PLEASE LOGIN TO KANNADANET.COM FOR REGULAR NEWS-UPDATES

 




ಮೂರು ಹಂತಗಳ ಪಂಚಾಯತಿ ವ್ಯವಸ್ಥೆಯನ್ನು ಸಬಲೀಕರಣಗೊಳಿಸಲು, ಅಧ್ಯಕ್ಷರ ಅಧಿಕಾರದ ಅವಧಿಯನ್ನು ವಿಸ್ತರಿಸಬೇಕು.  ಅಲ್ಲದೆ ಪಂಚಾಯತಿ ವ್ಯವಸ್ಥೆಯ ಚುನಾಯಿತ ಪ್ರತಿನಿಧಿಗಳಾಗಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸುವ ಬಗ್ಗೆ ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ಕುರಿತು ಕೊಪ್ಪಳದಲ್ಲಿ ಬುಧವಾರ ಜರುಗಿದ ಕಾರ್ಯಾಗಾರದಲ್ಲಿ ಬಹುತೇಕರ ಒಲವು ವ್ಯಕ್ತವಾಯಿತು.
  ಕರ್ನಾಟಕ ಪಂಚಾಯತ್‍ರಾಜ್ ಅಧಿನಿಯಮ-1993 ತಿದ್ದುಪಡಿ ಕುರಿತು ಜಿಲ್ಲಾ ಪಂಚಾಯತಿ ಕೊಪ್ಪಳ ಹಾಗೂ ಪ್ರಜಾಯತ್ನ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ತಜ್ಞರ ಸಮಿತಿಗೆ ಶಿಫಾರಸ್ಸು ಮಾಡುವ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಿತು.
  ಕಾರ್ಯಾಗಾರದಲ್ಲಿ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಾರ್ವಜನಿಕರು, ಪ್ರಗತಿಪರ ಚಿಂತಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.  ಇದಕ್ಕೂ ಪೂರ್ವದಲ್ಲಿ ಮಾತನಾಡಿದ ರಾಜ್ಯ ಮಟ್ಟದ ತಿದ್ದುಪಡಿ ಸಮಿತಿಯ ಸದಸ್ಯರಾದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಮಾತನಾಡಿ,  ಪಂಚಾಯತಿ ರಾಜ್ ಅಧಿನಿಯಮ ಜಾರಿಗೊಂಡು ಸುಮಾರು 20 ವರ್ಷಗಳಾಗಿವೆ. ಜಿಲ್ಲಾ, ತಾಲೂಕು ಮತ್ತು ಗ್ರಾಮ ಹೀಗೆ ಮೂರು ಹಂತಗಳ ಪಂಚಾಯತಿ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು  20 ವರ್ಷಗಳ ಅವಧಿಯಲ್ಲಿ ಪಂಚಾಯತಿ ರಾಜ್ ಆಡಳಿತ ವ್ಯವಸ್ಥೆಯಲ್ಲಿನ ಅನುಭವಗಳ ಆಧಾರದ ಮೇಲೆ ತಿದ್ದುಪಡಿ ಮಾಡುವುದು ಅವಶ್ಯವಾಗಿದೆ.  ಅಭಿವೃದ್ಧಿಯ ಚಿಂತನೆಗಳಿಗೆ ಅನುಗುಣವಾಗಿ ಲೋಪ-ದೋಷಗಳನ್ನು ಸರಿಪಡಿಸಿ, ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಾಮಾನ್ಯ ಜನರಿಗೂ ಅಧಿಕಾರ ಹಾಗೂ ಸೌಲಭ್ಯ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಪುನರ್ ರಚನೆಯಾಗಬೇಕಿದೆ.  