PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಜೂ.೧೦(ಕರ್ನಾಟಕ ವಾರ್ತೆ): ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದಿಂದ ಜಿಲ್ಲೆಯ ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರ ರೈತರಿಗೆ ವಿವಿಧ ಸಲಹೆಗಳನ್ನು ನೀಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞರು ತಿಳಿಸಿದ್ದಾರೆ.
ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ಅಲ್ಲಲ್ಲಿ ಚದುರಿದಂತೆ ಮಳೆ ಆಗುತ್ತಿದೆ. ಈ ದಿನಗಳಲ್ಲಿ ಅಂಗಮಾರಿ ರೋಗದ ಲಕ್ಷಣಗಳು ತೀವ್ರವಾಗಿದ್ದು ಮಳೆ ಬಂದಾಗ ರೋಗ ಉಲ್ಬಣವಾಗುತ್ತದೆ. ಆದ್ದರಿಂದ ರೈತರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಲಹೆಗಳನ್ನು ನೀಡಲಾಗಿದೆ. 
ದಾಳಿಂಬೆ : ಗಿಡದ ಸುತ್ತಲೂ ಪಾತಿ ಮಾಡಿ ಉಂಗುರಾಕೃತಿಯಲ್ಲಿ ಗಿಡವೊಂದಕ್ಕೆ ೧೦೦ ಗ್ರಾಂ. ಬ್ಲೀಚಿಂಗ್ ಪುಡಿಯನ್ನು ನೀರಿನಲ್ಲಿ ಬೆರೆಸಿ ಡ್ರೆಂಚಿಂಗ್ ಮಾಡಬೇಕು. ಪ್ರತಿ ೩ ತಿಂಗಳಿಗೊಮ್ಮೆ ಈ ಕ್ರಮವನ್ನು ಮುಂದುವರಿಸಬಹುದಾಗಿದೆ. ಅಂಗಮಾರಿ ರೋಗ ನಿಯಂತ್ರಣಕ್ಕೆ ಗಿಡಗಳು ಬಲಿಷ್ಠ ಹಾಗೂ ಸದೃಢವಾಗಿರುವುದು ಅತೀ ಅವಶ್ಯಕ, ಇದಕ್ಕಾಗಿ ಕಡ್ಡಾಯವಾಗಿ ಗುಡ್ ಮ್ಯಾನೇಜ್‌ಮೆಂಟ್ ಪ್ರಾಕ್ಟಿಸ್ (ಜಿಎಂಪಿ) ಅಳವಡಿಸಿಕೊಂಡು ಬಿಪಿಎನ್ (ಬ್ಯಾಲೆನ್ಸ್‌ಡ್ ಪ್ಲಾಂಟ್ ನ್ಯೂಟ್ರಿಯಂಟ್) ತಂತ್ರಜ್ಞಾನದಲ್ಲಿ ಗಿಡಗಳಲ್ಲಿ ನಿರೋಧಕ ಶಕ್ತಿಯನ್ನು ಒದಗಿಸಬೇಕು.
ವರ್ಷಕ್ಕೆ ಒಂದೇ ಬೆಳೆ ಅದನ್ನೂ ತಡ ಹಸ್ತ ಬಹಾರದಲ್ಲಿ ತೆಗೆದುಕೊಳ್ಳಬೇಕು. ಗಿಡಕ್ಕೆ ಹೆಚ್ಚಿನ ಹೊರೆ ಆಗದಂತೆ ಹೆಕ್ಟರ್‌ಗೆ ೮-೧೦ ಅಥವಾ ೧೨ ಟನ್ ಇಳುವರಿ ಬರುವಂತೆ ಮಾಡಿದಲ್ಲಿ ಗುಣಮಟ್ಟದ ಉತ್ಪನ್ನವನ್ನು ಪಡೆಯಲು ಮತ್ತು ರಫ್ತು ಮಾಡುವ ಗುಣಮಟ್ಟ ಪಡೆಯಲು ಸಾಧ್ಯ.
