ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು, ಸದ್ಯ ಇರುವ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ ಎಂದು ಕೊಪ್ಪಳದ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸರ್ವಮಂಗಳ ಚಿಕ್ಕನಗೌಡರ್ ಅವರು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ್ ದಾ ಬಬಲಾದಿ ಅವರು ಮಾತನಾಡಿ, ಸಭ್ಯತೆಯ ಸಂಸ್ಕøತಿ ಹೊಂದಿರುವ ನಮ್ಮ ದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ನಾಚಿಕೆಗೇಡಿನ ಮತ್ತು ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸುವಾಗ ಸಮರ್ಪಕವಾಗಿ, ನಿಖರವಾಗಿ ವರದಿ ಸಲ್ಲಿಸದೇ ಇಲ್ಲದಿದ್ದಲ್ಲಿ, ಅದರ ದುರುಪಯೋಗ ಪಡೆದುಕೊಳ್ಳುವ ಆರೋಪಿಗಳು ಜಾಮೀನು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪೊಲೀಸ್ ಸೇರಿದಂತೆ ಇತರೆ ಅಧಿಕಾರಿಗಳು ವರದಿ ತಯಾರಿಸಿ ಸಲ್ಲಿಸುವಾಗ ಸರ್ಕಾರಿ ಅಭಿಯೊಜಕರ ನೆರವನ್ನು ಪಡೆದುಕೊಳ್ಳುವುದು ಸೂಕ್ತ. ನ್ಯಾಯಾಲಯಕ್ಕೆ ಸಲ್ಲಿಸುವ ವರದಿ ಸಮರ್ಪಕವಾಗಿದ್ದಲ್ಲಿ, ಶೋಷಿತರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ವಿವಿಧ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾನೂನನ್ನು ಸರಿಯಾಗಿ ಅನುಷ್ಠಾನಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ವ್ಯವಸ್ಥೆಯಲ್ಲಿನ ವೈಫಲ್ಯವನ್ನು ಆರೋಪಿಗಳು ಸಮರ್ಪಕವಾಗಿ ಬಳಸಿಕೊಂಡು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಸಂವಿಧಾನದ ಮೌಲ್ಯಗಳನ್ನು ಗೌರವಿಸಬೇಕಾದ್ದು, ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಮಾತನಾಡಿ, ಮಹಿಳೆಯರ ಮೇಲಿನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ದೌರ್ಜನ್ಯ ನಡೆಸುವವರಿಗೆ ಕಠಿಣ ಶಿಕ್ಷೆಯ ಜೊತೆಗೆ ಶೋಷಿತರು ಪರಿಹಾರ ಪಡೆದುಕೊಳ್ಳಬಹುದಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಯಾರನ್ನೋ ರಕ್ಷಿಸಲು, ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ, ವಕೀಲರಾದ ವಿ.ಎಂ. ಭೂಸನೂರಮಠ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಕೀಲ ಎಂ. ಹನುಮಂತರಾವ್ ಅವರು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು, ವಕೀಲೆ ಸಾವಿತ್ರಿ ಗಮನಿ ಅವರು ಹಿಂದೂ ಮಹಿಳೆ ಆಸ್ತಿ ಹಕ್ಕು ಕುರಿತು, ಎಸ್.ಬಿ. ಪಾಟೀಲ್ ಅವರು ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಪೊಲೀಸ್ ಇಲಾಖೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿಯ ಪಿಎಸ್‍ಐಗಳು, ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಸಾಂತ್ವನ ಕೇಂದ್ರದ ಸಮಾಲೋಚಕರು, ಸಮಾಜ ಕಾರ್ಯಕರ್ತರು, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
0 comments:
Post a Comment