PLEASE LOGIN TO KANNADANET.COM FOR REGULAR NEWS-UPDATES

ಬೆಂಗಳೂರಿನಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳು ಸುದ್ದಿಪತ್ರಿಕೆಗಳ ಮುಖಪುಟ ತುಂಬುತ್ತ, ಸದನದಲ್ಲಿ ಗದ್ದಲವಾಗುತ್ತ, ಟೀವಿ ಚಾನೆಲ್ಲುಗಳ ಬಿಸಿಬಿಸಿ ಚರ್ಚೆ-ಸಂವಾದಕ್ಕೆ ಗ್ರಾಸವಾಗುತ್ತ ಇರುವಾಗಲೇ ಹೊಸಹೊಸ ಪ್ರಕರಣಗಳು ಸಂಭವಿಸುತ್ತಿವೆ. ಬೆಂಗಳೂರಷ್ಟೇ ಅಲ್ಲ, ದೇಶಾದ್ಯಂತ ವರ್ಗ, ಜಾತಿ, ಸ್ಥಳ, ವಯಸ್ಸು ಎಂಬ ಭೇದವಿಲ್ಲದೇ ಒಂದಾದ ಮೇಲೊಂದು ಸಂಭವಿಸುತ್ತಿರುವ ಅತ್ಯಾಚಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯದೇ ಜೀವ ಮರಗಟ್ಟಿ ಹೋಗಿದೆ. ಮಾತನಾಡುವಾಗ ನಡು ಬೆರಳೆತ್ತಿದರೆ ಏನೋ ಅಪಾರ್ಥ, ಅಕಸ್ಮಾತ್ ಸೆರಗು ಸರಿದರೆ ಇನ್ನೇನೋ ವಿಪರೀತಾರ್ಥವಾಗುವ ಕಾಲದಲ್ಲಿ; ಸರಿರಾತ್ರಿ ಒಬ್ಬಳೇ ಬಸ್ ಕಾಯುವಾಗ ಆಚೀಚೆ ಠಳಾಯಿಸುತ್ತ ತಿರುಗಾಡುವವರ ಮೇಲೆ ಭಯಮಿಶ್ರಿತ ಅನುಮಾನ ಸುಳಿಯುವ ದಿನಗಳಲ್ಲಿ; ಹೆಣ್ಮಕ್ಕಳು ಮನೆಯಿಂದ ಹೊರಹೋಗುವುದೇ ಅಪಾಯ, ಮನೆಯೊಳಗಿರುವುದೇ ಕ್ಷೇಮ ಎಂಬ ಪಾಲಕರ ಅನಿಸಿಕೆಯಲ್ಲಿ ಕಾಲಚಕ್ರ ಹಿಮ್ಮುಖ ತಿರುಗುತ್ತಿರುವ ಭಾಸವಾಗುತ್ತಿದೆ. 

ಭೀಭತ್ಸ, ದಿಙ್ಮೂಢ, ಆಕ್ರೋಶ, ದಿಗ್ಭ್ರಮೆ - ಮುಂತಾದ ನಮ್ಮ ಡಿಕ್ಷನರಿಯ ಎಲ್ಲ ಪದಗಳೂ ಸವಕಲಾಗಿ ಸತ್ತೇ ಹೋಗಿರುವಾಗ ಅತ್ಯಾಚಾರವನ್ನು, ಅದರ ಕಾರಣಗಳನ್ನು ಹೊಸದಾಗಿಯೇ ವಿಶ್ಲೇಷಿಸಬೇಕಿದೆ. ಏಕೆಂದರೆ ಆರೋಪ, ಆರೋಪಿ, ಗುನ್ನೆ, ಶಿಕ್ಷೆ ಈ ಎಲ್ಲದರ ಬಗೆಗೆ ಎಷ್ಟು ದಿವಸಗಳಿಂದ ಮಾತನಾಡುತ್ತಿದ್ದೇವೆ? ಆದರೂ ಯಾಕೆ ಈ ಭೀಭತ್ಸವನ್ನು ತಡೆಗಟ್ಟಲಾಗಿಲ್ಲ? ಯಾಕೆ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ? ಇಷ್ಟೆಲ್ಲ ಕಠಿಣ ಕಾನೂನುಗಳು ಬಂದರೂ, ಜನರ ಆಕ್ರೋಶವನ್ನು ಕಣ್ಣಾರೆ ಕಂಡರೂ  ಅತ್ಯಾಚಾರ ನಡೆಸಬೇಕೆಂದು ಅನಿಸುವುದಾದರೂ ಏತಕ್ಕೆ? ಮಾತು-ಚರ್ಚೆ-ಪ್ರತಿಭಟನೆಗಳು ದೌರ್ಜನ್ಯದ ವಿರುದ್ಧ ಜನಾಭಿಪ್ರಾಯವಾಗಿ ರೂಪುಗೊಂಡು ಹೆಣ್ಣಿಗೊಂದು ಸುರಕ್ಷಿತ ಬದುಕನ್ನು ಕೊಡಲು ಸಾಧ್ಯವಾಗದಂತೆ ಮಾಡಿರುವುದಾದರೂ ಯಾವುದು? ಅತ್ಯಾಧುನಿಕ ತಂತ್ರಜ್ಞಾನ, ಅಪ್ಲಿಕೇಷನ್‌ಗಳು ಜನಸಾಮಾನ್ಯರಿಗೆ ದೊರಕಿದ್ದೇ ಅನಗತ್ಯವಾಗಿತ್ತೇ? ಅಪಾಯಕಾರಿಯಾಯಿತೇ? 

