ಕೊಪ್ಪಳ ತಾಲೂಕಿನ ಸುಮಾರು 30 ಗ್ರಾಮಗಳ 41000 ಎಕರೆ ಜಮೀನಿಗೆ ನೀರಾವರಿ ಒದಗಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು 2015 ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಬಳಿ ಸೋಮವಾರ, ಸಿಂಗಟಾಲೂರು ಏತ ನೀರಾವರಿ ಯೋಜನೆ ಎಡದಂಡೆ ಕಾಲುವೆ ಕಾಮಗಾರಿಯ ಪರಿಶೀಲನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
.JPG)
ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಮಗಾರಿಯ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳೊಂದಿಗೆ ಖುದ್ದಾಗಿ ಮುಂಡರಗಿ ತಾಲೂಕು ಹಮ್ಮಿಗೆ ಗ್ರಾಮದ ಬಳಿಯ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಲಾಗಿದೆ. ಕೊಪ್ಪಳ ತಾಲೂಕಿನತ್ತ ಬರುವ ಎಡದಂಡೆ ಕಾಲುವೆಯ ಕಾಮಗಾರಿ ಇದೀಗ ವೇಗವನ್ನು ಪಡೆದುಕೊಂಡಿದ್ದು, ಭರದಿಂದ ಸಾಗುತ್ತಿದೆ. ಅಣೆಕಟ್ಟಿನಿಂದ 33 ಕಿ.ಮೀ. ಕಾಲುವೆ ವರೆಗಿನ 64 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೆ 277 ಎಕರೆ ಭೂ-ಸ್ವಾಧೀನ ಪೂರ್ಣಗೊಂಡಿದ್ದು, ಇದೇ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. 33 ರಿಂದ 42 ಕಿ.ಮೀ. ವರೆಗಿನ ಕಾಮಗಾರಿಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಾರಂಭಗೊಂಡಿದೆ. ಅದೇ ರೀತಿ 42 ರಿಂದ 50 ಕಿ.ಮೀ. ವರೆಗಿನ 14. 97 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆಗಿದೆ. 50 ರಿಂದ 51 ಕಿ.ಮೀ. ವರೆಗಿನ 5. 65 ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ 52 ರಿಂದ 72 ಕಿ.ಮೀ. ವರೆಗಿನ 39 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇದೇ ಜೂ. 18 ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು ಇರುವ ಎಲ್ಲ ಅಡ್ಡಿ-ಆತಂಕಗಳನ್ನು ನಿವಾರಿಸಲಾಗಿದ್ದು, ಅನುದಾನಕ್ಕೂ ಸಹ ಯಾವುದೇ ಕೊರತೆ ಬಾರದಂತೆ ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆ 2015 ರ ಮಾರ್ಚ್ ಮಾಸಾಂತ್ಯದ ವೇಳೆಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಲ್ಲ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಹೊಸದಾಗಿ ಕೆರೆಗಳನ್ನು ಸಹ ತುಂಬುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಈ ಭಾಗದ ಸುಮಾರು 4 ರಿಂದ 5 ಕೆರೆಗಳನ್ನು ತುಂಬಬಹುದಾಗಿದೆ. ಈ ಪ್ರದೇಶದಲ್ಲಿ ಒಣ ಬೇಸಾಯ ಇರುವುದರಿಂದ ರೈತರಿಗೆ ಅನುಕೂಲವಾಗಲಿದ್ದು, ಅಂತರ್ಜಲವೂ ಹೆಚ್ಚಳವಾಗಲು ಸಹಾಯಕಾರಿ ಆಗಲಿದೆ ಎಂದರು.
ಜನಸಂಪರ್ಕ ಕಾರ್ಯಕ್ರಮ : ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಬೇಕೆನ್ನುವುದು ಬಹುದಿನಗಳ ಬೇಡಿಕೆಯಾಗಿದ್ದು, ಲೋಕಸಭೆ ಚುನಾವಣೆ, ಇದೀಗ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ನೀತಿ ಸಂಹಿತೆ ತೆರವಾದ ಕೂಡಲೆ, ಜಿಲ್ಲಾ ಕೇಂದ್ರದಲ್ಲಿ ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಅನ್ನಭಾಗ್ಯ ಯೋಜನೆಯ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ನಿವಾರಿಸಿ, ಅಕ್ರಮಗಳಿಗೆ ಕಡಿವಾಣ ಹಾಕಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ರೈತರಿಗೆ ನೀರು ಒದಗಿಸಬೇಕೆನ್ನುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಗಂಗಪ್ಪ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment