PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ದಿ ಸಂಘ ಅರಳಹಳ್ಳಿ ಇವರಿಂದ ಜೂ.೦೫ ಮತ್ತು ೦೬ ರಂದು ಜಿಲ್ಲಾ ಮಟ್ಟದ ಜಾನಪದ ಕಲಾಮೇಳ, ಜಾನಪದ ವಿಚಾರಗೋಷ್ಠಿ ಹಾಗೂ ಜಾನಪದ ಹಾಡುಗಳ ಸಂಭ್ರಮವನ್ನು ಗಂಗಾವತಿ ನಗರದ ಶ್ರೀ ಚನ್ನಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಜೂ.೫ ರ ಬೆಳಿಗ್ಗೆ ಗಂಗಾವತಿಯ ಪಂಪಾನಗರದ ಶ್ರೀ ಕೊಟ್ಟುರೇಶ್ವರ ಕಾಲೇಜು ಮೈದಾನದಿಂದ ಶ್ರೀ ಮಲ್ಲಿಕಾರ್ಜುನ ಮಠದವರೆಗೆ ಮೆರವಣಿಗೆ ಜರುಗಲಿದ್ದು, ಈ ಮೆರವಣಿಗೆಯ ದಿವ್ಯ ಸಾನಿಧ್ಯವನ್ನು  ಕಲ್ಮಠದ ಡಾ|| ಕೊಟ್ಟೂರೇಶ್ವರ ಸ್ವಾಮಿಗಳು ವಹಿಸಲಿದ್ದಾರೆ. ಜಾನಪದ ಅಕಾಡೆಮಿ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಡೊಳ್ಳುವಾದನ, ಕರಡಿ ಮಜಲು, ವೀರಗಾಸೆ, ನಂದಿಕೋಲು, ಹಗಲುವೇಷ, ಕೋಲಾಟ, ಜೋಗತಿ ಕುಣಿತ ಮುಂತಾದ ತಂಡಗಳು ಭಾಗವಹಿಸಲಿವೆ. 
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಕುಂಬಿಯ ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಬೃಹನ್ಮಠ ಸುಳೇಕಲ್‌ನ ಶ್ರೀ ಭುವನೇಶ್ವರಯ್ಯ ತಾತನವರು ನೆರವೇರಿಸಲಿದ್ದಾರೆ. ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಅಧ್ಯಕ್ಷತೆ ವಹಿಸುವರು. ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್.ಪರಡ್ಡಿ ಅವರು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಗಂಗಾವತಿ ತಾಲೂಕಿನ ಗಣ್ಯಮಹನೀಯರು ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ ೩.೦೦ ಗಂಟೆಯಿಂದ ಜಾನಪದ ಗಾಯನ, ತತ್ವಪದ, ಗೀಗೀಪದ, ಲಾವಣಿ ಹಾಡುಗಳು, ದಪ್ಪಿನ ಹಾಡು, ಸವಾಲಿನ ಹಾಡು, ಜೋಗುಳಪದ, ಕೋಲಾಟಪದ, ಮಳೆರಾಯನ ಪದ, ಹೂಮುಡಿಸುವ ಪದ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜೂ.೦೬ ರಂದು ಸಂಜೆ ೫.೦೦ ರಿಂದ ಜಾನಪದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ದಿವ್ಯಸಾನಿಧ್ಯವನ್ನು ಬೃಹನ್ಮಠ ಹೆಬ್ಬಾಳದ ಶ್ರೀ ನಾಗಭೂಷಣ ಸ್ವಾಮಿಗಳು ವಹಿಸಲಿದ್ದಾರೆ. ಗೋಷ್ಠಿಯ ಉದ್ಘಾಟನೆಯನ್ನು ಗಂಗಾವತಿಯ ಕೆಎಸ್‌ಸಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಶರಣಬಸವ ಕೋಲ್ಕಾರ್ ಅವರು ನೆರವೇರಿಸುವರು. ರೇವಣ ಸಿದ್ದಯ್ಯ ತಾತನವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ವಾಂಸರುಗಳು ಕೊಪ್ಪಳ ಜಿಲ್ಲಾ ಜಾನಪದ ಕಲೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ ಗಣ್ಯಮಹನೀಯರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಂಜೆ ೬.೩೦ ಕ್ಕೆ ನಡೆಯುವ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಭುವನೇಶ್ವರಯ್ಯ ತಾತನವರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗವಿಸಿದ್ದಯ್ಯ ತಾತನವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಂಗಾವತಿ ತಾಲೂಕಿನ ಗಣ್ಯಮಹನೀಯರು ಭಾಗವಹಿಸಲಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಮೂಲ ಜಾನಪದ ಕಲಾವಿದರಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್. ಪರೆಡ್ಡಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top