ಅತ್ಯಾಚಾರದ ಸಾಮಾಜಿಕ, ಸಾಂಸ್ಕೃತಿಕ, ಲಿಂಗ ರಾಜಕಾರಣದ ಮುಖಗಳ ಬಗೆಗೆ ಸಾಕಷ್ಟು ಚರ್ಚೆ ನಡೆದಿದೆ. ಎಂದೇ ಒಂದೆರೆಡು ಪ್ರಮುಖ ವಿಷಯಗಳತ್ತ ಮಾತ್ರ ಗಮನ ಸೆಳೆಯಬಯಸುವೆ.  

ದೃಶ್ಯಮಾಧ್ಯಮಗಳು ಅತ್ಯಾಚಾರ ಪ್ರಕರಣಕ್ಕೆ ಪ್ರಚಾರ ಕೊಟ್ಟು ಮುನ್ನೆಲೆಗೆ ಬರುವಂತೆ ಮಾಡಲು ಎಷ್ಟು ಕಾರಣವೋ ಅಷ್ಟೇ ಅತ್ಯಾಚಾರ ನಡೆಯಲೂ ಕಾರಣವಾಗಿವೆ. ಇದು ಬೀಸು ಹೇಳಿಕೆಯೆನಿಸಬಹುದು, ಆದರೂ ಇವತ್ತಿನ ಅಸಂಖ್ಯ ಟಿವಿ ಚಾನೆಲ್ಲುಗಳ ಅಸಂಖ್ಯ ಸೀರಿಯಲ್ಲುಗಳು, ಕೆಟ್ಟ ಸಿನಿಮಾಗಳು, ರಿಯಾಲಿಟಿ ಶೋಗಳು, ಜಾಹೀರಾತುಗಳು ಹೆಣ್ಣು ಎನ್ನುವುದು ರುಚಿ ನೋಡಬೇಕಾದ ಖಾದ್ಯ ಎನ್ನುವಂತೆ ಬಿಂಬಿಸುತ್ತ ಸರಕಿನ ಮಾರಾಟಕ್ಕೆ ಪೂರಕವಾಗಿಸಿರುವುದನ್ನು ನೋಡಿದರೆ ಈ ಆರೋಪದ ಹುರುಳು ಅರ್ಥವಾಗುತ್ತದೆ. ಒಳ್ಳೆಯದು-ಕೆಟ್ಟದ್ದು, ಅವಶ್ಯ-ಅನವಶ್ಯ ಎನ್ನುವುದಕ್ಕಿಂತ ರೋಚಕವಾಗಿ ಜನರನ್ನು ಸೆಳೆದರಷ್ಟೇ ಲಾಭ ಎಂಬ ಯಶಸ್ಸಿನ ಕಳ್ಳದಾರಿಯನ್ನು ಮೀಡಿಯಾಗಳು ಕಂಡುಕೊಂಡಿವೆ. ದೃಶ್ಯ ಜಗತ್ತಿನ ಈ ವ್ಯಾವಹಾರಿಕ ದೃಷ್ಟಿಕೋನ ಬದಲಾಗದ ಹೊರತು ಯಾವ ಟಾಕ್ ಷೋ, ಸಂವಾದ, ಸ್ಟಿಂಗ್ ಆಪರೇಷನ್ನಿನಿಂದ ನಯಾ ಪೈಸೆಯಷ್ಟೂ ಉಪಯೋಗವಿಲ್ಲ ಎಂದು ಅವರಿಗೆ ತಿಳಿಸುವುದು ಒಳಿತು. 

