PLEASE LOGIN TO KANNADANET.COM FOR REGULAR NEWS-UPDATES


ಸುನಿ ಸಿನಿಮಾ ಅಂದ್ಮೇಲೆ ಫನ್ನಿ ಮಾತುಗಳು ಇರ‍್ಲೇಬೇಕು. ಇದನ್ನ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಸಿನಿಮಾದಲ್ಲೇ ಸುನಿ ಪ್ರೂವ್ ಮಾಡಿದ್ದಾರೆ. ಹಾಗೆಯೇ ಬಹುಪರಾಕ್‌ನಲ್ಲೂ ಕಚಗುಳಿ ಇಡುವ ಮಾತುಗಳಿಗೇನೂ ಬರವಿಲ್ಲ. ಒಬ್ಬನದೇ ಜೀವನವನ್ನು ಮೂರು ಭಾಗಗಳಾಗಿ ವಿಂಗಡಿಸಿ ಆದನ್ನೇ ಪ್ರೇಕ್ಷಕರಿಗೆ ಪ್ಯಾರಲಲ್ ಆಗಿ ತೋರಿಸುತ್ತಾ ಕುತೂಹಲ ಹೆಚ್ಚಿಸುವ ಬಹುಪರಾಕ್ ನಿಜಕ್ಕೂ ರಾಕ್ ಸಿನಿಮಾ.
        ಹಳೇ ಅಂತ್ಯ ಹೊಸ ಆರಂಭಕ್ಕೆ ಕಾರಣ ಎನ್ನುತ್ತಲೇ ೩ ಕ್ಲೈಮ್ಯಾಕ್ಸ್ ಮೂಲಕವೇ ಸಿನಿಮಾ ಶುರು ಮಾಡುವ ಸುನಿ ಜಾಣತನ ಸೂಪರ್ಬ್. ಮನಸ್‌ನ ಲವ್ ಸ್ನೇಹಳಿಗೋ, ಪ್ರೀತಿಗೋ ಎನ್ನುವ ಭಾಗ ಆರಂಭದಲ್ಲಿ ಫನ್ನಿ ಮಾತುಗಳಿಂದ ಇಷ್ಟವಾಗುತ್ತದೆ. ಕೊನೆಗೆ ಸ್ನೇಹಾಳ ಅಂತ್ಯದೊಂದಿಗೆ ಕಣ್‌ರೆಪ್ಪೆಗಳು ಒದ್ದೆಯಾಗುತ್ತದೆ. ಅಕ್ಕ-ತಂಗಿಗೂ ಇಷ್ಟವಾಗುವ ಮನಸ್‌ಗೆ ಇಬ್ಬರ ಮೇಲೂ ಪ್ರೀತಿ. ಆದರೆ ಇಬ್ಬರನ್ನೂ ಬಿಟ್ಟಿರಲಾಗದ ಸಂಧಿಗ್ದತೆ. ಬಿಳಿ ಹಾಗೂ ಕೆಂಪು ಬಣ್ಣ ಇಷ್ಟಪಡುವ ನಾಯಕಿರನ್ನು ಆ ಬಣ್ಣಗಳು ಯಾವ ಕಾರಣಕ್ಕೆ ಫೇಮಸ್ ಎಂಬುದರ ಸಂಕೇತದಂತೆ ಬಿಂಬಿಸಿರುವುದು ಸಂದರ್ಭೋಚಿತ. 
        ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಂಡು ಬೆಂಗಳೂರೆಂಬ ಮಾಯಾನಗರಿಯ ದಾರಿಯಲ್ಲಿ ಆನಾಥನಂತೆ ಬಿದ್ದಿದ್ದ ಮನಸ್‌ನನ್ನು ಮೋನಿ ಎಂಬ ಗೆಳೆಯ ಮನಿಯನ್ನಾಗಿ ಮಾಡಿ, ಜೀವನದಲ್ಲಿ ಜನ ನಮ್ಮನ್ನ ನಿಯತ್ತಾಗಿ ಮೋಸ ಮಾಡ್ತಾರೆ. ನಾವು ಮೋಸಾನಾ ನಿಯತ್ತಾಗಿ ಮಾಡಬೇಕು ಎಂಬ ಉಪದೇಶ ನೀಡಿ ಮನಿಯನ್ನು ದೊಡ್ಡ ಡಾನ್ ಆಗಲು ಪ್ರೇರಕ ಶಕ್ತಿಯಾಗಿ ನಿಲ್ಲುತ್ತಾನೆ. ಕೊನೆಗೆ ಮನಿಯಿಂದಲೇ ಮಸಣ ಸೇರುತ್ತಾನೆ. ಹೆಣಗಳ ರಾಶಿ ಉರುಳಿಸುವಾಗಲೇ ಏನೂ ಇಲ್ಲದವಳನ್ನ ಕಟ್ಟಿಕೊಂಡ ಮನಿ ಬೆಂಗಳೂರು ಬಿಟ್ಟು ಆಕೆಯ ಊರಿಗೆ ಬಂದು ಮೌನಿಯಾಗುತ್ತಾನೆ.
