PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಜೂ. 11 (ಕ.ವಾ) : ಕೊಪ್ಪಳ ಜಿಲ್ಲೆಯಲ್ಲಿ ಬಹಳಷ್ಟು ಗ್ರಾಮಗಳು ಫ್ಲೋರೈಡ್ ನೀರಿನ ತೊಂದರೆಯಿಂದ ಬಳಲುತ್ತಿದ್ದು, ಇಂತಹ ಗ್ರಾಮಗಳಲ್ಲಿ ಮಳೆನೀರು ಕೊಯ್ಲು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ, ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದಲು ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮುಖ್ಯ ಸಂಶೋಧಕ ಎ.ಆರ್. ಶಿವಕುಮಾರ್ ಅವರು ಹೇಳಿದರು.
  ಮಳೆ ನೀರು ಕೊಯ್ಲು ಹಾಗೂ ನೀರಿನ ಸಂಗ್ರಹಣೆ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಪದೇ ಪದೇ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳ ಪೈಕಿ ಕೊಪ್ಪಳ ಜಿಲ್ಲೆಯೂ ಒಂದಾಗಿದೆ.  ಜಿಲ್ಲೆಯ ಬಹಳಷ್ಟು ಗ್ರಾಮಗಳು ಫ್ಲೋರೈಡ್ ನೀರಿನ ತೊಂದರೆ ಅನುಭವಿಸುತ್ತಿವೆ.  ಫ್ಲೋರೈಡ್ ಅಂಶದ ಕಾರಣದಿಂದ ಮಕ್ಕಳಿಂದ ಮೊದಲುಗೊಂಡು ವಯೋವೃದ್ಧರೂ ಆರೋಗ್ಯದ ದುಷ್ಪರಿಣಾಮ ಎದುರಿಸುತ್ತಿದ್ದಾರೆ.  ನೀರು ನೈಸರ್ಗಿಕ ಸಂಪತ್ತಾಗಿದ್ದು, ಅದರ ಮೇಲೆ ವಯಕ್ತಿಕ ಹಕ್ಕು ಸ್ಥಾಪಿಸಲು ಮುಂದಾಗುವುದು ಸಮಂಜಸವಲ್ಲ.  ಜಿಲ್ಲೆಯಲ್ಲಿ ಲಕ್ಷಾಂತರ ಕೊಳವೆಬಾವಿಗಳನ್ನು ಕೊರೆಯಿಸಿದ್ದು, ಅಂತರ್ಜಲವನ್ನು ಅನಿಯಮಿತವಾಗಿ ಬಳಸಲಾಗುತ್ತಿದೆಯೇ ಹೊರತು, ನೀರಿನ ಮರುಪೂರಣ ಕಾರ್ಯ ಆಗುತ್ತಿಲ್ಲ.  ಮಳೆಯ ನೀರು ಅತ್ಯಂತ ಶುದ್ಧವಾದ ನೀರಾಗಿದ್ದು, ಈ ಪ್ರದೇಶದಲ್ಲಿ ಬೀಳುವ ಮಳೆಯ ನೀರು ವ್ಯರ್ಥವಾಗಿ ಹೋಗುತ್ತಿದೆ.  ಪ್ರತಿಯೊಂದು ಸರ್ಕಾರಿ ಕಟ್ಟಡಗಳು, ಮನೆಗಳು, ಶಾಲೆಗಳ ಮೇಲೆ ಬಿದ್ದ ಮಳೆಯನ್ನು ಶುದ್ಧೀಕರಿಸಿ ಸಂಗ್ರಹಿಸಿದಲ್ಲಿ, ಅಂತಹ ನೀರನ್ನು ವರ್ಷಾನುಗಟ್ಟಲೆ ಬಳಸಲು ಸಾಧ್ಯವಾಗಲಿದೆ.  ಮನೆಯ ಮೇಲೆ ಬಿದ್ದ ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೆ, ನೆಲ ಮಟ್ಟದ ನೀರಿನ ಸಂಗ್ರಹಾಗಾರದಲ್ಲಿ ತುಂಬಿಟ್ಟುಕೊಂಡು, ಅದನ್ನು ಕುಡಿಯಲು ಬಳಸಬಹುದು.  ಅಲ್ಲದೆ ಇಂಗುಗುಂಡಿಗಳನ್ನು ಸಹ ಮಾಡಿಕೊಂಡಲ್ಲಿ, ಕೊಳವೆಬಾವಿಗಳು ನೀರಿನ ಕೊರತೆಯನ್ನು ಎದುರಿಸುವುದಿಲ್ಲ.  ಕಳೆದ ಐದಾರು ವರ್ಷಗಳ ಹಿಂದೆಯೇ ಇಂತಹ ಯೋಜನೆಗೆ ಚಾಲನೆ ದೊರೆತಿದ್ದರೂ, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.  ಇನ್ನಾದರೂ ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಮಳೆನೀರು ಕೊಯ್ಲು ಕಾರ್ಯಕ್ರಮ ಅನುಷ್ಠಾನಗೊಂಡಲ್ಲಿ, ಎಲ್ಲಾ ಗ್ರಾಮಗಳು ಫ್ಲೋರೈಡ್ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗಲಿದೆ ಎಂದು ಎ.ಆರ್. ಶಿವಕುಮಾರ್ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕೊಪ್ಪಳದಂತಹ ಬರಪೀಡಿತ ಜಿಲ್ಲೆಗೆ ಮಳೆನೀರು ಕೊಯ್ಲು ಅತ್ಯಂತ ಅಗತ್ಯವಾಗಿದ್ದು, ಇದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ, ಪ್ರತಿಯೊಂದು ಹನಿ ನೀರಿನ ಮಹತ್ವ ಏನು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮನದಟ್ಟಾಗಲಿದೆ.  ಕುಡಿಯುವ ನೀರಿನ ಯೋಜನೆಗಳಿಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದರೂ ಸಮಸ್ಯೆಯ ಪೂರ್ಣ ಪರಿಹಾರ ಸಾಧ್ಯವಾಗಿಲ್ಲ.  ಮಳೆ ನೀರು ಕೊಯ್ಲಿನಂತಹ ಕಾರ್ಯಕ್ರಮಗಳಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಗೆ ಶಾಶ್ವತ ಪರಿಹಾರ ದೊರೆಯಲು ಸಾಧ್ಯ.  ಗ್ರಾಮೀಣ ಪ್ರದೇಶಗಳ ಎಲ್ಲ ಮನೆಗಳು, ಸರ್ಕಾರಿ ಕಟ್ಟಡಗಳು, ಶಾಲೆಗಳಲ್ಲಿ ಮಳೆನೀರು ಕೊಯ್ಲು ಯೋಜನೆಯನ್ನು ಎರಡು ವರ್ಷದೊಳಗೆ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು. 
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್ ಸೇರಿದಂತೆ ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top