PLEASE LOGIN TO KANNADANET.COM FOR REGULAR NEWS-UPDATES

ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಜನಾಂಗದವರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತಾಗಲು ಎಲ್ಲ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಲೆಮಾರಿ ಜನಾಂಗದ ಸಲಹಾ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ರಾಜ್ಯದಲ್ಲಿ ಒಟ್ಟು 46 ಜಾತಿಗಳನ್ನು ಅಲೆಮಾರಿ ಜನಾಂಗವನ್ನಾಗಿ ಗುರುತಿಸಿ, ಸರ್ಕಾರ ಆದೇಶ ಹೊರಡಿಸಿದೆ. ಅಲೆಮಾರಿ ಜನಾಂಗ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ.  ಇದನ್ನು ಅನುಷ್ಠಾನಗೊಳಿಸಬೇಕಾದ ಇಲಾಖೆಗಳು, ಜನಾಂಗಕ್ಕೆ ದೊರೆಯಬಹುದಾದ ಯೋಜನೆಗಳ ಬಗ್ಗೆ ಸಮುದಾಯಕ್ಕೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ.   ಸರ್ಕಾರ ಕಲ್ಪಿಸಿರುವ ಸೌಲಭ್ಯವನ್ನು ಪಡೆದುಕೊಳ್ಳಲು ಜನಾಂಗದವರು ಮುಂದಾಗಬೇಕು.  ವಿವಿಧ ಇಲಾಖೆಗಳ ಮೂಲಕ ಒದಗಿಸಲಾಗುವ ಸರ್ಕಾರದ ವಿವಿಧ ಸೌಲಭ್ಯಗಳನ್ನು ಅಲೆಮಾರಿ ಜನಾಂಗದವರು ಪಡೆಯುವಂತಾಗಲು, ಅರ್ಜಿ ನಮೂನೆ, ಅರ್ಜಿ ಸಲ್ಲಿಕೆ, ದಾಖಲೆಗಳ ಸಲ್ಲಿಕೆ ಕುರಿತಂತೆ ಅರಿವು ಮೂಡಿಸುವ ಕ್ರಮ ಆಗಬೇಕು.  ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಸಮಿತಿ ಸಭೆಯನ್ನು ನಡೆಸಬೇಕು.  ತಾಲೂಕು ಮಟ್ಟದಲ್ಲಿಯೂ ಸಮಿತಿಯನ್ನು ರಚಿಸಬೇಕಾಗಿದ್ದು, ತಾಲೂಕು ಮಟ್ಟದಲ್ಲಿಯೂ ಸಹ ಸಭೆಗಳನ್ನು ಜರುಗಿಸುವ ಮೂಲಕ ಜನಾಂಗದವರಿಗೆ ಮಾಹಿತಿ ದೊರೆಯುವಂತಾಗಬೇಕು.  ಡಾ. ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ವಿವಿಧ ಇಲಾಖೆಗಳಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಅಲೆಮಾರಿ ಜನಾಂಗದವರಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕು.  ಅಲೆಮಾರಿ ಜನಾಂಗದವರಿಗೆ ವಿವಿಧ ವಸತಿ ಶಾಲೆಗಳಲ್ಲಿ ಯಾವುದೇ ಪರೀಕ್ಷೆ ಇಲ್ಲದೆ, ನೇರವಾಗಿ ಪ್ರವೇಶ ಕಲ್ಪಿಸಲು ಅವಕಾಶವಿದ್ದು, ಅಂತಹ ಅರ್ಹ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಿಗೆ ಪ್ರವೇಶ ಒದಗಿಸಬೇಕು.  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ನೋಡಿಕೊಳ್ಳಬೇಕು.  ವಿವಿದೋದ್ದೇಶ ಸಹಕಾರ ಸಂಘಗಳನ್ನು ಪ್ರಾರಂಭಿಸಲು ಬಯಸುವ ಅಲೆಮಾರಿ ಜನಾಂಗದವರಿಗೆ, ಶೇರು ಧನ, ಬಡ್ಡಿರಹಿತ ಸಾಲ ಮುಂತಾದ ಸೌಲಭ್ಯ ಕಲ್ಪಿಸಲು ಅವಕಾಶವಿದ್ದು, ಸಮುದಾಯದವರು ಸಹಕಾರಿ ಸಂಘಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸಬಹುದಾಗಿದೆ.  ಅಲೆಮಾರಿ ಜನಾಂಗದವರು ಸರ್ಕಾರದ ಸೌಲಭ್ಯ ಪಡೆಯುವ ಮೂಲಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವಂತೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಲೆಮಾರಿ ಜನಾಂಗದವರಿಗೆ ಕರೆ ನೀಡಿದರು.
  ಸಭೆಯಲ್ಲಿ ಉಪಸ್ಥಿತರಿದ್ದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ಮಾತನಾಡಿ, ಅಲೆಮಾರಿ ಜನಾಂಗದವರು ಒಟ್ಟಾಗಿ ಅಲೆಮಾರಿ ಜನಾಂಗದ ಕಾಲೋನಿ ಅಂದರೆ ಗುಂಪು ಮನೆಗಳನ್ನು ನಿರ್ಮಿಸಲು ಮುಂದೆ ಬಂದಲ್ಲಿ, ಅಂತಹ ಕಾಲೋನಿ ನಿರ್ಮಾಣಕ್ಕೆ ಅಗತ್ಯ ಭೂಮಿ ಪಡೆಯಲು ಸರ್ಕಾರ ಅನುದಾನ ಒದಗಿಸಲು ಅವಕಾಶವಿದೆ.  ಈ ನಿಟ್ಟಿನಲ್ಲಿ ಜನಾಂಗದವರಿಗೆ ಪ್ರಸ್ತಾವನೆ ಬಂದಲ್ಲಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
  ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಹಿಂದುಳಿದ ಅಲೆಮಾರಿ ವಿಮುಕ್ತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶಿವಾನಂದ ಪಾಚಂಗಿ ಅವರು ಮಾತನಾಡಿ, ಅಲೆಮಾರಿ ಜನಾಂಗದವರು ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕಿದೆ.  ಜನಾಂಗಕ್ಕೆ ವಸತಿ ಸೌಲಭ್ಯದ ಕೊರತೆ ಹೆಚ್ಚಾಗಿ ಕಾಡುತ್ತಿದ್ದು, ಮನೆಗಳನ್ನು ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.  ಅಲೆಮಾರಿ ಜನಾಂಗದ ಅಭ್ಯರ್ಥಿಗಳು ಯಾವುದೇ ಯೋಜನೆಯ ಸೌಲಭ್ಯ ಪಡೆಯಲು ಆದಾಯ ಪ್ರಮಾಣಪತ್ರ ನೀಡುವ ಅಗತ್ಯ ಇಲ್ಲದೇ ಇದ್ದರೂ, ಶಾಲಾ ಕಾಲೇಜುಗಳೂ ಸೇರಿದಂತೆ, ವಿವಿಧ ಸೌಲಭ್ಯಗಳಿಗೆ ಆದಾಯ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ.  ಈ ಕುರಿತು ಇಲಾಖೆಗಳಿಗೆ ಸ್ಪಷ್ಟನೆಯನ್ನು ಜಿಲ್ಲಾಡಳಿತ ನೀಡಬೇಕು.  ಜನಾಂಗದವರ ಶೈಕ್ಷಣಿಕ ಮತ್ತು ಆರ್ಥಿಕ ಸುಧಾರಣೆಗೆ ಅವಕಾಶ ಒದಗಿಸಬೇಕು.  ಗೊಂದಳಿಗ ಸಮುದಾಯದ ಅನೇಕ ಕಲಾವಿದರು ಜಿಲ್ಲೆಯಲ್ಲಿದ್ದು, ಇವರ ಕಲೆಯ ಪ್ರದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು.  ಅಲ್ಲದೆ ಸಮಾಜದ ಕಲಾವಿದರಿಗೆ ಮಾಸಾಶನ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
  ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಮುನಿಯಪ್ಪ, ಡಾ. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಲ್ತಾನಪುರಿ, ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್, ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅಲೆಮಾರಿ ಜನಾಂಗದ ಅನೇಕ ಮುಖಂಡರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top