ಚಾಟ್ನಿ ಮಾಡುವ ಕತ್ತರಿಯನ್ನು ಶೇ.೨೨% ರ ಸೋಡಿಯಂ ಹೈಪೋಕ್ಲೋರೈಡ್‌ನಲ್ಲಿ ಅದ್ದಿ ಉಪಯೋಗಿಸಬೇಕು. ಚಾಟ್ನಿ ಮಾಡಿದ ನಂತರ ಶೇ.೧% ರ ಬೋರ್ಡೋ ದ್ರಾವಣ ಸಿಂಪರಿಸಬೇಕು. ಸುಣ್ಣ, ಸುರಮಾ ಹಾಗೂ ಸಿ.ಓ.ಸಿ. ಯಿಂದ ಗಿಡಗಳ ಲೇಪನ ಮಾಡಬೇಕು. ರೋಗದ ಲಕ್ಷಣಗಳು ಕಂಡು ಬಂದಾಗ ಸಿ.ಓ.ಸಿ. ೩ ಗ್ರಾಂ ಜೊತೆ ೦.೫೦ ಗ್ರಾಂ ಸ್ಟ್ರೆಪ್ಟೊ ಸೈಕ್ಲಿನ್ ಮಿಶ್ರ ಮಾಡಿ ಸಿಂಪರಿಸಬೇಕು. ಮಳೆ ಇದ್ದಾಗ ಮಾರನೇ ದಿನಕ್ಕೆ ಕಡ್ಡಾಯವಾಗಿ ಸುಣ್ಣ+ಬೋರಾನ್+ಜಿಂಕ್+ಮ್ಯಾಗ್ನೇಶಿಯಂ ರಾಸಾಯನಿಕಗಳನ್ನು ಶೇ.೧% ರ ಅನುಪಾತದಲ್ಲಿ ಸಿಂಪರಿಸಬೇಕು. ಪರ್ಯಾಯವಾಗಿ ಕ್ಯಾಪ್ಟನ್ ೨ ಗ್ರಾಂ +೦.೫ ಗ್ರಾಂ ಬ್ರೋವೊಪಾಲ ಬಳಸಬೇಕು.
ಆಫ್ರೀಕನ್ ಚೆಂಡು ಹೂ ಗಿಡದ ಸುತ್ತಲೂ ಬೆಳೆಸುವುದರಿಂದ ಜಂತುಹುಳದ ಬಾಧೆ ತಡೆಗಟ್ಟಿ ಸೊರಗು ರೋಗ ನಿಯಂತ್ರಿಸಲು ಸಹಕಾರಿ ಅಲ್ಲದೇ ಸೆಪ್ಟಂಬರ್, ಅಕ್ಟೋಬರ್‌ನಲ್ಲಿ ಸಾಲು-ಸಾಲು ಹಬ್ಬಗಳಿರುವುದರಿಂದ ಹೆಚ್ಚಿನ ಆದಾಯ ಪಡೆಯುವುದು ಸಾಧ್ಯ. ನೀರು ದಂಬು (ವಾಟರ್ ಶೂಟ್) ಗಳನ್ನು ನಿಯಮಿತವಾಗಿ ತೆಗೆಯುತ್ತಿರಬೇಕು. ಹೆಬ್ಬೇವು ಮಿಶ್ರ ಬೆಳೆಯಿಂದಾಗಿ ಮತ್ತು ಬದುವಿನ ಮೇಲೆ ಗಿಡಗಳನ್ನು ನೆಡುವುದರಿಂದ ಅಂಗಮಾರಿ ರೋಗ ಹತೋಟಿಯಲ್ಲಿಡಬೇಕು. 