ಭಾರತದಲ್ಲಿ ನೀಲಿಚಿತ್ರ ವೀಕ್ಷಣೆ ನಿಷೇಧಿತವಾಗಿದ್ದರೂ ಬೀಡಿ, ಸಿಗರೇಟಿನಷ್ಟೇ ಸುಲಭಕ್ಕೆ ಎಲ್ಲಿ ಬೇಕಾದರೂ ಅದರ ಸಿಡಿ, ಡಿವಿಡಿಗಳು ಸಿಗುತ್ತವೆ. ಇದು ೧೦೦ ಕೋಟಿಗೂ ಮೀರಿದ ವಹಿವಾಟಿರುವ ನೀಲಿಚಿತ್ರಗಳ ಯಶಸ್ಸಿನ ಓಪನ್ ಸೀಕ್ರೆಟ್. ಬರೀ ಎರಡು ರೂಪಾಯಿ, ಐದು ರೂಪಾಯಿ ಕೊಟ್ಟರೆ ಬ್ಲ್ಯೂ ಫಿಲಂಗಳನ್ನು, ಕಾಮಕೇಳಿಯ ದೃಶ್ಯಗಳನ್ನು ಮೊಬೈಲಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ತಮ್ಮ ಮೊಬೈಲ್ ಕ್ಯಾಮೆರಾದಿಂದ ‘ಲೈವ್’ ಆಗಿ ಸೆರೆಹಿಡಿದು ಉಳಿದವರಿಗೆ ಕಳಿಸಬಹುದು. ಮೊಬೈಲು, ಸಿಮ್‌ಗಳ ಲಭ್ಯತೆಗಂತೂ ಯಾವುದೇ ರೆಗ್ಯುಲೇಷನ್ ಇಲ್ಲ. ಯಾರ ಬಳಿ ಎಷ್ಟು ಮೊಬೈಲ್ ಸೆಟ್ ಇರಬೇಕೆನ್ನುವುದಕ್ಕೆ ಅವರವರ ಆಸೆಗಳೇ ನಿರ್ಧಾರಕಗಳು. ಅಂತರ್ಜಾಲ ತಾಣಗಳು ಹಳ್ಳಿಯ ಮೂಲೆಮೂಲೆ ತಲುಪಿ ವೇಗವಾಗಿ ಮೆಸೇಜುಗಳನಷ್ಟೇ ಅಲ್ಲ, ವೀಡಿಯೋಗಳನ್ನೂ ಕಳಿಸಲು ವಾಟ್ಸಪ್ ಸೌಲಭ್ಯ ಸಿಕ್ಕಿಬಿಟ್ಟಿದೆ. ಯಾವುದೇ ಅಂತರ್ಜಾಲ ತಾಣ ತೆರೆಯಿರಿ, ಬಿರಿದ ಎದೆಯನ್ನು ತೋರಿಸುತ್ತ ನಿಮ್ಮ ಬಳಿ ಸಖ್ಯ ಬೆಳೆಸಲು ಉತ್ಸುಕರಾಗಿರುವ ಹುಡುಗಿಯರ ಫೋಟೋ, ಫೋನ್ ನಂಬರ್ ಕಣ್ಣೆದುರು ಮಿನುಗುತ್ತವೆ. ಆ ಹುಡುಗಿಯರ ಪ್ರೊಫೈಲ್ ನೋಡಿದರೆ ಗಾಬರಿಯಾಗುತ್ತೀರಿ, ಅವರ ಹವ್ಯಾಸ ಸೆಕ್ಸ್! ಕಾಲಯಾಪನೆ ಫೋನಿನಲ್ಲಿ ಪ್ರಚೋದಕ ಮಾತನಾಡುವುದು!! ಫೋನ್ ಮತ್ತು ಅಂತರ್ಜಾಲ ಸೇವೆ ಒದಗಿಸುವವರು ಪೈಪೋಟಿಗೆ ಬಿದ್ದು ಹೀಗೆ ಬೇಕಿದ್ದು, ಬೇಡದಿದ್ದನ್ನೆಲ್ಲ ವಿವೇಚನೆಯಿಲ್ಲದೇ ಒದಗಿಸಿಕೊಟ್ಟರೆ ಏನಾಗುತ್ತದೆ ಎನ್ನಲು ಈಗ ಹೆಚ್ಚುತ್ತಿರುವ ಅಪರಾಧಗಳೇ ಸಾಕ್ಷಿಯಾಗಿವೆ. 