ಅಧಿನಿಯಮದ ತಿದ್ದುಪಡಿಗಾಗಿ ರಾಜ್ಯ ಮಟ್ಟದಲ್ಲಿ ರಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಸಮಿತಿಯು ರಾಜ್ಯಾದ್ಯಂತ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರವನ್ನು ಏರ್ಪಡಿಸುವ ಮೂಲಕ ತಜ್ಞರು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಕ್ರೋಢೀಕರಿಸಲು ಮುಂದಾಗಿದೆ.  ಎಲ್ಲರ ಅಭಿಪ್ರಾಯಗಳಿಗೆ ಸಮಿತಿ ಮನ್ನಣೆ ನೀಡುವ ಮೂಲಕ ಅಗತ್ಯಕ್ಕೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ತಿದ್ದುಪಡಿ ಮಾಡಬೇಕಿದೆ.  ಸದ್ಯ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರ ಅಧಿಕಾರಾವಧಿ 30 ತಿಂಗಳಿದ್ದರೆ, ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಅಧಿಕಾರಾವಧಿ ಕೇವಲ 20 ತಿಂಗಳುಗಳು ಮಾತ್ರ ಇವೆ.  ಈ ರೀತಿಯ ಕಡಿಮೆ ಅವಧಿಗೆ ಅಧಿಕಾರ ಹಂಚಿಕೆ ಅಭಿವೃದ್ಧಿಗೆ ಮಾರಕವಾಗಿದ್ದು, ಅಧಿಕಾರ ವಹಿಸಿಕೊಂಡವರು, ತಮ್ಮ ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸುವ ಮುನ್ನವೇ ಅಧಿಕಾರದಿಂದ ಕೆಳಗಿಳಿಯುವುದರಿಂದ, ಅಭಿವೃದ್ಧಿ ಕಷ್ಟಸಾಧ್ಯ.  ಇಂತಹ ವ್ಯವಸ್ಥೆ ಕೇವಲ ಮಾಜಿಗಳನ್ನು ತಯಾರಿಸುವುದಾಗಿದೆ.  ಮತದಾರರ ಮೂಲಕವೇ ನೇರವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕಾರ್ಯಸಾಧುವೇ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ಆಗಬೇಕಿದೆ.  ಅಧಿಕಾರ ದುರ್ಬಳಕೆ ಹಾಗೂ ಸರ್ವಾಧಿಕಾರ ಧೋರಣೆ ಅನುಸರಿಸುವವರನ್ನು ಅನರ್ಹಗೊಳಿಸುವ ಬಗ್ಗೆಯೂ ತಿದ್ದುಪಡಿಯಲ್ಲಿ ಚಿಂತನೆ ನಡೆಸಬೇಕಿದೆ ಎಂದು ಟಿ. ಜನಾರ್ಧನ ಹುಲಿಗಿ ಅಭಿಪ್ರಾಯಪಟ್ಟರು.
  ಕರ್ನಾಟಕ ಪಂಚಾಯತ್‍ರಾಜ್ ಅಧಿನಿಯಮ-1993 ತಿದ್ದುಪಡಿ ಕುರಿತು ಕಾರ್ಯಾಗಾರದಲ್ಲಿ ವ್ಯಕ್ತವಾದ ಕೆಲವು ಅಭಿಪ್ರಾಯಗಳು ಇಂತಿವೆ.
ಹೆಚ್.ಎಸ್. ಪಾಟೀಲ, ಭಾಗ್ಯನಗರ, ಕೊಪ್ಪಳ : ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನೇರವಾಗಿ ಮತದಾರರ ಮೂಲಕ ಆಗಬೇಕು.  ಸಾಧ್ಯವಾದಲ್ಲಿ ಸ್ಥಾಯಿ ಸಮಿತಿಗಳಿಗೂ ಇದೇ ಮಾದರಿ ಅನುಸರಿಸುವುದು ಸೂಕ್ತ.  ಪಂಚಾಯತಿಗಳಿಗೆ ಕೋಟಿಗಟ್ಟಲೆ ಅನುದಾನ ನೇರವಾಗಿ ಬಿಡುಗಡೆ ಆಗುತ್ತಿರುವುದರಿಂದ, ವಿವಿಧ ಕಾಮಗಾರಿ, ಯೋಜನೆಗಳ ಬಗ್ಗೆ ಅರಿತು, ಕಡತಗಳು ಹಾಗೂ ಚೆಕ್‍ಗಳಿಗೆ ಸಹಿ ಹಾಕಲು, ವಿವರವನ್ನು ಓದಿ, ಬರೆಯಬೇಕಾಗಿರುವುದರಿಂದ, ಸದಸ್ಯರುಗಳಾಗಲು ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸುವುದು ಸೂಕ್ತ.
