PLEASE LOGIN TO KANNADANET.COM FOR REGULAR NEWS-UPDATES

ಕರ್ನಾಟಕ ಎಸ್ಸಿ/ ಎಸ್ಟಿ ಪದವೀಧರರ ಒಕ್ಕೂಟದಿಂದ

ಬಳ್ಳಾರಿ, ಜೂ. ೧೧: ಕರ್ನಾಟಕ ಎಸ್ಸಿ/ಎಸ್ಟಿ ಪದವೀಧರರ ಒಕ್ಕೂಟ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ೧೨೩ ನೇ ಜಯಂತಿ ಅಂಗವಾಗಿ ಬೆಂಗಳೂರಿನಲ್ಲಿ ಜೂ. ೧೪ ರಂದು  ರಾಜ್ಯ ಮಟ್ಟದ  ಯುವ ದಲಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ ಎಂದು ಒಕ್ಕೂಟದ ಬಳ್ಳಾರಿ ಜಿಲ್ಲಾ ಘಟಕದ ಗೌರವ ಅಧ್ಯಕ್ಷ, ಪತ್ರಕರ್ತ ಸಿ ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ ಪ್ಯಾರಡೈಸ್ ನಲ್ಲಿ ಆಯೋಜಿಸಿರುವ ಉತ್ಸವಕ್ಕೆ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಕೇಂದ್ರದ ನಿಕಟಪೂರ್ವ ರೈಲ್ವೇ ಸಚಿವ ಡಾ. ಎಂ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಲಿದ್ದಾರೆ.
ಉತ್ಸವದ ಸ್ಮರಣ ಸಂಚಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವೆ ಡಾ. ಮೋಟಮ್ಮ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ   ವಿ. ಶ್ರೀನಿವಾಸ ಪ್ರಸಾದ್, ಡಾ. ಹೆಚ್ ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಹೆಚ್. ಆಂಜನೇಯ, ದಿನೇಶ್ ಗುಂಡೂರಾವ್, ಶ್ರೀಮತಿ ಉಮಾಶ್ರೀ, ಶಾಸಕರಾದ ಎಂ. ಕೃಷ್ಣಪ್ಪ, ಪ್ರಿಯಾಂಕ್ ಎಂ ಖರ್ಗೆ, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು,  ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಾಹಿತ್ಯ ಗೋಷ್ಠಿ: ಮಧ್ಯಾಹ್ನ  ೧ ಗಂಟೆಗೆ ಸಾಹಿತ್ಯ  ಗೋಷ್ಠಿಯನ್ನು ಪ್ರಸಿದ್ಧ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಡಾ. ಎಲ್ ಹನುಮಂತಯ್ಯ, ಡಾ. ಅರವಿಂದ ಮಾಲಗತ್ತಿ, ಸುಬ್ಬು ಹೊಲೆಯಾರ್ ಮತ್ತು  ಹನಸೋಗೆ ಸೋಮಶೇಖರ್ ಅವರು ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮ: ೩ ಗಂಟೆಗೆ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಸಿದ್ಧ ಚಲನ ಚಿತ್ರ ನಿರ್ದೇಶಕ ಎಸ್ ಮಹೇಂದರ್, ಜಾನಪದ ಗಾಯಕರಾದ  ಡಾ. ಬಾನಂದೂರು ಕೆಂಪಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ಜನಾರ್ಧನ (ಜನ್ನಿ), ಚಿತ್ರನಟರಾದ ಶಶಿಕುಮಾರ್, ಟೆನ್ನೀಸ್ ಕೃಷ್ಣ, ಮದನ್ ಪಟೇಲ್, ನಾಗಶೇಖರ್, ಮಯೂರ್ ಪಟೇಲ್, ಫಲ್ಗುಣ ಮತ್ತಿತರರು ಭಾಗವಹಿಸಲಿದ್ದಾರೆ.
ಅಭಿನಂದನೆ: ಇದೇ ಸಂದರ್ಭದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ಹಾಗೂ ದಲಿತ ಹಿರಿಯ ಹೋರಾಟಗಾರರು, ಕನ್ನಡ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ಸಾಧಕರನ್ನು ಸತ್ಕರಿಸಲಾಗುವುದು. 
ಬಳ್ಳಾರಿ ಜಿಲ್ಲೆಯಿಂದ ಒಕ್ಕೂಟದ ನೂರಕ್ಕೂ ಹೆಚ್ಚು ಸದಸ್ಯರು, ಪದಾಧಿಕಾರಿಗಳು ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಜಿಲ್ಲಾ ಮುಖಂಡರುಗಳಾದ ಡಾ. ಲಕ್ಕಿ ಫೃಥ್ವಿರಾಜ್, ಎಸ್ ಎಂ ಹುಲುಗಪ್ಪ, ದರೋಜಿ ಅಶ್ವ ರಾಮು, ಮಲ್ಲಯ್ಯ  ತಿಳಿಸಿದ್ದಾರೆ.

Advertisement

0 comments:

Post a Comment

 
Top