ಜಿಲ್ಲೆಯಲ್ಲಿರುವ ಹೆಚ್‌ಐವಿ/ಏಡ್ಸ್ ಪೀಡಿತರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಕಲ್ಪಿಸಬೇಕಿರುವ ಸೌಲಭ್ಯವನ್ನು ದೊರಕಿಸಲು ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಏಡ್ಸ್ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸದ್ಯ ೧೦೩೦೦ ಹೆಚ್‌ಐವಿ/ ಏಡ್ಸ್ ಪೀಡಿತ ರೋಗಿಗಳು ನೋಂದಣಿ ಆಗಿರುವ ಬಗ್ಗೆ ವರದಿ ಇದ್ದು, ೭೪೨೪ ಹೆಚ್ಚು ಜನ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್‌ಐವಿ/ ಏಡ್ಸ್ ಪೀಡಿತರು ಸಮಾಜದಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳಿಂದಾಗಿ, ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ ವರದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಇದರಿಂದಾಗಿ ಹೆಚ್‌ಐವಿ/ ಏಡ್ಸ್ ಪೀಡಿತರು ಆರೋಗ್ಯ ಹಾಗೂ ಸಾಮಾಜಿಕ ದೃಷ್ಟಿಯಿಂದ ಆಂತರಿಕವಾಗಿಯೇ ಶೋಷಣೆಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಶೋಷಿತರಿಗೆ ಸ್ವಯಂ ಸೇವಾ ಸಂಸ್ಥೆಗಳು ಬೆಂಬಲವಾಗಿ ನಿಂತು, ಅವರಿಗೆ ನೆರವಿನ ಹಸ್ತ ಚಾಚಬೇಕಿದೆ. ಹೆಚ್‌ಐವಿ/ ಏಡ್ಸ್ ಪೀಡಿತರಿಗಾಗಿಯೇ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಅಂತ್ಯೋದಯ ಅನ್ನ ಪಡಿತರ ಚೀಟಿ, ಮಾಸಾಶನ, ವಸತಿ ಕಲ್ಪಿಸುವುದು, ಉಚಿತ ಚಿಕಿತ್ಸೆ ಹೀಗೆ ವಿವಿಧ ಕಾರ್ಯಕ್ರಮಗಳಿವೆ. ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ, ಸಾಮಾಜಿಕ ಹಿತದೃಷ್ಟಿಯಿಂದ ಹೆಚ್‌ಐವಿ/ ಏಡ್ಸ್ ಪೀಡಿತರ ವಿವರಗಳ ಗೌಪ್ಯತೆ ಕಾಪಾಡುವುದರ ಬಗ್ಗೆಯೂ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿ ಈಗಾಗಲೆ ಹೆಚ್‌ಐವಿ/ ಏಡ್ಸ್ ಪೀಡಿತರಿಗೆ ಇಂತಹ ಯೋಜನೆಗಳ ಸೌಲಭ್ಯ ಒದಗಿಸಲಾಗಿದ್ದು, ಇನ್ನೂ ೧೧೫೫ ಜನರಿಗೆ ಅಂತ್ಯೋದಯ ಅನ್ನ ಪಡಿತರ ಚೀಟಿ, ೩೩೧ ಜನರಿಗೆ ವಸತಿ ಯೋಜನೆ, ೪೮೨ ಜನರಿಗೆ ವಿಶೇಷ ಪಾಲನಾ ಯೋಜನೆಯ ಸೌಲಭ್ಯ ದೊರಕಿಸುವ ಬಗ್ಗೆ ಅರ್ಜಿ ಸ್ವೀಕೃತಗೊಂಡಿದ್ದು, ಆದ್ಯತೆ ಮೇರೆಗೆ ಇವರಿಗೆ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕು. ಏಡ್ಸ್ ತಡೆಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲದೇ ಇರುವುದರಿಂದ, ಮುಂಜಾಗ್ರತಾ ಕ್ರಮವೊಂದೇ ಇದಕ್ಕೆ ಸೂಕ್ತ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಏಡ್ಸ್ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು. ರೋಗ ಹರಡುವಿಕೆಯ ಬಗ್ಗೆ ಈಗಾಗಲೆ ಆರೋಗ್ಯ ಇಲಾಖೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಇಂತಹ ಕಡೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಇಂತಹ ಗ್ರಾಮಗಳಲ್ಲಿ ಸುಲಭವಾಗಿ ಕಾಂಡೋಮ್‌ಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಹೆಚ್‌ಐವಿ/ ಏಡ್ಸ್ ಪೀಡಿತರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯ ಲಭ್ಯವಾಗುವಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಸೂಚನೆ ನೀಡಿದರು.
ಜೂ. ೧೪ ರಂದು ವಿಶ್ವ ರಕ್ತದಾನಿಗಳ ದಿನಾಚರಣೆ : ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೂ. ೧೪ ರಂದು ಕೊಪ್ಪಳದ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪ್ರತಿ ತಾಲೂಕಿನಲ್ಲಿಯೂ ನಿಯಮಿತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಏಡ್ಸ್ ನಿಯಂತ್ರಣಾಧಿಕಾರಿ ಡಾ. ದಾನರೆಡ್ಡಿ ಅವರು ಮಾತನಾಡಿ, ಹೆಚ್‌ಐವಿ/ ಏಡ್ಸ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಸದ್ಯ ೧೫ ಕಡೆ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ೦೧ ಸಂಚಾರಿ ಕೇಂದ್ರ ಹಾಗೂ ೪೨ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಹ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಸಂರಕ್ಷ ಸಂಸ್ಥೆ, ಆರ್.ಡಿ.ಎಸ್. ಸಂಸ್ಥೆ, ಹೊಂಗಿರಣ, ಉಜ್ವಲ, ಚೈತನ್ಯ ಮುಂತಾದ ಸ್ವಯಂ ಸೇವಾ ಸಂಸ್ಥೆಗಳು ಏಡ್ಸ್ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಕಳೆದ ೨೦೧೩-೧೪ ನೇ ಸಾಲಿನಲ್ಲಿ ೩೪೩೧೪ ರಕ್ತ ತಪಾಸಣೆ ನಡೆಸಿದ್ದು, ಅದರಲ್ಲಿ ೯೩೪ ಹೆಚ್‌ಐವಿ ಪಾಸಿಟೀವ್ ಇರುವುದು ಕಂಡುಬಂದಿದೆ. ಅಲ್ಲದೆ ೩೬೫೧೭ ಗರ್ಭಿಣಿಯರ ಪರೀಕ್ಷೆಯಲ್ಲಿ ೫೮ ಪಾಸಿಟೀವ್ ಪ್ರಕರಣ ವರದಿಯಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ : ರಮೇಶ್ ಮೂಲಿಮನಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಕೆ. ದೇಸಾಯಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಜಯಪ್ಪ, ಡಿಡಿಪಿಐ ಜಿ.ಹೆಚ್. ವೀರಣ್ಣ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಹಲವು ಇಲಾಖೆ ಅಧಿಕಾರಿಗಳು ಉಪಸ್ಥಿ
ತರಿದ್ದರು.
0 comments:
Post a Comment