ವೀರಭದ್ರಪ್ಪ ಗಂಜಿ, ಕಿನ್ನಾಳ : ಗ್ರಾಮ ಪಂಚಾಯತಿ ವ್ಯವಸ್ಥೆಯಲ್ಲಿ ಜಿ.ಪಂ. ಮತ್ತು ತಾ.ಪಂ. ನಲ್ಲಿದ್ದಂತೆ ನಿಯಮಿತವಾಗಿ ಪ್ರಗತಿ ಪರಿಶೀಲನಾ ಸಭೆಗಳು ಜರುಗಬೇಕು.  ಗ್ರಾ.ಪಂ. ವ್ಯಾಪ್ತಿಯ ಅನುದಾನ ಬಳಕೆ, ಕಾಮಗಾರಿಗಳನ್ನು ಆಯಾ ವ್ಯಾಪ್ತಿಯ ಗ್ರಾ.ಪಂ. ಸದಸ್ಯರುಗಳಾ ಮಾಡುವುದರಿಂದ, ಗುಣಮಟ್ಟದ ಪರಿಶೀಲನೆಗೆ ಪಿಡಿಓ ಸೇರಿದಂತೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಇವುಗಳನ್ನು ಕಡ್ಡಾಯವಾಗಿ ಟೆಂಡರ್ ಮೂಲಕವೇ ಆಗುವಂತೆ ನಿಯಮಗಳ ತಿದ್ದುಪಡಿಯಾಗಬೇಕು.
ದಾವಲಸಾಬ್ ಬಿಸರಳ್ಳಿ : ಸದ್ಯ ಗ್ರಾಮ ಪಂಚಾಯತಿ ಸದಸ್ಯರುಗಳ ಸಂಖ್ಯೆ ಹೆಚ್ಚಾಗಿದೆ.  ಇದರಿಂದ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದು, ಅಭಿವೃದ್ಧಿಗೆ ಮಾರಕವಾಗಿದೆ. ವಾರ್ಡ್ ವಾರು ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡಬೇಕು.  
ಅಲ್ಲಮಪ್ರಭು ಬೆಟ್ಟದೂರ, ಕೊಪ್ಪಳ : ಪಂಚಾಯತಿ ವ್ಯವಸ್ಥೆಯಲ್ಲಿ ಸದ್ಯ ಇರುವ ಅವಧಿವಾರು ಅಧಿಕಾರ ಹಂಚಿಕೆ ಸಂವಿಧಾನ ಬಾಹಿರವಾಗಿದ್ದರೂ, ಇದುವರೆಗೂ ನಡೆದುಕೊಂಡು ಬಂದಿದೆ.  ನೀರು ಮತ್ತು ನೈರ್ಮಲ್ಯಕ್ಕೆ ಗ್ರಾಮ ಪಂಚಾಯತಿಗಳು ಹೆಚ್ಚಿನ ಆದ್ಯತೆ ನೀಡುವುದರ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿಯಾಗಿ, ನಿರ್ಲಕ್ಷ್ಯ ತೋರುವ ಗ್ರಾ.ಪಂ. ಗಳ ವಿರುದ್ಧ ಕಠಿಣ ಕ್ರಮಕ್ಕೆ ನಿಯಮಗಳಲ್ಲಿ ಬದಲಾವಣೆ ಆಗಬೇಕು.
  ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಪ್ರಜಾಯತ್ನ ಸಂಸ್ಥೆ ಜಿಲ್ಲಾ ಸಂಯೋಜಕ ಸುಭಾಶ್ಚಂದ್ರ ಪಾಟೀಲ್, ಜಿ.ಪಂ. ಸದಸ್ಯರುಗಳಾದ ವನಿತಾ ಗಡಾದ್, ವಿಜಯಲಕ್ಷ್ಮಿ ರಾಮಕೃಷ್ಣ, ಗಂಗಣ್ಣ ಸಮಗಂಡಿ, ಕೊಪ್ಪಳದ ಬಸವರಾಜ ಶೀಲವಂತರ್, ಸೇರಿದಂತೆ ಗ್ರಾ.ಪಂ. ಅಧ್ಯಕ್ಷರುಗಳು, ಸದಸ್ಯರುಗಳು, ಸಾರ್ವಜನಿಕರು ಪಾಲ್ಗೊಂಡು, ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು.

Advertisement

0 comments:

Post a Comment

 
Top