಶೇ. ೬೨. ೩೯ ರಷ್ಟು ಮತದಾನವಾಗಿದೆ.  ಅದರಲ್ಲೂ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಶೇ. ೫೬. ೩೦ ರಷ್ಟು ಮತದಾನವಾಗಿರುವುದು ವಿಷಾದಕರ ಸಂಗತಿಯಾಗಿದೆ.   ಈ ರೀತಿಯ ಕಡಿಮೆ ಮತದಾನ ಪ್ರಮಾಣದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು.  ಎಲ್ಲ ಮತದಾರರೂ ಕಡ್ಡಾಯವಾಗಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಯಾವುದೇ ವಯಕ್ತಿಕ ಲಾಭದ ನಿರೀಕ್ಷೆ ಇಟ್ಟುಕೊಳ್ಳದೆ ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು.  ಮತದಾನದ ಪಾವಿತ್ರ್ಯತೆಗೆ ಗೌರವ ಸಲ್ಲಿಸಬೇಕು ಎಂದರು.
ಮತದಾರರ ಜಾಗೃತಿಗೆ ವ್ಯಾಪಕ ಕ್ರಮ : ಮೊದಲ ಹಂತದಲ್ಲಿ ಮತದಾರರ ನೊಂದಣಿಗೆ ಹೆಚ್ಚಿನ ಒತ್ತು ನೀಡಿ, ಜಿಲ್ಲೆಯಾದ್ಯಂತ ಮ್ಯಾರಥಾನ್ ಓಟ, ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಉತ್ತೇಜನ, ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.  ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ೩೨೨೫೯ ರಷ್ಟು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.  ಎರಡನೆ ಹಂತವಾಗಿ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮ್ಯಾರಥಾನ್ ಓಟ ಸ್ಪರ್ಧೆ ಏರ್ಪಡಿಸಲಾಯಿತು, ಆಕಾಶವಾಣಿ ಕೇಂದ್ರದ ಸಹಕಾರದೊಂದಿಗೆ ನೇರ-ಫೋನ್-ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.  ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಶಾಲಾ ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಆಯಾ ಪ್ರದೇಶಗಳಲ್ಲಿ ಪ್ರಭಾತಫೇರಿ ನಡೆಸಿ ಜಾಗೃತಿ ಮೂಡಿಸಲಾಯಿತು.  ಎಲ್ಲ ವಿದ್ಯಾರ್ಥಿಗಳ ಪೋಷಕರು, ಪಾಲಕರಿಗೆ ಕಡ್ಡಾಯವಾಗಿ ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಕರಪತ್ರ ಹಂಚಿ, ನೈತಿಕ ಮತದಾನಕ್ಕೆ ಪ್ರೇರೇಪಿಸಲಾಯಿತು, ಜಿಲ್ಲೆಯ ಸುಮಾರು ೬೦ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲ ಮತದಾರರ ಜಾಗೃತಿಗೆ ಫ್ಲೆಕ್ಸ್ ಬೋರ್ಡ್ ಅಳವಡಿಕೆ, ಆಟೋರಿಕ್ಷಾದವರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಆಟೋಗಳಿಗೆ ಜಾಗೃತಿ ಫ್ಲೆಕ್ಸ್ ಅಳವಡಿಕೆ, ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ಜಾಗೃತಿಗೆ ತರಬೇತಿ, ಕೊಪ್ಪಳ ನಗರದಲ್ಲಿ ಇದೇ ಪ್ರಥಮ ಬಾರಿಗೆ ಪ್ಯಾರಾಗ್ಲೈಡಿಂಗ್ ಹಾರಾಟ ಮೂಲಕ ಕರಪತ್ರ ವಿತರಣೆ, ನಗರ, ಸ್ಥಳೀಯ ಸಂಸ್ಥೆಗಳ ವಾಹನಗಳಿಗೆ ಮೈಕ್‌ಸಿಸ್ಟಂ ಅಳವಡಿಸಿ ಮತದಾರರ ಜಾಗೃತಿ ಗೀತೆಗಳ ಪ್ರಸಾರ ಮುಂತಾದ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.  ಈ ಜಾಗೃತಿ ಕಾರ್ಯಗಳಿಗೆ ವಾರ್ತಾ ಇಲಾಖೆ, ಶಿಕ್ಷಣ
, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜಕಲ್ಯಾಣ, ಆರೋಗ್ಯ, ಯುವಜನ ಸೇವಾ ಮತ್ತು ಕ್ರೀಡೆ, ಎನ್.ಎಸ್.ಎಸ್. ಮುಂತಾದ ಇಲಾಖೆಗಳ ಕೊಡುಗೆ ಅಮೂಲ್ಯವಾಗಿದೆ ಎಂದರು.
  ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಅನೇಕ ಕ್ರಮಗಳು ಪರಿಣಾಮಕಾರಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಸ್ವೀಪ್ ವೀಕ್ಷಕರಾಗಿರುವ ರಾಜೀವ್ ನಾಯಕ್, ರಜಿತ್ ಚಂದ್ರನ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top