ಬಹಳಷ್ಟು ಅತ್ಯಾಚಾರ ಅಪರಾಧಿಗಳು ಒಪ್ಪಿಕೊಂಡಂತೆ ಅವರೆಲ್ಲ ನೀಲಿಚಿತ್ರಗಳ ವೀಕ್ಷಣೆಯಿಂದ ಪ್ರಚೋದನೆ, ಧೈರ್ಯ ಪಡೆದಿದ್ದಾರೆ. ಬರೀ ಬೆತ್ತಲೆ ಹೆಣ್ಣಿನ ದೇಹ ನೋಡುವ ಚಟಕ್ಕೆ ಬಿದ್ದಂಥವರು ಹೆಣ್ಣನ್ನು ಎದೆಮನಸುಗಳಿರುವ ಒಂದು ಜೀವಿಯಾಗಿ ನೋಡಲಾರರು. ಅವರಿಗೆ ಹೆಣ್ಣುದೇಹ ಕೇವಲ ತನ್ನ ಕಾಮದಾಹ ತಣಿಸುವ ಒಂದು ವಸ್ತು. ಜೊತೆಗೆ ಮದ್ಯಪಾನ, ಮಾದಕ ವಸ್ತುಗಳು ಹಾಗೂ ಸಮಾನ ವಯಸ್ಕ, ಮನಸ್ಕರು ಸೇರಿದರೆ ಕಾಮ ಕೆರಳಿಸುವುದು ಏನೂ ಕಷ್ಟವಿಲ್ಲ. ಆದರೆ ಕಾಮವನ್ನು ಶಮನಗೊಳಿಸಿಕೊಳ್ಳುವುದು, ನಿಯಂತ್ರಿಸುವುದು ಸುಲಭವಲ್ಲ ಎಂದು ತಿಳಿಹೇಳುವವರು ಯಾರು? ಸಾಮಾಜಿಕ-ನೈತಿಕ-ಧಾರ್ಮಿಕ ನಿಯಂತ್ರಣಗಳೆಲ್ಲ ಸಡಿಲವಾಗಿರುವ ಈ ಕಾಲದಲ್ಲಿ ದೇಹವೆಂಬ ಮೌಲ್ಯದ ಕುರಿತು ತಿಳಿಸುವವರಾರು? ಪುರುಷ ಸಮಾಜ ತನ್ನ ಅಸಹಾಯಕತೆ, ಆಕ್ರೋಶಗಳನ್ನು ಹೆಣ್ಣಿನ ಮೇಲೆ ದೌರ್ಜನ್ಯ ಎಸಗುವುದರ ಮೂಲಕ ತೀರಿಸಿಕೊಳ್ಳುವಂತೆ ಆದದ್ದು ಹೇಗೆ? ಇದು ಸಮಾಜ ವಿಶ್ಲೇಷಿಸಬೇಕಿರುವ ಅತಿ ಮುಖ್ಯ ವಿಚಾರವಾಗಿದೆ.  

ಎಂದರೆ ಅತ್ಯಾಚಾರ ಹೆಚ್ಚುತ್ತ ಹೋಗಲು ಸಿನಿಮಾವನ್ನೊಳಗೊಂಡಂತೆ ವಿಷುವಲ್ ಮೀಡಿಯಾ, ಮೊಬೈಲ್ ಬಳಕೆ ಮತ್ತು ಉನ್ನತ ತಂತ್ರಜ್ಞಾನ ನೇರ ಕಾರಣವಾಗಿವೆ. ಅದರ ಮೇಲೆ ನಿರ್ಬಂಧ ಹೇರದ ಹೊತು ಮಹಿಳಾ ಸುರಕ್ಷೆ ಎನ್ನುವುದು ಭಾಷಿಕ ಪದವಾಗಿ ಉಳಿಯುವುದೇ ವಿನಹ ವಾಸ್ತವವಾಗುವುದಿಲ್ಲ. ಎಂದೇ ಮೊಬೈಲು ಮತ್ತು ಅಂತರ್ಜಾಲ ಬಳಕೆ ಮೇಲೆ ಕಟ್ಟುನಿಟ್ಟಾದ ಕಣ್ಗಾವಲು ಮತ್ತು ನಿರ್ಬಂಧ ಅನಿವಾರ್ಯವಾಗಿದೆ. 

ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ ಸಮಯ ಮಿತಿಯೊಳಗೆ ತೀರ್ಪು ನೀಡಬೇಕೆಂಬ ಬೇಡಿಕೆ ಹಳೆಯದು. ಆದರೆ ಅಷ್ಟೇ ಅಲ್ಲ, ಕಾಲಕಾಲಕ್ಕೆ ತನಿಖೆಯ ಪ್ರಗತಿ ಹಾಗೂ ನ್ಯಾಯಾಲಯ ಕಲಾಪಗಳ ಕುರಿತು ಸಾರ್ವಜನಿಕರಿಗೆ ತಿಳಿಸುವುದೂ ಕಡ್ಡಾಯವಾಗಬೇಕು. ಆರೋಪ ಮೇಲ್ನೋಟಕ್ಕೇ ಸಾಬೀತಾಗುವಂತಿದ್ದರೆ ಕೂಡಲೇ ಆರೋಪಿಯ ಹೆಚ್ಚುವರಿ ನಾಗರಿಕ ಸೌಲಭ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು: ಉದಾ: ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಬ್ಯಾಂಕ್ ಖಾತೆ, ಗುರುತು ಕಾರ್ಡು ಇತ್ಯಾದಿ. ಮನುಷ್ಯನನ್ನು ಅವನ ಮಾನವ ಹಕ್ಕುಗಳಿಂದ ವಂಚಿಸುವುದು ಕ್ರೂರವೇ ಆದರೂ ಒಬ್ಬ ನಾಗರಿಕ ವ್ಯಕ್ತಿ ಎಸಗಬಹುದಾದ ಗುನ್ನೆಗಳಲ್ಲಿ ಅತ್ಯಾಚಾರಕ್ಕಿಂತ ದೊಡ್ಡ ಗುನ್ನೆ ಇಲ್ಲ. ಎಂದೇ ಬೆನೆಫಿಟ್ ಆಫ್ ಡೌಟ್ ಅತ್ಯಾಚಾರ ಆರೋಪಿಗೆ ಸಿಗದಂತೆ ನೋಡಿಕೊಳ್ಳಬೇಕು. 

ಈ ದಿಕ್ಕಿನಲ್ಲಿ ಸಮಾಜ ಮತ್ತು ಕಾನೂನು ನಿರ್ಮಾತೃಗಳು ಯೋಚಿಸುವುದು ಅವಶ್ಯ ಎನಿಸುತ್ತಿದೆ.  

***

ಉತ್ತರ ಪ್ರದೇಶದ ಬದಾವೂಂನಲ್ಲಿ ಇಬ್ಬರು ದಲಿತ ಬಾಲಕಿಯರ ಮೇಲೆ ಅತ್ಯಾಚಾರವಾಗಿ ನೇಣಿಗೇರಿಸಿದರು. ಅದಾದ ಒಂದು ವಾರದಲ್ಲಿ, ತಿಂಗಳಲ್ಲಿ ಮತ್ತೆಮತ್ತೆ ದಲಿತ ಹೆಣ್ಮಕ್ಕಳು ಅತ್ಯಾಚಾರಕ್ಕೊಳಪಟ್ಟರು. ಅದು ಕೊಂಚ ಸುದ್ದಿಯಾಯಿತಾದರೂ ದೇಶಾದ್ಯಂತ ಪ್ರತಿಭಟನೆಯ ಅಲೆ ಎಬ್ಬಿಸಲಿಲ್ಲ. ನಿರ್ಭಯಾ ಪ್ರಕರಣದಂತಹ ‘ಹೈ ಪ್ರೊಫೈಲ್’ ಕೇಸಿಗೆ ದೇಶವೇ ಎದ್ದು ಕುಣಿಯುತ್ತದೆ, ಆದರೆ ದಲಿತ ಬಾಲಕಿಯರ ಅತ್ಯಾಚಾರ ಕೊಲೆ ನಡೆದರೆ ಸಾರ್ವಜನಿಕರು, ಮಾಧ್ಯಮಗಳಷ್ಟೇ ಅಲ್ಲ, ಮಹಿಳಾ ಸಂಘಟನೆಗಳೂ ಸುಮ್ಮನಿರುತ್ತವೆ ಎಂಬ ಆರೋಪ ಕೇಳಿಬಂತು. ಅತ್ಯಾಚಾರ ಕುರಿತ ಮಾತು-ಚರ್ಚೆ-ಸಂವಾದಗಳಲ್ಲಿ ಇಂಥ ಕೆಲ ಪ್ರಶ್ನೆಗಳು ಎತ್ತಲ್ಪಟ್ಟವು. 