ದ್ರಾಕ್ಷಿ : ದ್ರಾಕ್ಷಿ ಬೆಳೆಗೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಸಿಂಪರಣೆ ವಿವರ ಇಂತಿದೆ : ಚಾಟ್ನಿ ಮಾಡುವ ಸಮಯದಲ್ಲಿ ದಾಳಿಂಬೆ ಬೆಳೆಗೆ ತಿಳಿಸಿದಂತೆ ಎಲ್ಲ ಕ್ರಮಗಳನ್ನು ಅನುಸರಿಬೇಕು. ಶೇ.೧ ರ ಬೋರ್ಡೊ ದ್ರಾವಣ ಸಿಂಪರಿಸಬೇಕು, ಚಿಕ್ಕಟದುಂಬಿ ಹತೋಟಿಗಾಗಿ ಸೇವಿನ್ ೪ ಗ್ರಾಂ ಸಿಂಪರಿಸಿರಿ, ೪-೫ ಎಲೆಗಳು ಹಂತದಲ್ಲಿ ೩ ಗ್ರಾಂ ಸಿಓಸಿ+೧ ಗ್ರಾಂ ಅಲ್ಯೂಮೀನಿಯಂ ಪೋಸಟೀಲ್ ಸಿಂಪರಿಸಿರಿ, ಈಗ ಚಾಟ್ನಿ ಮಾಡಿ ೩೦-೪೫ ದಿನಗಳಾಗಿರುವುದರಿಂದ ಈ ಸಮಯದಲ್ಲಿ ದ್ರಾಕ್ಷಿಯಲ್ಲಿ ಮುಖ್ಯವಾಗಿ ವಿವಿಧ ರೋಗಗಳು ಕಂಡು ಬರುತ್ತವೆ. 
ಚಿಬ್ಬು ರೋಗ : ಕಂದು ಬಣ್ಣದ ಮಚ್ಚೆಗಳು ಎಲೆ ಹಾಗೂ ಕಾಂಡಗಳ ಮೇಲೆ ಕಂಡು ಬರುತ್ತವೆ. ಮುಂಜಾಗ್ರತಾ ಕ್ರಮವಾಗಿ ಬಾವಿಸ್ಟಿನ್ ೨ ಗ್ರಾಂ ಅಥವಾ ರೋಕೊ ೧ ಗ್ರಾಂ ಸಿಂಪರಿಸಬೇಕು.
ಎಲೆಚುಕ್ಕೆ ರೋಗ : ದುಂಡಾಕೃತಿಯ ಚುಕ್ಕೆಗಳು ಕಂದು ಬಣ್ಣದ್ದಾಗಿ ಇರುತ್ತವೆ. ಕೆಲವೊಮ್ಮೆ ಕೋಳಿಯ ಕಣ್ಣಿನಂತೆ ಕಾಣುತ್ತವೆ. ಹತೋಟಿಗಾಗಿ ಬಾವಿಸ್ಟಿನ್ ೨ ಗ್ರಾಂ ಅಥವಾ ರೋಕೊ ೧ ಗ್ರಾಂ ಅಥವಾ ಅವತಾರ ೨.೫೦ ಗ್ರಾಂ ಸಿಂಪರಿಸಬಹುದಾಗಿದೆ. ಇತರೆ ರೋಗಗಳು ಕಂಡುಬಂದಲ್ಲಿ, ತಜ್ಞರನ್ನು ಕಂಡು ಸಿಂಪರಣೆ ಕೈಗೊಳ್ಳಬೇಕು. ರಸ ಹೀರುವ ಕೀಟಗಳ ಹಾವಳಿ ಇದ್ದಲ್ಲಿ, ೧ ಗ್ರಾಂ. ಅಸಿಟಾಮಿಪ್ರೈಡ್ ಪುಡಿ ಅಥವಾ ಇಮಿಡಾ ಕ್ಲೋಪ್ರಿಡ್ ೦.೩೦ ಮಿಲಿ ಸಿಂಪರಿಸಬೇಕು. ಕೀಟನಾಶಕಗಳನ್ನು ಬದಲಿಸಿ ಸಿಂಪರಣೆ ಕೈಗೊಳ್ಳುವುದರಿಂದ ಕೀಟಗಳು ನಿರೋಧಕ ಶಕ್ತಿಯನ್ನು ಮುರಿಯಲು ಸಾಧ್ಯ. ತೋಟದ ಸುತ್ತಲಿರುವ ಔಡಲ ಮರಗಳನ್ನು ಕಿತ್ತು ನಾಶಪಡಿಸಿ ತೋಟವನ್ನು ಸದಾ ಸ್ವಚ್ಛವಾಗಿಡಬೇಕು. 
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕಛೇರಿಗಳನ್ನು ಮತ್ತು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳವನ್ನು ಸಂಪರ್ಕಿಸಬಹುದಾಗಿದೆ .

Advertisement

0 comments:

Post a Comment

 
Top