       ಮೌನಿ ಆ ಊರಿನ ಜನರ ಸೇವಕನಂತೆ ಕೆಲಸ ಮಾಡುತ್ತಿದ್ದನ್ನು ಗಮನಿಸಿದ ರಾಜಕೀಯ ಮುಖಂಡನೊಬ್ಬ ಮೌನಿಯನ್ನು ಬಳಸಿಕೊಂಡು ಎಲೆಕ್ಷನ್‌ನಲ್ಲಿ ಗೆಲ್ಲುತ್ತಾನೆ. ಗೆದ್ದ ಬಳಿಕ ಮೌನಿಯನ್ನು ಕೈ ಬಿಡುತ್ತಾನೆ. ಅಡ್ಡ, ಅಡ್ಡದಾರಿ ಬೇಡ ಎಂದು ನಿರ್ಧರಿಸಿ ಬಂದಿದ್ದ ಮೌನಿ ಮುಂದಿನ ಎಲೆಕ್ಷನ್‌ನಲ್ಲಿ ನಿಂತು ಠೇವಣಿಯನ್ನೂ ಕಳೆದುಕೊಂಡಾಗ, "ಈಗ ಹೋಗಿದ್ದು ಬರೀ ಠೇವಣಿ ಅಷ್ಟ. ನಂಬಿಕೆ ಕಳಕೋಬ್ಯಾಡ್ರಿ" ಎನ್ನುವ ಹೆಂಡತಿಯ ಉಪದೇಶ ಮತ್ತೊಂದು ಚುನಾವಣೆಗೆ ಆಣಿಯಾಗಿಸುತ್ತದೆ. ಈ ಸಲ ಮತ್ತದೇ ಮೋಸದ ಹಾದಿ, ಹಣದ ವ್ಯಾಮೋಹ, ಅಧಿಕಾರದ ಮದ..
       ಅರಂಭದಲ್ಲೇ ೩ ಕ್ಲೈಮ್ಯಾಕ್ಸ್ ಮೂಲಕ ಕಥೆ ಆರಂಭಿಸಿರುವ ಸುನಿ ಸಿನಿಮಾದ ಅಂತಿಮಭಾಗದಲ್ಲಿ ತತ್ವಜ್ಞಾನಿಯಾಗಲು ಹೊರಟಂತೆ ಭಾಸವಾಗುತ್ತಾರೆ. ನಾನ್ಯಾರೆಂಬುದು ನಾನಲ್ಲ ಎನ್ನುವ ಸಂತ ಶಿಶುನಾಳ ಷರೀಫರ ಹಾಡನ್ನು ಬಳಸಿಕೊಂಡು ಜೀವನದಲ್ಲಿ ಏನೂ ಇಲ್ಲ. ಮಾನವ ಜನ್ಮ ಎನ್ನುವುದೇ ದೊಡ್ಡದು, ಮೊದಲು ಮಾನವನಾಗು ಎನ್ನುವ ಸಂದೇಶವನ್ನು ಸಾರಿದ್ದಾರೆ.  
       ೩ ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಕಿಟ್ಟಿಗೆ ಬಹುಪರಾಕ್ ೨೫ ನೇ ಚಿತ್ರವಾಗಿರುವುದು ನಿಜಕ್ಕೂ ಸಾರ್ಥಕ. ಸುನಿ ವಹಿಸಿರುವ ಹೊಣೆಯನ್ನು ಕಿಟ್ಟಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಘನಾರಾಜ್ ಅಭಿನಯದ ಬಗ್ಗೆ ಎರಡೂ ಮಾತಿಲ್ಲ. ರಕ್ಷಿತ್‌ಶೆಟ್ಟಿ, ಪವನ್ ಒಡೆಯರ್ ಹೀಗೆ ಬಂದು ಹಾಗೆ ಹೋಗುತ್ತಾರಷ್ಟೇ. ಮಗಳ ಪಾತ್ರದಲ್ಲಿ ಸುಕೃತಾ ವಾಗ್ಲೆ ಇಷ್ಟವಾಗುತ್ತಾರೆ. ಭಾವನಾರಾವ್ ಐಟಂಸಾಂಗ್‌ಗೆ ಸೊಂಟ ಬಳುಕಿಸಿದ್ದಾರೆ.  ಬಹುತೇಕ ಹೊಸ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜೆ.ಜಿ.ಭರತ್ ಸಂಗೀತಕ್ಕೂ ಬಹುಪರಾಕ್ ಹೇಳಬಹುದು. ಮನೋಹರ್ ಜೋಷಿಯವರ ಕ್ಯಾಮರಾ ವರ್ಕ್ ಸೊಗಸಾಗಿದೆ. 
       ಫೈನಲೀ ಹೇಳೋದೇನಂದ್ರೆ ಬಹುಪರಾಗ್ ಇತ್ತ ಕ್ಲಾಸ್ ಮೂವಿಯೂ ಅಲ್ಲ, ಅತ್ತ ಮಾಸ್ ಮೂವಿಯೂ ಅಲ್ಲ, ಇನ್ನೊಂದು ಕಡೆ ಪ್ರಯೋಗಾತ್ಮಕ ಸಿನಿಮಾ ಕೂಡಾ ಅಲ್ಲ, ಹಾಗಾಗಿ ಚಿತ್ರದ ಸೋಲು-ಗೆಲುವು ಸುಲಭವಾಗಿಲ್ಲ.
-ಚಿತ್ರಪ್ರಿಯ ಸಂಭ್ರಮ್.

ರೇಟಿಂಗ್ : ***೧/೨
---------------------
*ನೋಡಬೇಡಿ
**ನೋಡಬಹುದು. ಆದರೂ...
***ಪರವಾಗಿಲ್ಲ. ನೋಡಬಹುದು.

Advertisement

0 comments:

Post a Comment

 
Top