ನಿಜ, ಮಹಿಳಾ ಹೋರಾಟಗಾರರು ಖೈರ್ಲಾಂಜಿಯಂತಹ ಅತ್ಯಂತ ಬರ್ಬರ ಅತ್ಯಾಚಾರ ಮತ್ತು ಹತ್ಯಾಕಾಂಡದ ಸಮಯದಲ್ಲಿ ಮೌನ ವಹಿಸಿದ್ದು ಅಕ್ಷಮ್ಯ. ಜೊತೆಗೇ ಮೊದಲ ಹಂತದ ಮಹಿಳಾ ಚಳುವಳಿಯು ಜಾತಿ ಪ್ರಶ್ನೆಯನ್ನು ಎತ್ತಿಕೊಳ್ಳದೇ ಇದ್ದುದೂ ನಿಜ. ಆದರೆ ದಲಿತ ಮಹಿಳೆಯರ ಕುರಿತು ಮಹಿಳಾ ಚಳುವಳಿ ಪೂರ್ಣ ಮೌನ ವಹಿಸುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಎರಡನೇ ಹಂತದ ಮಹಿಳಾ ಚಳುವಳಿ ಹುಟ್ಟಿಕೊಂಡಿದ್ದೇ ಮಥುರಾ ಎಂಬ ಅಜ್ಞಾತ ಆದಿವಾಸಿ ಬಾಲಕಿಯ ಅತ್ಯಾಚಾರ ಪ್ರಕರಣದ ಸಮಯದಲ್ಲಿ. ಮಹಿಳಾ ದೌರ್ಜನ್ಯ ತಡೆ ಕಾನೂನನ್ನು ಗಮನಾರ್ಹವಾಗಿ ಬದಲಿಸಲು ಕಾರಣವಾದ ಲ್ಯಾಂಡ್‌ಮಾರ್ಕ್ ಕೇಸುಗಳಲ್ಲಿ - ಮಥುರಾ, ಭನವಾರಿ ದೇವಿ, ಕರ್ನಾಟಕದ ಅನಸೂಯಮ್ಮ ಮತ್ತಿತರ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರು ತಳಸಮುದಾಯಗಳ ಅಸಹಾಯಕ ಮಹಿಳೆಯರೇ ಆಗಿದ್ದರು ಹಾಗೂ ಅವರ ಪರವಾಗಿ ಮಹಿಳಾ ಮತ್ತಿತರ ಪ್ರಗತಿಪರ ಸಂಘಟನೆಗಳು ಹೋರಾಡಿವೆ. ಜೊತೆಗೇ ಉಮಾ ಚಕ್ರವರ್ತಿ, ಶರ್ಮಿಳಾ ರೇಗೆಯಂತಹ ಹಲವರು ಮಹಿಳಾ ಚಳುವಳಿಯಲ್ಲಿ ಜಾತಿ ಪ್ರಶ್ನೆಯನ್ನು ತುಂಬ ಗಂಭೀರವಾಗಿ ಎತ್ತಿದರು. ದಲಿತ ಮಹಿಳಾ ಸ್ತ್ರೀವಾದದ ಇರುವಿಕೆಯನ್ನೂ, ಅದರ ಪ್ರಾಮುಖ್ಯತೆಯನ್ನೂ ತೋರಿಸಿ ಕೊಟ್ಟರು. 

