ಹೊಸಪೇಟೆ ತಾಲೂಕು ಶ್ರೀರಾಮರಂಗಾಪುರ (ಸುಗ್ಗೇನಹಳ್ಳಿ-ಕೊಟ್ಟಾಲ್)ದ ಭೂ-ಮಾಲೀಕರಾದ ಭೀಮನೇನಿ ಕುಟುಂಬದವರಿಂದ ೪೦ ವರ್ಷಗಳಿಂದ ಅತಿಕ್ರಮಣದಲ್ಲಿದ್ದ ಭೂಮಿಯನ್ನು ಭೂ-ಮಾಲೀಕರಾದ ಮಾದಿಗ ಜನಾಂಗಕ್ಕೆ ಸರ್ಕಾರ ದಿನಾಂಕ ೨೨-೦೭-೨೦೧೪ ರಂದು ಭೂ-ಮಾಪನೆ ಮಾಡಿ ೨೨೬ ಎಕರೆ ಭೂಮಿಯನ್ನು ಭೂ-ಮಾಲೀಕರಾದ ದಲಿತರಿಗೆ ಒಪ್ಪಿಸಿರುವುದು ಹೈದ್ರಾಬಾದ್-ಕರ್ನಾಟಕದಲ್ಲಿ ಪ್ರಗತಿಪರ ಸಂಘಟನೆಗಳ ಜಂಟಿ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಿ.ಪಿ.ಐ.ಎಂ.ಎಲ್. ರಾಜ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ದಿನಾಂಕ ೨೯-೦೬-೨೦೧೪ ರಂದು ಭೂ-ಮಾಲೀಕರಾಗಿದ್ದು, ಭೂಮಿಯಿಂದ ದೂರವಿದ್ದ ೧೪ ಕುಟುಂಬಗಳ ಬೆಂಬಲವಾಗಿ ಪ್ರಗತಿಪರ ಸಂಘಟನೆಗಳು ನಮ್ಮ ಭೂಮಿ ನಮ್ಮ ಹಕ್ಕು ಹೋರಾಟದ ಅಡಿಯಲ್ಲಿ ಭೂ-ವಂಚಿತ ರೈತರಿಂದ ಭೂಮಿಯಲ್ಲಿ ಉಳುಮೆ ಮಾಡಿಸಿ, ಹೋರಾಟ ನಡೆಸಿತು. ಈ ಹೋರಾಟದ ಫಲವಾಗಿ ದಿನಾಂಕ ೦೧-೦೭-೨೦೧೪ ರಂದು ವಿಧಾನಸಭೆಯಲ್ಲಿ ಶೂನ್ಯಸಮಯದಲ್ಲಿ ಶಾಸಕರಾದ ಗೋವಿಂದ ಕಾರಜೋಳ ಇವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ದಿನಾಂಕ ೨೨-೦೭-೨೦೧೪ ರೊಳಗಾಗಿ ಭೂ-ವಂಚಿತರಾದ ದಲಿತರಿಗೆ ಅವರ ಸ್ವಂತ ಆಸ್ತಿಯಾದ ಭೂಮಿಯನ್ನು ಸರಕಾರವೇ ಸ್ವಾಧೀನಪಡಿಸುವುದಾಗಿ ಉತ್ತರಿಸಿದ್ದಾರೆ. ಅದರಂತೆ ಸರಕಾರ ಜಿಲ್ಲಾಧಿಕಾರಿಗಳ ಮುಖಾಂತರ ಜುಲೈ ೨೨ ರಂದು ಭೂಮಾಪನ ಮಾಡಿ ೨೨೬ ಎಕರೆ ಭೂಮಿಯನ್ನು ೧೪ ಕುಟುಂಬಗಳಿಗೆ ಹಸ್ತಾಂತರಿಸಿದ್ದು ಸ್ವಾಗತಾರ್ಹವಾಗಿದೆ.
ಈ ಹೋರಾಟದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯ ಸಂಘಟನೆಗಳಾದ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ಜನಶಕ್ತಿ, ಪ್ರಜಾತಾಂತ್ರಿಕ ಜನರ ವೇದಿಕೆ (ಪಿಡಿಎಫ್) , ಪಿಯುಸಿಎಲ್ ಕರ್ನಾಟಕ, ಪ್ರಗತಿಪರ ವಕೀಲರು, ಸಿ.ಪಿ.ಐ.ಎಂ.ಎಲ್. ಲಿಬರೇಷನ್, ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘ, ಲಂಕೇಶ ಬಳಗ, ಕೋಮುಸೌಹಾರ್ದವೇದಿಕೆ, ಇನ್ನೀತರ ಪ್ರಗತಿಪರ ಹಾಗೂ ದಲಿತ ಸಂಘಟನೆಗಳಿಗೆ ಈ ಭೂಹೋರಾಟದ ಗೆಲುವಿಗಾಗಿ ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಲಾಲ್‌ಸಲಾಮ್ ಹೇಳುತ್ತದೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.
0 comments:
Post a Comment