ನಿಜ, ನಿರ್ಭಯಾ ಪ್ರಕರಣ ಎಬ್ಬಿಸಿದ ಅಲೆಯನ್ನು ಇತ್ತೀಚಿನ ಯಾವ ದೌರ್ಜನ್ಯವೂ, ದುರುಳತನವೂ ಎಬ್ಬಿಸಿರಲಿಲ್ಲ. ಇದಕ್ಕೆ ಕಾರಣ ಹಲವಿವೆ. ಆ ಪ್ರಕರಣ ಏಕಾಏಕಿ ಎಲ್ಲರ ಗಮನ ಸೆಳೆದದ್ದು ಅದು ದೇಶದ ರಾಜಧಾನಿಯಲ್ಲಿ, ಅದೂ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಸಂಭವಿಸಿತು ಎಂಬ ಕಾರಣಕ್ಕೆ. ಜೊತೆಗೆ ಆ ಕಾಲದಲ್ಲಿ ಅರವಿಂದ ಕೇಜ್ರಿವಾಲ್ ಅಲೆಯಿದ್ದು ಆಮ್‌ಆದ್ಮಿ ಪಕ್ಷ ಪ್ರತಿಭಟನೆಗೆ ಬೆಂಬಲ ಸೂಚಿಸಿತ್ತು. ಆ ಪ್ರಕರಣದ ಬರ್ಬರತೆ ಎಷ್ಟಿತ್ತೆಂದರೆ ಅದು ಮಾಧ್ಯಮಗಳಿಗೆ ಅತಿರೋಚಕ ‘ಸ್ಟೋರಿ’ಯಾಗಿ ಕಾಣಿಸಿತು. ಹೀಗೆ ಮೀಡಿಯಾಗಳ ಅತಿ ಬಿಂಬಿಸುವಿಕೆಗೆ ಒಳಗಾಗಿ ಪ್ರತಿಭಟನೆ ಕಾವು ಪಡೆಯಿತು. ಜೊತೆಗೆ ಆ ಹುಡುಗಿ ತೀರಿಕೊಂಡ ಮೇಲೆ ದೊರಕಿದ ವಿವರಗಳಿಂದ ಕ್ರೌರ್ಯದ ಬರ್ಬರತೆಗೆ ದೇಶವೇ ಬೆಚ್ಚಿಬೀಳುವಂತಾಯಿತು. ಯುವ ಜನತೆ ವಿಶೇಷವಾಗಿ ಬೀದಿಗಿಳಿಯಿತು. 

ನಿರ್ಭಯಾ ಮೇಲೆ ಅತ್ಯಾಚಾರವಾದಾಗ ಅವಳ ಜಾತಿ ಯಾರಿಗೂ ಗೊತ್ತಿರಲಿಲ್ಲ. ಅವಳು ಕೆಳ ಮಧ್ಯಮ ವರ್ಗದ ಮೇಲ್ಜಾತಿ ಹುಡುಗಿಯಾಗಿದ್ದಳು ಎಂದು ಬಹಳ ಕಾಲದ ನಂತರ ತಿಳಿಯಿತು. ಅವಳು ಯಾವ ಜಾತಿ-ವರ್ಗದವಳೇ ಆಗಿರಲಿ: ಸಾಯುವ ಗಳಿಗೆಯಲ್ಲೂ ಸಾಕ್ಷ್ಯ ಒದಗಿಸಿದಳು, ತ್ವರಿತವಾಗಿ ವರ್ಮಾ ಸಮಿತಿಯ ವರದಿ ಹೊರಬಂತು, ಕಳೆದ ಏಪ್ರಿಲಿನಲ್ಲಿ ಅತ್ಯಾಚಾರ ಕಾಯ್ದೆ ತಿದ್ದುಪಡಿಯಾಯಿತು. ಅವಳ ನೆಪದಲ್ಲಿ ಸಂಭವಿಸಿದ ಜಾಗೃತಿ, ಬದಲಾವಣೆಯ ಕಾರಣಕ್ಕಾಗಿ ಪ್ರಾಣಬಿಟ್ಟ ಆ ಹುಡುಗಿಯನ್ನು ಅವಳ ಜಾತಿ ಯಾವುದಾದರೇನು, ಎಲ್ಲರೂ ನೆನೆಯಲೇಬೇಕು.

ದೆಹಲಿಯ ನಂತರ ಗಮನ ಸೆಳೆದ ಮುಂಬಯಿ ಪತ್ರಕರ್ತೆಯ ಪ್ರಕರಣ, ಈಗ ಬೆಂಗಳೂರಿನ ಪ್ರಕರಣ ಗಮನಿಸಿದರೆ ಒಂದು ವಿಷಯ ಗಟ್ಟಿಯಾಗುತ್ತದೆ: ಅತ್ಯಾಚಾರ ಸಂಭವಿಸುವ ಸ್ಥಳ ಮತ್ತು ದೌರ್ಜನ್ಯಕ್ಕೆ ಈಡಾದವರ/ಆರೋಪಿಗಳ ವರ್ಗ ಖಂಡಿತವಾಗಿಯೂ ತನಿಖೆ, ತೀರ್ಪು, ಮಾಧ್ಯಮದವರ ಪ್ರತಿಕ್ರಿಯೆ ಎಲ್ಲದರ ಮೇಲೂ ಪ್ರಭಾವ ಬೀರುತ್ತವೆ. ಯಾವುದೋ ಹಳ್ಳಿಯ ಮೂಲೆಯಲ್ಲಿ ಸಂಭವಿಸಿದ ಯಾವುದೋ ಹೆಣ್ಣಿನ ಅತ್ಯಾಚಾರಕ್ಕೆ ಮೀಡಿಯಾಗಳು ಹೆಚ್ಚುಕಾಲ ಸ್ಪಂದಿಸುವುದಿಲ್ಲ, ದೇಶವೇ ಎದ್ದು ಬೀದಿಗಿಳಿಯುವುದಿಲ್ಲ, ಅಂಥವು ಯಾರ ಗಮನಕ್ಕೂ ಬರದೇ ಹೋಗುವ ಸಾಧ್ಯತೆಯೇ ಹೆಚ್ಚು.

ವರ್ಗ/ಜಾತಿ ತಾರತಮ್ಯ ಹಂತಹಂತವಾಗಿ ಅಸಹಾಯಕರನ್ನು ಬಲಿ ತೆಗೆದುಕೊಳ್ಳುವ ವ್ಯವಸ್ಥೆಯಲ್ಲಿ ಅತ್ಯಾಚಾರವನ್ನು ಹೇಗೆ ನಿಗ್ರಹಿಸಬೇಕು ಎಂಬ ಪ್ರಶ್ನೆ ಏಳುತ್ತದೆ. ನಮಗನಿಸುವಂತೆ ಈ ದೇಶದ ಎಲ್ಲ ಪ್ರಜ್ಞಾವಂತರಿಗೆ ಒಂದೇಒಂದು ದಾರಿ ಉಳಿದಿದೆ: ನಮ್ಮ ಸುತ್ತ ಯಾವುದೇ ಹೆಣ್ಣುಜೀವ ದೌರ್ಜನ್ಯಕ್ಕೊಳಗಾಗಿದ್ದು ತಿಳಿದರೂ ನಮ್ಮ ಬಳಿ ಸಾಧ್ಯವಾದ ಎಲ್ಲ ರೀತಿಯಲ್ಲೂ ದನಿಯೆತ್ತಬೇಕು. ಭಾಷಣ, ಬರಹ, ಸಂಘಟನೆ ಇನ್ನಿತರ ರೂಪದಲ್ಲಿ ಒತ್ತಡ ತರಲು ಪ್ರಯತ್ನಿಸಬೇಕು. ಯಾವುದೋ ನಾಯಕ, ಸಂಘಟನೆ, ಆಯೋಗದ ಅಧ್ಯಕ್ಷರು, ಕೋರ್ಟು, ಪೊಲೀಸರು ಅವರಾಗೇ ನಮ್ಮ ಬಳಿ ಬಂದು ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆಯನ್ನು ಜನಸಾಮಾನ್ಯರು ಇಟ್ಟುಕೊಳ್ಳದೇ ತತ್‌ಕ್ಷಣದ ಪ್ರತಿಕ್ರಿಯೆ ಜನರಿಂದಲೇ, ಸ್ಥಳೀಯರಿಂದಲೇ ಬರಬೇಕು. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ, ದೌರ್ಜನ್ಯ ತಡೆಯುವಲ್ಲಿ ಈ ತೆರನ ನಾಗರಿಕ ಜಾಗೃತಿ ಅತ್ಯಂತ ಅವಶ್ಯವಾಗಿದೆ ಹಾಗೂ ಏಕೈಕ ಮಾರ್ಗವಾಗಿದೆ.

- ಡಾ. ಎಚ್. ಎಸ್. ಅನುಪಮಾ

Advertisement

0 comments:

Post a Comment

 
Top